ಅದೊಂದು ತೀರ್ಥಕ್ಷೇತ್ರ.
ನದಿದಂಡೆಯ ಮೇಲೆಯೇ ದೊಡ್ಡದಾದ ದೇವಸ್ಥಾನ. ದೇವಸ್ಠಾನದ ಮೇಲುಸ್ತುವಾರಿಗೆಂದು ಒಂದು ಟ್ರಸ್ಟ್ ಒಂದನ್ನು
ಮುಜರಾಯಿ ಇಲಾಖೆಯು ನೇಮಿಸಿತ್ತು. ದೇವಸ್ಥಾನದ ಪೌಳಿಗೆ ಅಂಟಿಗೊಂಡಿರುವ ಅಗ್ರಹಾರದ ಎಂಟು ಮನೆಗಳಲ್ಲಿ
, ಮೂರನೇ ಮನೆ ನಮ್ಮದಾಗಿತ್ತು. ಅಪ್ಪ ನರಸಿಂಹಶಾಸ್ತ್ರಿ ದೇವಸ್ಥಾನದ ಪ್ರಮುಖ ಅರ್ಚಕರಲ್ಲೊಬ್ಬರಾಗಿದ್ದರೊ.
ನಮ್ಮ ತಾತ ದೇವಶರ್ಮಶಾಸ್ತ್ರಿಗಳು ಪ್ರಕಾಂಡ ಪಂಡಿತರು ಮತ್ತು ವಾಗ್ಮಿಗಳು. ನಮ್ಮ ತಾತ ಅನಾರೋಗ್ಯದಿಂದ
ಬಳಲುತ್ತಿದ್ದಾಗ ನಮ್ಮ ತಂದೆ ನರಸಿಂಹಶಾಸ್ತ್ರಿಯವರನ್ನು ಶಾಲೆ ಬಿಡಿಸಿ ಅರ್ಚಕರನಾಗಿಸಿದ್ದರು. ಆಗ
ನಮ್ಮ ತಂದೆಗೆ ೧೪ ವರ್ಷ. ಹೈಸ್ಕೂಲು ಕಟ್ಟೆ ಏರಿದ ನಮ್ಮ ತಂದೆಗೆ ಮುಂದೆ ಓದಲು ಆಸೆಯಿತ್ತು. ಭೂಗೋಳದಲ್ಲಿ
ಪಠ್ಯವಾಗಿ ಓದಿದ ಪಾಶ್ಚಾತ್ಯ ರಾಷ್ಟ್ರಗಳ ಬಗ್ಗೆ ಅಲ್ಪ ಸ್ವಲ್ಪತಿಳುವಳಿಕೆಯಿತ್ತು. ತಂದೆಯ ಪಾಂಡಿತ್ಯವೂ
ತಕ್ಕ ಮಟ್ಟಿಗೆ ಒಲಿದು ಬಂದಿತ್ತು. ಪಾಶ್ಚಾತ್ಯ ಜೀವನಶೈಲಿಯ ಬಗ್ಗೆ ಅತಿಯಾದ ಮೋಹವಿರದಿದ್ದರೂ ಸ್ವಲ್ಪ
ಆಕರ್ಷಿತಗೊಂಡಿದ್ದರು. ಆದರೆ ಮನೆಯ ಜವಾಬ್ದಾರಿಯನ್ನು ಹೊರುವ ಭರದಲ್ಲಿ ಅರ್ಚಕರಾಗಿದ್ದರು. ವಯಸ್ಸು
ಇಪ್ಪತ್ತು ತುಂಬುವ ಹೊತ್ತಿಗೆ, ಪಕ್ಕದ ಊರಿನ ನಾರಾಯಣಶಾಸ್ತ್ರಿಯವರ ಕೊನೆಯ ಮಗಳು ಪದ್ಮಳನ್ನು ಮದುವೆಯಾಗಿದ್ದರು.
೧೬ ವರ್ಷದ ಪದ್ಮ , ಪದ್ಮಾವತಿಯಾಗಿದ್ದರು. ನಮ್ಮ ತಾಯಿಗೆ ೧೮ ತುಂಬುವಷ್ಟರಲ್ಲಿ ನಾನು ಜನಿಸಿದ್ದೆ.
ಪ್ರಭು ಶ್ರೀರಾಮನ ಭಕ್ತರಾದ ನಮ್ಮ ತಂದೆ ನನಗೆ ಸೀತಾರಾಮ ಶಾಸ್ತ್ರಿಯೆಂದು ನಾಮಕರಣ ಮಾಡಿದ್ದರು. ಅದು ಅವರ ತಾತನ ಹೆಸರಾಗಿತ್ತು. ನನಗೆ
ಮೂರು ವರ್ಷವಿದ್ದಾಗ ನನ್ನ ತಂಗಿ ಕಲ್ಯಾಣಿಯ ಜನನವಾಯಿತು. ಆದರೆ ಅವಳಿಗೆ ಎರಡು ವರ್ಷ ತುಂಬುವದರೊಳಗೆ
ಅವಳಿಗೆ ಯಾವುದೋ ಕಾಯಿಲೆ ಬಂದು ಅವಳು ತೀರಿಕೋಂಡಳು.ಎಲ್ಲರ ಅಳು ಮತ್ತು ದುಃಖಗಳನ್ನು ನೋಡಿದ ನನ್ನ
ಕಣ್ಣುಗಳು ತುಂಬಿದ್ದವು. ಅಮ್ಮ ಅಳುವದನ್ನು ನೋಡಿ ನಾನೂ ಅಳುತ್ತಿದ್ದೆ. ಅಮ್ಮ ಎಷ್ಟೋ ತಿಂಗಳುಗಳ ನಂತರ
ಆ ನೋವಿನಿಂದ ಹೊರಬಂದಿದ್ದರು.ಅಪ್ಪನ ಮನಸನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ. ಆದರೆ ಅವರ ಮುಖ ಮೊದಲಿನಂತಿರಲಿಲ್ಲ.
ನಿಸ್ತೇಜವಾಗಿತ್ತು. ಇದಾದ ಕೆಲವು ದಿನಗಳ ನಂತರ ಅಪ್ಪ ಅಮ್ಮನ ಮುದ್ದಿನ ಮಗನಾಗಿ ಬೆಳೆದೆ. ಮರುವರ್ಷವೇ
ಉಪನಯನವಾಯಿತು. ನನ್ನನ್ನು ಶಾಲೆಗೆ ಸೇರಿಸಲಾಯಿತು. ದೇವಸ್ಠಾನವು ಮುಜರಾಯಿ ಇಲಾಖೆಗೆ ಒಳಪಟ್ಟಿರುವದರಿಂದ,
ಮೋದಲಿನಂತೆ ಆದಾಯವಿರಲಿಲ್ಲ. ಆದರೆ ನಮ್ಮ ತಂದೆ , ಉಪನಯನ, ಮದುವೆ , ಶ್ರಾಧ್ಧ ಕರ್ಮಾದಿಗಳನ್ನು ಮಾಡಿಸುತ್ತಿದ್ದುದರಿಂದ
ನಮ್ಮ ತಂದೆ ಸಂಸಾರವನ್ನು ನಿಭಾಯಿಸುತ್ತಿದ್ದರು. ಬೆಳಿಗ್ಗೆ ೫.೩೦ಕ್ಕೆ ನದಿಸ್ನಾನ, ಸಂಧ್ಯಾವಂದನೆ,
ಸಂಸ್ಕೃತ ಅಭ್ಯಾಸ ಮುಗಿಸುವಷ್ಟರ ಹೊತ್ತಿಗೆ ಗಂಟೆ ಎಂಟಾಗಿರುತ್ತಿತ್ತು. ತಿಂಡಿ ತಿಂದವನೇ ಶಾಲೆಗೆ
ಓಡುತ್ತಿದ್ದೆ. ಸಂಜೆ ಮತ್ತೆ ಸಂಧ್ಯಾವಂದನೆ, ಶಾಲಾ ಓದು, ಊಟ ಮುಗಿಸುವಷ್ಟರ ಹೊತ್ತಿಗೆ ಗಂಟೆ ಒಂಬತ್ತಾಗಿರುತ್ತಿತ್ತು.
ಆಟೋಟವೆಂಬುದನ್ನು ನೋಡಿದ್ದೆನೇ ಹೊರತು ಯಾವತ್ತೂ ಆಟ ಆಡುವದಕ್ಕೆ ಹೋಗಿರಲಿಲ್ಲ.ಶಾಲೆಯಲ್ಲಿ ಆಟ ಆಡುವದಕ್ಕೆ
ಹೋದರೂ ಯಾರೂ ನನ್ನನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ,ಶಾಲೆಯಲ್ಲಿ ಆಡುತ್ತಿದ್ದುದು ಕಬಡ್ಡಿ
ಮತ್ತು ಖೋಖೋ. ಎರಡಕ್ಕೂ ನನ್ನ ಜುಟ್ಟು ಅಡ್ಡ ಬರುತ್ತಿತ್ತು. ಆದರೆ ನಾನು ಓದಿನಲ್ಲಿ ಬುಧ್ಧಿವಂತನಾಗಿದ್ದೆ.
ಒಳ್ಳೆಯ ವಿದ್ಯಾರ್ಥಿ ಎನ್ನಿಸಿಕೊಂಡಿದ್ದೆ. ಇತ್ತ ಮನೆಯಲ್ಲಿ ಸಂಸ್ಕೃತ ವನ್ನೂ ಚೆನ್ನಾಗಿ ಅಭ್ಯಸಿಸಿದ್ದೆ.
ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸುವ ಹೊತ್ತಿಗೆ ನನಗೆ ಸಂಸ್ಕೃತ ಸುಲಲಿತವಾಗಿ ಒಲಿದಿತ್ತು.
ಮುಂದೆ ನನ್ನ ತಂದೆ ನನ್ನನ್ನು ಪಕ್ಕ್ದ ತಾಲ್ಲೂಕಿನ ಶಾಲೆಗೆ ಹೈಸ್ಕೂಲು ವಿದ್ಯಾಭ್ಯಾಸಕ್ಕೆಂದು ಸೇರಿಸಿದರು.
ಬ್ರಾಹ್ಮಣ ವಿದ್ಯಾರ್ಥಿಭವನದಲ್ಲಿ ನನ್ನ ವಾಸ್ತವ್ಯವನ್ನು ನಿಗದಿಗೊಳಿಸಲಾಗಿತ್ತು. ಅzಲ್ಲಿಯೇ ನಾನು
ಹೈಸ್ಕೂಲು ವಿದ್ಯಾಭ್ಯಾಸವನ್ನು ಒಳ್ಳೆಯ ಅಂಕಗಳೊಂದಿಗೆ ಮುಗಿಸಿದ್ದೆ. ಸಅಂಸ್ಕೃತದ ಮೇಲೆ ಒಲವು ಕಡಿಮೆಯಾಗಿರಲಿಲ್ಲ.
ನನ್ನ ತಂದೆಯವರ ಇಚ್ಛೆಯಂತೆ ಅಲ್ಲೇ ಕಾಲೇಜು ಅಧ್ಯಯನ ಶುರುಮಾಡಿದೆ. ಪಿ.ಯು.ಸಿ ಯಲ್ಲಿ ಸಂಸ್ಕೃತ ಐಚ್ಛಿಕ
ವಿಷಯವಾಗಿತ್ತು. ಕಾಲೇಜು ವಾತಾವರಣ ನನಗೆ ಅಷ್ಟೊಂದು ಹಿಡಿಸಿರಲಿಲ್ಲ. ಎಲ್ಲರೂ ನನ್ನ ಜುಟ್ಟಿನೊಂದಿಗೆ
ಅಪಹಾಸ್ಯ ಮಾಡುತ್ತಿದ್ದರು. ಅಲ್ಲದೆ ನನ್ನ ಪೃಷ್ಠ ಭಾಗ ದೊಡ್ಡದಿದ್ದುದರಿಂದ ಎಲ್ಲರೂ ನನ್ನನ್ನು
seat ram ನೆಂದು ಗೇಲಿ ಮಾಡುತ್ತಿದ್ದರು. ಅದನ್ನು ಪರಿಹರಿಸಿಕೊಳ್ಳಲು ವ್ಯಾಯಾಮ ಕಸರತ್ತು ಶುರು ಹಚ್ಚಿಕೊಂಡೆ.
ಕ್ರಾಪುಗಳ ಮಧ್ಯೆ ಜುಟ್ಟನ್ನು ಮರೆಮಾಚಿಕೊಂಡೆ. ತಂದೆಯವರಿಗೆ ಇದೆಲ್ಲವೂ ಅರ್ಥವಾಗುತ್ತಿತ್ತು. ರಜೆಗೆಂದು
ಊರಿಗೆ ಬಂದಾಗ ಅಗ್ರಹಾರದ ಜನ ಮೂದಲಿಸುವದನ್ನು ಗಂಭೀರವಾಗಿ ಪರಿಗಣಿಸಬೇಡವೆಂದು ಬುಧ್ಧಿ ಹೇಳಿದ್ದರು.
ಇವೆಲ್ಲವುಗಳ ನಡುವೆ ನಾನು ಪಿ.ಯು.ಸಿ ಮುಗಿಸಿದ್ದೆ. ತಾಯಿಯ ಕಡೆ ಬಂದ ಸ್ವಲ್ಪ ಜಮೀನನ್ನೂ ಮಾರಿ ನನ್ನ
ತಂದೆ ಎಂಜಿನಿಯರಿಂಗ್ ಓದಿಸಲು ಅನುವಾದರು. ಮತ್ತೊಂದು ಯುಧ್ಧಕ್ಕೆ ನಾನು ಸನ್ನಧ್ಧ್ನಾಗುತ್ತಿದ್ದೆ.
ದೂರದ ಬೆಂಗಳೂರಿಗೆ ನಾನು ಬಂದು ಬಿದ್ದದ್ದು ನನಗೆ ಬೇಜಾರು ಮೂಡಿಸಿದ್ದರೂ , ನನ್ನನ್ನು ಯಾರೂ ಅಪಹಾಸ್ಯ
ಮಾಡುತ್ತಿರಲಿಲ್ಲ. ಇಲ್ಲೂ ಬ್ರಾಹ್ಮಣ ವಿದ್ಯಾರ್ಥಿ ಭವನವೇ ನನಗೆ ಆಶ್ರಯ ನೀಡಿತ್ತು, ನಾನು ಎರಡನೇ
ವರ್ಷ ಎಂಜಿನಿಯರಿಂಗ್ ನಲ್ಲಿದ್ದಾಗ ನಮ್ಮ ಊರಿಗೆ ಪ್ರವಾಹದ ಆತಂಕವಿತ್ತು. ನದಿ ಉಕ್ಕಿ ಹರಿಯುತ್ತಿತ್ತು.
ನೀರು ತರಲು ಹೋದ ನನ್ನ ತಾಯಿ ಕಾಲು ಜಾರಿ ನೀರುಪಾಲಾಗಿದ್ದಳು. ನಾನು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ
ತಂದೆಯವರ ಯೋಗಕ್ಷೇಮವನ್ನು ನೋಡಿಕೊಳ್ಳ್ಅಬೇಕೆಂದು ತೀರ್ಮಾನಿಸಿದೆ. ಆದರೆ ತಂದೆ ಹಠ ಹಿಡಿದರು. ಇನ್ನು
ಉಳಿದಿರುವದು ಎರಡು ವರ್ಷದ ಓದು ಮಾತ್ರ. ನಂತರ ತಾವೂ ನನ್ನಲ್ಲಿಗೆ ಬಂದು ನೆಲೆಸುವದಾಗಿ ಅಭಯವನ್ನಿತ್ತರು.
ನಾನು ಬರಿಗೈಲಿ ವಾಪಸಾದೆ. ಮುಂದಿನ ಎರಡು ವರ್ಷಗಳನ್ನು ಏಕಲವ್ಯನಂತೆ ಅಭ್ಯಾಸದಲ್ಲೇ ದೂಡಿದೆ. ಎಂಜಿನಿಯರಿಂಗ್
ಪಾಸಾಗುತ್ತಿದ್ದಂತೆ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸವೂ ಸಿಕ್ಕಿತು. ಬ್ರಾಹ್ಮಣ ವಿದ್ಯಾರ್ಥಿ
ಭವನದಿಂದ ಬಾಡಿಗೆ ಮನೆಯೊಂದಕ್ಕೆ ವಾಸ್ತವ್ಯ ಬದಲಾಯಿಸಿದೆ. ತಂದೆಯವರನ್ನು ಕರೆದುಕೋಡು ಬೇಒಂಗಳುರಿಗೆ
ಬರಲೆಂದು ಊರಿಗೆ ನಡೆದೆ. ಅಗ್ರಹಾರದ ಜನ ನನ್ನ ಯಶಸ್ಸಿನ ಬಗ್ಗೆ ಗುಣಗಾನ ಮಾಡಿದರು. ದೇವಸ್ಥಾನದ ವತಿಯಿಂದ
ನನ್ನನ್ನು ಸನ್ಮಾನಿಸಲಾಯಿತು. ಅಮ್ಮನ ಅಗಲಿಕೆ ಅಪ್ಪನ ದೇಹವನ್ನು ಕೃಶಗೊಳಿಸಿದ್ದರೂ ಅವರ ಕಣ್ಣುಗಳಲ್ಲಿ
ಸಾರ್ಥಕತೆಯಿತ್ತು. ನನ್ನಡೆಗೆ ಮೆಚ್ಚುಗೆಯ ನಗೆ ಸೂಸಿದರು. ಊರಿನಿಂದ ಬೆಂಗಳೂರಿಗೆ ಬಂದ ಸ್ವಲ್ಪ ದಿನಗಳ
ಕಾಲ ಅವರು ಸ್ವಲ್ಪ ಮಂಕಾಗಿದ್ದರು. ಬಹುಶಃ ದೇವಸ್ಥಾನ, ಅಗ್ರಹಾರ, ಊರು ಎಲ್ಲವನ್ನು ನೆನಪಿಸಿಕೊಂಡು
ಭಾವುಕರಾಗುತ್ತಿದ್ದರು. ನಾನು ನನ್ನ ನೌಕರಿಯಲ್ಲಿ ಯಶಸ್ಸು ಗಳಿಸುತ್ತಿದ್ದೆ. ಪ್ರತಿ ಸಂಜೆಯೂ ಭಾಗವತ
ಪಾರಾಯಣವನ್ನು ತಂದೆಯವರೊಂದಿಗೆ ಮಾಡುತ್ತಿದ್ದೆ. ಎರಡು ಹೊತ್ತಿನ ಸಂಧ್ಯಾವಂದನೆಯನ್ನು ಬಿಟ್ಟಿರಲಿಲ್ಲ.
ನನ್ನ ತಂದೆಯ ವಯಸ್ಸು ಐವತ್ತು ದಾಟಿರದಿದ್ದರೂ , ಅರವತ್ತು ವಯಸ್ಸಿನವರಂತೆ ಕೃಸವಾಗಿದ್ದರು. ಮುಖದಲ್ಲಿ
ಮುಪ್ಪಿನ ಸುಕ್ಕುಗಳು ಕಾಣಿಸಲಾರಂಭಿಸಿದವು. ನನ್ನ ಯಶಸ್ಸಿಗೆ ತಮ್ಮಂತೆ ನನ್ನ ತಾಯಿಯೂ ಸಹಭಾಗಿಯಾಗಿದ್ದು,
ಅವರು ನನ್ನ ಯಶಸ್ಸನ್ನು ನೋಡಲಾಗಲಿಲ್ಲವೆಂದು ಅವರು ಪರಿತಪಿಸುತ್ತಿದ್ದರು. ಗೋಕುಲಾಷ್ಟಮಿಯ ದಿನ ಭಾಗವತ
ಓದುತ್ತಿದ್ದಂತೆ ಭಗವಂತನಿ ಶರಣಾದರು. ಅವರಿಗೆ ಹೃದಯಾಘಾತವಾಗಿತ್ತು. ನಾನು ಅನಾಥನಾಗಿದ್ದೆ. ಹಾಗೆಯೆ
ಕೆಲವು ವರ್ಷಗಳನ್ನು ದೂಡಿದ್ದೆನೇನೋ, ಕಂಪನಿಯ ವತಿಯಿಂದ ವಿದೇಶಪ್ರಯಾಣಕ್ಕೆ ಹೋಗಲು ಆದೇಶ ಬಂದಿತ್ತು.
ನಾನು ಅಮೆರಿಕಕ್ಕೆ ಪ್ರಯಾಣ ಬೆಳೆಸಿದೆ. ನನ್ನದೆನ್ನುವದು ಇಲ್ಲಿ ಏನೂ ಇರಲಿಲ್ಲ. ಏರ್ ಪೋರ್ಟಿನಲ್ಲಿ
ನನ್ನ ಪಾಸ್ ಪೋರ್ಟ ಪರಿಶೀಲಿಸುವದರಲ್ಲಿ ನಾನು ಮತ್ತೆ seet ram ಎಂದು ಕರೆಯಿಸಿಕೊಂಡಿದ್ದೆ. ಹಳೆಕಹಿ
ನೆನಪುಗಳಿಂದ ಮನಸ್ಸು ಘಾಸಿಯಾಗಿತ್ತು. ಅಮೆರಿಕಕ್ಕೆ ಹೋದ ಕೆಲವು ತಿಂಗಳುಗಳ ನಂತರ, ಅಲ್ಲಿಯೇ ಬೆರೆ
ಕಂಪನಿಯೊಂದರಲ್ಲಿ ಕೆಲಸವನ್ನು ಹುಡುಕಿಕೊಂಡೆ. ನನ್ನ ಅನಾಥಪ್ರಜ್ಞ್ನೆಯನ್ನು ಪ್ರಯತ್ನವನ್ನು ಮೀರುವ
ಮೊದಲ ಯತ್ನ ನನ್ನದಾಗಿತ್ತು. ಜುಟ್ಟು ಮಾಯವಾಗಿತ್ತು. ಅಲ್ಲಿಯೇ ನೆಲೆ ಕಂಡುಕೊಂಡೆ. ನನ್ನಂತೆಯೆ ಬಂದು
ಅಮೆರಿಕದಲ್ಲಿ ನೆಲೆಸಿದ ಭಾರತೀಯರ ಸಮ್ಮೇಳನವೊಂದರಲ್ಲಿ ಭೇಟಿಯಾದ , ವಿಶ್ವನಾಥ ಭಟ್ಟರು ತಮ್ಮ ಮಗಳು
ಹೇಮಾಳನ್ನು ನನಗೆ ಕೊಟ್ಟು ಮದುವೆ ಮಾಡಿಕೊಡುವ ಪ್ರಸ್ತಾವನೆಯನ್ನು ಸಲ್ಲಿಸಿದರು ಹೇಮಾಳು ಕೂಡ ನನ್ನಂತೆಯೆ
ನೌಕರಸ್ಥೆ. ಅಲ್ಲಿ ಅವಳು Hem (ಹೆಮ್)ಆಗಿದ್ದಳು, ನಾನು seet(ಸೀತ್) ಆಗಿದ್ದೆ. ನನ್ನದೊಂದು ಸಂಸಾರ
ಶುರುವಾಗಿತ್ತು. ಮದುವೆಯಾಗಿ ಎರಡು ವರ್ಷಗಳಾಗಿದ್ದವು, ಒಂದು ರಾತ್ರಿ ನಾನು ವರಾಂಡದಲ್ಲಿ ಕುಳಿತು
ಆಕಾಶವನ್ನು ನಿರುಕಿಸುತ್ತಿದ್ದೆ. ವಾಷ್ ಬೇಸಿನ್ನಿನಲ್ಲಿ ಹೇಮಾ ವಾಂತಿ ಮಾಡಿಕೊಳ್ಳುವದು ಕೇಳಿಸಿತು.
ಅವಳಲ್ಲಿಗೆ ನಡೆದೆ, Are you alright? ಎಂದೆ.
ಅವಳು ತುಂಟನಗೆಯೊಂದನ್ನು ಬೀರಿದ್ದಳು. ನಾನು ಖುಷಿಯಿಂದ
ಅವಳನ್ನು ಅಪ್ಪಿಕೊಂಡೆ. ಅವಳೂ ನನ್ನ ಅಪ್ಪುಗೆಯಲ್ಲಿ ಕರಗಿಹೋದಳು. ಆರು ತಿಂಗಳುಗಳ ನಂತರ ಹೆರಿಗೆಯಾಯಿತು.
ಆಪರೇಷನ್ ಥಿಯೇಟರಿನಿಂದ ಹೊರಬಂದ ಡಾಕ್ಟರ್ ಇಂಗ್ಲಿಷನಲ್ಲೇ ತಾಯಿ ಮತ್ತು ಮಗು ಆರೋಗ್ಯಕರವಾಗಿದ್ದಾರೆಂದು
ವಿವರಿಸಿ ಹಸ್ತಲಾಘವದೊಂದಿಗೆ ಶುಭಾಶಯ ತಿಳಿಸಿದರು. ಕೆಲವು ಘಂಟೆಗಳ ನಂತರ ಹೇಮಾಳನ್ನು ಮತ್ತು ಮಗುವನ್ನು
ವಾರ್ಡ್ ಗೆ ಸ್ಥಳಾಂತರಿಸಲಾಯಿತು. ನಾನು ಪುಳಕಿತಗೊಂಡಿದ್ದೆ. ನಾನು ವಾರ್ಡ್ ನ ಒಳಗೆ ಪ್ರವೇಶಿಸಿದೆ,
ಹೇಮಾ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನು ಸಂ=ತೋಷದಿಂದ ತನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದಳು.
ನಾನು ಹೋಗಿ ಮಗುವನ್ನು ದಿಟ್ಟಿಸಿದೆ. ಗಂಡೋ , ಹೆಣ್ಣೋ ತಿಳಿಯಲಿಲ್ಲ. ಹೊದಿಸಿದ್ದ ಆಸ್ಪತ್ರೆಯ ವಸ್ತ್ರವನ್ನು
ಬದಿಗೆ ಸರಿಸಿದೆ. ಗಂದುಮಗುವಾಗಿತ್ತು. ಹೇಮಾ ಸಂತೃಪ್ತಿಯ ನಗೆಯೊಂದನ್ನು ನನ್ನೆಡೆಗೆ ಬೀರಿದ್ದಳು.
ಅಷ್ಟರಲ್ಲೇ ಆಸ್ಪತ್ರೆಯ ನರ್ಸ್ ಬಂದು ನನ್ನ ಹೊರಹೋಗುವಂತೆ ಸೂಚಿಸಿದಳು. ನಾನು ಹೇಮಾಳ ಯೋಗಕ್ಷೇಮ ವಿಚಾರಿಸಿಕೊಂಡು
ಹೊರಬಂದೆ. ಮನಸ್ಸು ಆನಂದದಲ್ಲಿ ತೇಲುತ್ತಿದ್ದೆ. ತಕ್ಷಣವೇ ನೆನಪಾಯಿತು. ಮಗುವಿಗೆ ಏನೆಂದು ಹೆಸರಿಡಬೇಕೆಂದು.
ನನ್ನ ತಂದೆ ತಮ್ಮ ತಾತನ ಹೆಸರನ್ನು ನನಗೆ ಇಟ್ಟಿದ್ದನ್ನು ನೆನಪಿಸಿಕೊಂಡೆ. ನಾನೂ ಹಾಗೆಯೇ ದೇವಶರ್ಮಶಾಸ್ತ್ರಿಯೆಂದು
ನಾಮಕರಣ ಮಾಡಬೇಕೆಂದು ನಿರ್ಧರಿಸಿದೆ. ಆದರೆ ನನ್ನ ಹೆಸರಿನಿಂದ ನಡೆದ ಕಹಿ ಘಟನೆಗಳು ಕಣ್ಮುಂದೆ ಸರಿದು
ಹೋದವು. ದೇವಶರ್ಮಶಾಸ್ತ್ರಿ ಅಮೆರಿಕದಲ್ಲಿ Dev ಆಗುತ್ತಾನೆ. ಅದನ್ನು ಇಲ್ಲಿ ಅಪಭ್ರಂಶಗೊಳಿಸಿ ಕುಚೋದ್ಯದ
ವಸ್ತುವನ್ನಾಗಿಸಿದರೆ ಅದು ತಮ್ಮ ತಾತನವರಿಗೆ ಮಾಡುವ ಅವಮಾನವೆಂದೆನಿಸಿತು. ಮರುಕ್ಷಣವೇ ಮೊಬೈಲಿನಲ್ಲಿ
ಗೂಗಲ್ ನನ್ನ ಕೆಲಸ ಮಾಡುತ್ತಿತ್ತು.