ಇಡ್ಲಿ ಸಾಂಬಾರ್ ಅವಳ ಮುಖಕ್ಕೆ ಗೆಲುವು ಕೊಟ್ಟಂತಾಗಿತ್ತು. ಇಲ್ಲೇ ಕೂತ್ಕೊಂಡು ಕಾಯೋಣ ಅಂದುಕೊಂಡವಳಿಗೆ ಹೋಟೆಲ್ ಗಿರಾಕಿಗಳು ಒಮ್ಮೆಲೆ ಜಾಸ್ತಿಯಾದಂತೆನಿಸಿತು. ಇವಳು ಎದ್ದರೆ ಸಾಕು , ತಾವೂ ಕೂತ್ಕೊಬಹುದು ಅನ್ನೋ ಗಿರಾಕಿಗಳು ಇದ್ದರೂ, ಇವಳನ್ನೇ ನೋಡುತ್ತಾ ಕಾಫಿ ಹೀರುವದರಲ್ಲಿ ಮಗ್ನರಾದ ರಸಿಕ ಶಿಖಾಮಣಿಗಳೂ ಅಲ್ಲಿದ್ದರು. ಅಯ್ಯಂಗಾರಿ ಮುದುಕನಿಗೆ ಇವಳು ಬಿಸಿತುಪ್ಪದಂತಾದಳು. ಅವನ ಹೊಯ್ದಾಟಗಳು ಅರ್ಥವಾದಂತೆನಿಸಿ ಬಿಲ್ ಹಣವನ್ನು ಟೇಬಲ್ ಮೇಲೆ ಇಟ್ಟು ಹೊರಬಂದಳು. ಅಯ್ಯಂಗಾರಿ ಮುದುಕನಿಗೆ ನಿರುಮ್ಮಳ ಭಾವ.
ಮತ್ತೆ ಗಡಿಯಾರ ನೋಡಿಕೊಂಡವಳಿಗೆ ಅನಿಸಿದ್ದು ತಾನು ನಿಮ್ಮಿಗಾಗಿ ಕಾಯುತ್ತಿರುವದು ಕೇವಲ ನಲವತ್ತೈದು ನಿಮಿಷಗಳಿಂದ ಮಾತ್ರ. ತಾನು ಮೊದಲು ನಿಂತಿದ್ದ ಜಾಗಕ್ಕೆ ಬಂದು ನಿಂತಳು. ರಸಿಕ ಶಿಖಾಮಣಿಗಳು ಗುಂಪು ಹೋಟೆಲ್ ನಿಂದ ಮೂಲೆ ಅಂಗಡಿಯ ಸಿಗರೇಟು ಅಂಗಡಿಯ ಹತ್ತಿರವೂ, ಜಾಗಿಂಗ್ ಮುಗಿಸಿದವರ ದಾಹ ತಣಿಸಲೆಂದೇ ಇರುವ ಎಳನೀರು ಅಂಗಡಿಯ ಹತ್ತಿರವೂ ಪ್ರತಿಷ್ಠಾಪಿತವಾಗಿತ್ತು. ಎಲ್ಲರ ಕಣ್ಣಿಗೆ ಆಹಾರವಾಗುವಂತೆ ಮಾಡಿದ ನಿಮ್ಮಿಯ ಮೇಲೆ ಕೋಪ ಹೆಚ್ಚಾಗಿತ್ತು. ಆಗಲೇ ನೆನಪಾಗಿದ್ದು "ಒಂದಿನ ನಾನು ಯಾರೂಂತ ತೋರಿಸ್ತೀನಿ ಕಣೆ ನಿಂಗೆ. " ಎಂಬ ಶಬ್ದಗಳು. ಹೌದಲ್ಲ, ನಿಮ್ಮಿ ಆವತ್ತು ಸಿಟ್ಟಿನಿಂದ ಹಾಗೇ ಹೇಳಿದ್ದಳು. ಆದಿನ ಅವಳಿಗೆ ಚೆನ್ನಾಗಿ ನೆನೆಪಿದೆ ಅವತ್ತು ತಾನು ಅವಳಿಗೆ ಮಾಡಿದ ಚಿಕ್ಕ ಜೋಕಿಗೆ ಅವಳು ಸಿಟ್ಟಾಗಿದ್ದಳು. ಅದು ಆ ಸೆಮಿಸ್ಟಿರಿನ ಕೊನೆಯ ದಿನ. ಇಬ್ಬರೂ ತಮ್ಮ ತಮ್ಮ ಊರಿಗೆ ಹೊರಟಿದ್ದರು. ಇವತ್ತು ಇಬ್ಬರೂ ಮರಳಿ ಬರುವ ಪ್ಲಾನ್ ಕೂಡ ಇತ್ತು. ಇನ್ನೂ ಯಾಕೆ ಬಂದಿಲ್ಲ.ಫೋನ್ ಯಾಕೆ ಸ್ವಿಚ್ ಆಫ್ ಮಾಡಿದ್ದಾಳೋ ಗೊತ್ತಿಲ್ಲ. ಅವತ್ತಿನ ಸಿಟ್ಟನ್ನು ಇವತ್ತು ತೀರಿಸಿಕೊಳ್ಳುತ್ತಿದ್ದಾಳೇನೋ ಎಂದೆನಿಸಿತು. ರಸಿಕ ಶಿಖಾಮಣಿಗಳು ಒಬ್ಬೊಬ್ಬರಾಗಿ ಇವಳ ಹಿಂದು ಮುಂದು ತಿರುಗಾಡಲಾರಂಭಿಸಿದರು. ನಿಮ್ಮಿಯ ಮೇಲೆಯ ಸಿಟ್ಟು ಕೂಡ ಕರಗಲಾರಂಭಿಸಿತು. ದುಃಖ ಉಮ್ಮಳಿಸಿ ಬಂದಂತಾಯಿತು. ಕಣ್ಣು ತುಂಬಿಕೊಂಡವು. ಅಷ್ಟರಲ್ಲಿ ಯಾರೋ ಬಂದು ತನ್ನ ಕೈ ಹಿಡಿದು ಕೊಂಡಂತಾಯಿತು. ತಿರುಗಿ ನೋಡಿದರೆ, ನಿಮ್ಮಿ ನಗುತ್ತಾ ನಿಂತಿದ್ದಳು. ಇವಳಿಗೆ ದುಃಖ ತಡೆಯಲಾಗಲಿಲ್ಲ , ನಿಮ್ಮಿಯನ್ನು ತಬ್ಬಿಕೊಂಡು ಅಳಲಾರಂಭಿಸಿದಳು. ನಿಮ್ಮಿಗೆ ಏನೂ ಅರ್ಥವಾಗಲಿಲ. ಅವಳನ್ನು ದರದರನೇ ಎಳೆದುಕೊಂಡು ರೂಮಿನತ್ತ ಹೊರಟಳು. ದಾರಿಯಲ್ಲೆಲ್ಲೂ ಅವಳ ದುಃಖ ಕಡಿಮೆಯಾಗಲೇ ಇಲ್ಲ. ರೂಮಿಗೆ ಹೋದೊಡನೆ ನಿಮ್ಮಿಯ ಕೈ ಹಿಡಿದುಕೊಂಡು 'ಸ್ಸಾರಿ' ಎಂದು ಮತ್ತೆ ಅಳಲಾರಂಭಿಸಿದಳು. ನಿಮ್ಮಿ ಪರಿಸ್ಥಿತಿಯನ್ನು ಅರಿಯಲಾರದೇ "ನೀನ್ಯಾಕೆ ಅಲ್ಲಿ ನಿಂತಿದ್ದೆ?, ಮೊದ್ಲೆ ಗೊತ್ತಿಲ್ವ ಒಬ್ಬ ಹುಡುಗಿ ಒಂಟಿಯಾಗಿ ರಸ್ತೆ ಪಕ್ಕ ನಿಂತುಕೊಂಡ್ರೆ ಜನ ಹೇಗೆ ನೋಡ್ತಾರೆ ಅಂತ. ರೂಮಲ್ಲಿ ಬಂದು ಕೂರೋಕೆ ಆಗ್ತಿರಲಿಲ್ವ?" ಎಂದು ಅವಳನ್ನು ಸಂತೈಸಲೆತ್ನಿಸಿದಳು. ಅಷ್ಟೊತ್ತಿಗೆ ಅವಳ ಮೊಬೈಲ್ ರಿಂಗಿಣಿಸಲಾರಂಭಿಸಿತು. ಇವಳ ಪರಿಸ್ಥಿತಿಯಲ್ಲಿ ಅವಳು ಮಾತಾಡಲಾರಳೆಂದು ನಿಮ್ಮಿಯೇ ಉತ್ತರಿಸಿದಳು. ಅತ್ತಲಿಂದ ಬಂದ ಧ್ವನಿ ಅವಳ ಅಮ್ಮನದಾಗಿತ್ತು ." ಹಲೋ, ಯಾರು ನಿಮ್ಮಿನಾ?, ಅವಳು ಸೇಫಾಗಿ ಬಂದ್ಲಾ? ರೂಮ್ ಕೀ ಇಲ್ಲೇ ಬಿಟ್ಟು ಹೋಗಿದ್ದಾಳೆ. ಅವಳಿದ್ದಾಳಾ ಕೊಡು " . "ಅವಳು ಬಾತ್ ರೂಮಿಗೆ ಹೋಗಿದ್ದಾಳೆ ಆಂಟಿ, ಬಂದ ತಕ್ಷಣ ಹೇಳ್ತೇನೆ " ಎಂದು ಉತ್ತರಿಸುವದರೊಳಗೆ ಅವಳ ಪರಿಸ್ಥಿಯ ಅರಿವಾಗಿತ್ತು. ನಿಮ್ಮಿಯ ಬ್ಯಾಟರಿ ಖಾಲಿಯಾದ ಮೊಬೈಲ್ ಅಣಕಿಸುತ್ತಿತ್ತು.