Thursday, January 3, 2013

ಈ ಹೊತ್ತಿಗೆ, ಈ ಹೊತ್ತಿಗೆ. ಭಾಗ -೩.

ನನ್ನ ತಮ್ಮ ಶಂಕರ ಪುಸ್ತಕದ ಹೂರಣವನ್ನು ಬಿಚ್ಚಿಡುವ ಪ್ರಯತ್ನದ ಎರಡನೇ ಭಾಗ ಇದು. ಮೊದಲನೇ ಭಾಗದ ಅರು ಅಂಶಗಳನ್ನು ಓದುವ ಪ್ರಯತ್ನ ಮಾಡೋಣ.

A) ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯ.

ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದ ಕಷ್ಟ ಸುಖದ ಕಥೆ ಇಲ್ಲಿರದಿದ್ದರೂ, ಅವರ ತಂದೆ ತಾಯಿಯವರು ಕಷ್ಟ ಪಟ್ಟ ಬಗ್ಗೆ  ಅನಂತನಾಗ್  ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ಅವರ ದೋಣಿ ಯಾತ್ರೆ ಸಿಂದ್ ಬಾದ್ ಕಥೆಯನ್ನು ನೆನಪಿಸುತ್ತದೆ. ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯದ ಸಂಗತಿಗಳಲ್ಲಿ ಬಾಲ ಶಂಕರನಾಗ್ ನಾಯಕನಾಗುತ್ತಾರೆ.

B) ೧೯೫೪ರ ಸುಮಾರಿನ ಹೊನ್ನಾವರ, ಮತ್ತು ಮುಂಬಯಿಯ ಸಾಮಾಜಿಕ ಬದುಕು.
    ಮುಂಬಯಿಯ ಚಿತ್ರಣವನ್ನು ನಮಗೆ ಮನಮುಟ್ಟುವಂತೆ ಚಿತ್ರಿಸಿದವರಲ್ಲಿ, ಯಶವಂತ ಚಿತ್ತಾಲ ಮತ್ತು ಜಯಂತ ಕಾಯ್ಕಿಣಿಯವರು ಪ್ರಮುಖರು. ಅನಂತನಾಗ್ರೂ ಕೂಡ ತಾವು ಕಡಿಮೆ ಇಲ್ಲ ಎಂಬಂತೆ ಆಗಿನ ಹೊನ್ನಾವರ ಮತ್ತು ಮುಂಬಯಿಯ ಬದುಕನ್ನು ಚಿತ್ರಿಸಿದ್ದಾರೆ.

C) ೧೯೬೫ ರ ಸುಮಾರಿನ ನಾಟಕರಂಗ.
     ಅದು ಬಂಡಾಯದ ಸಮಯ. ಸಾಹಿತ್ಯದಲ್ಲೂ ಕೂಡ. ಅನಂತನಾಗ್ರ ನಾಟಕಗಳನ್ನು sidewingನಲ್ಲಿ ನೋಡುತ್ತಾ , ನಿರ್ದೇಶನ, ಮತ್ತು ನಾಟಕಗಳ ಅಂತರಂಗವನ್ನು ಅರಿತ ಶಂಕರ್ ನಾಗ್, ನಿರ್ದೇಶಕನಾಗಿ ಹೇಗೆ ಹೊರ ಹೊಮ್ಮಿದರು ಎಂಬುದನ್ನು ಮನಮುಟ್ಟುವಂತೆ ಅನಂತನಾಗ್ ಬಿಂಬಿಸಿದ್ದಾರೆ.

D) ಕ್ರಿಯಾಶೀಲತೆ ಮತ್ತು ಉತ್ತಮ ಅಭಿರುಚಿ ಉಳ್ಳ ವ್ಯಕ್ತಿಯ ನಿರಂತರ ತುಡಿತ.
    ಬಹುಶಃ , ನಮ್ಮ ಸಮಕಾಲೀನತೆಯ ಆದರ್ಶಪ್ರಾಯವಾದ ವ್ಯಕ್ತಿ ಶಂಕರ್ ಎಂದರೆ ತಪ್ಪಾಗಲಾರದು. ಹಗಲು ಸಿನಿಮಾ ಚಿತ್ರೀಕರಣ, ರಾತ್ರಿ ನಾಟಕಗಳ ತಾಲೀಮು. ಹೀಗೆ ಯಾವಾಗಲೂ ಚಟುವಟಿಕೆಯಿಂದ ಕೂಡಿದ್ದ ಶಂಕರ್ ಒಂದು ಸ್ಫೂರ್ತಿಯ ಸೆಲೆ. ಇಂದಿನ ಯುವಜನಾಂಗಕ್ಕೆ ಶಂಕರ್ ಒಬ್ಬ ಆದರ್ಶ ವ್ಯಕ್ತ.

E) ೧೯೮೯ರ ಉ.ಕ ಲೋಕಸಭೆ ಚುನಾವಣೆಯಲ್ಲಿ ಅನಂತನಾಗ್ ಸ್ಪರ್ಧಿಸಿದಾಗ , ಶಂಕರನಾಗ್ ನ ಸಂಘಟನಾಶಕ್ತಿ,
    ಹಿಂದೆ, ಶ್ರೀಮತಿ ಇಂದಿರಾಗಾಂಧಿಯವರ ಚುನಾವಣೆಯನ್ನು ಅವರ ಮಗ ಸಂಜಯ್ ಗಾಂಧಿ ಹೇಗೆ ನಿರ್ವಹಿಸಿದನೋ, ಹಾಗೆಯೇ ಶಂಕರ್ ಅವರ ಅಣ್ಣ ಅನಂತ್ ಅವರ ಚುನಾವಣೆ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಅವರ ಸಂಘಟನಾ ಚಾತುರ್ಯಕ್ಕೆ ಒಂದು ನಮನ.

F)ಸಾರ್ವಜನಿಕ ಬದುಕನ್ನು ನಿರ್ವಹಿಸುವ ರೀತಿ.
    ನಾವು ಯಾವುದೇ ರಂಗದಲ್ಲಿ ಜನಪ್ರಿಯರಾಗಲೀ, ಸಾರ್ವಜನಿಕವಾಗುತ್ತೇವೆ. ಅದರಲ್ಲೂ ಸಿನಿಮಾರಂಗ ನಮ್ಮನ್ನು ಜನಪ್ರಿಯತೆಯ ಉತ್ತುಂಗವನ್ನೇರಿಸುತ್ತದೆ. ಹೀಗೆ, ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಮರೆಯಾದ ಶಂಕರ್ ಮತ್ತು ನಂತರದ ಬದುಕನ್ನು ಅನಂತ್ ಹೇಗೆ ಎದುರಿಸಿದರು ಎಂಬುದನ್ನು ಅನಂತ್ ವಿವರಿಸಿದ್ದಾರೆ.

    ಹೀಗೆ, ಶಂಕರ್ ಹುಟ್ಟಿನಿಂದ ಶುರುವಾಗುವ ಪುಸ್ತಕ, ಶಂಕರ್ ನ ಸಾವಿನೊಂದಿಗೆ ಮುಗಿಯುತ್ತದೆ. ಈ ಪುಸ್ತಕ ಓದಿ ಮುಗಿಸುವಷ್ಟರಲ್ಲಿ, ನಿಮ್ಮಲ್ಲೊಂದು ಹೊಸ ಸ್ಪೂರ್ತಿ ಹುಟ್ಟುತ್ತದೆ, ಮತ್ತು ನಿಮ್ಮ ಕಣ್ಣು ತೇವವಾಗುತ್ತದೆ ಎಂದು ನಂಬಿದ್ದೇನೆ.

0 comments:

Post a Comment

 
;