ಯುಗಾದಿಯ ಸಂಧರ್ಭದಲ್ಲಿ ಪ್ರಕೃತಿಮಾತೆಗೊಂದು ಪತ್ರ
ಹೊಸತು ಉಡುವ ಸಡಗರದಲ್ಲಿ ಹಳೆಯದನ್ನು ಮರೆಯದಿರು,
ವಸನ ಹೊಸದಾದರೇನು ನೀನು ಹಳತು.
ಹುಟ್ಟುಹಬ್ಬವು ಇದು ನಿನಗೆ,
ಮರುಜನ್ಮವಂತೂ ಅಲ್ಲ,
ಇರುವ ಪಯಣವ ಮುಗಿಸು,
ಹೊಸತು ಬೇಕೇನೀಗ?
ಕಲ್ಲು ಮುಳ್ಳುಗಳ ಸಂತೆ ದಾರಿಯಲಿ ತುಂಬಿರಲು ,
ನಗೆಯು ನಗುತಿರಲಿ ನಿನ್ನ ತುಟಿಯ ಅಂಚಲ್ಲಿ,
ಗಾಯವು ಮಾಯುತಿರಲು , ನೋವ ಮರೆಯಿನ್ನು .
ಸಾಗುತಿರಲಿ ಈ ನಿನ್ನ ಅನಂತ ಪಯಣ.
ನಿನ್ನ ದಾರಿಯಲ್ಲೇ ಬರುವ ಸಹಯಾತ್ರಿಕನು ನಾನು,
ಮುನ್ನಡೆಸು ನನ್ನನು ನನ್ನ ಗಮ್ಯದ ಕಡೆಗೆ.
ಜೀವನಾಧಾರವಾದ ಈ ನಿನ್ನ ಮಮಕಾರ
ಮರೆಯೆನು ನಾನು ಈ ಮಹದುಪಕಾರ.
ಕೋಗಿಲೆಯ ಗಾನದಲಿ, ಮಾವಿನ ತಂಪಿನಲಿ,
ಆಚರಿಸು ಈ ನಿನ್ನ ಜನುಮದಿನ.
ಪ್ರೀತಿ ಪ್ರೇಮವ ಬೆಳೆಸಿ, ಮನುಕುಲವು ಇರುವಂತೆ ,
ಹರಸು ಈ ನಿನ್ನ ಕುಡಿಗಳನ್ನ.
Wednesday, March 3, 2010
ತಸ್ಲಿಮಾ ನಸ್ರೀನ್,
ಧಿಕ್ಕಾರ.,
ಪ್ರತಿಮೆಗೆ ಚಪ್ಪಲಿ ಸಾಮರಸ್ಯ,
ಶಿವಮೊಗ್ಗದಲ್ಲಿ ಗಲಾಟೆ
0
comments
ನಮ್ಮ ಮೌನಕ್ಕೊಂದು ಧಿಕ್ಕಾರ.
"ಶಿವಮೊಗ್ಗದಲ್ಲಿ ಗಲಾಟೆ", "ಗದಗನಲ್ಲಿ ಪ್ರತಿಮೆಗೆ ಚಪ್ಪಲಿ ಹಾರ". "ಪತ್ರಿಕಾ ಕಚೇರಿಗೆ ಬೆಂಕಿ". ಇವೆಲ್ಲಾ ನಮ್ಮ ಪತ್ರಿಕೆಗಳ ತಲೆಬರಹಗಳು. ಪಟ್ಟನೆ ಓದಲು ತೊಡಗುತ್ತೇವೆ. ಓದಿದ ನಂತರ ಹೀಗಾಗಬಾರದಿತ್ತು ಎಂದು ಲೊಚಗುಡುತ್ತಾ ಮುಂದಿನ ಪುಟಕ್ಕೆ ಕಣ್ಣು ಹಾಯಿಸುತ್ತೇವೆ. ಇಷ್ಟಕ್ಕೂ , ನಡೆದಿದ್ದಾದರೂ ಏನು? ಎಂಬ ಕುತೂಹಲವೂ ನಮ್ಮಲ್ಲಿ ಕೆರಳುವದಿಲ್ಲ. ಅದು ಹಾಗಿರಲಿ, ಅಷ್ಟೊಂದು ಭಯಾನಕ ಗಲಾಟೆಗೆ ಕಾರಣವಾದ ಅಂಶಗಳ ಬಗ್ಗೆ ಗಮನ ಹರಿಸೋಣ. ತಸ್ಲಿಮಾ ನಸ್ರೀನ್ ಒಬ್ಬ ಬಾಂಗ್ಲಾ ದೇಶದ ಲೇಖಕಿ. ಅವಳು ತನ್ನ "ಲಜ್ಜಾ" ಕಾದಂಬರಿಯಲ್ಲಿ, ೧೯೯೨ ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವ೦ಸವು ತನ್ನ ನಾಡಿನಲ್ಲಿನ ಹಿಂದೂಗಳ ಮೇಲೆ ಆದ ಪರಿಣಾಮ, ಪ್ರತಿಕೂಲಗಳ ಬಗ್ಗೆ, ಅಂಕಿ ಅಂಶಗಳೊಂದಿಗೆ, ಒಂದು ಹಿಂದೂ ಕುಟುಂಬವನ್ನು ಕೇಂದ್ರಿಕೃತವಾಗಿಟ್ಟುಕೊಂಡು ಕತೆ ನೇಯುವದರಲ್ಲಿ ಯಶಸ್ವಿಯಾಗಿದ್ದಾಳೆ. ಅಂಥಹ ವಿವಾದಾತ್ಮಕ ಲೇಖಕಿಯ ಲೇಖನಗಳನ್ನು ಪ್ರಕಟಿಸುವ ದರ್ದು ಕನ್ನಡಪ್ರಭ ಪತ್ರಿಕೆಗೆ ಏನಿತ್ತೋ? ಒಂದು ವಿವಾದವನ್ನು, ಮತೀಯ ಕಲಹಗಳನ್ನು, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಲೇಖನಗಳು ಸಾರ್ವಜನಿಕವಾಗಿ ಪ್ರಕಟವಾದಲ್ಲಿ, ಅದು ಒಂದು ಜನಾಂಗ, ಅಥವಾ ಒಂದು ಕೋಮಿನಲ್ಲಿ ಕೆಚ್ಚು ಹುಟ್ಟಿಸುವದರಲ್ಲಿ ಸಂದೇಹವಿಲ್ಲ. ಅಲ್ಲದೇ, ಇನ್ನೊಂದು ಜನಾಂಗದಲ್ಲಿ ಅಹಂಕಾರವನ್ನು ತುಂಬಬಲ್ಲುದು. ಇಂತಹ ಅವಿವೇಕಗಳಿಂದ ನಾವು ದುರ್ಬಲವಾಗುತ್ತೇವೆ. ನಾಡು ಅಶಾಂತಿ, ಭೀತಿ ಚೀತ್ಕಾರಗಳಿಂದ ತುಂಬಿಹೋಗುತ್ತದೆ. ಎಲ್ಲ ಮತಗಳನ್ನು ಗೌರವಿಸುವ ನಮ್ಮ ಸಹಿಷ್ಣುತೆ ಕಡಿಮೆಯಾಗುತ್ತದೆ. ಪತ್ರಿಕೆಗಳ ಈ ದುಸ್ಸಾಹಸ ಕ್ಷಮಿಸಲಾಗದು. ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿದ ಪತ್ರಿಕೆಗಳಿಗೊಂದು ಧಿಕ್ಕಾರವಿರಲಿ.
ನಮ್ಮ ಜನಗಳಿಗೊಂದು ಒಂದು ಸಣ್ಣ ಕಾರಣವೂ ಸಾಕು. ಸ್ವಲ್ಪವೂ ವಿವೇಚನೆಯಿಲ್ಲದೆ, ಸಾರ್ವಜನಿಕ ಆಸ್ತಿಯನ್ನು ನಾಶ ಮಾಡುತ್ತಾರೆ, ನಾವೆಲ್ಲಾ ಇಂದು ತುಂಬಾ ದುಬಾರಿ ಜೀವನ ನಡೆಸಲು ಇದೂ ಕಾರಣ. ನಮ್ಮ ತೆರಿಗೆಯ ಒಂದು ಪಾಲು ರಾಜಕಾರಣಿಗಳು ನುಂಗಿದರೂ, ಅಲ್ಪ ಅಂಶ ಸಾರ್ವಜನಿಕ ಆಸ್ತಿಗಳಿಗೆ ಖರ್ಚಾಗುತ್ತದೆ. ಈ ತರಹದ ವಿಧ್ವಂಸಕ ಕೃತ್ಯಗಳಿಂದ ನಾವು ಸಾಧಿಸುವದಾದರೂ ಏನು? ಯಾವುದೋ ದೇಶದ ಒಬ್ಬ ಲೇಖಕಿ, ಅವಳ ಒಂದು ವಿವಾದಾತ್ಮಕ ಲೇಖನ, ಅದನ್ನು ಪ್ರಕಟಿಸುವ ಅವಿವೇಕಿ ಪತ್ರಿಕೆ. ಈ ಕಾರಣಕ್ಕೆ ನಾವು, ನಮ್ಮ ಬಸ್ಸುಗಳನ್ನು, ದಾರಿದೀಪಗಳನ್ನು ಬಲಿಕೊದಬೇಕೆ. ಸಾರ್ವಜನಿಕ ಆಸ್ತಿ, ನಮ್ಮ ಆಸ್ತಿ. ಹಾಗಂದ ಮಾತ್ರಕ್ಕೆ ಅವುಗಳನ್ನು ನಾಶ ಮಾಡಲು ನಮಗೆ ಹಕ್ಕಿದೆಯೇ? ನಮ್ಮ ಮಗ ಅಥವಾ ಮಗಳು ಎಂದು ಕೊಲ್ಲಲು ನಮಗೆ ಹಕ್ಕಿದೆಯೇ? ಇದು ನಮ್ಮ ನೈತಿಕತೆಯನ್ನೇ ಪ್ರಶ್ನಿಸುತ್ತದೆ. ಇಡೀ ವಿಶ್ವಕ್ಕೆ ಸಾಮರಸ್ಯವನ್ನು ಹೇಳಿಕೊಟ್ಟವರು ನಾವು. ಇಡೀ ಜಗತ್ತು, ಕರಿಯರು-ಬಿಳಿಯರು ಎಂದು ಹೊಡೆದಾಟ ನಡೆಸಿರುವಾಗ ನಾವು ಇಡೀ ವಿಶ್ವಕ್ಕೆ ಪಾಠ ಹೇಳುವದನ್ನು ಬಿಟ್ಟು ನಮ್ಮಲ್ಲೇ ಒಡಕು ತೋರಿಸುತ್ತೇವೆ. ನಾಚಿಕೆ ಇರಲಿ ನಮಗೆ. ನಮ್ಮ ಮೌನಕ್ಕೊಂದು ಧಿಕ್ಕಾರ.
Subscribe to:
Posts (Atom)