ಘೋರ ಬರಗಾಲ.ಊರೆಲ್ಲಾ ಪಾಳು ಗುಡಿಯಂತಾಗಿದೆ .ಹಸಿವು ತನ್ನ ಕೆನ್ನಾಲಿಗೆ ಚಾಚಿತ್ತು. ಮನುಷ್ಯ ಮೃಗವಾಗಿದ್ದ. ಕೈಗೆ ಸಿಕ್ಕ ಪ್ರಾಣಿಯನ್ನು ಹಸಿಹಸಿಯಾಗಿ ತಿನ್ನುವಷ್ಟರ ಮಟ್ಟಿಗೆ ಹೊಟ್ಟೆ, ಬುದ್ಧಿಯನ್ನು ಆಕ್ರಮಿಸಿತ್ತು. ಹೀಗಿರುವಂತಲ್ಲೊಬ್ಬ ಹೊಂಚು ಹಾಕಿ ಕುಳಿತಿದ್ದ. ಕತ್ತಲೆಯಾಗುತ್ತಿದೆ. ಯಾರದೂ ಸುಳಿವಿಲ್ಲ. ಅಸಹನೆ ಹಸಿವಿನಂತೆ ಹೆಚ್ಚುತ್ತಿದೆ. ಅಷ್ಟರಲ್ಲೇ ಯಾರೋ ಬರುತ್ತಿರುವ ಸದ್ದು. ಹಾವು ಕಪ್ಪೆಗಾಗಿ ತೋರಿಸುವ ನಿಶ್ಯಬ್ದ. ಆಕೃತಿ ಹತ್ತಿರವಾಗುತ್ತಿದೆ. ಮುನಿದ ಚಂದ್ರನ ಬೆಳಕು ಆಕೃತಿಯ ಚಹರೆಯನು ತೋರಿಸಲು ಅದು ಅವರಪ್ಪನದಾಗಿತ್ತು.
-3-
" ನೆನ್ನೆಯ ರಾತ್ರಿ! ಭಯಂಕರ! ಕನಸೇ ಅದು? ನನ್ನ ಕೆಪ್ಯಾಸಿಟಿಗೆ ಚಾಲೆಂಜ್. ಬರಿ ನಾಲ್ಕು ಪೆಗ್ಗಿಗೆ ನಾನು ಔಟಾಗುವದೇ ? ?ನನ್ನ ಕಾರು ಕೃಷ್ಣನ ಸುದರ್ಶನ ಚಕ್ರದಂತೆ, ನನ್ನ ಮಾತು ಮೀರುವದಿಲ್ಲ . ನಾನು ಅಪಘಾತದಲ್ಲಿ ಸಾಯುವನಲ್ಲ. ಅದೂ ಕನಸಿನಲ್ಲಿ ನಡೆದ ಥರ. ಸಾಧ್ಯವಿಲ್ಲ. ಕನಸಿನಲ್ಲಿ ನಡೆದಿದ್ದಾದರೂ ಏನು ?ಫೋನ್ ನಲ್ಲಿ ಮಾತಾಡುವಾಗ ಎದುರಿಗೆ ಬಂದ ಲಾರಿಯ ಹೆಡ್ ಲೈಟ್ ನ ಬೆಳಕು ನನ್ನ ಸ್ಟಿಯರಿಂಗ್ ನ ಹಿಡಿತ ತಪ್ಪಿಸುವದೇ? ಸಾಧವಿಲ್ಲ". ಅಷ್ಟರಲ್ಲೇ ನೆನಪಾಗುತ್ತೆ ಫೋನ್ ಬಾರಲ್ಲೇ ಮರೆತಿರುವೆನೆಂದು. ಗಕ್ಕನೆ ಬ್ರೇಕ್ ತುಳಿದ.
ಮರುದಿನ ದಿನಪತ್ರಿಕೆಯಲ್ಲೊಂದು ಸುದ್ದಿ. " ಬ್ರೇಕ್ ಫೇಲ್ : ಸಾಫ್ಟವೇರ್ ಉದ್ಯೋಗಿ ಸಾವು"
-2-
ಸಮಯ ಹನ್ನೊಂದು ಗಂಟೆ. ಅಲ್ಲಲ್ಲಿ ತೂರಾಡುವ ಜನ ಮತ್ತು ತೂರಾಡದಿದ್ದರೂ ಕುಡುಕ-ಕೆಡುಕ ಜನಗಳ ಗುಂಪು. ಔಪಚಾರಿಕತೆಯ ಪೋಲಿಸ್ ಬೂಟುಗಳ ಸದ್ದು. ಕುಡುಕರ ವಾದ ವಾಗ್ವಾದಗಳು ಅಸೆಂಬ್ಲಿ ಹಾಲ್ ನಂತೆಯೇ ತಾರಕಕ್ಕೇರಿತ್ತು. ಅದರಲ್ಲೊಬ್ಬ ಜಾಣ,ಸಭ್ಯ(?) ಕುಡುಕನೊಬ್ಬ ಹೀಗೆ ಹೇಳಿಕೊಳ್ಳುತ್ತಿದ್ದ. "ಎಡಗೈಲಿ ಗ್ಲಾಸ್ ಎತ್ತಿದರೆ ಬಲಗೈಗೆ ಗೊತ್ತಾಗಬಾರದು.ಕುಡಿದರೂ ಕುಡಿಯದಂತಿರಬೇಕು ಕುಡಿದಾಗ ಸಹನೆ ಇರಬೇಕು. ನಾಲಿಗೆ ಉದ್ದ ಆಗಬಾರದು. ಇವರಿಗೆಲ್ಲ ಬುಧ್ಧಿ ಇಲ್ಲ. ಕುಡಿದು, ಒದರಾಡಿ ನಿಶೆ ಇಳಿಸಿಕೊಳ್ಳುತ್ವೆ. ಬುಧ್ಧಿಗೇಡಿಗಳು". ಅಷ್ಟರಲ್ಲೇ ಫುಟಪಾತ್ ಮೇಲೆ ಮಲಗಿದವನಿಗೆ ಕಾಲು ತಗಲಿತ್ತು. ಅವನಂದ , " ಬೋ.. ಮಗನೆ, ಕಣ್ಣು ಕಾಣಲ್ವಾ? ". ಇವನಂಗಿಯ ತೋಳುಗಳು ಮೇಲೇರಿದ್ದವು.
-1-
ಕಂಪ್ಯೂಟರ್ ಅವನಿಗೆ ಸವಾಲು ಹಾಕುತ್ತಿತ್ತು. ಇವನು ಉತ್ತರಿಸಿ ಬೀಗುತ್ತಿದ್ದ.ಇವನು ಅದಕ್ಕೆ ಪಾಟೀಸವಾಲು ಹಾಕುತ್ತಿದ್ದ . ಅದೂ ಉತ್ತರಿಸುತ್ತಿತ್ತು. ಹೀಗೆ ಬರೀ ಉತ್ತರ - ಪ್ರಶ್ನೆಗಳಲ್ಲಿ ದಿನ-ರಾತ್ರಿ ಕಳೆಯುತ್ತಿದ್ದವು. ಬ್ಯಾಂಕ್ ಬ್ಯಾಲೆನ್ಸ್ ಏರುತ್ತಿತ್ತು. ಕಾರುಗಳು ಮನೆಯ ತುಂಬಿದವು. ಮಕ್ಕಳೂ ಕಂಪ್ಯೂಟರ್ ನ ಪ್ರಶ್ನೆಗಳಿಗೆ ಉತ್ತರಿಸಲಾರಂಭಿಸಿದವು ಕೊನೆಗೊಂದು ದಿನ ಅವನು ಸತ್ತ. ಅವನ ಕಂಪ್ಯೂಟರ್ ಬೇರೆಯವರ ಜೊತೆ ಪ್ರಶ್ನೋತ್ತರದಲ್ಲಿ ತೊಡಗಿತು, ಎಂದಿನಂತೆಯೇ.