Wednesday, March 10, 2010 2 comments

ಸ್ವಾತಿಮುತ್ತು

ಬಾನಿನ ಕಣ್ಣಂಚಿನಿಂದ ಹೊರಬಂದ ಆ ಹನಿಯ ಅಂಚಿಗೆ,
ಕೋಲ್ಮಿಂಚಿನ ಮಿಂಚು  ತಾಗಿ
ಸಂಚು ಕೊಂಚ ಕೊಂಚ ಕಂಡಿತೆನಗೆ .
ಆ ಹನಿಗೆ, ಲಂಚ ಕೊಟ್ಟು ಕೇಳಿದಾಗ, ಮನದ ಭಾವ ಬುಗ್ಗೆಯಲ್ಲಿ  ಸಂಚರಿಸುತ್ತಾ ...
ಗೊಣಗಿತ್ತು, ಆಗಬೇಕೆಂಬುದು ಚಿಪ್ಪಿನಲ್ಲಿ ಸ್ವಾತಿಮುತ್ತು.
                                                ಇಂದ,
                                                         ಪ್ರೀತಿ.
Thursday, March 4, 2010 0 comments

ಪ್ರಕೃತಿಮಾತೆಗೊಂದು ಪತ್ರ

ಯುಗಾದಿಯ  ಸಂಧರ್ಭದಲ್ಲಿ  ಪ್ರಕೃತಿಮಾತೆಗೊಂದು ಪತ್ರ
ಹೊಸತು ಉಡುವ ಸಡಗರದಲ್ಲಿ  ಹಳೆಯದನ್ನು ಮರೆಯದಿರು,
ವಸನ ಹೊಸದಾದರೇನು ನೀನು ಹಳತು.

ಹುಟ್ಟುಹಬ್ಬವು ಇದು ನಿನಗೆ,
ಮರುಜನ್ಮವಂತೂ ಅಲ್ಲ,
ಇರುವ ಪಯಣವ ಮುಗಿಸು,
ಹೊಸತು ಬೇಕೇನೀಗ?

ಕಲ್ಲು ಮುಳ್ಳುಗಳ ಸಂತೆ ದಾರಿಯಲಿ ತುಂಬಿರಲು ,
ನಗೆಯು ನಗುತಿರಲಿ ನಿನ್ನ ತುಟಿಯ ಅಂಚಲ್ಲಿ,
ಗಾಯವು ಮಾಯುತಿರಲು , ನೋವ ಮರೆಯಿನ್ನು .
ಸಾಗುತಿರಲಿ  ಈ ನಿನ್ನ ಅನಂತ ಪಯಣ.

ನಿನ್ನ ದಾರಿಯಲ್ಲೇ ಬರುವ ಸಹಯಾತ್ರಿಕನು ನಾನು,
ಮುನ್ನಡೆಸು ನನ್ನನು ನನ್ನ ಗಮ್ಯದ ಕಡೆಗೆ.
ಜೀವನಾಧಾರವಾದ ಈ ನಿನ್ನ ಮಮಕಾರ
ಮರೆಯೆನು ನಾನು ಈ  ಮಹದುಪಕಾರ.

ಕೋಗಿಲೆಯ ಗಾನದಲಿ, ಮಾವಿನ ತಂಪಿನಲಿ,
ಆಚರಿಸು ಈ ನಿನ್ನ ಜನುಮದಿನ.
ಪ್ರೀತಿ ಪ್ರೇಮವ ಬೆಳೆಸಿ, ಮನುಕುಲವು ಇರುವಂತೆ ,
ಹರಸು ಈ ನಿನ್ನ ಕುಡಿಗಳನ್ನ.

Wednesday, March 3, 2010 0 comments

ನಮ್ಮ ಮೌನಕ್ಕೊಂದು ಧಿಕ್ಕಾರ.






"ಶಿವಮೊಗ್ಗದಲ್ಲಿ ಗಲಾಟೆ", "ಗದಗನಲ್ಲಿ ಪ್ರತಿಮೆಗೆ ಚಪ್ಪಲಿ ಹಾರ". "ಪತ್ರಿಕಾ ಕಚೇರಿಗೆ ಬೆಂಕಿ". ಇವೆಲ್ಲಾ ನಮ್ಮ ಪತ್ರಿಕೆಗಳ  ತಲೆಬರಹಗಳು. ಪಟ್ಟನೆ ಓದಲು ತೊಡಗುತ್ತೇವೆ. ಓದಿದ ನಂತರ ಹೀಗಾಗಬಾರದಿತ್ತು ಎಂದು ಲೊಚಗುಡುತ್ತಾ ಮುಂದಿನ ಪುಟಕ್ಕೆ ಕಣ್ಣು  ಹಾಯಿಸುತ್ತೇವೆ. ಇಷ್ಟಕ್ಕೂ , ನಡೆದಿದ್ದಾದರೂ  ಏನು? ಎಂಬ ಕುತೂಹಲವೂ ನಮ್ಮಲ್ಲಿ ಕೆರಳುವದಿಲ್ಲ. ಅದು ಹಾಗಿರಲಿ, ಅಷ್ಟೊಂದು ಭಯಾನಕ  ಗಲಾಟೆಗೆ ಕಾರಣವಾದ ಅಂಶಗಳ ಬಗ್ಗೆ ಗಮನ ಹರಿಸೋಣ. ತಸ್ಲಿಮಾ ನಸ್ರೀನ್ ಒಬ್ಬ ಬಾಂಗ್ಲಾ ದೇಶದ ಲೇಖಕಿ. ಅವಳು ತನ್ನ "ಲಜ್ಜಾ" ಕಾದಂಬರಿಯಲ್ಲಿ, ೧೯೯೨ ರಲ್ಲಿ ನಡೆದ ಬಾಬ್ರಿ ಮಸೀದಿ   ಧ್ವ೦ಸವು ತನ್ನ ನಾಡಿನಲ್ಲಿನ  ಹಿಂದೂಗಳ  ಮೇಲೆ ಆದ ಪರಿಣಾಮ, ಪ್ರತಿಕೂಲಗಳ ಬಗ್ಗೆ, ಅಂಕಿ ಅಂಶಗಳೊಂದಿಗೆ, ಒಂದು ಹಿಂದೂ ಕುಟುಂಬವನ್ನು ಕೇಂದ್ರಿಕೃತವಾಗಿಟ್ಟುಕೊಂಡು ಕತೆ ನೇಯುವದರಲ್ಲಿ ಯಶಸ್ವಿಯಾಗಿದ್ದಾಳೆ. ಅಂಥಹ ವಿವಾದಾತ್ಮಕ ಲೇಖಕಿಯ ಲೇಖನಗಳನ್ನು ಪ್ರಕಟಿಸುವ ದರ್ದು ಕನ್ನಡಪ್ರಭ ಪತ್ರಿಕೆಗೆ ಏನಿತ್ತೋ? ಒಂದು ವಿವಾದವನ್ನು, ಮತೀಯ ಕಲಹಗಳನ್ನು, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಲೇಖನಗಳು ಸಾರ್ವಜನಿಕವಾಗಿ ಪ್ರಕಟವಾದಲ್ಲಿ, ಅದು ಒಂದು ಜನಾಂಗ, ಅಥವಾ ಒಂದು ಕೋಮಿನಲ್ಲಿ ಕೆಚ್ಚು ಹುಟ್ಟಿಸುವದರಲ್ಲಿ ಸಂದೇಹವಿಲ್ಲ. ಅಲ್ಲದೇ, ಇನ್ನೊಂದು ಜನಾಂಗದಲ್ಲಿ ಅಹಂಕಾರವನ್ನು ತುಂಬಬಲ್ಲುದು. ಇಂತಹ ಅವಿವೇಕಗಳಿಂದ ನಾವು ದುರ್ಬಲವಾಗುತ್ತೇವೆ. ನಾಡು ಅಶಾಂತಿ, ಭೀತಿ ಚೀತ್ಕಾರಗಳಿಂದ ತುಂಬಿಹೋಗುತ್ತದೆ.  ಎಲ್ಲ ಮತಗಳನ್ನು ಗೌರವಿಸುವ ನಮ್ಮ ಸಹಿಷ್ಣುತೆ ಕಡಿಮೆಯಾಗುತ್ತದೆ. ಪತ್ರಿಕೆಗಳ ಈ  ದುಸ್ಸಾಹಸ ಕ್ಷಮಿಸಲಾಗದು. ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿದ ಪತ್ರಿಕೆಗಳಿಗೊಂದು ಧಿಕ್ಕಾರವಿರಲಿ.
ನಮ್ಮ ಜನಗಳಿಗೊಂದು ಒಂದು ಸಣ್ಣ ಕಾರಣವೂ ಸಾಕು. ಸ್ವಲ್ಪವೂ ವಿವೇಚನೆಯಿಲ್ಲದೆ, ಸಾರ್ವಜನಿಕ ಆಸ್ತಿಯನ್ನು ನಾಶ ಮಾಡುತ್ತಾರೆ, ನಾವೆಲ್ಲಾ ಇಂದು ತುಂಬಾ ದುಬಾರಿ ಜೀವನ ನಡೆಸಲು ಇದೂ ಕಾರಣ. ನಮ್ಮ ತೆರಿಗೆಯ ಒಂದು ಪಾಲು ರಾಜಕಾರಣಿಗಳು ನುಂಗಿದರೂ, ಅಲ್ಪ ಅಂಶ ಸಾರ್ವಜನಿಕ ಆಸ್ತಿಗಳಿಗೆ ಖರ್ಚಾಗುತ್ತದೆ. ಈ ತರಹದ ವಿಧ್ವಂಸಕ ಕೃತ್ಯಗಳಿಂದ ನಾವು ಸಾಧಿಸುವದಾದರೂ ಏನು? ಯಾವುದೋ ದೇಶದ ಒಬ್ಬ ಲೇಖಕಿ, ಅವಳ ಒಂದು ವಿವಾದಾತ್ಮಕ ಲೇಖನ, ಅದನ್ನು ಪ್ರಕಟಿಸುವ ಅವಿವೇಕಿ ಪತ್ರಿಕೆ. ಈ ಕಾರಣಕ್ಕೆ ನಾವು, ನಮ್ಮ ಬಸ್ಸುಗಳನ್ನು, ದಾರಿದೀಪಗಳನ್ನು ಬಲಿಕೊದಬೇಕೆ. ಸಾರ್ವಜನಿಕ ಆಸ್ತಿ, ನಮ್ಮ ಆಸ್ತಿ. ಹಾಗಂದ ಮಾತ್ರಕ್ಕೆ ಅವುಗಳನ್ನು ನಾಶ ಮಾಡಲು ನಮಗೆ ಹಕ್ಕಿದೆಯೇ? ನಮ್ಮ ಮಗ ಅಥವಾ ಮಗಳು ಎಂದು ಕೊಲ್ಲಲು ನಮಗೆ ಹಕ್ಕಿದೆಯೇ? ಇದು ನಮ್ಮ  ನೈತಿಕತೆಯನ್ನೇ ಪ್ರಶ್ನಿಸುತ್ತದೆ. ಇಡೀ ವಿಶ್ವಕ್ಕೆ ಸಾಮರಸ್ಯವನ್ನು ಹೇಳಿಕೊಟ್ಟವರು ನಾವು. ಇಡೀ ಜಗತ್ತು, ಕರಿಯರು-ಬಿಳಿಯರು ಎಂದು ಹೊಡೆದಾಟ ನಡೆಸಿರುವಾಗ ನಾವು ಇಡೀ ವಿಶ್ವಕ್ಕೆ ಪಾಠ ಹೇಳುವದನ್ನು ಬಿಟ್ಟು ನಮ್ಮಲ್ಲೇ ಒಡಕು ತೋರಿಸುತ್ತೇವೆ. ನಾಚಿಕೆ ಇರಲಿ ನಮಗೆ. ನಮ್ಮ ಮೌನಕ್ಕೊಂದು ಧಿಕ್ಕಾರ.
Monday, March 1, 2010 0 comments

ಕದನ



ನಗೆಯೇ ನಿನ್ನಾಯುಧವು, ನಯನಗಳೇ ಅದಕಿಂಬು ,
ನನ್ನ ಬತ್ತಳಿಕೆಯಲಿ ಅವಕೆ ಉತ್ತರವಿಲ್ಲ.
ನಿನ್ನ ಬೆವರ ಘಮವು ನಶೆಯ ತಂದಿರಲು ,
ಶರಣಾದೆ ನಿನ್ನ ಪ್ರೇಮವ್ಯೂಹದಿ.

Saturday, February 27, 2010 0 comments

ಶಾರುಖ್ ಮತ್ತು ನಾವು.


ಶಾರುಖ್ ಮತ್ತು ನಾವು ಎಷ್ಟು ಆತ್ಮೀಯರಾಗಿದ್ದೇವೆಂದರೆ, ಅವನನ್ನು ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ನಾವು ಅವನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತೇವೆ.  ಅವನ ಚಿತ್ರ, ಅವನ ನಟನೆ ಚೆನ್ನಾಗಿದ್ದಲ್ಲಿ ನಮ್ಮದೇ ವಿಜಯವೆಂಬಂತೆ ಸಂಭ್ರಮಿಸುತ್ತೇವೆ. ಚಿತ್ರ ತೋಪಾದಾಗ ಏನೋ ಕಳೆದುಕೊಂಡಂತೆ ಒಂದು ಕ್ಷಣ ಉದಾಸರಾಗುತ್ತೇವೆ.ಅವನ ಹಾಡುಗಳನ್ನು ನಮ್ಮ ಮೊಬೈಲಿನಲ್ಲಿ Ringtone ಮಾಡುತ್ತೇವೆ. ಹೌದು, ಅವನೊಬ್ಬ ಅಧ್ಭುತ ನಟ, ಕಲಾವಿದ, ಸಾಹಸಿ ಮತ್ತು ಕನಸುಗಾರ. ಅವನ Dreams Unlimited, Kolkata Knight Riders ನ ಮಾಲಿಕತ್ವ ಮತ್ತು Red chillies ಕಂಪನಿಗಳು ಅವನ ಕನಸುಗಳಿಗೆ ಸಾಕ್ಷಿ. ಅವುಗಳ ಯಶಸ್ಸು ಅವನ ಸಾಹಸ ಮತ್ತು ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ. ಹಲವಾರು ಪ್ರಶಸ್ತಿಗಳು ಅವನ ನಟನಾ ಕೌಶಲ್ಯಕ್ಕೆ ಮೆರುಗು ತಂದಿವೆ. ವೈಯಕ್ತಿಕವಾಗಿ ನಮಗೆ ಶಾರುಖ್ ಬಗ್ಗೆ ತುಂಬಾ ತಿಳಿದಿಲ್ಲವಾದರೂ, ಒಬ್ಬ ಅಸಾಮಾನ್ಯ ನಟನಾಗಿ ಅವನು ನಮ್ಮನ್ನು  ಅವನ ಅಭಿನಯಕ್ಕೆ ತಲೆದೂಗುವಂತೆ ಮಾಡಿದ್ದಾನೆ. 
ಅವನ ಖಾಸಗಿ ವಿಷಯವನ್ನೇ ನಾವು ಪರಿಗಣಿಸುವದಾದರೆ, ಶಾರುಖ್ ಯಾವತ್ತೂ ಒಬ್ಬ ಪರಿಣಿತ ರಾಜಕಾರಣಿಯಂತೆ ಗೋಚರಿಸುತ್ತಾನೆ. ಅವನು ಹಿಂದೆಯೂ  ಹಿಂದೂ ಮತ್ತು ಮುಸ್ಲಿಮರ ಮನಸನ್ನು ಸೆಳೆಯಲು ಪ್ರಯತ್ನಿಸಿದ್ದಾನೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಅವನು ಗೌರಿಯನ್ನು ಮದುವೆಯಾಗಿದ್ದು.. ಅವಳನ್ನು ಮದುವೆಯಾಗಿ ಹಿಂದೂ -ಮುಸ್ಲಿಂ ಭಾವೈಕ್ಯತೆಯನ್ನು ಎಲ್ಲರ ಹೃದಯದಲ್ಲಿ ಅಂಕಿತ ಮಾಡಿದ್ದರೂ, ಗೌರಿ, ಗೌರಿಖಾನ್ ಆದದ್ದರ ಬಗ್ಗೆ ನಾವು ಮರೆತಿದ್ದೇವೆ.ಅವನ ಇತ್ತೀಚಿನ MY NAME IS KHAN ಚಿತ್ರವನ್ನೇ ಪರಿಗಣಿಸಿದಲ್ಲಿ ಅವನ ಈ ಮುಖ ತೋರುವದರಲ್ಲಿ ಸಂಶಯವಿಲ್ಲ. 

ಇಂತಹ ಶಾರುಖ್ ತನ್ನ ಸಾರ್ವಜನಿಕ ಹೇಳಿಕೆಗಳಿಂದ ನಮ್ಮ ಮನಸ್ಸನ್ನು ಘಾಸಿಗೊಳಿಸುವದು ಸರಿಯಲ್ಲ. ಒಂದೊಮ್ಮೆ ಶೋಯಬ್ ಮಲ್ಲಿಕ್, ಈಗ ಪಾಕಿಸ್ತಾನದ ಪರವಾದ ಹೇಳಿಕೆಗಳು ಅವನ ಅಭಿಮಾನಿಗಳಾದ ನಮಗೆ ಗಾಬರಿಗೊಳಿಸಿವೆ. ಕ್ರೀಡೆ, ಸಾಹಿತ್ಯ, ಕಲೆ, ವಿಜ್ಞಾನ,ತಂತ್ರಜ್ಞಾನ,ಇವುಗಳು ಆಯಾ ದೇಶಗಳ ಪ್ರತಿಬಿಂಬ. ಸ್ವದೇಶಾಭಿಮಾನವನ್ನು ಬದಿಗಿಟ್ಟು ಆಡುವ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ಕ್ರೀಡೆ ನಮಗೆ ಬೇಡ. ಅವು ನಮ್ಮ ರಾಷ್ಟ್ರದ ಹಿತಕ್ಕೆ ಮುಳ್ಳುಗಳು. 

ಇಂತಹ ಶಾರುಖ್ಗೆ  ನಮ್ಮ ಪ್ರತಾಪಸಿಂಹ ತುಂಬಾ ಮೊನಚಾಗಿ,ಅರ್ಥಬಧ್ಧ್ದವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ. ಎಷ್ಟೋ ದಿನಗಳ ನಂತರ ಸಿಂಹರ ಒಂದು ಉತ್ತಮ ಲೇಖನ ('ಬೆತ್ತಲೆ ಜಗತ್ತು' , ವಿಜಯ ಕರ್ನಾಟಕ ದಿ.೨೭-೦೨-೨೦೧೦) ಓದಿದ ಅನುಭವ ನನಗಾಯಿತು. ಸಿಂಹರ ಪ್ರಶ್ನೆಗಳು ಯಾವುದೇ ಒಬ್ಬ ಭಾರತೀಯನು ನಮ್ಮ ಶತ್ರುರಾಷ್ಟ್ರಗಳನ್ನು ಬೆಂಬಲಿಸಲಾರದಂತೆ ಎಚ್ಚರಿಸುತ್ತವೆ.ಯಾರೋ ಹೇಳಿದ ನೆನಪು, "ಎಲ್ಲ ಮುಸ್ಲಿಮರೆಲ್ಲ ಉಗ್ರರಲ್ಲ, ಆದರೆ ಎಲ್ಲ್ಲ ಉಗ್ರರು ಮುಸ್ಲಿಮರು, ಇದು ಕಾಕತಾಳೀಯ". ಕೊನೆಯದಾಗಿ, ಶಾರುಖ್ ಇದು ಸರಿಯೇ? 

"The Brother hood of Islam is not the universal brotherhood of a man. It is the brotherhood of muslims for muslims only"---Dr.B.R.Ambedkar (Referred By Mr.PratapSimha in his article).

* ಸಿಂಹರ ಈ ಲೇಖನ Pdf ರೂಪದಲ್ಲಿ ಲಭ್ಯವಿದ್ದು, ಓದಲು ಇಚ್ಚಿಸುವವರು download ಮಾಡಿಕೊಳ್ಳಬಹುದು. 
Download Link:http://gururaj1234.pbworks.com

Friday, February 26, 2010 1 comments

ಜಾಲ

ಮಲಿನ ಕಳೆಯುವ ಮೀನಿನ ಹೆಜ್ಜೆ ಅಳಿಸೋ ನೀರು,
ಕಾಯುವದು ಜೀವವ, ಜಟಿಲಗೊಳಿಸಿ ಭಕ್ಷ್ಯ.
ಮುಸುಕಾಗಿ ಮಸುಕು ಮಾಡುವ ನೀರಿನ ಪರಿಯ
ಅರಿವ ಜಾಣರು ಉಂಟೆ?
ಉಸಿರ ಕೊಡುವ ಮನಸಿನ ಭಾವನೆ ಬೆಳಗಿಸೋ ದೇಹ,
ಚಂಚಲಗೊಳಿಸಿ ಮನವ, ತಪ್ಪಿಸುವದು ದಿಕ್ಕ.
ಮುಸುಕಾಗಿ ಮಸುಕು ಮಾಡುವ ದೇಹದ ಪರಿಯ
ಅರಿವ ಜಾಣರು ಉಂಟೆ?
ಉಬ್ಬು ತಗ್ಗುಗಳ ಹಿಂದೆ ಮೀನಿನ ಹೆಜ್ಜೆ.
0 comments

ಮೊದಲ ಓದುಗ

ಯಾರದೋ ಕಾಮಕ್ಕೆ ಜಾರಿಣಿಯ ದೇಹವು ಬೇಕು
ಪಾಪವೋ? ಪುಣ್ಯವೋ?
ಹೆರುವ ಹಾಗಿಲ್ಲ. ಹೊರುವ ಹಾಗಿಲ್ಲ.
ಮತ್ತ್ಯಾರದೋ ಲೇಖನಿಯ ಚಪಲಕ್ಕೆ
ಮೊದಲ ಓದುಗ ನಾನು
ಧರ್ಮವೋ? ಕರ್ಮವೋ?
ಹೆರುವ ಹಾಗಿಲ್ಲ, ಹೊರುವ ಹಾಗಿಲ್ಲ.
Tuesday, February 23, 2010 1 comments

ಮಾಧ್ಯಮ ಮತ್ತು ನಾವು.

ಮಾಧ್ಯಮಗಳು ಒಂದು ಸಮಾಜದ ಅವಿಭಾಜ್ಯ ಅಂಗ,ಪ್ರತಿಬಿಂಬ ಕೂಡ ಹೌದು. ಮಾಧ್ಯಮದ ಅಗತ್ಯತೆ, ಅನಿವಾರ್ಯತೆಗಳನ್ನ ನಾವು ವಿಶ್ಲೇಷಣೆಗೆ ಒಳಪಡಿಸಬೇಕಾದ ಪರಿಸ್ಥಿತಿ ಒದಗಿಬಂದಿದ್ದು ನಾಚಿಕೆಗೇಡಿನ ಸಂಗತಿ.
ನಾವು ಶಾಲೆಯಲ್ಲಿದ್ದಾಗ ಪ್ರಾರ್ಥನೆಯ ನಂತರ ಅಂದಿನ ದಿನಪತ್ರಿಕೆ ಓದುವ ಪರಿಪಾಠವಿತ್ತು. ಇಂದಿನ ದಿನಗಳಲ್ಲಿ ಅದನ್ನು ಕೆಲವು(?) ಶಾಲೆಗಳಲ್ಲಿ ನಾವು ಕಾಣಬಹುದು. ಆದರೆ ಇದರ ಔಚಿತ್ಯದ ಬಗ್ಗೆ ಪ್ರಶ್ನಿಸಬೇಕಾಗಿ ಬಂದಿದೆ. ನಮ್ಮ ಮನೆಗಳಲ್ಲಿ ನಮ್ಮ ಹಿರಿಯರು ದಿನಪತ್ರಿಕೆ ಓದಲು ಪುಸಲಾಯಿಸುತ್ತಿದ್ದರು. ಪತ್ರಿಕೆಗಳು ಅಂದರೆ ಅವರಿಗೆ ಶ್ರೇಷ್ಠವಾಗಿ ಕಾಣುತ್ತಿದ್ದವು. ಆದರೆ ನಾವು ನಮ್ಮ ಮುಂದಿನ ಪೀಳಿಗೆಗೆ ಹೇಳಲು ನಮಗೆ ಸಾಧ್ಯವಿಲ್ಲ.
ಯಾವುದೇ ಒಂದು ಟೀವಿ (ಠೀವಿ) ಚಾನೆಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ನಾವು ಒಟ್ಟಿಗೆ ಕುಳಿತು ವೀಕ್ಷಿಸುವಹಾಗಿಲ್ಲ.ಒಂದು ದಿನಪತ್ರಿಕೆಯನ್ನು ಮನೆ ಮಂದಿಯೆಲ್ಲ ಓದುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ನಮ್ಮ ಕಿರಿಯರಿಗೆ ಪತ್ರಿಕೆ ಓದು ಅಂತ ಹೇಳುವ ಹಾಗಿಲ್ಲ. ಯಾವುದೇ ಪತ್ರಿಕೆಯನ್ನು ತಿರುವಿ ನೋಡಿದರೂ ಅಲ್ಲಿ ನಮಗೆ ಬೇಕಾದ ಸರಕಿಗಿಂತ ಬೇಡವಾದ, ಅನವಶ್ಯಕವಾದ ಸುದ್ದಿಯನ್ನು ನಾವು ಕಾಣಬಹುದು. ಗಾಸಿಪ್ಪುಗಳು ನಮ್ಮ ಮಾಧ್ಯಮಗಳ ಅವಿಭಾಜ್ಯ ಅಂಗವಾಗಿದ್ದು ಬೇಸರದ ಸಂಗತಿ. ಕಂಗನಾ ಮತ್ತು ದಿನೋ ರವರ ಮುತ್ತಿನ ಪ್ರಸಂಗ, ತಿವಾರಿಯ ಪ್ರಣಯ ಚೇಷ್ಟೆಗಳಂತಹ ಸುದ್ದಿಗಳನ್ನೂ ರೋಚಕವಾಗಿ ಓದುಗರಿಗೆ ಉಣಬದಿಸುವದು ಸರಿಯೇ? ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳನ್ನು, ಅವರ ಕೆಸರಾಟವನ್ನುರೋಚಕ ಸಂಗತಿಯನ್ನಾಗಿಸುವದು ಯಾವ ಕ್ರಮ?
ಇಷ್ಟೆಲ್ಲಾ ನಮ್ಮ ಕಣ್ಮುಂದೆ ನಡೆಯುತ್ತಿದ್ದರೂ ನಾವ್ಯಾಕೆ ನಮ್ಮ ನರಗಳು ಸತ್ತಂತೆ , ಕಣ್ಮುಚ್ಚಿ ಬದುಕುತ್ತಿದ್ದೇವೆ? ನಮ್ಮಿಂದ ಇದನ್ನು ಸರಿಪಡಿಸಲು ಸಾಧ್ಯವಿಲ್ಲವೇ? ದಾರಿ ಯಾವುದಯ್ಯ?
ದಾರಿ ಹುಡುಕುತ್ತ ಹೊರಟರೆ ನುಉರಾರು ದಾರಿಗಳು ಕಂಡಾವು. ಕೆಲವು ಪ್ರಯತ್ನಗಳನ್ನು ನಾವು ಮಾಡಬಹುದು.ನನ್ನವಿಚಾರಧಾರೆ ತಪ್ಪಾಗಿರಲೂಬಹುದು.
೧) ಪತ್ರಿಕೆಗಳನ್ನು ಓದಿದ ಮೇಲೆ ಅವುಗಳಲ್ಲಿರುವ ಅನವಶ್ಯಕ ಸುದ್ದಿಗಳನ್ನು ಗುರುತಿಸಬೇಕು. ನಂತರ ಅವುಗಳ ಬಗ್ಗೆ ನಿಮ್ಮ ವಿಚಾರವನ್ನು ಪತ್ರಮುಖೇನ ಸಂಪಾದಕರಿಗೆ ಬರೆಯಬೇಕು.
೨) ಟಿವಿಗಳಲ್ಲಿ ಬರುವ ಅಸಮಂಜಸ ಕಾರ್ಯಕ್ರಮಗಳನ್ನು ವೀಕ್ಷಿಸುವದನ್ನು ನಿಲ್ಲಿಸಿ ಆ ಚಾನೆಲ್ಲಿನ T.R.P ಕಡಿಮೆ ಮಾಡಬೇಕು.
೩) ಮಾಧ್ಯಮಗಳ ಈ ತಪ್ಪನ್ನು ಸಾರ್ವಜನಿಕವಾಗಿ ಖಂಡಿಸಬೇಕು.
ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.
....(ಮುಂದುವರೆಯುತ್ತದೆ)
 
;