Tuesday, May 31, 2011

ಸೀರೆ

"ಛೆ ! ಈ  ದೀಪಾವಳಿಯೂ ಹೀಗೆ ಕಾಡಬೇಕಾ? ಇನ್ನೂ ನಾಲ್ಕು ದಿನ ತಡವಾಗಿ ಬಂದಿದ್ದರೆ ಏನಾಗ್ತಿತ್ತು? ಅಕ್ಟೋಬರ್ 27    ರಂದು ದೀಪಾವಳಿ.ಇವತ್ತಿಗೆ ಆರು ದಿನ ಇದೆ. ಸಂಬಳ ಬರೋದಕ್ಕೆ ಹತ್ತು ದಿನ ಬಾಕಿ. ಕೈಯಲ್ಲಿರೋದು 3500 ರೂ. ದಿನಕ್ಕೆ ನೂರು ರೂಪಾಯಿಯಂತೆ ಖರ್ಚಿಗಿಟ್ಟುಕೊಂಡರೂ 2500 ರೂ ಗಳವರೆಗೆ ಸೀರೆ ತಗೋಬಹುದು. ಆದರೆ ಆ ನಿರ್ಮಲ ದಸರೆಗೆ ಉಟ್ಟಂತಹ ಸೀರೆ ತಗೋಬಹುದಾ. ಇಷ್ಟಕ್ಕೂ ಅವಳ ಸೀರೆ ಬೆಲೆ ನಾನು ಕೇಳಲೇ ಇಲ್ಲ. ಇರಲಿ , ಧೈರ್ಯ ಮಾಡಿ ತಗೊಂಡೆ ಬಿಡೋಣ" ಅಂದುಕೊಂಡೆ. ನನಗೆ ನಿರ್ಮಲಳ ಸೀರೆಗಿಂತ ಅವಳ ಮೊನಚು ನೋಟ ನನ್ನನ್ನು ಕುಕ್ಕಿತ್ತು. ಕೈಯಲ್ಲಿರೋ ಗಡಿಯಾರ ಸಮಯ 5 :40   ನ್ನು ತೋರಿಸುತ್ತಿತ್ತು, ನಮ್ಮ ಬಾಸ್ ನ  ಹುಬ್ಬುಗಳ ಥರ . ನಾನು ಹೊಸ ಹುಮ್ಮಸ್ಸಿನೊಂದಿಗೆ ಚಿಕ್ಕಪೇಟೆ ಒಳ ಹೂಕ್ಕಿದ್ದೆ. ಎಲ್ಲ ಅಂಗಡಿಗಳೂ ಗೌಜು ಗದ್ದಲಗಳಿಂದ ತುಂಬಿದ್ದವು.ಎಲ್ಲೆಲ್ಲೂ ಖರೀದಿಯ ಸಂಭ್ರಮ. ನನಗೆ ಗೊತ್ತಿರುವಂತೆ , ಇದೇ ಮೊದಲ ಸಲ ನಾನು ಒಬ್ಬಳೇ ಸೀರೆ ತರಲು ಹೊರಟಿದ್ದು. ಕೊನೆಗೂ ನಿರ್ಮಲಳ ಸೀರೆಯಂತಹ ತರಹದ ಸೀರೆಯನ್ನುಟ್ಟ ಬೊಂಬೆಯೊಂದು  ನನ್ನ ಕಣ್ಣು ಕುಕ್ಕುವಲ್ಲಿ  ಯಶಸ್ವಿಯಾಗಿತ್ತು .ಚಕ್ಕನೆ ಅಂಗಡಿಯ ಒಳ ಹೊಕ್ಕೆ. ನಿರ್ಮಲದು ತಿಳು ನೀಲಿ ಸೀರೆ. ನಾನೂಅದೇ ಬಣ್ಣದ್ದು ತಗೊಂಡ್ರೆ ಚೆನ್ನಾಗಿರೊಲ್ಲ ಎನ್ನಿಸಿತು. ಅದಕ್ಕೆ, ಕೊನೆಗೂ ಕನಕಾಂಬರ ಬಣ್ಣದ ಸೀರೆ ಇಷ್ಟವಾಯ್ತು. ಸೀರೆಯ ಅಂಚಿನಲ್ಲಿರುವ ಹಂಸಗಳನ್ನು ನನಗಾಗಿಯೇ ಬಿಡಿಸಿದಂತಿತ್ತು, ಆಹ್! ಸೀರೆಯ ತುದಿಯಲ್ಲಿದ್ದ ಪ್ರೈಸ್ ಟ್ಯಾಗ್ ನನ್ನ ಉತ್ಸಾಹಕ್ಕೆ ತಣ್ಣೀರೆರಚಿತ್ತು. ಬೆಲೆ 3000 ರೂ.ಚೌಕಾಶಿ ಮಾಡಲು ಪ್ರಯತ್ನಿಸಿದೆ. ಅಂಗಡಿಯವನು ಹೇಳಿದ್ದು ,'' ಸೀರೆ ಫಿಕ್ಸ್ ರೇಟ್. ಸೀರೆ ಜೊತೆಗೆ ಲಕ್ಕಿ ಕೂಪನ್ ಬರುತ್ತೆ. ದೀಪಾವಳಿ ದಿನ ಲಕ್ಕಿ ಡಿಪ್ ಇರುತ್ತೆ. ಅದರಲ್ಲಿ ನಿಮ್ಮ ನಂಬರ್ ಬಂದ್ರೆ ಸೀರೆಯ ಅರ್ಧ ಬೆಲೆ ವಾಪಸ್. ಆ ಥರ 100 ಜನರಿಗೆ ಬಹುಮಾನ ಗ್ಯಾರಂಟಿ.ಲಕ್ಕಿ ಡಿಪ್ ವಿಜೇತರನ್ನ ಮಾರನೇ ದಿನದ ಪ್ರಮುಖ ಪತ್ರಿಕೆಗಳಲ್ಲಿ ಘೋಷಿಸಲಾಗುತ್ತೆ".ಕೊನೇಗೂ ಧೈರ್ಯ ಮಾಡಿ ಪ್ಯಾಕ್ ಮಾಡಲು ಆದೇಶಿಸಿದೆ . ಇತ್ತ ಅಂಗಡಿಯ ಮಾಲೀಕನಿಗೆ ಹಣ ತೆತ್ತು ರಸೀದಿ ಮತ್ತು ಲಕ್ಕಿ ಕೂಪನ್ ಇಸಿದುಕೊಂಡೆ. ಕುತೂಹಲ ತಡೆಯಲಾರದೆ ಲಕ್ಕಿ ಕೂಪನ್ ನಂಬರ್ ನೋಡಿದೆ. R58325 .ಅರೆ , ಈ ನಂಬರ್ ಎಲ್ಲೂ ನೋಡಿದ ಹಾಗಿದೆಯಲ್ಲ ಅಂತನ್ನಿಸಿತು, ಚಕ್ಕನೆ ನೆನಪಾದದ್ದು ನನ್ನ ಡಿಗ್ರಿ ಪರೀಕ್ಷೆಯ ನಂಬರ್. ಅದು CO58352 . ನನ್ನ ಪರೀಕ್ಷೆಯ ಫಲಿತಾಂಶ ಗಳೆಲ್ಲ ಕಣ್ಣ ಮುಂದೆ ಹಾದುಹೋದಂತಾಯಿತು. ಯಾಕೋ ಸೀರೆ ಮತ್ತು ಲಕ್ಕಿ ಕೂಪನ್ ಎರಡೂ ಬೇಡವೆನಿಸತೊಡಗಿದವು.ಹಾಗೂ ಹೀಗೂ ಮನಸ್ಸ್ಸನ್ನು ಸಿದ್ಧಗೊಳಿಸತೊಡಗಿದೆ. ಸೀರೆ ಇಲ್ಲದೆ ದೀಪಾವಳಿ ಆಚರಿಸೋಕೆ ಆಗಲ್ವ ಎಂದೆನಿಸಿತು.ನಿರ್ಮಲಳ ಮೇಲಿನ  ಅಸೂಯೆಗೆ ನಾನ್ಯಾಕೆ ಸೀರೆ ತಗೋಬೇಕು ಎಂದೆನ್ನಿಸಿತು  ತಕ್ಷಣವೇ ಸೀರೆ ಖರೀದಿ ಕ್ಯಾನ್ಸಲ್ ಮಾಡಿಸಿದೆ. ಅಂಗಡಿ ಮಾಲೀಕ ನನ್ನ ಸಹಸ್ರನಾಮ ಶುರು ಮಾಡಿದ. ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ , ನಿರುಮ್ಮಳವಾಗಿ ಮನೆಯ ದಾರಿ ಹಿಡಿದೆ. 3000 ರೂ ನನ್ನ ಪರ್ಸ್ ನಲ್ಲಿ ಭದ್ರವಾಗಿತ್ತು. ಮನಸ್ಸಿನಲ್ಲೊಂದು ಸಮಾಧಾನ ಮೂಡಿತ್ತು. ಸೀರೆ ಮರೆತುಹೋಗಿತ್ತು. 
ಅಕ್ಟೋಬರ್ ೨೯ ರ ಪ್ರಜಾವಾಣಿಯಲ್ಲಿ ದೀಪಾವಳಿಯ ವಿಶೇಷ ಕಥೆಗಳ ಕೆಳಗೆ ಬಾಲಾಜಿ ಸೀರೆ ಅಂಗಡಿಯ ಲಕ್ಕಿ ಡ್ರಾ ನಂಬರ್  ಗಳ 10 ಸಾಲುಗಳಿದ್ದವು. ಅದರ 6 ನೇ ಸಾಲಿನ 8 ನೇ ನಂಬರ್  R58325 ಆಗಿತ್ತು.

0 comments:

Post a Comment

 
;