Thursday, January 10, 2013

ಈ ಹೊತ್ತಿಗೆ , ಈ ಹೊತ್ತಿಗೆ, ಭಾಗ-೪

ಈ ಸರಣಿ ಅಂಕಣದ ಯಶಸ್ಸಿನ ಹಿನ್ನೆಲೆಯಲ್ಲಿ ಈ ಭಾಗವನ್ನು ಬರೆಯುತ್ತಿದ್ದೇನೆ. ಈ ಬಾರಿಯ ಅಂಕಣದ ಪುಸ್ತಕ ನಾನು ಬಹುದಿನಗಳ ಕಾಲ ಹುಡುಕಿದ ಮೇಲೆ ಸಿಕ್ಕಿದ್ದು, ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಆದರೆ ಮತ್ತೆ ಏನೋ ಕುತೂಹಲ. ಮತ್ತೆ ಮತ್ತೆ ಓದಬೇಕೆಂಬ ತವಕ. ಈ ಪುಸ್ತಕವನ್ನು ಎಷ್ಟು ಬಾರಿ ಓದಿದರೂ ಕಡಿಮೆಯೇ. ಈ ಪುಸ್ತಕದ ಲೇಖಕರ ಬಗ್ಗೆ ನನ್ನಲ್ಲಿ ಹೆಚ್ಚು ಮಾಹಿತಿ ಇಲ್ಲ. ಆದರೆ ಅವರ ಕೆಲವು ಪುಸ್ತಕಗಳನ್ನು ಓದಿದ್ದು ಮತ್ತು ಅವುಗಳ ಸ್ವಾದವನ್ನು ಚಪ್ಪರಿಸಿದ್ದು ನನ್ನ ಭಾಗ್ಯವೇ ಸರಿ. ವಿಷಯಕ್ಕೆ ಬರೋಣ.
ಪುಸ್ತಕದ ಹೆಸರು : ಅಪೂರ್ವರೊಡನೆ.
ಲೇಖಕರು: ಬಿ.ಎಸ್. ಕೇಶವರಾವ್.
ಪ್ರಕಾಶಕರು: ಐ.ಬಿ.ಎಚ್ ಪ್ರಕಾಶನ, ನಂ೭೭, ೨ನೇ ಮುಖ್ಯರಸ್ತೆ, ಬಿ.ಎಸ್.ಕೆ ೩ನೇ ಹಂತ, ಬೆಂಗಳೂರು-೮೫
ಬೆಲೆ: ೧೪೦ ರೂ.
ಈ ಪುಸ್ತಕ ಎಲ್ಲಾ ಪುಸ್ತಕಗಳಿಂದ ವಿಭಿನ್ನ. ಈ ಪುಸ್ತಕದ ಉದ್ದೇಶವಂತೂ ಶ್ಲಾಘನೀಯ. ಈ ಪುಸ್ತಕವು ೨೬ ಅಪೂರ್ವ ವ್ಯಕ್ತಿಗಳನ್ನು ನಿಮಗೆ ಪರಿಚಯಿಸುತ್ತದೆ. ಆ ಅಪೂರ್ವ ವ್ಯಕ್ತಿಗಳಾದರೂ ಯಾರು? ಅ.ನ.ಕೃ, ವೈ,ಎನ್,ಕೆ, ಚದುರಂಗ, ದ.ರಾ.ಬೇಂದ್ರೆ, ಡಿ.ವಿ.ಗುಂಡಪ್ಪ, ನಟ ಬಾಲಕೃಷ್ಣ, ಮೈಸೂರು ಅನಂತಸ್ವಾಮಿಯಂತಹ ಪರಿಚಿತರ ಜೊತೆಗೆ, ಗುಂತ್ಕಲ್ ಗುಂಡಪ್ಪ, ಡಾ||ಕೌಲಗುಡ್ಡ, ಸಂಶೋಧಕ, ಕೈಗಾರಿಕೋದ್ಯಮಿ ಜಿ.ಡಿ.ನಾಯ್ಡು, ನೃತ್ಯಪಟು ಗೋಪಿಕೃಷ್ಣ, ದೇವುಡು ನರಸಿಂಹಶಾಸ್ತ್ರಿಯಂತಹ ಅಪೂರ್ವ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಕೊಡುವಲ್ಲಿ ಪುಸ್ತಕ ಯಶಸ್ವಿಯಾಗಿದೆ. ಇದು ಒಂದು ಅಪೂರ್ವ ಲೇಖನಗಳ ಸಂಗ್ರಹ. ಈ ಲೇಖನಗಳು ಬಿಡಿ ಬಿಡಿಯಾಗಿ ಕನ್ನಡಪ್ರಭ, ಪ್ರಜಾವಾಣಿ, ಸ್ಟಾರ್, ಮೈಸೂರು ಮಿತ್ರ, ಮತ್ತು ಇತರೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದುಂಟು.
ಈ ಬಿಡಿ ಲೇಖನಗಳ ಸಂಗ್ರಹವೇ ಈ ಪುಸ್ತಕ, "ಅಪೂರ್ವರೊಡನೆ". ಈ ಪುಸ್ತಕದಲ್ಲಿ ಚಿತ್ರಿಸಲೆತ್ನಿಸಿರುವ ಎಲ್ಲಾ ವ್ಯಕ್ತಿಗಳು ನಿಜಕ್ಕೂ ಅಪೂರ್ವರು ಮತ್ತು ಅಸಾಮಾನ್ಯರು.
ಈ ಪುಸ್ತಕದ ಪರಿಚಯ ಸ್ವಲ್ಪ ರೋಚಕವಾಗಲು ಕೆಲವು ಮುಖ್ಯ ಸಂಗತಿಗಳನ್ನು ಮೊದಲೇ ಹೇಳಲಿಚ್ಛಿಸುತ್ತೇನೆ.
೧) ಅವರು ಜಯಚಾಮರಾಜ ಒಡೆಯರ ಒಡನಾಡಿ, ಸಹಪಾಠಿ. ಅರಮನೆಯ ಅರಸು ಜನರಿಗೆಂದೇ ಮೀಸಲಾದಂತಿದ್ದ ರಾಯಲ್ ಸ್ಕೂಲಿನಲ್ಲಿ, ಅರಸರ ಜೊತೆಗೇ ಓದಿದವರು. ಅರಸರ ಜೊತೆ ಒಂದೇ ತಟ್ಟೆಯನ್ನು ಹಂಚಿಕೊಂಡವರು. ಆದರೆ ಈ ಹಟವಾದಿ, ಸೌಜನ್ಯದ ಸಾಕಾರಮೂರ್ತಿ, ಅರಸರ ದಯಾದೃಷ್ಟಿಯನ್ನು ಧಿಕ್ಕರಿಸಿ, ಸಾಧಾರಣ ಜೀವನವನ್ನು ತಮ್ಮ ಸಾಧಾರಣ ಮನೆಯಲ್ಲೇ ನಡೆಸಿದವರು. ಅಮೆರಿಕದ ಎಂ.ಜಿ.ಎಂ ಸಂಸ್ಥೆಯ ಚಿತ್ರವೊಂದಕ್ಕೆ ಸಹನಿರ್ದೇಶಕರಾಗಿ ಕೆಲಸ ಮಾಡಿದವರು. ೧೯೪೮ರಲ್ಲೇ ತಮ್ಮದೇ ಕಾದಂಬರಿ 'ಸರ್ವಮಂಗಳ' ವನ್ನು ಚಿತ್ರಿಸಿ, ರಾಜ್ಯ ಪ್ರಶಸ್ತಿಯಲ್ಲದೇ, ಮೂರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವರು. ಅವರು ಮೊದಲ ತಮ್ಮ ಕಥಾಸಂಕಲನಕ್ಕೆ ಮುನ್ನುಡಿ ಬರೆಯಲು ಕಥೆಗಾರರೊಬ್ಬರು ತಿರಸ್ಕಿರಿಸಿದಾಗ, ಬರವಣಿಗೆಯನ್ನೇ ನಿಲ್ಲಿಸಲು ಹೊರಟಿದ್ದವರು. ಆದರೆ ಅ.ನ.ಕೃ ಅವರ ಸಹೃದಯತೆಯ ಮುನ್ನುಡಿಯೊಂದಿಗೆ ಅವರು ಸಾಹಿತ್ಯ ಜಗತ್ತಿಗೆ ಪರಿಚಿತರಾದರು. ಅವರ ಹೆಸರು ಸುಬ್ರಹ್ಮಣ್ಯಂ ರಾಜೇ ಅರಸ್ ಅಥವಾ 'ಚದುರಂಗ'.
೨) ಅವರು ಪತ್ರಿಕಾ ಸಂಪಾದಕರು, ಅದಲ್ಲದೆ, ೧೧೨ ಸಾಮಾಜಿಕ ಕಾದಂಬರಿಗಳು, ಹದಿನಾಲ್ಕು ಐತಿಹಾಸಿಕ ಕಾದಂಬರಿಗಳು, ಎಂಟು ಕಥಾ ಸಂಕಲನಗಳು, ಹನ್ನೊಂದು ಸಾಮಾಜಿಕ ನಾಟಕಗಳು, ನಾಲ್ಕು ಪೌರಾಣಿಕ ನಾಟಕಗಳು, ಏಳು ಐತಿಹಾಸಿಕ ನಾಟಕಗಳು, ಪ್ರಭಂಧ ಮತ್ತು ವಿಮರ್ಶೆಗೆ ಸಂಭಂದಿಸಿದಂತೆ ಇಪ್ಪತ್ತೊಂದು ಕೃತಿಗಳು, ಹನ್ನೆರಡು ಜೀವನ್ ಚರಿತ್ರೆಗಳು, ಹನ್ನೊಂದು ಸಂಪಾದಿತ ಕೃತಿಗಳು, , ನಾಲ್ಕು ಅನುವಾದಗಳು , , ಅಲ್ಲದೆ ಪತ್ರಿಕಾ ಸಂಪಾದಕರಾಗಿ ನೂರಾರು ಲೇಖನಗಳು, ಹಲವಾರು ಚಿತ್ರಗಳಿಗೆ ಚಿತ್ರಸಾಹಿತ್ಯ, ಶಿಶುಸಾಹಿತ್ಯ. ಒಟ್ಟಾರೆ ಮುದ್ರಿತ ಪುಟಗಳ ಸಂಖ್ಯೆ, ೮೦,೦೦೦ಕ್ಕೂ ಹೆಚ್ಹು. ಅಲ್ಲದೆ ಹಲವು ಸಂಘಸಂಸ್ಥೆಗಳ ಒಡನಾಡ, ಸಮಾರಂಭ, ಚಳುವಳಿಗಳಲ್ಲಿ ಭಾಗಿ, ಅವರ ಹೆಸರು ಅ.ನ.ಕೃ. ಅದಕ್ಕೇ ಅವರು ಕನ್ನಡದ ಕಟ್ಟಾಳು.
೩) ಅವರು ಕಾಲೇಜಿನಲ್ಲಿ ಹೆಚ್ಚೇನೂ ಕಲಿತವರಲ್ಲ. ಆದರೆ ಓದುತ್ತಿದ್ದುದು ಬರೀ ಆಂಗ್ಲ ಸಾಹಿತ್ಯವನ್ನು. ಹೆಂಡತಿಯ ಒತ್ತಾಯದ ಮೇರೆಗೆ, ಆಂಗ್ಲ ಪತ್ರಿಕೆಯಯಲ್ಲಿ ಮುಚ್ಹಿಟ್ಟುಕೊಂಡು ಒಂದು ಪುಸ್ತಕವನ್ನು ಓದಿದರು. ಆ ಪುಸ್ತಕದ ಕತೃ ಅ.ನ.ಕೃ ರವರನ್ನೇ ಗುರುವಾಗಿ ಸ್ವೀಕರಿಸಿದವರು. ೬೩ ಕನ್ನಡ ಕೃತಿಗಳನ್ನು ರಚಿಸಿ ಬೆಂಗಳೂರಿನ ಶಾಂತಿನಗರದ ನಂಜಪ್ಪ ರಸ್ತೆಯಲ್ಲಿ 'ತಿಂಮನ ಮನೆ'ಯಲ್ಲಿ ಬೇರೂರಿದವರು. ಆದರೂ ಅವರು ಗುರುತಿಸಲ್ಪಡುವದು ಬಳ್ಳಾರಿ ಭೀಮಸೇನರಾವ್ ಎಂದೇ. ಆಂಗ್ಲ ಭಾಷಾ ಪ್ರೇಮದಲ್ಲಿಯೂ ಕನ್ನಡ ಕೃಷಿ ಮಾಡಿದ ಅವರ ಹೆಸರು ಬೀchi.
೪)ಅವರು ಖ್ಯಾತ ಚಿತ್ರನಟ, ಹಾಸ್ಯನಟನಾಗಿಯೂ, ಖಳನಾಯಕನಾಗಿಯೂ ಮತ್ತೂ ಪೋಷಕನಟನಾಗಿಯೂ ನಮಗೆ ಪರಿಚಿತ. ಅವರು ೧೯೪೮-೪೯ ರ ಸುಮಾರಿಗೆ ಮೈಸೂರಿನ ರತ್ನಾವಳಿ ನಾಟಕ ಕಂಪನಿಯಲ್ಲಿ ನಾಟಕವಾಡುತ್ತಿದ್ದರು. ಅಲ್ಲಿನ ವರಮಾನ ಸಾಕಾಗದೆ, ಶಿವರಾಮ ಪೇಟೆಯಲ್ಲಿ ಎರಡು ರೂಪಾಯಿಗೆ ಮಳಿಗೆಯೊಂದನ್ನು ಬಾಡಿಗೆಗೆ ಪಡೆದು, ಅಲ್ಲಿ ಜಲಚಿತ್ರಗಳನ್ನು ಬಿಡಿಸುತ್ತಿದ್ದರು. ಬಿಡಿಸಿದ ಚಿತ್ರಗಳನ್ನು ದೇವರಾಜ್ ಮಾರ್ಕೆಟ್( ಈಗಿನ ಗುರು ಸ್ವೀಟ್ ಮಾರ್ಟ)ನ ಮುಂಭಾಗದಲ್ಲಿ, ಯಾರಿಗೂ ತಮ್ಮ ಗುರುತು ಸಿಗಬಾರದೆಂದು ತಲೆಗೆ ಮುಂಡಾಸು ಧರಿಸಿ ಮಾರುತ್ತಿದ್ದರು. ಅವರೇ ನಮ್ಮ ಪ್ರೀತಿಯ ಬಾಲಣ್ಣ ಅಂದರೆ, ಟಿ.ಎನ್.ಬಾಲಕೃಷ್ಣ.
ಈ ಕೆಲವು ಸಂಗತಿಗಳು ನಿಮ್ಮನ್ನು ಕುತೂಹಲವಾಗಿಸುತ್ತವೆಂದು ನಂಬಿದ್ದೇನೆ. ಈ ೨೬ ಅಪೂರ್ವ , ಅಸಾಮಾನ್ಯ ವ್ಯಕ್ತಿಗಳ ಪರಿಚಯ ನಮ್ಮಲ್ಲೊಂದು ವಿಶಿಷ್ಟ ಅನುಭವವನ್ನು ಮೂಡಿಸುತ್ತದೆ. ಆ ಅನುಭವವನ್ನು ನೀಡಿದ ಬಿ.ಎಸ್.ಕೇಶವರಾವ್ ಅವರಿಗೆ ನಾನು ಋಣಿ. ಪುಸ್ತಕವನ್ನು ಓದಿ, ಆನಂದಿಸಿ. ಇದು ನಿಮ್ಮ ಸಂಗ್ರಹದಲ್ಲಿ ಇರಲೇಬೇಕಾದ ಪುಸ್ತಕಗಳಲ್ಲೊಂದು.

0 comments:

Post a Comment

 
;