Thursday, January 3, 2013

'ಈ ಹೊತ್ತಿಗೆ, ಈ ಹೊತ್ತಿಗೆ.' ಭಾಗ-೧.

ಈ ಲೇಖನವನ್ನು ಓದಿ ಮುಗಿಸುವ ಹೊತ್ತಿಗೆ, ಒಂದು ಚೆಂದದ ಹೊತ್ತಿಗೆ ಓದುವ ಕುತೂಹಲ ನಿಮ್ಮಲ್ಲಿ ಬೆಳೆದಲ್ಲಿ ನಾನು ಧನ್ಯ. ಇದೊಂದು ಲೇಖನಗಳ ಸರಣಿಯಾಗಿ ಬರಬೇಕೆಂಬುದು ನನ್ನ ಹಂಬಲ. ಆವಾಗಲೇ ಈ ಲೇಖನಗಳ ಸಾರ್ಥಕ್ಯ.
ಈ ಉದ್ದೇಶದಿಂದಲೇ, ಈ ಲೇಖನಗಳ ಶೀರ್ಷಿಕೆಗೆ 'ಈ ಹೊತ್ತಿಗೆ, ಈ ಹೊತ್ತಿಗೆ.' ಎಂದು ನಾಮಕರಣ ಮಾಡಿದ್ದು. ಎಲ್ಲಾ ಸರಿ ಈ ಗೋಳು ಬೇಕಾ? ಎಂದು ನಿಮ್ಮ ಮೂಡ್ ಬದಲಾಯಿಸುವ ಮುಂಚೆ ನನಗೆ ಇವತ್ತಿನ ಪುಸ್ತಕದ ಬಗ್ಗೆ ಶುರು ಮಾಡುವೆ.
ಪುಸ್ತಕದ ಹೆಸರು:- ಚೇಳು (ಕಥಾಸಂಕಲನ)
ಲೇಖಕ: ವಸುಧೇಂದ್ರ.
ಪ್ರಕಾಶನ : ಛಂದ ಪುಸ್ತಕ, ಬೆಂಗಳೂರು.
ಬೆಲೆ : ೬೫ ರೂ.
ಚೇಳು:-
ಇದು ವಸುಧೇಂದ್ರರ ಐದು ಕಥಾ ಸಂಕಲನಗಳಲ್ಲಿ ಒಂದು. ಈ ಪುಸ್ತಕ ಏಳು ಕಥೆಗಳನ್ನೊಳಗೊಂಡಿದ್ದು, ಒಂದೊಂದು ಕಥೆಯೂ ನಿಮ್ಮನ್ನು ಕೆಣಕುತ್ತವೆ. ಪ್ರತಿಯೊಂದು ಕಥೆಯ ಕಥಾವಸ್ತು ವಿಭಿನ್ನ. ಹೀಗೆ ಪ್ರತಿಯೊಂದು ಕಥೆಯನ್ನು ವಿಭಿನ್ನವಾಗಿ , ಬಿಗಿಯಾಗಿ ಹೆಣೆಯುವಲ್ಲಿ ವಸುಧೇಂದ್ರ ಯಶಸ್ಸುಗಳಿಸಿದ್ದಾರೆ. ಕಥಾಹಂದರ ಹೇಗೆಯೇ ಇರಲಿ, ಆದರೆ ಅದರ ಒಳಮರ್ಮ ಮಾತ್ರ ಓದುಗನಂತೆಯೇ ವಿಭಿನ್ನ. ಕನ್ನಡಿಯ ಪ್ರತಿಬಿಂಬ ಹೇಗೆ ವಿಭಿನ್ನವೋ ಹಾಗೆ. ಈ ಪುಸ್ತಕದ ಮೊದಲನೇ ಕಥೆ, ಚೇಳು. ಚೇಳುಗಳ ಹಾವಳಿಯ ಅವತಾರಗಳನ್ನು ವಿವರಿಸುತ್ತಾ ಶುರುವಾಗುವ ಕಥೆ, ಊರಿಗೆ ಹೊಸದಾಗಿ ಬಂದ ಹೆಣ್ಣುಮಗಳು ವೆಂಕಮ್ಮ, ಅವಳ ಬಂಜೆತನದ ಪ್ರದೂಷಣೆಗಳು, ಎಲ್ಲವನ್ನೂ ಮೀರುವ ಅವಳ ಬಯಕೆ, ಹೀಗೆ ಸಾಗುತ್ತಿದ್ದಂತೆಯೇ, ಅವಳಿಗೆ ಚೇಳಿನ ವಿಷ ತೆಗೆಯುವ ಔಷಧ ಸಿಧ್ಧಿಸಿದ ಬಗೆ ಕಥೆಯನ್ನು ಓದಿಸಿಕೊಳ್ಳುವಲ್ಲಿ ಯಶಸ್ಚಿಯಾಗುತ್ತದೆ. ಜಾಗತೀಕರಣದ ಸೋಂಕು ನಮ್ಮ ಬದುಕನ್ನು ಬದಲಾಯಿಸುತ್ತದೆ ಎಂಬುದನ್ನು ಕಥೆಯ ಅಂತ್ಯ ವಿವರಿಸುತ್ತದೆ. ಹೀಗೆ ವೆಂಕಮ್ಮಳ ಬದುಕಿನ ಕಥೆಯನ್ನು ಹೇಳುವದರ ಜೊತೆಗೆ, ನಮ್ಮ ಸುತ್ತ ನಡೆಯುವ ಕೆಲವು ವಿದ್ಯಮಾನಗಳ ಬಗ್ಗೆ ದೀವಿಗೆ ನೀಡುವಲ್ಲಿ, ವಸುಧೇಂದ್ರ ಗೆದ್ದಿದ್ದಾರೆ.
ಕ್ಷಿತಿಜ ಹಿಡಿಯ ಹೊರಟವರು:-
ಈ ಕಥೆಯು ಸ್ವಲ್ಪ ವಿಭಿನ್ನವಾದದ್ದು. ಜಾಗತೀಕರಣ ನಮ್ಮ ಸಾಮಾಜಿಕ ಜೀವನದಲ್ಲಿ ಅಸಮತೋಲನ ಉಂಟುಮಾಡುವದಲ್ಲದೇ, ನಮ್ಮ ವೈಯಕ್ತಿಕ ಜೀವನವನ್ನು ಹದಗೆಡಿಸಬಲ್ಲದು ಎಂಬುದನ್ನು ಕಥೆ ವಿವರಿಸುತ್ತದೆ. ಸಾಫ್ಟ್ ವೇರ್ ಉದ್ಯೋಗಿಯೊಬ್ಬಳ
ಯಶೋಗಾಥೆಯೊಂದಿಗೆ ಶುರುವಾಗುವ ಕಥೆ, ಅವಳ ವೈವಾಹಿಕ ಜೀವನದ ಕಡೆ ಇಣುಕು ಹಾಕುತ್ತದೆ. ಒಂದು ರಾತ್ರಿ ಸರಿಯಾಗಿ ಆರು ಗಂಟೆಗಳ ಕಾಲ ನಿದ್ರಿಸಲು ಅವಳು ಪಡುವ ಕಷ್ಟ, ವ್ಯಂಗವಾದರೂ ಸತ್ಯವೆನಿಸುತ್ತದೆ. ಕಥೆಯ ಆದಿಯನ್ನು ಕುತೂಹಲವಾಗಿಸುವ ಕತೆಗಾರ ಅಂತ್ಯವನ್ನು ಮಾತ್ರ ಓದುಗನಿಗೆ ಬಿಟ್ಟಿದ್ದಾನೆ. ಮಹಿಳಾ ಐ.ಟಿ ಉದ್ಯೋಗಿಗಳ ಮನಹೊಕ್ಕು ಕತೆಯಾಗಿ ಹೊರಬರುವಲ್ಲಿ ಕಥಾಹಂದರ ಕೊನೆಗೊಳ್ಳುತ್ತದೆ.
ಅನಘ:-
ವಸುಧೇಂದ್ರರ ಕಥಾವಸ್ತು ಊಹಿಸುವದು ಅವರು ಮಾತ್ರ. ಕಥೆಯ ಮೊದಲ ಕೆಲವು ಪ್ಯಾರಾಗಳಿಂದ , ಕಥೆಯ ಜಾಡು ಊಹಿಸುವದು ಕಷ್ಟ ಸಾಧ್ಯ. ಅಂತಹ ಕಥೆಗಳ ಸಾಲಿನಲ್ಲಿ ಈ ಕಥೆ ನಿಲ್ಲುತ್ತದೆ. ಹೆಣ್ಣು ಭ್ರೂಣಹತ್ಯೆಯನ್ನು ನಿಯಂತ್ರಿಸುವಲ್ಲಿ ಎಲ್ಲರ ಗಮನ
ಇರಬೇಕಾದರೆ, ಹೆಣ್ಣು ಮತ್ತು ಗಂಡು ಜಾತಿಗೆ ಸೇರದ ನಪುಂಸಕತೆಯ ಬಗ್ಗೆ, ಈ ಕಥಾಹಂದರವನ್ನು ಹೆಣೆಯಲಾಗಿದೆ. ಸೂಳೆಯರನ್ನು ಇಟ್ಟುಕೊಳ್ಳುವದೇ ಗಂಡಸ್ತನವೆಂದು ನಂಬಿರುವ ಊರ ಪ್ರಮುಖನೊಬ್ಬನಿಗೆ, ನಪುಂಸಕನಾದ ಮಗನೊಬ್ಬನಿರುತ್ತಾನೆ. ಸುಮಾರು ಹದಿನಾರು ವರ್ಷದ ಅವನಿಗೆ ಇರುವ ಲೈಂಗಿಕ ಕುತೂಹಲ, ಅದನ್ನು ತಣಿಸಿಕೊಳ್ಳುವ ಅವನ ಪ್ರಯತ್ನ ಮತ್ತು ಅದರ ಪರಿಣಾಮವನ್ನು ವಿವರಿಸುವಲ್ಲಿ ಕಥೆ ಅಂತ್ಯಗೊಳ್ಳುತ್ತದೆ. ಆ ಬಾಲಕನ ಮನೋಸ್ಥಿತಿಯನ್ನು ವಿವರಿಸುವಲ್ಲಿ ಕಥೆ ಎಡವಿದರೂ, ಅವನ ತಂದೆಯ ಭಾವನೆಗಳನ್ನು ವಿಷದಿಸುತ್ತದೆ.
ಹಲೋ ಭಾರತಿ: -
ಜಾಗತೀಕರಣದ ಇನ್ನೊಂದು ಮಗ್ಗುಲನ್ನು ಈ ಕಥೆ ಬಣ್ಣಿಸುತ್ತದೆ. ಅನಿವಾಸಿ ಭಾರತಿಯರ ಮನೋಸ್ಥಿತಿ ಮತ್ತು ಅವರ ವ್ಯವಹಾರಿಕ ಕುಶಲತೆ ಬಣ್ಣಿಸುವದರೊಂದಿಗೆ, ಶುರುವಾಗುವ ಕಥೆ, ಕಥಾನಾಯಕನಲ್ಲಿ ದ್ವಂದ್ವವನ್ನು ಸೃಷ್ಟಿಸುತ್ತದೆ. ಅವನು ವಿದೇಶಕ್ಕೆ ಬಂದಿರುವದೇ ಹೊಸ ಪ್ರಾಜೆಕ್ಟ್ ಗೋಸ್ಕರ. ಪಾಶ್ಚಾತ್ಯರ ಮನಸ್ಥಿತಿ, ಅವರ ಇರುವಿಕೆ, ಲೈಂಗಿಕತೆಯ ಬಗ್ಗೆ ಇರುವ ಅವರ ಉದಾರೀಕರಣ!ದ ಬಗ್ಗೆ ವಿವರಿಸುವಲ್ಲಿ ಕಥೆ ಸಾಗುತ್ತದೆ. ಲೈಂಗಿಕತೆಯ ಬಗ್ಗೆ ಜನರಲ್ಲಿರುವ ಕುತೂಹಲವನ್ನು ಲಾಭಕರವಾಗಿ ಬಳಸಿಕೊಳ್ಳಲು ಬಯಸುವ ಯುರೋಪಿನ ಕಂಪನಿ , ತನ್ನ ಪ್ರಾಜೆಕ್ಟ್ ನ್ನು ಭಾರತೀಯ ಕಂಪನಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆದರೆ, ಅದು ತಮ್ಮನ್ನು ನಿರುದ್ಯೋಗಿಗಳನ್ನಾಗಿಸುತ್ತದೆ ಎಂಬ ಭಯ ಅಲ್ಲಿನ ಉದ್ಯೋಗಿಗಳದ್ದು. ಇವೆಲ್ಲವನ್ನೂ ಮೀರಿದ್ದು ವ್ಯವಹಾರಿಕತನ. ಇಲ್ಲಿಗೆ ಕಥೆ ಮುಗಿಯುತ್ತದೆ ಮತ್ತು ನಮ್ಮ ನೈತಿಕತೆಯನ್ನು ಪ್ರಶ್ನಿಸುತ್ತದೆ.
ಹೊಟ್ಟೆಯೊಳಗಿನ ಗುಟ್ಟು:-
ಈ ತರಹದ ಕಥೆಗಳನ್ನು ನಾವು ತುಂಬಾ ಓದಿದ್ದುಂಟು, ನೋಡಿದ್ದುಂಟು. ಆದರೆ ಕಥೆಯನ್ನು ಹೆಣೆಯುವಲ್ಲಿ ಕಥೆಗಾರ ವಿಭಿನ್ನ ದಾರಿಯನ್ನು ಅನುಸರಿಸುತ್ತಾನೆ. ಒಬ್ಬ ಹೆಣ್ಣುಮಗಳ ಅಂತ್ಯಕ್ರಿಯೆ ಮತ್ತು ಪಿಂಡಪ್ರದಾನದೊಂದಿಗೆ ಕಥೆ ಬಿಚ್ಚಿಕೊಳ್ಳುತ್ತದೆ. ಪಿಂಡಪ್ರದಾನದ ಪ್ರಾಮುಖ್ಯತೆಯನ್ನು ವಿವರಿಸುವದರೆಲ್ಲಿಯೇ ಅವಳ ಮಕ್ಕಳ ಮತ್ತು ಸಂಭಂಧಿಕರ ಮನೋಸ್ಥಿತಿಯನ್ನು ಹೇಳಲಾಗಿದೆ. ಕೊನೆಗೆ ಅವರ ಮನೆಯ ಕೆಲಸದಾಳು ನೆರವಾಗುವ ಹೊತ್ತಿಗೆ ಕಾಗೆಪಿಂಡ ಪ್ರಹಸನ ಕೊನೆಗೊಳ್ಳುತ್ತದೆ. ನಂತರ ಕೆಲಸದಾಳು ಮತ್ತು ಮೃತವ್ಯಕ್ತಿಯ ಸಂಭಂಧದ ಬಗ್ಗೆ ವಿವರಿಸುವ ಹೊತ್ತಿಗೆ ,ಅಂತಃಕರಣ, ಪ್ರೀತಿ ವಿಶ್ವಾಸಗಳು ಬರೀ ರಕ್ತಸಂಬಂಧದಿಂದಲೇ ಬರುತ್ತವೆ ಎಂಬುದನ್ನು ಸುಳುಮಾಡುವಲ್ಲಿ ಕಥೆ ಅಂತ್ಯಗೊಳ್ಳುತ್ತದೆ.
ಗುಳ್ಳೆ:-
ಕೆಲವೊಂದು ಸಾರಿ ಹೀಗಾಗುತ್ತೆ. ನಾವು ನಮಗೆ ತಿಳಿದಂತೆ ಮಾಡುತ್ತೇವೆ. ಅದು ಸರಿಯೇ ಇರಬಹುದು. ಆದರೆ ಅದು ಇನ್ನೊಬ್ಬರಿಗೆ ತೊಂದರೆ ಕೊಟ್ಟಿರಲೂಬಹುದು. ತೊಂದರೆ ಕೊಟ್ಟಿದ್ದು ನಿಜವಾದಲ್ಲಿ, ಅದು ನಮ್ಮನ್ನು ಹಿಂಸಿಸುತ್ತದೆ. ನಮ್ಮ ಅನಿಸಿಕೆ, ಅಭಿಪ್ರಾಯ ಸರಿ ಇದ್ದಾಗಲೂ ಹೀಗಾಗುವದುಂಟು. ಇದನ್ನೇ ಕಥಾವಸ್ತುವನ್ನಾಗಿ ಬಳಸಿಕೊಳ್ಳಲಾಗಿದೆ. ಕಥಾನಾಯಕ ಐ.ಟಿ ಕಂಪನಿಯೊಂದರ ಜವಾಬ್ದಾರಿ ಸ್ಥಾನದಲ್ಲಿರುವಾತ. ಅವನ ಕೆಳಗೆ ಕೆಲಸ ಮಾಡುವಾತ, ನಕಲಿ ಪ್ರಮಾಣಪತ್ರ ಮತ್ತು ದಾಖಲೆಗಳಿಂದ ನೌಕರಿ ಗಳಿಸಿಕೊಂಡಿರುವಾತ. ಇದೆಲ್ಲ ಕಥಾನಾಯಕನಿಗೆ ತಿಳಿದು, ಅವನನ್ನು ಕಂಪನಿಯಿಂದ ಹೊರದೂಡುತ್ತಾನೆ. ಅವನ ಗೋಳು ಮತ್ತು ಅಂಗಲಾಚುವಿಕೆ ಕಥಾನಾಯಕನಲ್ಲಿ ಕರುಣೆಮೂಡಿಸುವದಿಲ್ಲ. ಕೆಲವು ದಿನಗಳ ನಂತರ ಅಕಸ್ಮಾತ್ತಾಗಿ ಸಿಕ್ಕ ಅವನನ್ನು ಕಥಾನಾಯಕ ಎದುರಿಸುವಲ್ಲಿ ಕಥೆ ಅಂತ್ಯಗೊಳ್ಳುತ್ತದೆ.
ಶ್ರೀದೇವಿ ಮಹಾತ್ಮೆ: -
ಸಾಫ್ಟ್ ವೇರ್ ಉದ್ಯೋಗಿಯೊಬ್ಬಾತ ತನ್ನ ಮನೆ ಕೆಲಸದ ಹುಡುಗಿಯ ಮನಸ್ಥಿತಿ ಮತ್ತು ಅವಳಿಗೆ ಸಹಾಯ ಮಾಡಲಿಕ್ಕಾಗದ ಅವನ ಅಸಹಾಯಕತೆ, ನಮ್ಮ ಸುತ್ತಮುತ್ತಲಿನ ಬಗ್ಗೆ ನಮ್ಮ ಉದಾಸೀನತೆಯ ಬಗ್ಗೆ ಕೆಣಕುವ ಕಥೆ ಇದಾಗಿದ್ದು, ಅಂತರ್ ಜಾತೀಯ ವಿವಾಹ ಅದರಿಂದಾಗುವ ಜಾತಿ ಪರಿವರ್ತನೆಯ ಬಗೆ, ಮತ್ತು ಕೆಳವರ್ಗದ ಬದುಕಿನೆಡೆಗಿನ ಮನಸ್ಥಿತಿಯನ್ನು ಕಥೆ ಬಿಚ್ಚಿಡುತ್ತದೆ. ಕಥಾನಾಯಕ ತನ್ನ ಅಪಾರ್ಟ್‌ಮೆಂಟಿನಿಂದ ಎರಡು ಕೊಡ ನೀರು ಕೊಡಲಾಗದ ಪರಿಸ್ಥಿತಿ ನಮ್ಮನ್ನು ಪ್ರತಿಬಿಂಬಿಸುತ್ತದೆ. ಅಂತೆಯೇ ಅವನ ಕೆಲಸದಾಳು ಶ್ರೀದೇವಿಯ ಮುಗ್ಧತೆ ಮತ್ತು ಬಾಲಿಶತನ ನಮ್ಮನ್ನು ಆವರಿಸುತ್ತದೆ. ಅವಳು ಅಂತರ್ ಜಾತಿಯ ಹುಡುಗನನ್ನು ಮದುವೆಯಾಗುವದರೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ.
 

0 comments:

Post a Comment

 
;