Saturday, April 3, 2010

ತುಮುಲ

ನನ್ನ ಮನಸಿನ ಕುದಿಯ ಕೇಳುವವರಾರು
ತುಂಬಿಹುದು ಜಗದಲ್ಲಿ ಆಧುನಿಕತೆಯ  ಕಾರು-ಬಾರು
ಒಲೆ ಮೇಲೆ ಇಟ್ಟಿರುವೆ ದುಬಾರಿ ಬೇಳೆಯ ಸಾರು
ಉಕ್ಕುವದರೊಳಗೆ ತೋರಿಸಲೆತ್ನಿಸುವೆ ನನ್ನ ಹೃದಯದ ಚೂರು.

ಅಂಗಿಯು ತುಂಬಿಹುದು ಹೊಗೆಯ ಕಮರು ಘಾಟು(ಗಂಡ)
ಕೇಳಿದರೆ ಕಣ್ಣಲ್ಲೇ ಚಾಟಿಯ ಏಟು.
ತಲೆಯ ಒಳಗೆಲ್ಲ ಬರೀ ಶೇರುಗಳ ರೇಟು
ರೂಮಿನಲಿ ಬಂದೊಡನೆ ಆರಿಸುತ ಲೈಟು.

ಮದಿರೆ ಮಾನಿನಿಯರ ಹಿಂದೆ ಓಡಿ ಓಡಿ(ಮಗ)
ವೇಗ ಸಾಕಾಗದೆಂದು ಕೊಂಡಿಹನು ಗಾಡಿ
ಹಿಂದೆ ಬರೆಸಿಹನು "ಸಾಧ್ಯವಾದರೆ ನನ್ನ ಹಿಡಿದು ನೋಡಿ"
ಮುಗುಳ್ನಕ್ಕು ಯಮನೆಂದ "ಹುಚ್ಚು ಖೋಡಿ".

ಪ್ರತಿಯೊಂದು ಮೆಸೇಜಿಗೂ ಕಣ್ಣಲ್ಲಿ ದೀವಳಿಗೆ(ಮಗಳು)
ರಾತ್ರಿಯಲಿ ಹೊರಟಿಹುದು ಪಿಸುಮಾತ ಮೆರವಣಿಗೆ
ಮುಖವು ಆಗಿಹುದು ಸುಣ್ಣ ಬಣ್ಣದ ಮಳಿಗೆ
ಬೆಂಬಲಕ್ಕೆ ನಿಂತಿಹುದು ಐಪಿಲ್ಲು ಗುಳಿಗೆ.

ಮುಪ್ಪಲ್ಲ, ಯೌವನವಲ್ಲ, ನಡುವಿನ ಭೀತಿ
ಮತಿಯಲ್ಲಿ ಎದ್ದಿಹುದು ಆಲೋಚನೆಗಳ ಕ್ರಾಂತಿ
ವೈದ್ಯರೆನ್ನುವರು ಇದಕೆ ಮನಸಿನ ಭ್ರಾಂತಿ
ಗಗನ ಕುಸುಮವು ಇಂದು ನೆಮ್ಮದಿ, ಶಾಂತಿ

ಸ್ಫೂರ್ತಿ: ವಿಶ್ವೇಶ್ವರ ಭಟ್ಟರವರ "ನೂರೆಂಟು ಮಾತು" ಅಂಕಣ (ವಿಜಯ ಕರ್ನಾಟಕ ೦೧-೦೪-೨೦೧೦)  

1 comments:

preeti said...

good 1... :)

Post a Comment

 
;