Thursday, January 3, 2013

'ಈ ಹೊತ್ತಿಗೆ, ಈ ಹೊತ್ತಿಗೆ.' ಭಾಗ-೨.

ಅನೇಕರು ನಮಗೆ ಸ್ಫೂರ್ತಿದಾಯಕರಾಗಿದ್ದಾರೆ. ಸ್ಫೂರ್ತಿಯ ಸೆಲೆಯನ್ನು ಹುಡುಕುವದು ಅಂಥ ಕಷ್ಟವೇನಲ್ಲ. ನಮ್ಮ ಸುತ್ತಮುತ್ತಲೇ ತುಂಬಾ ಜನ ಸಿಗುತ್ತಾರೆ. ಅದು ಇಂಥವರೇ ಎಂದಾಗಬೇಕಿಲ್ಲ, ನಮ್ಮ ತಂದೆ ತಾಯಿಗಳೇ ನಮಗೆ ಸ್ಫೂರ್ತಿಯಾದಾರು.
ಆದರೂ ಕೆಲವು ವ್ಯಕ್ತಿಗಳಿರುತ್ತಾರೆ. ಅವರ ಇರುವಿಕೆಯೂ ಸ್ಫೂರ್ತಿದಾಯಕ, ಮತ್ತು ಅವರ ನೆನಪುಗಳೂ.

ಒಬ್ಬನಿದ್ದ. ಧಾರ್ಮಿಕ ವಾತಾವರಣದಲ್ಲಿ ಹುಟ್ಟಿದ, ನೋಡಲು ದುಂಡುದುಂಡಾಗಿದ್ದ. ಮುದ್ದಾಗಿದ್ದ. ಅಣ್ಣ , ಅಕ್ಕರನ್ನು ತನ್ನ ಚೇಷ್ಟೆಯಿಂದ ಗೋಳಾಡಿಸಿದ. ಮುಗ್ಧತೆಯಿಂದ ಆಕರ್ಷಿಸಿದ, ಜಾಣ ವಿದ್ಯಾರ್ಥಿಯಂತೆ ಅಭ್ಯಸಿಸಿದ. ತಾನು ಹೋದಲ್ಲೆಲ್ಲಾ ತನ್ಣ ಛಾಪು ಮೂಡಿಸಿದ. ಅಣ್ಣನಿಗೆ ನಾಟಕ ರಿಹರ್ಸಲ್ ಮಾಡಿಸಿದ, ಅವನ ಅಭಿನಯದ ನಾಟಕಗಳನ್ನು Sidewingನಲ್ಲಿ ನೋಡುತ್ತಾ ನಾಟಕ ಕಲೆಯನ್ನು ಅಭ್ಯಸಿಸಿದ, ನಾಟಕ ನಿರ್ದೇಶಿಸಿದ. ಅಣ್ಣನ ಜೊತೆ ನಟನಾದ, ಅಣ್ಣನನ್ನು ಸೇರಿಸಿಕೊಂಡು ನಿರ್ಮಾಪಕನಾದ, ಅಣ್ಣನಿಗೆ ರಾಜಕೀಯ ಭೋಧಿಸಿದ. ೧೯೮೫ ರ ಆಗಸ್ಟ್ ೧೫ ರಂದು ಕನ್ನಡದ ಪ್ರಥಮ ಎಲೆಕ್ಟ್ರಾನಿಕ್ ಸ್ಟುಡಿಯೊ ಪ್ರಾರಂಭಿಸಿದ. ೧೯೯೦ರ ಹೊತ್ತಿಗೆ ಆತನ ಪ್ರಾಜೆಕ್ಟುಗಳ ಪಟ್ಟಿ ಹೀಗಿತ್ತು.

೧) ಬೆಂಗಳೂರಿನ ಹೊರಗಡೆ ಒಂದು ಕ್ಲಬ್. ಅದರಲ್ಲಿ ಬಿಲಿಯರ್ಡ್ಸ್ ಆಟದ ಟೇಬಲ್ಲು, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಕಾರ್ಡ್ಸ್ ರೂಮ್, ಬಾರು, ರೀಡಿಂಗ್ ರೂಮ್, Bowling alley ,ಮತ್ತು ಈಜುಕೊಳ ,
೨) ಕೆನಡಾದಲ್ಲಿದ್ದಂತೆ ಮಕ್ಕಳಿಗಾಗಿ ಅಮ್ಯೂಸ್ ಮೆಂಟ್ ಪಾರ್ಕ್
೩)ಜರ್ಮನಿ ಪದ್ಧತಿಯಂತಿ ಇಟ್ಟಿಗೆ ಕಾರ್ಖಾನೆ, ಈ ಇಟ್ಟಿಗೆಯನ್ನು ಕಡಿಮೆ ವಿದ್ಯುಚ್ಚಕ್ತಿ ಬಳಸಿ ಉತ್ಪಾದಿಸಲಾಗುತ್ತದೆ. ಮತ್ತು ಇದು ರಾಸಾಯನಿಕ ಇಟ್ಟಿಗೆಯಾಗಿದ್ದು ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ, ಇದರಿಂದ ಬಡವರಿಗೆ ಅನುಕೂಲಕರ.
೪)Austrian Technologyಯಿಂದ pre fabricated sheetಗಳ ಉತ್ಪಾದನೆ. ಇದರಿಂದ ಅತಿ ಕಡಿಮೆ ಬೆಲೆಯಲ್ಲಿ ಮನೆಗಳನ್ನು ಕಟ್ಟಬಹುದು.
೫)ಸಿದ್ಧ ಉಡುಪಗಳ ತಯಾರಿಗೆ ಕೇಂದ್ರ.
೬)ಬೆಂಗಳೂರಿಗೆ ಮೆಟ್ರೊ ರೈಲು(೧೯೯೦ ರಲ್ಲಿಯೇ)
ಹೇಗಿದೆ?ಇದು ಆತನ ದೂರದೃಷ್ಟಿ ಮತ್ತು ಕ್ರಿಯಾತ್ಮಕ ಆಲೋಚನೆಗಳಿಗೆ ಹಿಡಿದ ಕನ್ನಡಿಯಲ್ಲವೇ? ಇಷ್ಟಕ್ಕೂ ಈತನ ವೈಯುಕ್ತಿಕ ಸಾಧನೆಗಳೇನು? ೯ ಚಿತ್ರಗಳು, ೨ ಟಿ.ವ್ಹಿ ಧಾರಾವಾಹಿಗಳ ನಿರ್ದೇಶನ, ಸುಮಾರು ೬೨ ಚಿತ್ರಗಳ ನಟನೆ, ಸುಮಾರು ನಾಟಕಗಳ ನಿರ್ದೇಶನ ಮತ್ತು ನಟನೆ, ೩ ಚಿತ್ರಗಳಿಗೆ ಚಿತ್ರಕಥೆ, ಮತ್ತು ಸ್ವತಃ ತಬಲ ಕಲಾವಿದ. ಅಲ್ಲದೇ ಕೆಲವು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು. ಇಷ್ಟೆಲ್ಲಾ ಸಾಧಿಸಿ ಈತ ವಿಧಿವಶನಾದಾಗ ಈತನಿಗೆ ೩೬ ವರ್ಷ. ಈತನ ಹೆಸರು ಶಂಕರ.
ಇಲ್ಲಿಗೆ ಈತನ ಬಗ್ಗೆ ನಿಲ್ಲಿಸಿ, ಈತನ ಅಣ್ಣನ ಬಗ್ಗೆ ಓದೋಣ,
ಈತ ಸುಮಾರು ೮೫ ಕನ್ನಡ , ೧೦ ಹಿಂದಿ, ೧ ತಮಿಳು, ೧ ಮರಾಠಿ ಮತ್ತು ೧ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದು ಸುಮಾರು ೯ ಪ್ರಶಸ್ತಿಗಳ ವಿಜೇತ, ೧೯೯೩ರ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಸೇವೆ. ಅಪ್ರತಿಮ ಬುಧ್ಧಿಶಾಲಿ, ಈತನ ಹೆಸರು ಅನಂತ. ಈ ಅನಂತ ತನ್ನ ತಮ್ಮನ ಬದುಕಿನ ಕಥೆಯನ್ನು ಬರೆದರೆ ಹೇಗಿರುತ್ತೆ. ಶಂಕರನನ್ನು ಅತ್ಯಂತ ಹತ್ತಿರದಿದ್ದು ಕಂಡಿದ್ದು ಅನಂತ್ ಮಾತ್ರ. ಹೌದು, ಇದು ಅನಂತ ನಾಗರಕಟ್ಟೆ ತನ್ನ ತಮ್ಮ ಶಂಕರ ನಾಗರಕಟ್ಟೆ ಬಗ್ಗೆ ಬರೆದ , 'ನನ್ನ ತಮ್ಮ ಶಂಕರ ' ಪುಸ್ತಕದ ಉದ್ದೇಶ. ತನ್ನ ತಮ್ಮನ ಬಗ್ಗೆ ಬರೆದ ಅನಂತನಾಗ್ ತಮ್ಮ ಹೊರೆಯನ್ನು ಕಡಿಮೆಗೊಳಿಸಿಕೊಂಡಿದ್ದಾರೆಂದರೆ ತಪ್ಪಾಗಲಾರದು. ಇಷ್ಟಕ್ಕೂ ಈ ಪುಸ್ತಕದಲ್ಲಿರುವದೇನು? ಕೆಲವನ್ನು ಹೀಗೆ ವಿಶ್ಲೇಷಿಸಬಹುದು.ಕೆಲವು ನನ್ನ ವಿವೇಚನೆಗೆ ಒಳಪಡದೇ ಇರಬಹುದು.
A) ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯ.
B) ೧೯೫೪ರ ಸುಮಾರಿನ ಹೊನ್ನಾವರ, ಮತ್ತು ಮುಂಬಯಿಯ ಸಾಮಾಜಿಕ ಬದುಕು
C) ೧೯೬೫ ರ ಸುಮಾರಿನ ನಾಟಕರಂಗ
D) ಕ್ರೀಯಾಶೀಲತೆ ಮತ್ತು ಉತ್ತಮ ಅಭಿರುಚಿ ಉಳ್ಳ ವ್ಯಕ್ತಿಯ ನಿರಂತರ ತುಡಿತ.
E) ೧೯೮೯ರ ಉ.ಕ ಲೋಕಸಭೆ ಚುನಾವಣೆಯಲ್ಲಿ ಅನಂತನಾಗ್ ಸ್ಪರ್ಧಿಸಿದಾಗ , ಶಂಕರನಾಗ್ ನ ಸಂಘಟನಾಶಕ್ತಿ,
F)ಸಾರ್ವಜನಿಕ ಬದುಕನ್ನು ನಿರ್ವಹಿಸುವ ರೀತಿ.
ಇವುಗಳನ್ನು ಒಂದೊಂದಾಗಿ ಸಂಕ್ಷಿಪ್ತವಾಗಿ ಓದುವ ಪ್ರಯತ್ನ ಮಾಡೋಣ
(ಮುಂದುವರಿಯುತ್ತದೆ)

0 comments:

Post a Comment

 
;