Sunday, May 26, 2013

ನೀವು ಕರೆ ಮಾಡಿದ ಗ್ರಾಹಕರು ಸ್ವಿಚ್ ಆಫ್ ಮಾಡಿದ್ದಾರೆ, ದಯವಿಟ್ಠು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ - The Girl in Pink T-Shirt

ಅವಳು ಸುಂದರಿ ಎಂದು ಯಾರಾದರೂ ಅವಳನ್ನು ನೋಡಿದ ತಕ್ಷಣ ಹೇಳಬಹುದಿತ್ತು. ಅವಳ ಸುಂದರತೆ ಅವಳ ಕಣ್ಣುಗಳ ಚಂಚಲತೆಯಿಂದ ಇಮ್ಮಡಿಯಾಗಿತ್ತು. ದಾರಿಹೋಕರ ಗಮನ ಸೆಳೆಯುವಲ್ಲಿ ಅವು ಯಶಸ್ವಿಯಾಗಿದ್ದವು. ಅವಳು ಪದೇ ಪದೇ ತನ್ನ ಕೈಗಡಿಯಾರವನ್ನು ನೋಡಿಕೊಳ್ಳುತ್ತಿದ್ದರೂ, ಗಡಿಯಾರದ ಮುಳ್ಳುಗಳು ಅವಸರಿಸಿದಂತೇನೂ ಸಾಗುತ್ತಿಲ್ಲ. ಅವಳು ಅಲ್ಲಿಗೆ ಬಂದು ನಿಂತ ೧೦ ರಿಂದ ೧೫ ನಿಮಿಷವಾಗಿತ್ತಾದರೂ ಅವಳ ಅಸಹನೆಗೆ ಅವಳು ಕುದಿಯುತ್ತಿದ್ದಳು. ಗಂಟೆ ೭ ಆಗ್ತಾ ಬಂತು. ಇವಳ್ಯಾಕೆ ಬರ್ತಾ ಇಲ್ಲ. ಮೊಬೈಲ್ ಬೇರೆ ಸ್ವಿಚ್ ಆಫ್ ಮಾಡಿದ್ದಾಳೆ. ಇಷ್ಟೊತ್ತಿಗೆ ಅವಳು ಬರಬೇಕಾಗಿತ್ತು. ಇನ್ನೂ ಬಂದಿಲ್ಲ ಎಂದುಕೊಂಡವಳಿಗೆ ಪಕ್ಕದ ದರ್ಶಿನಿಯ ಇಡ್ಲಿ ಸಾಂಬಾರ್ ವಾಸನೆ ಹೊಟ್ಟೆಯಲ್ಲಿ ಇಲಿಗಳನ್ನು ಓಡಾಡಿಸುತ್ತಿತ್ತು. ತಿಂಡಿ ತಿಂದುಕೊಂಡು ಬರೋಣವೆಂದುಕೊಂಡವಳೇ ದರ್ಶಿನಿಗೆ ಕಾಲಿಟ್ಟಳು. ಕೈ ತೊಳೆದುಕೊಳ್ಳೋಣವೆಂದು ವಾಷ್ ಬೇಸಿನ್ನಿನ ನಳಕ್ಕೆ ಕೈ ಒಡ್ಡಿದಾಗ ,ಕನ್ನಡಿಯಲ್ಲಿ ಅವಳ ಮಾಸಿದ ಕೂದಲು, ಬೆವರಿ ಒಣಗಿದ ಮುಖ , ಕೊಳಕಾದ ಬಟ್ಟೆ ಕಂಡು ಅವಳ ಬಗ್ಗೆ ಅವಳಿಗೇ ಅಸಹ್ಯವೆನಿಸಿತು. ಕ್ಯಾಷ್ ಕೌಂಟರಿಗೆ ಕೂತಿದ್ದ ಅಯ್ಯಂಗಾರಿ ಮುದುಕನಿಗೆ ಇವಳ ಬಗ್ಗೆ ಮರುಕವೆಂತಿನಿಸಿತೋ ಏನೋ, ಅಡಿಗೆ ವಿಭಾಗಕ್ಕೆ ಹತ್ತಿಕೊಂಡಿದ್ದಂತಿದ್ದ ಬಚ್ಚಲು ಕೋಣೆಯ ಕಡೆಗೆ ಬೆರಳು ತೋರಿಸಿದ. ಅಕ್ಕಿ ತೊಳೆದ ನೀರು, ಪಾತ್ರೆ ತೊಳೆದ ನೀರು ಮತ್ತು ಮುಂತಾದವುಗಳಿಂದ ಬಚ್ಚಲು ಕೋಣೆ ವಾಕರಿಕೆ ಬರುವಂತಿತ್ತು. ಒಳಗೆ ಹೋದವಳೇ ಬ್ಯಾಗಿನಿಂದ ತನ್ನ ಬಟ್ಟೆಗಳನ್ನು ಹೊರತೆಗೆದವಳಿಗೆ ಅರಿವಾಗಿತ್ತು, ತಾನು ತಂದಿದ್ದು ಒಂದು ಜೀನ್ಸ್ ಮತ್ತು ಗುಲಾಬಿ ಬಣ್ಣದ ಟೀ ಶರ್ಟ ಮಾತ್ರ ಎಂದು. ಅದು ತನ್ನ ಬರ್ಥ್ ಡೇಗೆ ಅಂತ ಅಣ್ಣ ಕೊಡಿಸಿದ್ದು. ವಿಧಿಯಿಲ್ಲದೆ ಅದನ್ನೇ ಧರಿಸಿ ಹೊರಬಂದವಳಿಗೆ ಸಾಕುಸಾಕಾಗಿತ್ತು. ಕನ್ನಡಿ ಮುಂದೆ ನಿಂತವಳೇ ತನ್ನ ಮುಂಗುರುಳುಸ್ ಸರಿಪಡಿಸಿಕೊಂಡವಳೇ ಮುಖಕ್ಕೆ ತಣ್ಣನೆಯ ನೀರನ್ನು ಎರಚಿಕೊಂಡಳು. ಸ್ವಲ್ಪ ಹಾಯೆನಿಸಿತ್ತು. ಅಯ್ಯಂಗಾರಿ ಮುದುಕ ಕೊಟ್ಟ ಟಿಶ್ಶೂವಿನಿಂದ ಮುಖ ಒರೆಸಿಕೊಂಡು ಇಡ್ಲಿ, ಕಾಫಿಗೆ ಆರ್ಡರ್ ಮಾಡಿದಳು. ತಿಂಡಿ ಬರೋದರೊಳಗೆ ಇನ್ನೊಂದು ಸಾರಿ ನಿಮ್ಮಿಗೆ ಫೋನ್ ಮಾಡೋಣ ಎಂದು ತನ್ನ ಮೊಬೈಲ್ ಸ್ಕ್ರೀನ್ ಮೇಲೆ ಬೆರಳಾಡಿಸಿದವಳೇ ಕಿವಿಗೊತ್ತಿಕೊಂಡಳು. ಮತ್ತದೇ ಸುಂದರ ಧ್ವನಿ ಕರ್ಕಶವಾಗಿ ಇವಳ ಕಿವಿಗಪ್ಪಳಿಸಿತು. "ನೀವು ಕರೆ ಮಾಡಿದ ಗ್ರಾಹಕರು ಸ್ವಿಚ್ ಆಫ್ ಮಾಡಿದ್ದಾರೆ, ದಯವಿಟ್ಠು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ"
ಇಡ್ಲಿ ಸಾಂಬಾರ್ ಅವಳ ಮುಖಕ್ಕೆ ಗೆಲುವು ಕೊಟ್ಟಂತಾಗಿತ್ತು. ಇಲ್ಲೇ ಕೂತ್ಕೊಂಡು ಕಾಯೋಣ ಅಂದುಕೊಂಡವಳಿಗೆ ಹೋಟೆಲ್ ಗಿರಾಕಿಗಳು ಒಮ್ಮೆಲೆ ಜಾಸ್ತಿಯಾದಂತೆನಿಸಿತು. ಇವಳು ಎದ್ದರೆ ಸಾಕು , ತಾವೂ ಕೂತ್ಕೊಬಹುದು ಅನ್ನೋ ಗಿರಾಕಿಗಳು ಇದ್ದರೂ, ಇವಳನ್ನೇ ನೋಡುತ್ತಾ ಕಾಫಿ ಹೀರುವದರಲ್ಲಿ ಮಗ್ನರಾದ ರಸಿಕ ಶಿಖಾಮಣಿಗಳೂ ಅಲ್ಲಿದ್ದರು. ಅಯ್ಯಂಗಾರಿ ಮುದುಕನಿಗೆ ಇವಳು ಬಿಸಿತುಪ್ಪದಂತಾದಳು. ಅವನ ಹೊಯ್ದಾಟಗಳು ಅರ್ಥವಾದಂತೆನಿಸಿ ಬಿಲ್ ಹಣವನ್ನು ಟೇಬಲ್ ಮೇಲೆ ಇಟ್ಟು ಹೊರಬಂದಳು. ಅಯ್ಯಂಗಾರಿ ಮುದುಕನಿಗೆ ನಿರುಮ್ಮಳ ಭಾವ.
ಮತ್ತೆ ಗಡಿಯಾರ ನೋಡಿಕೊಂಡವಳಿಗೆ ಅನಿಸಿದ್ದು ತಾನು ನಿಮ್ಮಿಗಾಗಿ ಕಾಯುತ್ತಿರುವದು ಕೇವಲ ನಲವತ್ತೈದು ನಿಮಿಷಗಳಿಂದ ಮಾತ್ರ. ತಾನು ಮೊದಲು ನಿಂತಿದ್ದ ಜಾಗಕ್ಕೆ ಬಂದು ನಿಂತಳು. ರಸಿಕ ಶಿಖಾಮಣಿಗಳು ಗುಂಪು ಹೋಟೆಲ್ ನಿಂದ ಮೂಲೆ ಅಂಗಡಿಯ ಸಿಗರೇಟು ಅಂಗಡಿಯ ಹತ್ತಿರವೂ, ಜಾಗಿಂಗ್ ಮುಗಿಸಿದವರ ದಾಹ ತಣಿಸಲೆಂದೇ ಇರುವ ಎಳನೀರು ಅಂಗಡಿಯ ಹತ್ತಿರವೂ ಪ್ರತಿಷ್ಠಾಪಿತವಾಗಿತ್ತು. ಎಲ್ಲರ ಕಣ್ಣಿಗೆ ಆಹಾರವಾಗುವಂತೆ ಮಾಡಿದ ನಿಮ್ಮಿಯ ಮೇಲೆ ಕೋಪ ಹೆಚ್ಚಾಗಿತ್ತು. ಆಗಲೇ ನೆನಪಾಗಿದ್ದು "ಒಂದಿನ ನಾನು ಯಾರೂಂತ ತೋರಿಸ್ತೀನಿ ಕಣೆ ನಿಂಗೆ. " ಎಂಬ ಶಬ್ದಗಳು. ಹೌದಲ್ಲ, ನಿಮ್ಮಿ ಆವತ್ತು ಸಿಟ್ಟಿನಿಂದ ಹಾಗೇ ಹೇಳಿದ್ದಳು. ಆದಿನ ಅವಳಿಗೆ ಚೆನ್ನಾಗಿ ನೆನೆಪಿದೆ ಅವತ್ತು ತಾನು ಅವಳಿಗೆ ಮಾಡಿದ ಚಿಕ್ಕ ಜೋಕಿಗೆ ಅವಳು ಸಿಟ್ಟಾಗಿದ್ದಳು. ಅದು ಆ ಸೆಮಿಸ್ಟಿರಿನ ಕೊನೆಯ ದಿನ. ಇಬ್ಬರೂ ತಮ್ಮ ತಮ್ಮ ಊರಿಗೆ ಹೊರಟಿದ್ದರು. ಇವತ್ತು ಇಬ್ಬರೂ ಮರಳಿ ಬರುವ ಪ್ಲಾನ್ ಕೂಡ ಇತ್ತು. ಇನ್ನೂ ಯಾಕೆ ಬಂದಿಲ್ಲ.ಫೋನ್ ಯಾಕೆ ಸ್ವಿಚ್ ಆಫ್ ಮಾಡಿದ್ದಾಳೋ ಗೊತ್ತಿಲ್ಲ. ಅವತ್ತಿನ ಸಿಟ್ಟನ್ನು ಇವತ್ತು ತೀರಿಸಿಕೊಳ್ಳುತ್ತಿದ್ದಾಳೇನೋ ಎಂದೆನಿಸಿತು. ರಸಿಕ ಶಿಖಾಮಣಿಗಳು ಒಬ್ಬೊಬ್ಬರಾಗಿ ಇವಳ ಹಿಂದು ಮುಂದು ತಿರುಗಾಡಲಾರಂಭಿಸಿದರು. ನಿಮ್ಮಿಯ ಮೇಲೆಯ ಸಿಟ್ಟು ಕೂಡ ಕರಗಲಾರಂಭಿಸಿತು. ದುಃಖ ಉಮ್ಮಳಿಸಿ ಬಂದಂತಾಯಿತು. ಕಣ್ಣು ತುಂಬಿಕೊಂಡವು. ಅಷ್ಟರಲ್ಲಿ ಯಾರೋ ಬಂದು ತನ್ನ ಕೈ ಹಿಡಿದು ಕೊಂಡಂತಾಯಿತು. ತಿರುಗಿ ನೋಡಿದರೆ, ನಿಮ್ಮಿ ನಗುತ್ತಾ ನಿಂತಿದ್ದಳು. ಇವಳಿಗೆ ದುಃಖ ತಡೆಯಲಾಗಲಿಲ್ಲ , ನಿಮ್ಮಿಯನ್ನು ತಬ್ಬಿಕೊಂಡು ಅಳಲಾರಂಭಿಸಿದಳು. ನಿಮ್ಮಿಗೆ ಏನೂ ಅರ್ಥವಾಗಲಿಲ. ಅವಳನ್ನು ದರದರನೇ ಎಳೆದುಕೊಂಡು ರೂಮಿನತ್ತ ಹೊರಟಳು. ದಾರಿಯಲ್ಲೆಲ್ಲೂ ಅವಳ ದುಃಖ ಕಡಿಮೆಯಾಗಲೇ ಇಲ್ಲ. ರೂಮಿಗೆ ಹೋದೊಡನೆ ನಿಮ್ಮಿಯ ಕೈ ಹಿಡಿದುಕೊಂಡು 'ಸ್ಸಾರಿ' ಎಂದು ಮತ್ತೆ ಅಳಲಾರಂಭಿಸಿದಳು. ನಿಮ್ಮಿ ಪರಿಸ್ಥಿತಿಯನ್ನು ಅರಿಯಲಾರದೇ "ನೀನ್ಯಾಕೆ ಅಲ್ಲಿ ನಿಂತಿದ್ದೆ?, ಮೊದ್ಲೆ ಗೊತ್ತಿಲ್ವ ಒಬ್ಬ ಹುಡುಗಿ ಒಂಟಿಯಾಗಿ ರಸ್ತೆ ಪಕ್ಕ ನಿಂತುಕೊಂಡ್ರೆ ಜನ ಹೇಗೆ ನೋಡ್ತಾರೆ ಅಂತ. ರೂಮಲ್ಲಿ ಬಂದು ಕೂರೋಕೆ ಆಗ್ತಿರಲಿಲ್ವ?" ಎಂದು ಅವಳನ್ನು ಸಂತೈಸಲೆತ್ನಿಸಿದಳು. ಅಷ್ಟೊತ್ತಿಗೆ ಅವಳ ಮೊಬೈಲ್ ರಿಂಗಿಣಿಸಲಾರಂಭಿಸಿತು. ಇವಳ ಪರಿಸ್ಥಿತಿಯಲ್ಲಿ ಅವಳು ಮಾತಾಡಲಾರಳೆಂದು ನಿಮ್ಮಿಯೇ ಉತ್ತರಿಸಿದಳು. ಅತ್ತಲಿಂದ ಬಂದ ಧ್ವನಿ ಅವಳ ಅಮ್ಮನದಾಗಿತ್ತು ." ಹಲೋ, ಯಾರು ನಿಮ್ಮಿನಾ?, ಅವಳು ಸೇಫಾಗಿ ಬಂದ್ಲಾ? ರೂಮ್ ಕೀ ಇಲ್ಲೇ ಬಿಟ್ಟು ಹೋಗಿದ್ದಾಳೆ. ಅವಳಿದ್ದಾಳಾ ಕೊಡು " . "ಅವಳು ಬಾತ್ ರೂಮಿಗೆ ಹೋಗಿದ್ದಾಳೆ ಆಂಟಿ, ಬಂದ ತಕ್ಷಣ ಹೇಳ್ತೇನೆ " ಎಂದು ಉತ್ತರಿಸುವದರೊಳಗೆ ಅವಳ ಪರಿಸ್ಥಿಯ ಅರಿವಾಗಿತ್ತು. ನಿಮ್ಮಿಯ ಬ್ಯಾಟರಿ ಖಾಲಿಯಾದ ಮೊಬೈಲ್ ಅಣಕಿಸುತ್ತಿತ್ತು. 

2 comments:

Praveen Kumar A.G said...

good one

Anonymous said...

99.89.216.130/?cat=38

Post a Comment

 
;