'ನಾನು ಆಟೋ ಡ್ರೈವರ್ ಆಗಿದ್ದು ನನಗೆ ಅಸಹಜವೇನೂ ಅನ್ನಿಸಲಿಲ್ಲ. ಆದರೆ ಆಕಸ್ಮಿಕವಾಗಿತ್ತು. ಹಳೆಯ ಪ್ರೇಯಸಿಯ ಹಠಾತ್ ಭೇಟಿಯ ಥರ. ನಮ್ಮ ತಂದೆ ಕೂಡಾ ಆಟೋ ಡ್ರೈವರ್. ಆಟೋ ಓಡಿಸುತ್ತಲೇ ನಮ್ಮನ್ನೆಲ್ಲ ಓದಿಸಿದ್ದರು. ನಾನೂ ಕೊನೆಯ ವರ್ಷದ ಬಿ.ಬಿ.ಎ ಮಾಡುತ್ತಿದ್ದೆ. ಅಷ್ಟರಲ್ಲಿ ಅಪ್ಪನಿಗೆ ಹೃದಯರೋಗ ಶುರುವಾಯಿತು. ಡಾಕ್ಟರಂತೂ ಆಟೋ ಓಡಿಸುವದು ಬೇಡವೆಂದಿದ್ದರು. ಮನೆಯ ಖರ್ಚು, ಅಪ್ಪನ ಔಷಧಿ ಖರ್ಚು, ಮತ್ತು ತಂಗಿಯ ಮದುವೆಯ ಖರ್ಚಿಗಾಗಿ ನಾನು ಆಟೋ ಓಡಿಸಲು ಶುರು ಮಾಡಿದೆ. ಮೊದಮೊದಲು ಬೇಜಾರಾಗುತ್ತಿತ್ತು. ನಂತರ ರೂಢಿಯಾಯಿತು. ಈಗ ಆರಾಮವಾಗಿದ್ದೇನೆ ಸಾರ್ ' ಎಂದೆ. ಗಿರಾಕಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ್ದೆ. ಅವನ ಪ್ರಶ್ನೆ ಹೀಗಿತ್ತು. ನೀನು ಇಷ್ಟ ಪಟ್ಟು ಗಾಡಿ ಓಡಿಸ್ತೀಯ? ಅಥವಾ ಅನಿವಾರ್ಯತೆಯಾ?
ಕೆಲವೊಂದು ಗಿರಾಕಿಗಳು ಈ ಥರ ವಿಚಿತ್ರ ಪ್ರಶ್ನೆ ಕೇಳುತ್ತಾರೆ. ಅವನೇಕೋ ನನ್ನ ಉತ್ತರದಿಂದ ಸಮಾಧಾನವಾಗಿದ್ದ ಎಂದೆನಿಸಲಿಲ್ಲ. ಮರು ಪ್ರಶ್ನೆ ಎಸೆದೆ. ' ಸಾರ್, ನೀವು ಏನ್ ಕೆಲಸ ಮಾಡ್ತೀರ?' . ' ನಾನೊಬ್ಬ ಪತ್ರಕರ್ತ, ಆಗೊಮ್ಮೆ ಈಗೊಮ್ಮೆ ಕಥೆ ಬರೀತೀನಿ' ಎಂದ. ಕೈಯಲ್ಲಿದ್ದ ಸಿಗರೇಟಿನ ನೆನಪಾದಂತೆ ಜೋರಾಗಿ ಹೊಗೆ ಎಳೆದ. ' ಈ ಆಟೋ ಡ್ರೈವರ್ ಗಳು ಯಾಕೆ ಈ ಥರ ಇರ್ತಾರೆ ' ಎಂದ.' ಈ ಥರ ಅಂದ್ರೆ? ' ಅವನ ಪ್ರಶ್ನೆಗೆ ನನ್ನ ಮರು ಪ್ರಶ್ನೆ. ' ಯಾವಾಗಲೂ ಜನರಿಗೆ ಮೋಸ ಮಾಡೋಕೆ ನೋಡೋದು, ಕರೆದ ಕಡೆ ಬರೋಲ್ಲ ಅನ್ನೋದು, ಹೆಚ್ಚಿಗೆ ಹಣ ಪೀಕೋದು. ಯಾಕೆ ಹೀಗೆ.? ಅವರು ಪ್ರಾಮಾಣಿಕವಾಗಿ ಇರಲಿ ಅಂತ ನಾವು ಬಯಸೋದು ತಪ್ಪಾ?' . 'ಸರ್, ಕಾರಣಗಳು ನೂರಾರು ಇರುತ್ವೆ. ರಾತ್ರಿ ನಾವು ಗಿರಾಕಿ ಕರೆದ ಕಡೆ ಹೋಗೋಕೆ ಹಿಂದೇಟು ಹಾಕ್ತೇವೆ, ಯಾಕಂದ್ರೆ, ನಾವು ನಮ್ಮ ಮನೆ ಕಡೆ ಹೋಗೋ ಸಮಯ ಆಗಿರುತ್ತೆ, ಅದಕ್ಕೆ ಅದೇ ಕಡೆ ಹೋಗೋ ಗಿರಾಕಿಗಾಗಿ ಹುಡುಕ್ತೇವೆ. ಇಲ್ಲ, ಗಿರಾಕಿ ಹೇಳಿದ ಏರಿಯಾ ಸರಿ ಇರಲ್ಲ. ನಮಗೂ ಮನೆ ಮಠ ಅಂತ ಇದೆ ಅಲ್ವ ಸರ್., ಹೆಚ್ಚಿಗೆ ಹಣ ಯಾಕೆ ಕೇಳ್ತೀವಿ ಅಂದ್ರೆ, ವಾಪಸ್ ಬರೋಕೆ ಗಿರಾಕಿ ಸಿಗಲ್ಲ ಅಥವಾ ನಮಗೂ ಹಣದ ಅಡಚಣೆ ಇರುತ್ತೆ, ಇವ್ಯಾವುದೂ ಇಲ್ಲದೇನೂ ಸ್ವಲ್ಪ ಜನ ಜಾಸ್ತಿ ಹಣ ಕೇಳ್ತಾರೆ, ರಾವಣ ಇದ್ದರೆ ಅಲ್ಲವೇ ರಾಮಾಯಣ. ಅಲ್ಲದೆ ಕೆಲವೊಂದು ಅನುಭವಗಳಿಂದ ಅವರು ಬದಲಾಗಿರ್ತಾರೆ'. ಕೊನೆಯ ವಾಕ್ಯ ಮಾತ್ರ ಅವನ್ ಗಮನ ಸೆಳೆಯಿತು, 'ಅನುಭವ ಅಂದ್ರೆ?', ಎಂದ. 'ನೋಡಿ ಸಾರ್, ನಾನು ಆಟೋ ಓಡ್ಸೋಕೆ ಶುರು ಮಾಡ್ದಾಗಿನಿಂದ ತುಂಬ ಪ್ರಾಮಾಣಿಕ. ಒಂದು ಸಾರಿ, ಊರ ಹೊರಗಡೆ ಏರಿಯಾದಿಂದ ಮರಳುತ್ತಿದ್ದೆ. ಸ್ವಲ್ಪ ಮುಂದೆ ಬಂದಿದ್ದೆ, ಇಬ್ಬರು ಮಧ್ಯವಯಸ್ಕರು ರಸ್ತೆ ಪಕ್ಕದಲ್ಲಿ ನಿಂತು ಆಟೋ ನಿಲ್ಲಿಸುವಂತೆ ಕೈ ಮಾಡಿದರು, ಇಬ್ಬರೂ ಚೆನ್ನಾಗಿ ಕುಡಿದಿದ್ದರು. ಒಬ್ಬ, ಇನ್ನೊಬ್ಬನ ವಿಳಾಸವನ್ನು ಒಂದು ಚೀಟಿಯಲ್ಲಿ ಬರೆದು, ಐವತ್ತು ರೂಪಾಯಿ ನೋಟಿನೊಂದಿಗೆ ನನ್ನ ಕಿಶೆಯಲ್ಲಿಟ್ಟ. ಅವ್ರನ್ನು ಅವರ ಮನೆಗೆ ತಲುಪಿಸು ಎಂದು ಕತ್ತಲಲ್ಲಿ ಮರೆಯಾದ. ನಾನು ಅವರ ವಿಳಾಸವನ್ನು ನೋಡಿಕೊಂಡು ಅವರ ಮನೆಯತ್ತ ಆಟೋ ಓಡಿಸಿದೆ. ಅವರ ಮನೆ ಮೊದಲನೇ ಮಹಡಿಯಲ್ಲಿತ್ತು. ಅವರ ಒಂದು ಕೈಯನ್ನು ನನ್ನ ಭುಜದ ಮೇಲೆ ಹಾಕಿಕೊಂಡು ಅವರನ್ನು ಕರೆದೊಯ್ದೆ ಕಾಲಿಂಗ್ ಬೆಲ್ ಪ್ರೆಸ್ ಮಾಡಿದೆ. ಧಡೂತಿ ಹೆಂಗಸೊಬ್ಬಳು ಬಾಗಿಲು ತೆರೆದು ನನ್ನನ್ನೊಮ್ಮೆ, ತನ್ನ ಗಂಡನನ್ನೊಮ್ಮೆ ದುರುಗುಟ್ಟಿ ನೋಡಿದಳು. ನನಗ್ಯಾಕೋ ಹಿಡಿಂಬೆಯ ನೆನಪಾಯಿತು, 'ನೀನ್ಯಾಕೆ ಮೇಲೆ ತನಕ ಕರ್ಕೋಂಡು ಬಂದೆ, ಕೆಳಗೆ ಬಿಟ್ಟು ಹೋಗ್ಬಹುದಿತ್ತಲ್ವಾ? ಈಗ ನೋಡು , ಅಕ್ಕ ಪಕ್ಕದ ಮನೆಯವ್ರಿಗೆಲ್ಲ ಗೊತ್ತಾಗುತ್ತೆ, ಇವರು ಕುಡ್ಕೊಂಡು ಮನೆಗೆ ಬಂದ್ರು ಅಂತ, ಎಂದು ನನ್ನ ಬಯ್ಯೋಕೆ ಶುರು ಮಾಡಿದಳು.ಸಣ್ಣಗೆ ನಾನು ಅಲ್ಲಿಂದ ಕಾಲ್ಕಿತ್ತೆ. ಸ್ವಲ್ಪ ದೂರ ಹೋಗಿದ್ದೆ, ಹಿಂದಿನ ಸೀಟಿನಿಂದ ಮೊಬೈಲ್ ರಿಂಗ್ ಆಗೋಕೆ ಶುರು ಮಾಡಿತು, ಪಾಪ ಎಣ್ಣೆ ಗಿರಾಕಿ ಮೊಬೈಲ್ ಆಟೋದಲ್ಲಿ ಬಿದ್ದಿತ್ತು. ಮತ್ತೆ ಹೋಗಿ ವಾಪಸ್ ಕೊಟ್ಟು ಬರೋದೆ ಸರಿ ಎಂದುಕೊಂಡವನೇ ಅವರ ಮನೆಗೆ ಹೋದೆ. ಬಾಗಿಲು ತೆಗೆದೇ ಇತ್ತು, ಒಳಗಡೆಯಿಂದ ಹಿಡಿಂಬೆಯ ಬೈಯ್ಗುಳಗಳು ಕೇಳಿಸುತ್ತಿದ್ದವು. ನಾನು ಮೆಲ್ಲಗೆ ಕೂಗಿದೆ, ಹಿಡಿಂಬೆಗೆ ನನ್ನ ಕೂಗು ಕೇಳಿಸಲಿಲ್ಲ. ನಾನೇ ಧೈರ್ಯವಾಗಿ ಒಂದು ಹೆಜ್ಜೆ ಒಳಗಿಟ್ಟೆ, ಧುತ್ತನೇ ಬಂದಳು ಹಿಡಿಂಬೆ, ಬಂದವಳೇ ಏನು ಎಂದಳು, ಮೊಬೈಲ್ ಕೈಗಿತ್ತೆ, ಹೊರನಡೆದೆ, ಧಡ್ ಎಂದು ಬಾಗಿಲು ಹಾಕಿಕೊಂಡಳು. ಮನಸ್ಸು ಕಹಿಯಾಗಿತ್ತು ಸರ್' ಎಂದೆ. ಪತ್ರಕರ್ತ ಗಿರಾಕಿ ಸಿಗರೇಟಿನಲ್ಲಿ ಮೈಮರೆತಿತ್ತು. ' ಇನ್ನೊಂದ್ಸಲ ಹೀಗಾಯ್ತು ಸರ್, ಒಂದು ಮದುವೆ ಛತ್ರಕ್ಕೆ ಡ್ರಾಪ್ ಇತ್ತು. ಮೂರು ಜನ ಹೆಂಗಸ್ಸ್ರು. ಅದು ಇದು ಅಂತ ಮಾತಾಡ್ತಾ ಒಂದು ಸೀರೆಯನ್ನು ಆಟೋದಲ್ಲೆ ಬೀಳಿಸ್ಕೊಂಡು ಹೋಗಿದ್ದ್ರು, ಅಪರನ್ನು ಹುಡುಕಿ ವಾಪಸ್ ಕೊಡೋಕೆ ಹೋದ್ರೆ, ಆಯಮ್ಮ, ಇನ್ನೊಬ್ಬಳಿಗೆ ಕೇಳಿದ್ಲು, ನೋಡೆ, ಸೀರೆ ಬದಲಾಯಿಸಿದಾನಾ ಏನು ಅಂತ ನೋಡ್ಕೋ ಇವಾಗಲ್ಲೇ ಅಂದ್ಲು, ಮತ್ತೆ ಬೇಜಾರಾಯ್ತು ಸಾರ್ , ಅದಕ್ಕೆ ಪ್ರಾಮಾಣಿಕತೆಗೆ ಬೆಲೆ ಇಲ್ವ ಅಂತ ಅನ್ನಿಸುತ್ತೆ ' ಎಂದೆ. ಅದಕ್ಕೆ ಪತ್ರಕರ್ತ ಗಿರಾಕಿ,' ಪ್ರಾಮಾಣಿಕತೆಗೆ ಪರೀಕ್ಷೆಗಳು ಜಾಸ್ತಿ, ಚಿನ್ನ ಎಷ್ತು ಸುಡುತ್ತೋ ಅಷ್ತು ಶುಧವಾಗುತ್ತೆ. ನೀನು ಮಾತ್ರ ನಿನ್ನ ಪ್ರಾಮಾಣಿಕತೆಯನ್ನು ಬಿಡಬೇಡ, ಎಂದ. ಅವ ಮನೆಯೂ ಹತ್ತಿರವಾಗಿತ್ತು. ಮೀಟರ್ ನೋಡಿದೆ, ೧೪೭.೦೦ ಎಂದು ತೋರಿಸುತ್ತಿತ್ತು. ೧೫೦ ರೂಪಾಯಿ ಕೊಟ್ಟವನೇ, 'Keep the change ' ಎಂದವನೇ ಕೆಳಗಿಳಿದು ಹೊರಟ.
ಹೀಗೆಯೆ ಕೆಲವು ದಿನಗಳಾದವು. ಸಿಹಿ ಕಹಿ ಅನುಭವಗಳಿದ್ದರೂ ನಾನು ನನ್ನ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದೆ. ಅವತ್ತೊಂದು ದಿನ, ದಿನಪತ್ರಿಕೆ ಓದುತ್ತಿದ್ದೆ. ಬಹುಮಾನಿತ ಕಥೆಯೊಂದು ಪ್ರಕಟವಾಗಿತ್ತು. ಓದುತ್ತಾ ಹೋದೆ, ಅದು ನನ್ನದೇ ಕಥೆಯಾಗಿತ್ತು. ಆ ಪತ್ರಕರ್ತ ಗಿರಾಕಿ, ನನ್ನ ಕಥೆಯನ್ನು ಸುಂದರವಾಗಿ ಹೆಣೆದಿದ್ದ. ಪ್ರಾಮಾಣಿಕತೆಗೆ ಬೆಲೆ ಇದೆ ಎಂಬುದನ್ನು ಚೆನ್ನಾಗಿ ಚಿತ್ರಿಸಿದ್ದ. ನನಗೂ ಖುಷಿಯಾಯಿತು. ಅವನನ್ನು ಅಭಿನಂದಿಸೋಣ ಎಂದು ಅವನ ಮನೆಗೆ ಹೋದೆ, ಕಾಲಿಂಗ್ ಬೆಲ್ ಪ್ರೆಸ್ ಮಾಡಿದೆ. ಪತ್ರಕರ್ತ ಹೊರಗೆ ಬಂದ, 'ಕಂಗ್ರಾಚ್ಯುಲೇಶನ್ ಸರ್, ನನ್ನ ಕಥೆಯನ್ನು ಚೆನ್ನಾಗಿ ಬರೆದಿದ್ದೀರಾ, ಪ್ರಾಮಾಣಿಕತೆಗೆ ಬೆಲೆ ಇದೆ ಅಂತ ತೋರಿಸಿದ್ದೀರಿ. ತುಂಬಾ ಖುಷಿಯಾಯ್ತು ಸರ್' ಎಂದೆ. ' ಅರೆ, ಯಾರು ನೀನು, ಇಲ್ಲಿಗ್ಯಾಕೆ ಬಂದೆ, ಒಬ್ಬ ಆಟೋ ಡ್ರೈವರ್ ಕಥೆ ಬರೆದ್ರೆ ಅದು ನಿಂದೇ ಹೇಗಾಗುತ್ತೆ, ಅದು ನನ್ನ ಕಲ್ಪನೆಯಲ್ಲಿ ಮೂಡಿದ ಕಥೆ. ನಡೆ ಇಲ್ಲಿಂದ ' ಎಂದವನೇ ಧಡಾರನೇ ಬಾಗಿಲು ಹಾಕಿಕೊಂಡ. ನಾನು ನನ್ನ ಆಟೋ ಕಡೆಗೆ ಭಾರವಾದ ಹೆಜ್ಜೆ ಹಾಕಿದೆ. ಹತ್ತಿರದ ಶಾಲೆಯೊಂದರಿಂದ ರಘುಪತಿ ರಾಘವ ರಾಜಾರಾಮ್ ಕೇಳಿಸುತ್ತಿತ್ತು. ಅಂದು ಗಾಂಧಿ ಜಯಂತಿಯಾಗಿತ್ತು.
0 comments:
Post a Comment