'ಶ್ರೀ ಕೆಂಪಮ್ಮದೇವಿ ಕೃಪೆ' ಅಂತ ಕಾರಿನ ಹಿಂದಿನ ಗಾಜಿಗೆ ಅಂಟಿಕೊಂಡಿದ್ದ ರೇಡಿಯಂ ಸ್ಟಿಕ್ಕರ್ ತೆಗೆಯಲು ಶುರುಮಾಡಿದ ಪಂಪಾಪತಿಗೆ ಅದನ್ನು ಅಂಟಿಸಿದ ಸಂಭ್ರಮದ ಗಳಿಗೆಯು ನೆನಪಾಯಿತು.
ಆಗಿನ್ನೂ ಅವನಿಗೆ ಒಂಬತ್ತು ವರ್ಷ ವಯಸ್ಸು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಅಂದು ಗ್ರಾಮದೇವತೆ ಕೆಂಪಮ್ಮದೇವಿಯ ಜಾತ್ರೆ. ಕೆಂಪಮ್ಮದೇವಿ ತುಂಬಾ ಶಕ್ತಿದೇವತೆಯೂ ಮತ್ತು ಜಾಗೃತ ದೇವತೆಯೆಂಬ ಕಾರಣಕ್ಕೆ ಆ ಹಳ್ಳಿಯ ಹೆಸರು ಕೆಂಪಳ್ಳಿ ಎಂದಾಯಿತೋ ಗೊತ್ತಿಲ್ಲ. ಜಾತ್ರೆ ಮಾತ್ರ ಸುತ್ತಮುತ್ತಲಿನ ಹಳ್ಳಿಗರು ಸಂಭ್ರಮದಿಂದ ಆಚರಿಸುವಂತೆಯೂ, ಮತ್ತು ವಿಜೃಂಭಣೆಯಿಂದಲೂ ನಡೆಯುತ್ತಿತ್ತು. ಹಲವಾರು ವರ್ಷಗಳ ದೆಸೆಯಿಂದಲೂ ತಿಮ್ಮೇಗೌಡರ ಮನೆತನವೇ ಜಾತ್ರೆಯ ಉಸ್ತುವಾರಿಯನ್ನು ವಹಿಸುತ್ತಿದ್ದರು. ಯಾವುದೇ ಕುಂದು ಕೊರತೆಗಳಿಲ್ಲದೇ , ಹಣಕಾಸಿನ ಅಡಚಣೆಯಿಲ್ಲದೇ ತಮ್ಮ ಸ್ವಂತ ಮನೆಯ ಹಬ್ಬವೇನೋ ಎಂಬಂತೆ ನಿಷ್ಕಾಮ ಕರ್ಮಿಯಾಗಿ, ಪ್ರಾಮಾಣಿಕವಾಗಿ ಅವರು ಕೆಲಸ ಮಾಡುತ್ತಿದ್ದರಿಂದ ಜಾತ್ರೆ ತನ್ನ ಸಂಭ್ರಮವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿತ್ತು. ಈ ಜಾತ್ರೆಯ ಯಶಸ್ಸಿನೊಂದಿಗೆ ಅವರ ಪ್ರಾಮಾಣಿಕತೆಯನ್ನು ಹೋಲಿಸಿ ನೋಡಬಹುದಾಗಿತ್ತು. ಈ ಪ್ರಾಮಾಣಿಕತೆ, ಜನರ ಮಿಡಿತಗಳ ಬಗ್ಗೆ ಇರುವ ಅಂತಃಕರಣ ಮತ್ತು ಅವರ ಶಾಂತ ಸ್ವಭಾವತೆ ಅವರನ್ನು ಎರಡು ಬಾರಿ ಗ್ರಾಮ ಪಂಚಾಯತಿಗೆ ಅಧ್ಯಕ್ಷನನ್ನಾಗಿ ಮಾಡಿದ್ದವು. ಯಾವಾಗಲೂ ಬಿಳಿ ಅಂಗಿ ಮತ್ತು ಕಚ್ಚೆ ಹಾಕಿದ ಬಿಳಿ ಪಂಚೆ, ಮಟ್ಟಸವಾಗಿ ಬಾಚಿದ ಕ್ರಾಪಿನ ಅಲ್ಲಲ್ಲಿ ಇಣಿಕಿ ಹಾಕುತ್ತಿರುವ ಬಿಳಿ ಕೂದಲು, ಯಾವಾಗಲೂ ಶೇವ್ ಮಾಡಿದ ಗಲ್ಲ, ಹುರಿಯಾದ ಮೀಸೆ, ಕ್ರಾಪು ಮರೆಮಾಚುತ್ತಿದ್ದ ವಿಭೂತಿ, ಮಾಸದ ಮುಗುಳ್ನಗೆ, ಮತ್ತು ಹೊಳೆಯುವ ಚರ್ಮದ ಚಪ್ಪಲಿ ಅವರ ಶಿಸ್ತನ್ನು ತೋರಿಸುವದರೊಂದಿಗೆ ಅವರ ಬಗೆಗಿನ ಗೌರವವನ್ನು ಹೆಚ್ಚಿಸಿದ್ದವು. ಕೆಂಪಳ್ಳಿಯ ಯಾವೊಬ್ಬನೂ ಅವರ ಅಂಗಿಯಲ್ಲಿ ಸುಕ್ಕುಗಳನ್ನು ಕಂಡವನಲ್ಲ. ಅಷ್ಟೊಂದು ಕಾಳಜಿ ಅವರಿಗೆ ವೇಷಭೂಷಣಗಳ ಮೇಲೆ.
ಕೆಂಪಮ್ಮದೇವಿ ತಿಮ್ಮೇಗೌಡರ ಮನೆದೇವತೆ ಕೂಡ ಹೌದು. ಅದಕ್ಕೆ ಜಾತ್ರೆಯ ಬಗ್ಗೆ ಅವರಿಗೆ ವಿಪರೀತ ಕಾಳಜಿ. ನಾಲ್ಕು ತಿಂಗಳಿನಿಂದಲೇ ಜಾತ್ರೆಯ ತಯಾರಿ ಶುರುವಾಗುತ್ತಿತ್ತು. ಜಾತ್ರೆ ಸಮೀಪಿಸುತ್ತಿದ್ದಂತೆ ಗೌಡರೂ ದಣಿವರೆಯದಂತೆ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಊರಿನಲ್ಲಿ ಕೆಲವು ತಂಡಗಳನ್ನು ರಚಿಸಿ, ಒಂದೊಂದು ತಂಡಕ್ಕೂ ಒಂದೊಂದು ಜವಾಬ್ದಾರಿಯನ್ನು ಕೊಡಲಾಗುತ್ತಿತ್ತು. ಒಂದು ತಂಡ ಬರೀ ತೋರಣ ಕಟ್ಟುವ, ಮತ್ತೊಂದು ದೇವರ ಪೂಜೆಯ ಸಾಮಗ್ರಿಗಳ ಉಸ್ತುವಾರಿ, ಮತ್ತೊಂದು ಕುಡಿಯುವ ನೀರಿನ ಸರಬರಾಜು, ಇನ್ನೊಂದು ಪ್ರಸಾದ ವಿತರಣೆ ಹೀಗೆ ಜವಾಬ್ದಾರಿಯನ್ನು ವಹಿಸಲಾಗಿತ್ತಾದರೂ, ಮೇಲುಸ್ತುವಾರಿಯನ್ನು ಗೌಡರೇ ವಹಿಸುತ್ತಿದ್ದರು. ಎಲ್ಲಾ ತಂಡಗಳಲ್ಲೂ ಇವರು ಸದಸ್ಯ್ರರಂತಾಗಿದ್ದರು.ಜಾತ್ರೆಗೆ ಬೇಕಾದ ಹಣವನ್ನು ನಾಲ್ಕು ತಿಂಗಳ ಮೊದಲು ಪಂಚಾಯ್ತಿಯಲ್ಲಿ ಗ್ರಾಮದ ಜನರಲ್ಲಿ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗುತ್ತಿತ್ತು. ಕಡಿಮೆ ಹಣ ಸಂಗ್ರಹವಾದಾಗಲೆಲ್ಲಾ ಗೌಡರೇ ತಮ್ಮ ಸ್ವಂತ ಹಣವನ್ನು ಬಳಸುತ್ತಿದ್ದರು. ಜಾತ್ರೆ ಮುಗಿದ ಒಂದು ವಾರದ ನಂತರ ಲೆಕ್ಕಪತ್ರವನ್ನು ಗ್ರಾಮದ ಜನರ ಮುಂದೆ ಓದಲಾಗುತ್ತಿತ್ತು. ಇದರಿಂದ ಗೌಡರ ಬಗೆಗಿನ ಜನರ ಮೆಚ್ಹುಗೆ ಹಿರಿದಾಗುತ್ತಿತ್ತು.
ಇಷ್ಟೆಲ್ಲಾ ಸಂಭ್ರಮದ ಗೂಡಾಗಿದ್ದ ಕೆಂಪಮ್ಮದೇವಿಯ ಈ ವರುಷದ ಜಾತ್ರೆ ವರುಣನ ಅವಕೃಪೆಗೆ ತುತ್ತಾಗಿತ್ತು. ಮಳೆಯಿಲ್ಲದೇ ಜನ ಕಂಗಾಲಾಗಿದ್ದರು. ಬೆಳೆ ಕೈಕೊಟ್ಟಿತ್ತು. ಬ್ಯಾಂಕಿನಲ್ಲಿ ರೈತರ ಸಾಲ ಏರುವದರೊಂದಿಗೆ, ದೇಣಿಗೆಯ ಹಣವೂ ಮತ್ತು ಜಾತ್ರೆಯ ಬಗೆಗಿನ ಒಲವು ಜನರಲ್ಲಿ ಕಡಿಮೆಯಾಗಿತ್ತು. ಗೌಡರೂ ಕೂಡ ಈ ಸಾರಿ ಜಾತ್ರೆಯನ್ನು ಸರಳವಾಗಿ ಮಾಡೋಣವೆಂದು ಹೇಳಿದ್ದರು. ಜಾತ್ರೆಯ ದಿನ ಆಗಮಿಸಿತ್ತು.
ಅವತ್ತು ಜಾತ್ರೆ ಎಂಬುದು ಒಂಬತ್ತು ವರುಷದ ಪಂಪಾಪತಿಯಲ್ಲಿ ಸಂಭ್ರಮವನ್ನು ಮೂಡಿಸಿತ್ತು. ಬೆಳಿಗ್ಗೆ ಅವ್ವ ನೀಡಿದ್ದ ಅನ್ನ ಹಳಸಿದಂತಾಗಿದ್ದರೂ ಸುಮ್ಮನೆ ಎಲ್ಲವನ್ನೂ ಗಬಗಬನೇ ತಿಂದಿದ್ದ. ಜಾತ್ರೆ ಅವನನ್ನು ಕೂಗಿ ಕರೆದಿತ್ತು. ಮಧ್ಯಾಹ್ನದ ದೇವಸ್ಥಾನದ ಊಟ ಹಳಸಿದ ಅನ್ನದ ವಾಸನೆಯನ್ನು ನುಂಗಿ ಹಾಕಿತ್ತು. ಜಾತ್ರೆಯಲ್ಲಿ ಅವನು ಅಪ್ಪನನ್ನು ಪೀಡಿಸಿ ಕೆಲವೊಂದು ಆಟಿಗೆಗಳನ್ನು ಕೊಂಡಿದ್ದ.ಅದರಲ್ಲೂ ಆರಾಮ ಕುರ್ಚಿಯಂತೆ ಓಲಾಡುವ , ಕಟ್ಟಿಗೆಯ ಕುದುರೆ ಅವನ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಕತ್ತಲಾದಂತೆ ಎಲ್ಲರೂ ತಮ್ಮ ತಮ್ಮ ಮನೆಯ ಕಡೆಗೆ ನಡೆದರೆ ಇವನು ಕುದುರೆಯೊಂದಿಗೆ ಆಟವಾಡುತ್ತಾ ದೇವಸ್ಥಾನದ ಕಟ್ಟೆಯ ಮೇಲೆಯೇ ಕುಳಿತಿದ್ದ. ಸುಮಾರು ಹೊತ್ತಿನ ನಂತರ ಇವನು ಬಂದಾಗ ಅಪ್ಪ ಸಿಟ್ಟಿಗೆದ್ದಿದ್ದನ್ನು ಕಂಡು ಕುದುರೆಯನ್ನು ಮೂಲೆಯಲ್ಲಿಟ್ಟು ತಟ್ಟೆಯ ಮುಂದೆ ಉಣ್ಣಲಿಕ್ಕೆ ಕೂತ. ಗಮನ ಮಾತ್ರ ಕುದುರೆಯ ಮೇಲೆಯೇ ಇತ್ತು. ಅಪ್ಪ ಅಮ್ಮ ಮಾತ್ರ ಎಂದಿನಂತಿರದೇ ಲಗುಬಗೆಯಿಂದ ಉಣ್ಣುತ್ತಿದ್ದರು. ಇವನೂ ಉಣ್ಣಲಿಕ್ಕೆಂದು ಶುರು ಮಾಡುವ ಹೊತ್ತಿಗೆ, ಇವನ ಹೊಟ್ಟೆ ತೊಳೆಸಿದಂತಾಯಿತು. ಬೆಳಿಗ್ಗೆಯ ಹಳಸಿದ ಅನ್ನ, ಮಧ್ಯಾಹ್ನದ ದೇವಸ್ಥಾನದ ಊಟ, ಸಂಜೆಯ ತಿಂಡಿ ಕುರುಕಲು ಎಲ್ಲಾ ಸೇರಿ, ಅವನಿಗೆ ಉಬ್ಬಳಿಕೆ ತರಿಸಿತ್ತು. ಉಣ್ಣಲಿಕ್ಕೆಂದು ತಟ್ಟೆಗೆ ಕೈ ಹಚ್ಚುವಲ್ಲಿಯೇ ತಟ್ಟೆಯಲ್ಲೇ ಕಾರಿಕೊಂಡಿದ್ದ. ಅಪ್ಪನ ಕೆಂಗಣ್ಣು ಕೆಕ್ಕರಿಸಿತ್ತು. ಹೆದರಿಕೆ ಅವನ ವಾಂತಿಯ ಬಳಲಿಕೆಯನ್ನೂ ಹೆದರಿಸಿತ್ತು. ಕೈ ಝಾಡಿಸಿಕೊಂಡವನೇ ಮನೆಯಿಂದ ಓಡಹತ್ತಿದ. ಸರಿ ಸುಮಾರು ಹದಿನೈದು ನಿಮಿಷಗಳಲ್ಲಿ, ಕೆಂಪಮ್ಮನ ದೇವಸ್ಥಾನದ ಜಗುಲಿಗೆ ಬಂದು ನಿಂತಿದ್ದ. ಅಪ್ಪ ಹಿಂಬಾಲಿಸಿದಂತೇನೂ ಇಲ್ಲ ಎಂಬ ಭಾವನೆ ಅವನನ್ನು ಸಮಾಧಾನಗೊಳಿಸಿತ್ತು. ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತ , ನಡುರಾತ್ರಿಗೆ ಅವನನ್ನು ನಿದ್ರೆ ಆವರಿಸಿತ್ತು.
ಸೂರ್ಯನ ಹೊಂಗಿರಣಗಳು, ದೇವಸ್ಥಾನದ ಗಂಟೆಯ ಸದ್ದು, ಹಕ್ಕಿಗಳ ಕಲರವ ಅವನನ್ನು ಎಚ್ಚರಿಸಿದವು. ಅಪ್ಪನನ್ನು ಎದುರಿಸುವದು ಹೇಗೆ ಎಂದು ಯೋಚಿಸುತ್ತಾ ಮನೆಯ ಹಾದಿ ಹಿಡಿದ. ಮನೆಯ ಅಂಗಳದಲ್ಲಿ ಸಣ್ಣದೊಂದು ಜನರ ಗುಂಪು ಸೇರಿತ್ತು. ನುಸುಳಿಕೊಳ್ಳುತ್ತಾ ಮನೆ ಒಳಗಡೆ ದೃಷ್ಟಿ ಹಾಕಿದ, ಅಪ್ಪ ಅಮ್ಮ ಹೆಣವಾಗಿ ಬಿದ್ದಿದ್ದರು. "ಬ್ಯಾಂಕ್ ನವ್ರು ಹೊಲ ಮನೆ ಜಪ್ತಿ ಮಾಡೋಕೆ ಬರ್ತಾರಂತೆ, ಈ ಬಸಣ್ಣ ಯಾಕೆ ಇಷ್ಟೊಂದು ಸಾಲ ಮಾಡ್ಕೊಂಡ್ನೊ?" ಎಂಬ ಮಾತುಗಳು ಕೇಳಿಸುತ್ತಿದ್ದವು. ಹಿಂದಿನ ರಾತ್ರಿ ಕುದುರೆಯನ್ನು ಮೂಲೆಯಲ್ಲಿ ಇಡುವಾಗ ಅದರ ಪಕ್ಕದಲ್ಲೇ ಇದ್ದ ಖಾಲಿ ಕ್ಯಾನ್ ಇವನನ್ನು ಅಣಕಿಸುತ್ತಿತ್ತು. ಅದು ಹತ್ತಿ ಹೊಲಕ್ಕೆ ಹೊಡೆಯುವ ಔಷಧಿಯಾಗಿತ್ತು.
ಅಷ್ಟರಲ್ಲಿ ಗೌಡ್ರು ಬಂದ್ರು,ಗೌಡ್ರು ಬಂದ್ರು, ಅಂತ ಗುಸುಗುಸುಮಾತುಗಳ ನಡುವೆ ಗೌಡ್ರು ಬಂದು ಹೊಸ್ತಿಲಲ್ಲಿಯೇ ನಿಂತ ಇವನ ಹೆಗಲ ಮೇಲೆ ಕೈ ಇಟ್ಟಿದ್ದರು. ಅವರಿಗೆ ಪರಿಸ್ಥಿತಿಯ ಅರಿವಾಗಿತ್ತು. 'ರಾಮಪ್ಪ ಹೆಣ ಎತ್ತೋಕೆ ತಯಾರು ಮಾಡ್ಕೊ, ಸೋಮ ನನ್ನ ಜೊತೆ ಬಾ, ಖರ್ಚಿಗೆ ಸ್ವಲ್ಪ ಕಾಸು ಕೊಡ್ತೇನೆ. ಪಂಪ ಇನ್ಮೇಲೆ ನಮ್ಮ ಜಗುಲಿ ಮೇಲೆ ಬೇಳಿತಾನೆ. ಸಂಜೀಗೆ ಪಂಚಾಯ್ತಿ ಕಟ್ಟೆ ಹತ್ರ ಎಲ್ಲಾರು ಬಂದ್ಬುಡಿ. ಎಂದವರೇ ಅಲ್ಲಿಂದ ನಡೆದರು ಸೋಮನೊಂದಿಗೆ.
ಬಸಪ್ಪ, ಹೆಂಡತಿಯೊಂದಿಗೆ ಮಣ್ಣು ಸೇರಿದ ಮೇಲೆ ಪಂಚಾಯ್ತಿ ಕಟ್ಟೆ ಊರ ಜನರಿಂದ ತುಂಬಿ ಗಿಜಿಗಿಜಿ ಎನ್ನುತ್ತಿತ್ತು. ಎಲ್ಲರಿಗೂ ಒಂದೇ ಕುತೂಹಲ. ಗೌಡ್ರು ಪಂಚಾಯ್ತಿ ಕರೆದಿದ್ದದ್ದು ಯಾಕೆ ಅಂತ. ಶಾನುಭೋಗ್ರು, ಪೂಜಾರಪ್ಪ, ಗೌಡ್ರ ಸಲುವಾಗಿ ಕಾಯ್ತಾ ಪಂಚಾಯ್ತಿ ಕಟ್ಟೆ ಮೇಲೆ ಕುಳಿತಿದ್ದರೂ ಅವರ ದೃಷ್ಟಿ ಮಾತ್ರ ಗೌಡ್ರ ಬರುವಿಕೆಯನ್ನು ನಿರೀಕ್ಷಿಸುತ್ತಿತ್ತು. ಅಷ್ಟರಲ್ಲೇ ಗೌಡ್ರು ತಮ್ಮ ಎಂದಿನ ಠೀವಿಯಲ್ಲಿ ಬಂದವರೇ ಪಂಚಾಯ್ತಿ ಕಟ್ಟೆಗೆ ನಮಸ್ಕರಿಸಿ ಶಾನುಭೋಗ್ರು ಮತ್ತು ಪೂಜಾರಪ್ಪನ ಮಧ್ಯೆ ಕುಳಿತುಕೊಂಡ್ರು.
ಎಲ್ಲರೂ ಕುತೂಹಲದಿಂದ ಗೌಡ್ರನ್ನ ನೋಡುತ್ತಿದ್ದಂತೆಯೇ, ಗೌಡ್ರೇ ಮೌನ ಮುರಿದರು. 'ಇನ್ನೂ ಯಾರ್ದಾದ್ರೂ ಸಾಲ ಇದ್ರೆ ಹೇಳಿ, ಬ್ಯಾಂಕಿನವರ ಹತ್ರ ಮಾತಾಡಿ ಒಂದು ವರ್ಷದ ಗಡುವು ತಗೋತೀನಿ. ಎಲ್ಲರೂ ಮುಂದಿನ ವರ್ಷದೊಳಗೆ ಸಾಲ ತೀರಿಸಿ. ನಾಳೆ ಬೆಳಿಗ್ಗೆ ಎಲ್ಲರೂ ಬ್ಯಾಂಕಿನ ಹತ್ರ ಬನ್ನಿ , ಪಂಪನ ಜವಾಬ್ದಾರಿ ನಾನೇ ತಗೋತೀನಿ 'ಎಂದರು. ನೆರೆದಿದ್ದ ಎಲ್ಲರ ಮುಖದಲ್ಲೂ ಧನ್ಯತಾ ಭಾವ.ಯಾರೂ ಏನೂ ಮಾತಾಡುವ ಪರಿಸ್ಥಿತಿಯಲ್ಲಿರಲಿಲ್ಲ.ಶಾನುಭೋಗ್ರು, ಪಂಚಾಯ್ತಿ ಸಮಾಪ್ತಿ ಎಂದು ಎಲ್ಲರಿಗೂ ಕೇಳುವಂತೆ ಹೇಳಿದರು ಎಲ್ರೂ ತಮ್ಮ ತಮ್ಮ ಮನೆ ಕಡೆಗೆ ಮರಳಲಾರಂಭಿಸಿದರು. ಸಾಹುಕಾರ ಶಂಕ್ರಪ್ಪನ ಹೊಟ್ಟೇಲಿ ಹಾವು ಹರಿದಾಡಿದಂತಾಗಿತ್ತು.
(ಮುಂದುವರಿಯುವದು....)
Subscribe to:
Post Comments (Atom)
2 comments:
http://nammasangraha.blogspot.com/search?updated-min=2013-01-01T00:00:00-08:00&updated-max=2014-01-01T00:00:00-08:00&max-results=2
http://sallaap.blogspot.com/
Post a Comment