ಅದೊಂದು ನೀರವ ರಾತ್ರಿ ಎಂದೆನಿಸಿತು ಗಣೇಶನಿಗೆ.ತನ್ನ ರೂಮಿನಲ್ಲಿ ಶತಪಥ ತಿರುಗುತ್ತಿದ್ದ. ಕಿಟಕಿಯಿಂದ ಬೃಹದಾಕಾರದ ಆಲದಮರದ ಬಿಳಲುಗಳು ವಿಚಿತ್ರವಾಗಿ ಕಾಣುತ್ತಿದ್ದವು. ಹಕ್ಕಿಗಳ ಕಲರವ ಇಂಪೆನಿಸಲಿಲ್ಲ. ಸಂಜೆ ಡಾಕ್ಟರ್ ಹೇಳಿದ ಮಾತುಗಳು ಕಿವಿಯಲ್ಲಿ ಆಡುತ್ತಿದ್ದವು. ತಲೆಯಲ್ಲಿ ವಿಚಾರಗಳ ದೊಂಬರಾಟ ನಡೆಯುತ್ತಿತ್ತು. ಮೃತ್ಯು ಹೊಸ್ತಿಲ ಬಳಿಯಲ್ಲೇ ಹೊಂಚು ಹಾಕಿ ಕಾದಂತಿತ್ತು. ತನಗೆ ರಕ್ತದ ಕ್ಯಾನರ್ ಇದೆ ಎಂದರೆ ತನಗೆ ನಂಬಲಾಗಲಿಲ್ಲ. ಹೆಚ್ಚೆಂದರೆ ಮೂರು ತಿಂಗಳು ಬದುಕಬಹುದು ಎಂದು ಡಾಕ್ಟರ್ ಹೇಳಿದ್ದರು. ಮತ್ತು ಕೆಲವು ಮಾತ್ರೆಗಳನ್ನು ಕೂಡ ಬರೆದು ಕೊಟ್ಟಿದ್ದರು. ಮೂರು ತಿಂಗಳ ಬದುಕಿಗೆ ಮಾತ್ರೆ ಅವಶ್ಯ ಎಂದೆನಿಸಲಿಲ್ಲವೆಂದು ಔಷಧಿ ಅಂಗಡಿವರೆಗೆ ಹೋಗಿ ಬರಿಗೈಲಿ ವಾಪಸ್ ಬಂದಿದ್ದ. ತನಗೆ ಆಗಿರುವ ವಯಸ್ಸೆಷ್ಟು ಎಂಬುದನ್ನು ಲೆಕ್ಕ ಹಾಕತೊಡಗಿದ. ಬರುವ ಗಣಪತಿ ಹಬ್ಬಕ್ಕೆ, ಮೂವತ್ತೈದು ಮುಗಿಯುತ್ತದೆ. ಮೂವತ್ತಾರನೇ ವಯಸ್ಸಿಗೆ ತಾನು ಸಾಯುತ್ತೇನೆ ಎಂದರೆ ಅವನಿಗೇ ನಂಬಲಾಗಲಿಲ್ಲ.
'ಕಾಲು ತೊಳ್ಕೊಂಡು ಅವಲಕ್ಕಿ ತಿನ್ನೊ, ಅದೇನು ಯಾವಾಗಲೂ ರೂಮಲ್ಲೇ ಬಿದ್ದಿರ್ತೀಯಾ, ಅದೇನು ಒದ್ತೀಯೋ' ಅಮ್ಮನ ಗದರುವಿಕೆ ಸಾಯಂಕಾಲದ ನಿದ್ರೆಯನ್ನು ಹಾಳುಮಾಡಿತ್ತು. ಪಿ.ಯು.ಸಿ ಮೊದಲನೇ ವರ್ಷದಲ್ಲಿ ಓದುತ್ತಿದ್ದ ಗಣೇಶ, ಕಾಲೇಜಿಗೆ ಹೋಗಿ ಬಂದ ನಂತರ ತನ್ನ ರೂಮ್ ಬಿಟ್ಟು ಕದಲುತ್ತಿರಲಿಲ್ಲ. ಅಣ್ಣ ರಮೇಶ ಮತ್ತು ತಮ್ಮ ಸತೀಶನೊಂದಿಗೆ ಕೂಡ ಮಾತು ಕಡಿಮೆ. ಅತ್ತಿಗೆ ಶಾಂಭವಿ ಕೂಡ ಅಷ್ಟಕ್ಕಷ್ಟೆ. ಅಪ್ಪನ ಸಾವಿನ ನಂತರ ಮನೆಯ ಜವಾಬ್ದಾರಿಯನ್ನೆಲ್ಲ ಅಣ್ಣ ರಮೇಶನೇ ಹೊತ್ತಿದ್ದ. ತಮ್ಮ ಸತೀಶನಂತೂ ಇವನ ಇರುವಿಕೆಯನ್ನು ಉಪೇಕ್ಷಿಸಿದ್ದ. ಅಮ್ಮನಿಗೆ ಭಾರತ, ಭಾಗವತಗಳೇ ಸಂಗಾತಿಯಾಗಿದ್ದವು. ಅಮ್ಮ ಮನೆಯ ಎದುರುಗಡೆಯ ಆಲದಮರದ ನೆರಳಿನಲ್ಲಿ ಕುಳಿತು ಭಾಗವತ ಓದುತ್ತಿದ್ದಳು. ಅವಳ ಜೊತೆ ಆಗಾಗ ಮೂಲೆಮನೆಯ ವೆಂಕಮ್ಮನೂ ಜೊತೆಯಾಗುತ್ತಿದ್ದಳು. ವೆಂಕಮ್ಮ ಬಂದಳೆಂದರೆ ಅಮ್ಮನಿಗೇಕೋ ಸಮಾಧಾನ. ಅವಳು ತನ್ನ ತವರೂರು ರಾಯಚೂರಿನವಳೆಂದು ಅವಳ ಮೇಲೆ ಅಭಿಮಾನ. ಅಲ್ಲದೇ ಅವಳು ತನ್ನ ತವರೂರಿನ ವಿಷಯವನ್ನೆಲ್ಲ ಅಮ್ಮನಿಗೆ ಅರುಹುತ್ತಿದ್ದಳು. ಹೀಗೆ ವೆಂಕಮ್ಮ ಬಂದಾಗೆಲ್ಲ ಅಮ್ಮನ ಭಾಗವತ ವಾಚನ ನಿಲ್ಲುತ್ತಿತ್ತು.
ಗಣೇಶ ತನ್ನ ಪದವಿ ಮುಗಿಸುವಷ್ಟರಲ್ಲಿ, ಅವನಿಗೆ ಮೌನವೇ ಸಂಗಾತಿಯಾಗಿತ್ತು. ಮನೆಯಲ್ಲಿ ಯಾರೊಂದಿಗೂ ಅವನು ಬೆರೆಯುತ್ತಿರಲಿಲ್ಲ. ಅವನಿಗೆ ಅದೇ ಊರಿನ ಗ್ರಂಥಾಲಯದ ಗ್ರಂಥಪಾಲಕನಾಗಿ ಕೆಲಸವೂ ಸಿಕ್ಕಿತ್ತು. ಇನ್ನೇನು , ಪುಸ್ತಕಗಳೇ ಅವನ ಸಂಗಾತಿಗಳಾಗಿದ್ದವು. ವಿದ್ಯಾರ್ಥಿಯಾಗಿದ್ದಾಗ ಕಾಲೇಜಿನ ಲೈಬ್ರರಿಯಲ್ಲಿದ್ದ ಕನ್ನಡದ ಹಲವಾರು ಪುಸ್ತಕಗಳನ್ನು ಅವನು ಓದಿದ್ದ. ಬೇಂದ್ರೆ, ಕುವೆಂಪುರವರಿಂದ ರಹಮತ್ ತರೀಕೆರೆ ವರೆಗೆ ಓದಿದ್ದ. ಈಗ ಗ್ರಂಥಪಾಲಕನಾದ ಮೇಲಂತೂ ಹಳಕನ್ನಡವನ್ನು ಓದಲು ಶುರು ಮಾಡಿದ. ಆದರೂ ಅವನ ಮೌನ ಮತ್ತು ಓದು ಎಲ್ಲರನ್ನು ಕುತೂಹಲಗೊಳಿಸಿತ್ತು. ಕೆಲವೊಮ್ಮೆ ಅವನೂ ಏನೂ ಓದುತ್ತಿರಲಿಲ್ಲ. ಸುಮ್ಮನೆ ಗೋಡೆ ದಿಟ್ಟಿಸಿಕೊಂಡು ಕುಳಿತಿರುತ್ತಿದ್ದ. ಆಗಾಗ ಪಕ್ಕದೂರಿಗೆ ಹೋಗಿ ಬರುತ್ತಿದ್ದ. ಒಮ್ಮೆ ಹೋದನೆಂದರೆ ಎರಡು ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಮನೆಯವರ ಪ್ರಶ್ನೆಗಳಿಗೆ ಅವನ ಮೌನವೇ ಉತ್ತರವಾಗಿತ್ತು. ಕೆಲವು ದಿನಗಳಲ್ಲೇ ರಮೇಶನ ಗೆಳೆಯ ಅರವಿಂದ ಸುದ್ದಿಯೊಂದನ್ನು ಹೊತ್ತು ತಂದಿದ್ದ. ಪಕ್ಕದ ಊರಿನ ಸಿನಿಮಾ ಥೇಯಿಟರಿನೊದರಲ್ಲಿ ತಾನು ಗಣೇಶನನ್ನು ನೋಡಿದ್ದಾಗಿಯೂ ,ಅವನ ಜೊತೆ ಯುವತಿಯೊಬ್ಬಳಿದ್ದಳೆಂದು ಮನೆಯಲ್ಲಿ ಸುದ್ದಿಯನ್ನು ಬಿತ್ತಿದ್ದ. ಮನೆಯೆಲ್ಲಾ ಕೆಂಡ ತುಂಬಿದಂತಾಗಿತ್ತು. ಅಮ್ಮ, ಅಣ್ಣ, ಅತ್ತಿಗೆ ಮತ್ತು ಸತೀಶ ತನ್ನ ಮೇಲೆ ಎಸೆದ ಪ್ರಶ್ನೆಗಳಿಗೆ ಗಣೇಶ ಉತ್ತರವಿತ್ತಿದ್ದ. 'ಹೌದು. ನಾನು ಯುವತಿಯೊಬ್ಬಳೊಂದಿಗೆ ಸಿನಿಮಾಗೆ ಹೋಗಿದ್ದು ನಿಜ. ಅವಳ ಹೆಸರು ಕಮಲ, ಆಗಾಗ ಅವಳ ಮನೆಯಲ್ಲಿ ಇರುತ್ತಿದ್ದುದೂ ನಿಜ, ಹಾಗೆಂದು ನನಗೂ ಅವಳಿಗೂ ಯಾವುದೇ ದೈಹಿಕ ಸಂಭಂಧವೇನಿಲ್ಲ. ಅವಳು ನನ್ನ ಸಹಪಾಠಿಯ ಅಕ್ಕ. ವಿಧವೆ. ನನಗಿಂತ ಬಲ್ಲವಳು, ಒಬ್ಬ ಒಳ್ಳೆಯ ಸ್ನೇಹಿತೆ ಅಷ್ಟೆ' ಎಂದವನೇ ತನ್ನ ರೂಮಿನೊಳಗೆ ಹೊಕ್ಕಿದ್ದ, ಅವತ್ತಿನಿಂದಲೇ ಗಣೇಶನಿಗೆ ಹೆಣ್ಣು ನೋಡಲು ಎಲ್ಲರೂ ನಿರ್ಧರಿಸಿದರು. ಅದಕ್ಕ್ಯಾವುದಕ್ಕೂ ಗಣೇಶ ಕಿವಿಗೊಡಲಿಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಮತ್ತು ತನ್ನ ಪುಸ್ತಕಗಳು. ಇವಷ್ಟೆ ಅವನ ಲೋಕವಾಗಿದ್ದವು. ಒಮ್ಮೊಮ್ಮೆ ಕಮಲ ಅವನಿಗೆ ಕಾಫ್ಕಾನ METAMORPHOSIS ಉಲ್ಲೇಖಿಸಿ ನಗೆಯಾಡುತ್ತಿದ್ದಳು. ಗಣೇಶನಿಗೂ ಅನ್ನಿಸುತ್ತಿತ್ತು, ತಾನು ರೂಮಲ್ಲೇ ಹುಳುವಾದರೆ?. ಆವಾಗೆಲ್ಲಾ ಅಮ್ಮ, ಅಣ್ಣ, ಅತ್ತಿಗೆ, ಮತ್ತು ತಮ್ಮನ ಪಾಡನ್ನು ನೆನೆಸಿಕೊಂಡು ಅವನ ತುಟಿ ಮೇಲೆ ಸಣ್ಣ ನಗು ಹಾಯುತ್ತಿತ್ತು.
ಗಣೇಶನ ಕೆಮ್ಮು, ಗಣೇಶನ ನಿದ್ರೆಯನ್ನಲ್ಲದೇ ಮನೆಯವರ ನಿದ್ರೆಯನ್ನು ಕೂಡ ಕೆಡಿಸಿತ್ತು. ' ಎರಡು ಎಲೆ ತುಳಸಿಯನ್ನಾದ್ರೂ ತಿನ್ನು, ಕೆಮ್ಮು ವಾಸಿಯಾಗುತ್ತೆ' ಎಂದು ಕೂಗಿದಳು ಅಮ್ಮ. ಸರಿ ಎಂದು ಮಲಗಿದ. ಮುಂಜಾನೆ ಎಲ್ಲರೂ ಉಪಾಹಾರಕ್ಕೆಂದು ಕುಳಿತಾಗ ಗಣೇಶನೂ ಅವರ ಜೊತೆಯಾದ. ಎಲ್ಲರಿಗೂ ಆಶ್ಚರ್ಯವಾಗಿತ್ತು. ಗಣೇಶನೇ ಅವರಿಗೆ ಹೇಳಿದ, ತನಗೆ ಬ್ಲಡ್ ಕ್ಯಾನ್ಸರ್ ಎಂದೂ, ಹೆಚ್ಚೆಂದರೆ ಇನ್ನು ಮೂರು ತಿಂಗಳು ಬದುಕಬಹುದೆಂದು ಡಾಕ್ಟರ್ ಹೇಳಿದ್ದಾರೆಂದ. ಎಲ್ಲರೂ ಸ್ಥಬ್ಧರಾಗಿದ್ದರು. ಯಾರಿಗೂ ಮಾತು ತೋಚುತ್ತಿಲ್ಲ. ಅಂದಿನಿಂದ ಅವನ ಜೀವನ ಶೈಲಿ ಏನೂ ಬದಲಾಗದಿದ್ದರೂ , ಮನೆಯ ಸದಸ್ಯರೆಲ್ಲರೂ ಅವನನ್ನು ವಿಚಿತ್ರ ಕನಿಕರದಿಂದ ನೋಡುತ್ತಿದ್ದರು. ಕೊನೆಗೆ ಅವನೇ ನಿರ್ಧರಿಸಿದ. ತನ್ನ, ಕೆಮ್ಮು ಮತ್ತು ಆರೈಕೆಯಿಂದಾಗಿ ಮನೆಯ ಇತರ ಸದಸ್ಯ್ರರಿಗೆ ತೊಂದರೆಯಾಗಬಾರದೆಂದು ನಿರ್ಧರಿಸಿ ಬಾಡಿಗೆ ಕೋಣೆಯೊಂದಕ್ಕೆ ತನ್ನ ವಾಸ್ತವ್ಯವನ್ನು ಬದಲಾಯಿಸಿದ. ಕೆಲಸಕ್ಕೆ ರಾಜೀನಾಮೆ ನೀಡಿದ. ಊಟ ಮತ್ತು ತಿಂಡಿಗೆ ಮಾತ್ರ ಮನೆಗೆ ಬರುತ್ತಿದ್ದ. ಹುಲುಸಾಗಿ ಗಡ್ಡ ಬೆಳೆದಿತ್ತು. ಕಣ್ಣುಗಳು ಗುಳಿ ಬಿದ್ದಿದ್ದವು. ಆಗಾಗ ತಮ್ಮ ಸತೀಶನೇ ಅವನಿಗೆ ಊಟವನ್ನು ಒಯ್ಯುತ್ತಿದ್ದ. ಎರಡು ದಿನಗಳಿಂದ ಊಟಕ್ಕೆ ಬಂದಿಲ್ಲವೆಂದು, ಮತ್ತು ತಮ್ಮ ಸತೀಶ ಕಾಲೇಜಿನಿಂದ ಟೂರ್ ಗೆ ಹೋಗಿದ್ದೆಂದು, ಅಣ್ಣ ರಮೇಶನೇ ಅವನಿಗೆ ಊಟ ತಂದಿದ್ದ. ಎಷ್ಟು ಬಡಿದರೂ ಬಾಗಿಲು ತೆರೆಯದೇ ಇದ್ದಾಗ, ರಮೇಶ ತಣ್ಣಗೆ ನಡುಗಿದ. ಬಾಗಿಲು ಮುರಿದು ಒಳಹೊಕ್ಕಾಗ ಗಣೇಶ ಚಿರನಿದ್ರೆಯಲ್ಲಿದ್ದ.
ಗಣೇಶನ ಅಂತ್ಯಕ್ರಿಯೆಗೆ ಅವಳೂ ಬಂದಿದ್ದಳು. ಅವಳ ಕಣ್ಣಂಚಿನಲ್ಲಿದ್ದ ಹನಿ ಯಾರಿಗೂ ಕಾಣಲಿಲ್ಲ. ಎಲ್ಲರ ಕಣ್ಣಲ್ಲೂ ಅವಳ ಬಗ್ಗೆ ತಾತ್ಸಾರವಿತ್ತು. ಯಾರೂ ಅಳುತ್ತಿರಲಿಲ್ಲ. ಕೆಲವು ದಿನಗಳಲ್ಲೇ ಅವನು ಅವಳ ಮನೆಯಲ್ಲಿದ್ದಾಗಲೆಲ್ಲ ಅವನು ಬರೆದ ಒಂದು ಪುಟ್ಟ ಕೃತಿಯನ್ನು ಪ್ರಕಟಿಸಲಾಯಿತು. 'ಮೀನಿನ ಹೆಜ್ಜೆ' ಎಂಬ ಆ ಸಣ್ಣ ಕಾದಂಬರಿ ಜನಪ್ರಿಯವಾಯಿತು. ಮನೆಯ ಸದಸ್ಯರೆಲ್ಲರೂ ಪುಸ್ತಕದಿಂದ ಬಂದ ರಾಯಧನದಿಂದ ಖುಶಿಯಾಗಿದ್ದರೂ, ಯಾರೂ ಆ ಪುಸ್ತಕವನ್ನು ಓದಿರಲಿಲ್ಲ. ಕೆಲವು ತಿಂಗಳುಗಳಾಯ್ತು. ಗಣೇಶನ ಪುಸ್ತಕವನ್ನು ಓದಬೇಕೆಂಬ ಕುತೂಹಲದಿಂದ ಅಮ್ಮ ಆಲದ ಮರದ ಕೆಳಗಡೆ ಕುಳಿತುಕೊಂಡಳು. ಕೆಲವು ಪುಟಗಳನ್ನು ಓದಿದ್ದಳೇನೋ , ಅವಳು ಹತ್ತಿಯ ಬತ್ತಿಗಳಿಗೆ ಕುಂಕುಮ ಹಚ್ಚುತ್ತಿದ್ದ ಕೈಗಳು ನಡುಗಹತ್ತಿದ್ದವು. ಕೈಯ ಕೆಂಪು ಅವಳು ಓದುತ್ತಿದ್ದ ಪುಟಕ್ಕೆ ಬಲವಾಗಿ ಅಂಟಿಕೊಂಡಿತು. ಕಣ್ಣುಗಳಲ್ಲಿ ಭಯದ ಛಾಯೆ ಮೂಡಿತು. ಪಟ್ಟನೇ ಕೂತಲ್ಲೇ ನೆಲಕ್ಕುರುಳಿದಳು , ಅವಳ ಪ್ರಾಣಪಕ್ಷಿ ಆಲದಮರದ ಬಿಳಲುಗಳನ್ನು ದಾಟಿ ಹಾರಿಹೋಗಿತ್ತು.
ಹಲವು ವರ್ಷಗಳು ಉರುಳಿದವು, ರಮೇಶನ ಮಗಳು ಗೀತಾ ಕಾಲೇಜಿನಲ್ಲಿ ಓದುತ್ತಿದ್ದಳು. ಅವಳಿಗೂ ಅವಳ ಚಿಕ್ಕಪ್ಪನಂತೆ ಓದುವ ಹುಚ್ಚಿತ್ತು, ಅಪ್ಪನ ಮಾತುಗಳಿಂದ ಚಿಕ್ಕಪ್ಪನ ಮೌನ ಅವಳಿಗೆ ನಿಗೂಢವಾಗಿತ್ತು. ಯಾವುದೋ ಹಳೆಯ ಸಾಮಾನುಗಳನ್ನು ಹುಡುಕುತ್ತಿದ್ದಾಗ ಗಣೇಶನ ಪುಸ್ತಕ ಅವಳನ್ನು ಆಕರ್ಷಿಸಿತ್ತು. ಓದುತ್ತಾ ಕುಳಿತಳು. ಪುಟಗಳಿಗೆ ಹತ್ತಿದ್ದ ಕೆಂಪು ಅಕ್ಷ್ರರಗಳನ್ನು ಮರೆಮಾಚಿತ್ತು. ಕುತೂಹಲ ತಡೆಯಲಾರದೆ ಲೈಬ್ರರಿಯಲ್ಲಿದ್ದ ಇನ್ನೊದು ಪ್ರತಿಯನ್ನು ತಂದು ಅದೇ ಪುಟದ ಕೆಲವು ಪ್ಯಾರಾಗಳು ಚಿಕ್ಕಪ್ಪನ ಮೌನದ ಕಾರಣವನ್ನಿತ್ತಿದ್ದವು. ಅದರಲ್ಲಿದ್ದ ಕೆಲವು ಸಾಲುಗಳು ಹೀಗಿದ್ದವು.
' ಅಂದು ನಾನು ಶಾಲೆಯಿಂದ ಮಧ್ಯಾಹ್ನವೇ ಮನೆಗೆ ಬಂದೆ, ಅಪ್ಪ, ಅಮ್ಮ ಮತ್ತು ನಮ್ಮ ಚಿಕ್ಕಪ್ಪ ಜೋರಾಗಿ ಕೂಗಾಡುತ್ತಿದ್ದರು. ಅಮ್ಮ ಎಂದಿನಂತೆ ದೇವರ ಸಾಮಾನುಗಳನ್ನು ತೊಳೆದು, ಒರೆಸಿ ಇಡುತ್ತಿದ್ದರು. ಅಪ್ಪ ಚಿಕ್ಕಪ್ಪನಿಗೆ ಹೇಳುತ್ತಿದ್ದರು.. 'ಮಕ್ಕಳು ದೊಡ್ಡೋರಾಗಿದ್ದಾರೆ, ಇವಾಗ್ಲಾದ್ರೂ ಬರೋದು ನಿಲ್ಲಿಸು ' . ಅಮ್ಮನ ಉತ್ತರ ಹೀಗಿತ್ತು, 'ನೀನು ಗಂಡಸಾಗಿದ್ರೆ ಅವನ್ಯಾಕೆ ಬರ್ತಿದ್ದ'. ಆದರೆ ಚಿಕ್ಕಪ್ಪ ಅಪ್ಪನಿಗೆ ಹೇಳಿದ್ದರು, 'ಆಯ್ತು, ನಾನು ಇನ್ಮೇಲೆ ಬರೋಲ್ಲ' ಎಂದು ಹೊರನಡೆದರು. ಅಮ್ಮ ನೀಲಾಂಜನವನ್ನು ಜೋರಾಗಿ ಎಸೆದು ಅಡುಗೆ ಮನೆಯತ್ತ ಹೊರಟಳು. ನಾನು ಬಂದು ನಿಂತಿದ್ದನ್ನು ಯಾರೂ ಗಮನಿಸಿರಲಿಲ್ಲ. ನಾನು ಮತ್ತೆ ಶಾಲೆಗೆ ಹೊರಟೆ, ಅಂದಿನಿಂದ ನಾನು ಯಾವತ್ತೂ ಶಾಲೆಯಿಂದ ಅರ್ಧಕ್ಕೇ ಮನೆಗೆ ಬಂದವನಲ್ಲ, ಶಾಲೆಯನ್ನು ತಪ್ಪಿಸಿದವನೂ ಅಲ್ಲ'.