Saturday, March 8, 2014 0 comments

ನಾನೂ ಒಬ್ಬ ಓದುಗ. ಇನ್ನೂ ಬದುಕಿದ್ದೇನೆ!

ಒಬ್ಬ ಓದುಗನಾಗಿ ನನಗೇನು ಬೇಕು ಎಂದು ನನಗಿನ್ನೂ ಯಾವುದೇ ಒಂದು ನಿರ್ಧಾರವಂತೂ ಇಲ್ಲ. ಯಾವುದೇ ಒಂದು ಪುಸ್ತಕವನ್ನು ಓದುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವದು ನನ್ನ ಅಭ್ಯಾಸ. ಇದು ಇಂದಿನ ಎಲ್ಲಾ ಪ್ರಜ್ಞೆಯುಳ್ಳ ಓದುಗ ಪುಸ್ತಕ ಆಯ್ದುಕೊಳ್ಳುವಾಗ ಅನುಸರಿಸುವ ಪ್ರಕ್ರಿಯೆ ಎಂದು ಭಾವಿಸುತ್ತೇನೆ. ಅಲ್ಲೊಂದು ಇಲ್ಲೊಂದು ವೇದಿಕೆಗಳು ಓದುಗರಿಗೆ ಇಂತಹ ಸೌಲಭ್ಯವನ್ನು ಒದಗಿಸಿಕೊಡುತ್ತವೆ. ಚುಕ್ಕುಬುಕ್ಕು ವೆಬ್ ಸೈಟ್ ಕೂಡ ಒಂದು. ಇದು ಯಾವುದೇ ಪೂರ್ವಭಾವಿ ಪೀಡಿತ ಅಭಿಪ್ರಾಯಕ್ಕೊಳಗಾಗದೇ ಕಾರ್ಯನಿರ್ವಹಿಸುತ್ತದೆ ಎಂದು ನಂಬಿದ್ದೇನೆ.
ಇಂದಿನ ವೈಜ್ಞಾನಿಕ, ತಾಂತ್ರಿಕ ಮತ್ತು ಬೌಧ್ಧಿಕ ಯುಗದಲ್ಲಿ ಏನು ಬರೆಯಬೇಕೆಂಬುದೇ ಇಂದಿನ ಅನೇಕ ಬರಹಗಾರರಿಗೆ ಮನವರಿಕೆಯಾಗಿಲ್ಲ ಅಂದುಕೊಳ್ಳುತ್ತೇನೆ. ಇಂದಿನ ಬರಹಗಾರರು ಒಂದು ಸಾಹಿತ್ಯಿಕ ಧ್ರುವೀಕರಣಕ್ಕೆ ಒಳಗಾಗಿದ್ದಾರೆಂದು ನಾನು ನಂಬಿದ್ದೇನೆ. ನನಗೆ 'ಸಂಸ್ಕಾರ'ದ ನಾರಣಪ್ಪನಾಗಲೀ, 'ಚಿಕ್ಕಪ್ಪ'ನ ಚಿಕ್ಕಪ್ಪನಾಗಲೀ, 'ಧರ್ಮಶ್ರೀ' ಯ ಸತ್ಯನಾರಾಯಣನಾಗಲೀ ಬೇಕಾಗಿಲ್ಲ. 'ಸಾವು' ಕಥೆಯ ಸಂಗವ್ವ , 'ಕೋಟಲೆಯೆಂಬರು ಕೋಟು ನೀಡಿದ್ದನ್ನು' ವಿನ ಸುಂದರರಾಯ, 'ಚೈತ್ರ ವೈಶಾಖ ವಸಂತ' ಪುರಂದರ, 'ಘಾಚರ್ ಘೋಚರ್ 'ದ ನಾಯಕ, 'ವೃತ್ತ' ದ ಶಂಕ್ರಪ್ಪಗೌಡ, ಒಬ್ಬ ಸಿಂಗಾರೆವ್ವ, ಹೀಗೆ ಇಂತಹವರು ಬೇಕೆನ್ನಿಸುತ್ತದೆ. ಇದರರ್ಥ ಇತಿಹಾಸ(!)ವನ್ನು ಮರೆತು ವರ್ತಮಾನದ ಬಗ್ಗೆ ಮಾತ್ರ ಓದಬೇಕು ಎಂಬ ಭಾವನೆ ನನ್ನದಲ್ಲ. ಕ್ಲಾಸಿಕ್ಸ್ ಅಂಥ ಕರೆಸಿಕೊಳ್ಳುವ ಸಾಹಿತ್ಯಿಕ ಕೃತಿಗಳಿಂದ ಓದುಗ ಪಕ್ವನಾಗುತ್ತಾನೆ ಎಂಬ ಅರಿವು ನನ್ನಲ್ಲಿದೆ. ಆದರೆ ನಾನು ಅದಕ್ಕೆ ತಯಾರಿದ್ದೇನಾ ಅನ್ನುವುದೇ ಪ್ರಶ್ನೆ. ಒಬ್ಬ ಚೇತನ್ ಭಗತ್ ನ ಕೃತಿಗಳನ್ನು ಪೇಲವ, ಮತ್ತು ಸಾಧಾರಣ ಎಂದು ಮೂದಲಿಸುವ ಬದಲು, ಅವನು ಯುವಸಮೂಹವನ್ನು ಓದಲಿಕ್ಕೆ ಪ್ರೇರೇಪಿಸುತ್ತಿದ್ದಾನೆ ಎಂದೇಕೆ ಭಾವಿಸುತ್ತಿಲ್ಲ. ತುಕ್ಕೋಜಿಯು ಒಂದು ಕಥಾಪಾತ್ರವಾಗಿರದೆ ನಮ್ಮ ಜೀವನದ ಒಂದು ಭಾಗವಾಗಿದ್ದು ಹೇಗೆ? ಅಂದರೆ ನಮ್ಮಲ್ಲಿ ಗಟ್ಟಿ ಸಾಹಿತ್ಯ ಕಡಿಮೆಯಾಗುತ್ತಿದೆಯಾ? ಸಾಹಿತಿಗಳ ಮಕ್ಕಳೆಂದು, ಮತ್ತು ಸಾಹಿತ್ಯ ವಲಯದ ಲೇಖಕರಿಗೆ ಮಾತ್ರ ಅತೀ ಪ್ರಚಾರ ಸಿಗುತ್ತದೆಯಾ? ಬರಹಗಳು ಫೇಸ್ ಬುಕ್ ಮತ್ತು ಬ್ಲಾಗುಗಳಿಗೆ ಸೀಮಿತವಾಗಿದೆಯಾ? ಹೀಗೆ ಪ್ರಶ್ನೆಗಳನ್ನು ಹುಡುಕುತ್ತಾ ಹೋದರೆ ಸಮಂಜಸ ಉತ್ತರವೂ ದೊರೆಯುವದಿಲ್ಲ. ಚಿತ್ರವಿಮರ್ಶೆಗಳೊಂದಿಗೆ ಗಟ್ಟಿ ಕಥೆಗಳನ್ನು ಬರೆದ ವಿಕಾಸ್ ನೇಗಿಲೋಣಿ ಇದ್ದಾರೆ. ವ್ಯಾಕರಣದ ಜ್ಞಾನದ ಹಂಚುವದರ ಜೊತೆಗೆ ಅಮೇರಿಕಾವನ್ನು ಪರಿಚಯಿಸುವ ಶ್ರೀವತ್ಸ ಜೋಷಿಯವ್ರಿದ್ದಾರೆ. ಹೀಗೆ.
ಆದರೂ, ಬ್ಲಾಗುಗಳಲ್ಲಿ, ವೆಬ್ ಸೈಟುಗಳಲ್ಲಿ ಪ್ರಕಟಿತ ಬರಹಗಳಿಗೆ ಸ್ಪಂದಿಸಲಾರದಷ್ಟೂ ವ್ಯವಧಾನ, ಸಹನೆ ಇಲ್ಲದ ಬರಹಗಾರರಿದ್ದಾರೆ. 'ಅ' ಮತ್ತು 'ಹ' ಕಾರಗಳ ಅರಿವಿಲ್ಲದ ಲೇಖಕ ಮತ್ತು ಸಂಭಾಷಣಾಕಾರರಿದ್ದಾರೆ. ತಮ್ಮ ಲೇಖನದ ಪ್ರಸ್ತುತೆಯನ್ನು ಪ್ರಶ್ನಿಸಿದ ಓದುಗರನ್ನು ಅವಮಾನಿಸುವ ದಾರ್ಷ್ಟ್ಯ ಹೊಂದಿದ ಮತ್ತು ತಮಾಷೆಯ ಜೊತೆಗೆ ಅಸಂಭದ್ದ ಲೇಖನಗಳನ್ನು ಬರೆಯುವ ಫೇಸ್ ಬುಕ್ ಲೇಖಕರಿದ್ದಾರೆ. ತಾವು ಬರೆದಿದ್ದರಲ್ಲಿ ಯಾವುದೇ ನೈತಿಕತೆ ಹುಡುಕಬಾರದೆಂಬ ಅವ್ಯಕ್ತ ತತ್ವ ಈ ತರಹದ ಲೇಖಕರದ್ದು. ಹಾಗೆಂದರೆ ಲೇಖಕರಿಗೆ ಸಾಮಾಜಿಕ, ನೈತಿಕ ಹೊಣೆಯೇ ಇಲ್ಲವೇ? ಹಾಗೆಂದ ಮಾತ್ರಕ್ಕೆ ಬರಹಗಾರ ಸಮಾಜದಿಂದ ದೂರವೇ? ಇದೆಲ್ಲ ಭ್ರಮೆಯೇ? ಗೊತ್ತಿಲ್ಲ.
ಮನಸ್ಸಿನ ಖುಷಿಗಾಗಿ ಓದುವುದು ಓದುಗನ ಮೊದಲ ಹಂತವೆಂದು ಭಾವಿಸಿದ್ದೇನೆ. ಓದಿನೊಂದಿಗೇ ಓದುಗನನ್ನು ಬೆಳೆಸುವ ಇಂದಿನ ಸಾಹಿತ್ಯದ ಅತಿದೊಡ್ಡ ಕೊರತೆ ಎಂದು ಅನ್ನಿಸುತ್ತದೆ. ಒಬ್ಬ ನಗರವಾಸಿ ನೌಕರ, ಊರಿಂದ ಬಂದ ,ತನ್ನ ತಂದೆ ತಾಯಿಗಳನ್ನು ಮನೆಗೆ ಕರೆತರಬೇಕಾದರೆ, ಅದಕ್ಕೆ ತಗಲುವ ಸಮಯದ ಕುರಿತು ಯೋಚಿಸುತ್ತಾನೆ. ಮದುವೆ ನಿಶ್ಚಯವಾದ ಹುಡುಗನಿಗೆ, ತನ್ನ ಭಾವೀ ಪತ್ನಿಯ ಎದು ತನ್ನ ಕಾಲೇಜು ಗೆಳತಿಯನ್ನು ಮಾತನಾಡಿಸುವಾಗ ಸಂಕೋಚನಾಗುತ್ತಾನೆ. ಒಬ್ಬ ಓದುಗ ತನ್ನ ಮೆಚ್ಚಿನ ಬರಹಗಾರನ ಎದುರು ಮೌನನಾಗುತ್ತಾನೆ. ಏರುತ್ತಿರುವ ದರಗಳ ನಡುವೆ ಸಂಸಾರ ನಡೆಸಲು ಮಧ್ಯಮ ವರ್ಗದ ಯುವತಿ ತಡಾಬಡಿಸುತ್ತಿರುವಾಗಲೇ ಇಷ್ಟವಾದ ಲಿಪ್ ಸ್ಟಿಕ್ ಗೆ ಆಸೆ ಪಡುತ್ತಾಳೆ, ಹೀಗೆ,  ವಿವಿಧ ಸ್ತರದ ಮನುಷ್ಯನ ವಿವಿಧ ದ್ವಂದ್ವಗಳನ್ನು ಅಣಕಿಸುವ , ಪರಿಸ್ಥಿತಿಯು ನಿಯಂತ್ರಿಸುತ್ತಿರುವ ಅವನ ಅಶಕ್ತತೆಯನ್ನು ಛೇಡಿಸುವ, ಸೋಗಲಾಡಿತನದ ಬದುಕನ್ನು ಬಹಿರಂಗಗೊಳಿಸುವ, ಲಘು ಸಾಹಿತ್ಯದ ಜೊತೆಗೆ ಗಂಭೀರ ಸಾಹಿತ್ಯ ಸೃಷ್ಟಿಗೆ ಪ್ರಯತ್ನಿಸುವ ಬರಹಗಾರರು ಬೇಕಿದ್ದಾರೆ ಎಂಬುದೇ ಪ್ರಸ್ತುತ ಎಂದೆನ್ನಿಸುತ್ತದೆ. ನಾನು ಒಬ್ಬ ಓದುಗನಾಗಿ ಸಾಹಿತ್ಯ ವಲಯದಿಂದ ಇಷ್ಟನ್ನು ಅಪೇಕ್ಷಿಸುವದರಲ್ಲಿ ತಪ್ಪಿಲ್ಲ ಎಂದು ಭಾವಿಸಿದ್ದೇನೆ.
Monday, July 22, 2013 0 comments

Happy Birthday ವೇದವ್ಯಾಸ.


ಭಾರತದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಮಹಾಭಾರತಕ್ಕೆ ಇರುವ ಸ್ಥಾನ ಮಹತ್ವವಾದದ್ದು. ಇದೊಂದು ಬಹುದೊಡ್ಡ ಗ್ರಂಥ. ಎಷ್ಟು ದೊಡ್ಡದೆಂದರೆ, ಇದು ಸುಮಾರು ಒಂದು ಲಕ್ಷ ಶ್ಲೋಕಗಳನ್ನು ಒಳಗೊಂಡಿದೆ. ವಿಶ್ವದ ಅತಿ ದೊಡ್ಡ ಇತಿಹಾಸ, ಸಂಸ್ಕೃತಿ, ಮತ್ತು ಪರ್ವತಗಳು ಮತ್ತು ಗ್ರಂಥವು ನಮ್ಮದು ಎಂದು ಹೇಳಿಕೊಳ್ಳಲು ಗರ್ವವೆನಿಸುತ್ತದೆ. ನಾಗರೀಕತೆಗಳ ಇತಿಹಾಸವನ್ನು ಅವಲೋಕಿಸಿದಲ್ಲಿ, ನಮ್ಮದು ಅತೀ ಪುರಾತನವೂ ಹೌದು. ಎಷ್ಟೋ ನಾಗರಿಕತೆಗಳು ನಮ್ಮ ನಾಗರಿಕತೆಯ ಮುಂದೆಯೇ ಹುಟ್ಟಿ, ಕಾಲಗರ್ಭವನ್ನು ಸೇರಿದ್ದನ್ನು ಓದಿದ್ದೇವೆ,ಕೇಳಿದ್ದೇವೆ. ನಮ್ಮ ನಾಗರಿಕತೆಯ ಸಂಸ್ಕೃತಿ ಮತ್ತು ಇತಿಹಾಸವನ್ನು ಎತ್ತಿ ಹಿಡಿಯುವಲ್ಲಿ ಮಹಾಭಾರತದದ್ದು ಸಿಂಹಪಾಲು.
ಮಹಾಭಾರತವನ್ನು ಹಲವಾರು ಪಂಡಿತರು, ಕವಿಗಳು, ವಿದ್ವಾಂಸರು, ನಾಟಕಕಾರರು,ಇತಿಹಾಸತಜ್ನರು, ಹಲವಾರು ಭಾಷೆಗಳಲ್ಲಿ ಬರೆದಿದ್ದಾರೆ. ಅವಕ್ಕೆಲ್ಲ ವ್ಯಾಸ ಭಾರತವೇ ಆಕರ. ಅಂಥ ಬೃಹತ್ತಾದ, ಅರ್ಥವತ್ತಾದ , ಮೌಲಿಕ, ಸಾಹಿತ್ಯಿಕ, ಮತ್ತು ಸಾರ್ವಕಾಲಿಕ ಗ್ರಂಥವನ್ನು ಬರೆದ ವೇದವ್ಯಾಸನಿಗೆ ನಮೋನಮಃ.. ಈತ ವಸಿಷ್ಠನ ಮರಿಮಗ, ಶಕ್ತಿ ಮಹರ್ಷಿಯ ಮೊಮ್ಮಗ, ಪರಾಶರ ಮುನಿಯ ಮಗನಾದದ್ದರಿಂದಲೇ ಇಂಥದ್ದೊಂದು ಬೃಹತ್ ಗ್ರಂಥವನ್ನು ಬರೆಯಲು ಈತನಿಗೆ ಸಾಧ್ಯವಾಯಿತೇನೋ! ಪರಾಶರ ಮುನಿಗಳಿಂದ, ಮತ್ಸ್ಯಗಂಧಿ ಎಂಬ ಬೆಸ್ತರವಳ ಮಗನಾಗಿ ಹುಟ್ಟಿ, ತಾಯಿಯ ಪ್ರೀತಿ, ವಾತ್ಸಲ್ಯಗಳನ್ನೇ ಅನುಭವಿಸದೆ, ಸಕಲವಿದ್ಯಾಪಾರಂಗತನಾಗಿ, ಮಹಾಭಾರತದ ಕಥೆಗಾರನೂ, ಕಾರಣನೂ, ಪಾತ್ರಧಾರಿಯಾಗಿಯೂ ಆಗಿ ಮಹಾಭಾರತದುದ್ದಕ್ಕೂ ಮಿಂಚುತ್ತಾನೆ.
ಯಮುನೆಯ ನಡುಗಡ್ಡೆಯಲ್ಲಿ ಜನಿಸಿದ್ದರಿಂದ 'ದ್ವೈಪಾಯನ'ನೆಂದೂ, ಬಣ್ಣದಲ್ಲಿ ಕಪ್ಪಗಿದ್ದುದರಿಂದ 'ಕೃಷ್ಣಮುನಿ'ಯೆಂದೂ, ಬದರಿಕಾಶ್ರಮದಲ್ಲಿ ತಾಪಸಿಯಾಗಿ 'ಬಾದರಾಯಣ' ನೆಂದೂ ವೇದಮಂತ್ರಗಳನ್ನು, ಕ್ರಮಬದ್ಧವಾಗಿ ಸಂಘಟಿಸಿ, ನಾಲ್ಕು ಭಾಗಗಳಾಗಿ ವಿಂಗಡಿಸಿ 'ವೇದವ್ಯಾಸ'ನೆಂದೂ ಹೆಸರು ಪಡೆದಿದ್ದ ವ್ಯಾಸ ನಮ್ಮನ್ನೆಲ್ಲಾ ಇಂದಿಗೂ ಆವರಿಸಿಕೊಳ್ಳುವ ಸಾರ್ವಕಾಲಿಕ ಕವಿ,`ಮಹಾಭಾರತದಷ್ಟು ನಮ್ಮ ದೇಶದ ಜನರನ್ನು ಗಾಢವಾಗಿ ಕಾಡಿದ ಕಾವ್ಯ ಇನ್ನೊಂದು ಇಲ್ಲ. ವಿಶ್ವದಲ್ಲೇ ಇಂತಹ ಕೃತಿ ಮತ್ತೊಂದು ಇಲ್ಲ.' ಎಂದು ಕಂಬಾರರು ಹೇಳಿದ್ದು ಅತಿಶಯೋಕ್ತಿ ಏನಲ್ಲ. ಯಾವುದೇ ಸಾಹಿತ್ಯದ ವಿದ್ಯಾರ್ಥಿ ಮಹಾಭಾರತವನ್ನು ಓದದಿದ್ದಲ್ಲಿ, ಅವನು ಸಾಹಿತ್ಯದ ಅರ್ಧಭಾಗವನ್ನು ಮಾತ್ರ ಓದಿದಂತಾಗುತ್ತದೆ ಎಂಬುದು ನನ್ನಂಥವರ ಆಂಬೋಣ. ಯಾಕೆಂದರೆ ಈತ ಬರೆಯದ ವಿಷಯಗಳೇ ಇಲ್ಲವೇನೋ ಎಂದೆನಿಸುತ್ತದೆ. ಹದಿನೆಂಟು ಪುರಾಣಗಳು, ಹದಿನೆಂಟು ಉಪಪುರಾಣಗಳು, ಜ್ಯೋತಿಶ್ಯಾಸ್ತ್ರದ ಗ್ರಂಥಗಳು, ಆಯುರ್ವೇದ ಗ್ರಂಥಗಳು, ನಾಡೀ ಗ್ರಂಥಗಳು, ಧರ್ಮಶಾಸ್ತ್ರ ಗ್ರಂಥಗಳು, ಹಲವಾರು ಪ್ರಾಚೀನ ಗ್ರಂಥಗಳಿಗೆ ಭಾಷ್ಯಗಳು ಮತ್ತು ಎಲ್ಲಕ್ಕೂ ಕಿರೀಟವಿಟ್ಟಂತೆ ಮಹಾಭಾರತ,
ಮಹಾಭಾರತದ ಪ್ರತಿಯೊಂದು ಪಾತ್ರವೂ, ಒಂದು ವಿಶೇಷ ಕಾರಣಕ್ಕೆಂದೇ ಚಿತ್ರಿಸಲ್ಪಟ್ಟದ್ದು, ಮತ್ತು ಕೆತ್ತಲ್ಪಟ್ಟದ್ದು. ಯಾವುದೇ ಪಾತ್ರದ ಔಚಿತ್ಯವನ್ನು ವೇದವ್ಯಾಸರು ಹಗುರಗೊಳಿಸಿಲ್ಲ. ಎಲ್ಲವೂ ವ್ಯಾಸ ನಿರ್ಧಾರಿತ, ಸಮಯೋಚಿತ ಮತ್ತು ಸಾಂಧರ್ಬಿಕ. ಭೀಷ್ಮನ ಶಪಥವಲ್ಲದೇ ಅವನ ಋಣಭ್ರಾಂತಿಯನ್ನೂ, ದ್ರೋಣನ ಬ್ರಾಹ್ಮಣ್ಯ ಮತ್ತು ಕ್ಷಾತ್ರ ಮನಸ್ಸು, ಕುಂತಿಯ ದೈವಭಕ್ತಿ ಮತ್ತು ಸಮಚಿತ್ತತೆಯನ್ನೂ, ಧೃತರಾಷ್ಟ್ರನ ಕುರುಡು ಪುತ್ರ ವ್ಯಾಮೋಹ ಮತ್ತು ಮುಂದಾಲೋಚನೆಯನ್ನೂ,ಶಕುನಿಯ ಕುಟಿಲತೆಯನ್ನೂ, ಧರ್ಮರಾಜನ ಧರ್ಮಪ್ರಜ್ನೆಯನ್ನೂ, ಭೀಮನ ಬಲವಲ್ಲದೇ ಪಾಕ ವಿದ್ಯೆಯನ್ನೂ, ಗಾಂಡೀವಿಯ ಬಿಲ್ವಿದ್ಯೆಯೊಂದಿಗೆ ನಾಟ್ಯವನ್ನೂ, ವಿದುರನಂತಹ ರಾಜಕೀಯ ಮುತ್ಸದ್ದಿಯನ್ನೂ, ದ್ರೌಪದಿಯ ಶೀಲ ಸಂಪನ್ನತೆ ಮತ್ತು ಜ್ನಾನವನ್ನೂ, ಕರ್ಣನ ಮದವನ್ನೂ,ಮತ್ತು ಮತ್ತೆಲ್ಲವನ್ನೂ ನಾವು ಮಹಾಭಾರತದಲ್ಲಿ ಕಾಣಬಹುದು.
ಯಾವ ಕಾಲಚಕ್ರದಲ್ಲಿಯೂ, ಯಾವ ಕೋನದಲ್ಲಿಯೂ ನೋಡಿದಲ್ಲಿ, ನಮಗೆ ತತ್ವ, ಆದರ್ಶ ಮತ್ತು ಸಿಧ್ಧಾಂತಗಳನ್ನು ಕಥಾರೂಪದಲ್ಲಿ ಚಿತ್ರಿಸಿದ, ನಮ್ಮ ದೇಶದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮೌಲ್ಯಗಳನ್ನು ಎತ್ತಿಹಿಡಿದ,ನಮ್ಮನ್ನೆಲ್ಲಾ ರಂಜಿಸಿದ, ಆವರಿಸಿದ ಮತ್ತು ಇಂದಿಗೂ ಓದಿಸಿಕೊಳ್ಳುವ ವೇದವ್ಯಾಸನಿಗೆ ಹುಟ್ಟುಹಬ್ಬದ ಶುಭಾಶಯಗಳು.
Tuesday, July 2, 2013 2 comments

ಪಂಪಾಪತಿ

'ಶ್ರೀ ಕೆಂಪಮ್ಮದೇವಿ ಕೃಪೆ' ಅಂತ ಕಾರಿನ ಹಿಂದಿನ ಗಾಜಿಗೆ ಅಂಟಿಕೊಂಡಿದ್ದ ರೇಡಿಯಂ ಸ್ಟಿಕ್ಕರ್ ತೆಗೆಯಲು ಶುರುಮಾಡಿದ ಪಂಪಾಪತಿಗೆ ಅದನ್ನು ಅಂಟಿಸಿದ ಸಂಭ್ರಮದ ಗಳಿಗೆಯು ನೆನಪಾಯಿತು.
ಆಗಿನ್ನೂ ಅವನಿಗೆ ಒಂಬತ್ತು ವರ್ಷ ವಯಸ್ಸು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಅಂದು ಗ್ರಾಮದೇವತೆ ಕೆಂಪಮ್ಮದೇವಿಯ ಜಾತ್ರೆ. ಕೆಂಪಮ್ಮದೇವಿ ತುಂಬಾ ಶಕ್ತಿದೇವತೆಯೂ ಮತ್ತು ಜಾಗೃತ ದೇವತೆಯೆಂಬ ಕಾರಣಕ್ಕೆ ಆ ಹಳ್ಳಿಯ ಹೆಸರು ಕೆಂಪಳ್ಳಿ ಎಂದಾಯಿತೋ ಗೊತ್ತಿಲ್ಲ. ಜಾತ್ರೆ ಮಾತ್ರ ಸುತ್ತಮುತ್ತಲಿನ ಹಳ್ಳಿಗರು ಸಂಭ್ರಮದಿಂದ ಆಚರಿಸುವಂತೆಯೂ, ಮತ್ತು ವಿಜೃಂಭಣೆಯಿಂದಲೂ ನಡೆಯುತ್ತಿತ್ತು. ಹಲವಾರು ವರ್ಷಗಳ ದೆಸೆಯಿಂದಲೂ ತಿಮ್ಮೇಗೌಡರ ಮನೆತನವೇ ಜಾತ್ರೆಯ ಉಸ್ತುವಾರಿಯನ್ನು ವಹಿಸುತ್ತಿದ್ದರು. ಯಾವುದೇ ಕುಂದು ಕೊರತೆಗಳಿಲ್ಲದೇ , ಹಣಕಾಸಿನ ಅಡಚಣೆಯಿಲ್ಲದೇ ತಮ್ಮ ಸ್ವಂತ ಮನೆಯ ಹಬ್ಬವೇನೋ ಎಂಬಂತೆ ನಿಷ್ಕಾಮ ಕರ್ಮಿಯಾಗಿ, ಪ್ರಾಮಾಣಿಕವಾಗಿ ಅವರು ಕೆಲಸ ಮಾಡುತ್ತಿದ್ದರಿಂದ ಜಾತ್ರೆ ತನ್ನ ಸಂಭ್ರಮವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿತ್ತು. ಈ ಜಾತ್ರೆಯ ಯಶಸ್ಸಿನೊಂದಿಗೆ ಅವರ ಪ್ರಾಮಾಣಿಕತೆಯನ್ನು ಹೋಲಿಸಿ ನೋಡಬಹುದಾಗಿತ್ತು. ಈ ಪ್ರಾಮಾಣಿಕತೆ, ಜನರ ಮಿಡಿತಗಳ ಬಗ್ಗೆ ಇರುವ ಅಂತಃಕರಣ ಮತ್ತು ಅವರ ಶಾಂತ ಸ್ವಭಾವತೆ ಅವರನ್ನು ಎರಡು ಬಾರಿ ಗ್ರಾಮ ಪಂಚಾಯತಿಗೆ ಅಧ್ಯಕ್ಷನನ್ನಾಗಿ ಮಾಡಿದ್ದವು. ಯಾವಾಗಲೂ ಬಿಳಿ ಅಂಗಿ ಮತ್ತು ಕಚ್ಚೆ ಹಾಕಿದ ಬಿಳಿ ಪಂಚೆ, ಮಟ್ಟಸವಾಗಿ ಬಾಚಿದ ಕ್ರಾಪಿನ ಅಲ್ಲಲ್ಲಿ ಇಣಿಕಿ ಹಾಕುತ್ತಿರುವ ಬಿಳಿ ಕೂದಲು, ಯಾವಾಗಲೂ ಶೇವ್ ಮಾಡಿದ ಗಲ್ಲ, ಹುರಿಯಾದ ಮೀಸೆ, ಕ್ರಾಪು ಮರೆಮಾಚುತ್ತಿದ್ದ ವಿಭೂತಿ, ಮಾಸದ ಮುಗುಳ್ನಗೆ, ಮತ್ತು ಹೊಳೆಯುವ ಚರ್ಮದ ಚಪ್ಪಲಿ ಅವರ ಶಿಸ್ತನ್ನು ತೋರಿಸುವದರೊಂದಿಗೆ ಅವರ ಬಗೆಗಿನ ಗೌರವವನ್ನು ಹೆಚ್ಚಿಸಿದ್ದವು. ಕೆಂಪಳ್ಳಿಯ ಯಾವೊಬ್ಬನೂ ಅವರ ಅಂಗಿಯಲ್ಲಿ ಸುಕ್ಕುಗಳನ್ನು ಕಂಡವನಲ್ಲ. ಅಷ್ಟೊಂದು ಕಾಳಜಿ ಅವರಿಗೆ ವೇಷಭೂಷಣಗಳ ಮೇಲೆ.
ಕೆಂಪಮ್ಮದೇವಿ ತಿಮ್ಮೇಗೌಡರ ಮನೆದೇವತೆ ಕೂಡ ಹೌದು. ಅದಕ್ಕೆ ಜಾತ್ರೆಯ ಬಗ್ಗೆ ಅವರಿಗೆ ವಿಪರೀತ ಕಾಳಜಿ. ನಾಲ್ಕು ತಿಂಗಳಿನಿಂದಲೇ ಜಾತ್ರೆಯ ತಯಾರಿ ಶುರುವಾಗುತ್ತಿತ್ತು. ಜಾತ್ರೆ ಸಮೀಪಿಸುತ್ತಿದ್ದಂತೆ ಗೌಡರೂ ದಣಿವರೆಯದಂತೆ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಊರಿನಲ್ಲಿ ಕೆಲವು ತಂಡಗಳನ್ನು ರಚಿಸಿ, ಒಂದೊಂದು ತಂಡಕ್ಕೂ ಒಂದೊಂದು ಜವಾಬ್ದಾರಿಯನ್ನು ಕೊಡಲಾಗುತ್ತಿತ್ತು. ಒಂದು ತಂಡ ಬರೀ ತೋರಣ ಕಟ್ಟುವ, ಮತ್ತೊಂದು ದೇವರ ಪೂಜೆಯ ಸಾಮಗ್ರಿಗಳ ಉಸ್ತುವಾರಿ, ಮತ್ತೊಂದು ಕುಡಿಯುವ ನೀರಿನ ಸರಬರಾಜು, ಇನ್ನೊಂದು ಪ್ರಸಾದ ವಿತರಣೆ ಹೀಗೆ ಜವಾಬ್ದಾರಿಯನ್ನು ವಹಿಸಲಾಗಿತ್ತಾದರೂ, ಮೇಲುಸ್ತುವಾರಿಯನ್ನು ಗೌಡರೇ ವಹಿಸುತ್ತಿದ್ದರು. ಎಲ್ಲಾ ತಂಡಗಳಲ್ಲೂ ಇವರು ಸದಸ್ಯ್ರರಂತಾಗಿದ್ದರು.ಜಾತ್ರೆಗೆ ಬೇಕಾದ ಹಣವನ್ನು ನಾಲ್ಕು ತಿಂಗಳ ಮೊದಲು ಪಂಚಾಯ್ತಿಯಲ್ಲಿ ಗ್ರಾಮದ ಜನರಲ್ಲಿ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗುತ್ತಿತ್ತು. ಕಡಿಮೆ ಹಣ ಸಂಗ್ರಹವಾದಾಗಲೆಲ್ಲಾ ಗೌಡರೇ ತಮ್ಮ ಸ್ವಂತ ಹಣವನ್ನು ಬಳಸುತ್ತಿದ್ದರು. ಜಾತ್ರೆ ಮುಗಿದ ಒಂದು ವಾರದ ನಂತರ ಲೆಕ್ಕಪತ್ರವನ್ನು ಗ್ರಾಮದ ಜನರ ಮುಂದೆ ಓದಲಾಗುತ್ತಿತ್ತು. ಇದರಿಂದ  ಗೌಡರ ಬಗೆಗಿನ ಜನರ ಮೆಚ್ಹುಗೆ ಹಿರಿದಾಗುತ್ತಿತ್ತು.
ಇಷ್ಟೆಲ್ಲಾ ಸಂಭ್ರಮದ ಗೂಡಾಗಿದ್ದ ಕೆಂಪಮ್ಮದೇವಿಯ ಈ ವರುಷದ ಜಾತ್ರೆ ವರುಣನ ಅವಕೃಪೆಗೆ ತುತ್ತಾಗಿತ್ತು. ಮಳೆಯಿಲ್ಲದೇ ಜನ ಕಂಗಾಲಾಗಿದ್ದರು. ಬೆಳೆ ಕೈಕೊಟ್ಟಿತ್ತು. ಬ್ಯಾಂಕಿನಲ್ಲಿ ರೈತರ ಸಾಲ ಏರುವದರೊಂದಿಗೆ, ದೇಣಿಗೆಯ ಹಣವೂ ಮತ್ತು ಜಾತ್ರೆಯ ಬಗೆಗಿನ ಒಲವು ಜನರಲ್ಲಿ ಕಡಿಮೆಯಾಗಿತ್ತು. ಗೌಡರೂ ಕೂಡ ಈ ಸಾರಿ ಜಾತ್ರೆಯನ್ನು ಸರಳವಾಗಿ ಮಾಡೋಣವೆಂದು ಹೇಳಿದ್ದರು. ಜಾತ್ರೆಯ ದಿನ ಆಗಮಿಸಿತ್ತು.
ಅವತ್ತು ಜಾತ್ರೆ ಎಂಬುದು ಒಂಬತ್ತು ವರುಷದ ಪಂಪಾಪತಿಯಲ್ಲಿ ಸಂಭ್ರಮವನ್ನು ಮೂಡಿಸಿತ್ತು. ಬೆಳಿಗ್ಗೆ ಅವ್ವ ನೀಡಿದ್ದ ಅನ್ನ ಹಳಸಿದಂತಾಗಿದ್ದರೂ ಸುಮ್ಮನೆ ಎಲ್ಲವನ್ನೂ ಗಬಗಬನೇ ತಿಂದಿದ್ದ. ಜಾತ್ರೆ ಅವನನ್ನು ಕೂಗಿ ಕರೆದಿತ್ತು. ಮಧ್ಯಾಹ್ನದ ದೇವಸ್ಥಾನದ ಊಟ ಹಳಸಿದ ಅನ್ನದ ವಾಸನೆಯನ್ನು ನುಂಗಿ ಹಾಕಿತ್ತು. ಜಾತ್ರೆಯಲ್ಲಿ ಅವನು ಅಪ್ಪನನ್ನು ಪೀಡಿಸಿ ಕೆಲವೊಂದು ಆಟಿಗೆಗಳನ್ನು ಕೊಂಡಿದ್ದ.ಅದರಲ್ಲೂ ಆರಾಮ ಕುರ್ಚಿಯಂತೆ ಓಲಾಡುವ , ಕಟ್ಟಿಗೆಯ ಕುದುರೆ ಅವನ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಕತ್ತಲಾದಂತೆ ಎಲ್ಲರೂ ತಮ್ಮ ತಮ್ಮ ಮನೆಯ ಕಡೆಗೆ ನಡೆದರೆ ಇವನು ಕುದುರೆಯೊಂದಿಗೆ ಆಟವಾಡುತ್ತಾ ದೇವಸ್ಥಾನದ ಕಟ್ಟೆಯ ಮೇಲೆಯೇ ಕುಳಿತಿದ್ದ. ಸುಮಾರು ಹೊತ್ತಿನ ನಂತರ ಇವನು ಬಂದಾಗ ಅಪ್ಪ ಸಿಟ್ಟಿಗೆದ್ದಿದ್ದನ್ನು ಕಂಡು ಕುದುರೆಯನ್ನು ಮೂಲೆಯಲ್ಲಿಟ್ಟು ತಟ್ಟೆಯ ಮುಂದೆ ಉಣ್ಣಲಿಕ್ಕೆ ಕೂತ. ಗಮನ ಮಾತ್ರ ಕುದುರೆಯ ಮೇಲೆಯೇ ಇತ್ತು. ಅಪ್ಪ ಅಮ್ಮ ಮಾತ್ರ ಎಂದಿನಂತಿರದೇ ಲಗುಬಗೆಯಿಂದ ಉಣ್ಣುತ್ತಿದ್ದರು. ಇವನೂ ಉಣ್ಣಲಿಕ್ಕೆಂದು ಶುರು ಮಾಡುವ ಹೊತ್ತಿಗೆ, ಇವನ ಹೊಟ್ಟೆ ತೊಳೆಸಿದಂತಾಯಿತು. ಬೆಳಿಗ್ಗೆಯ ಹಳಸಿದ ಅನ್ನ, ಮಧ್ಯಾಹ್ನದ ದೇವಸ್ಥಾನದ ಊಟ, ಸಂಜೆಯ ತಿಂಡಿ ಕುರುಕಲು ಎಲ್ಲಾ ಸೇರಿ, ಅವನಿಗೆ ಉಬ್ಬಳಿಕೆ ತರಿಸಿತ್ತು. ಉಣ್ಣಲಿಕ್ಕೆಂದು ತಟ್ಟೆಗೆ ಕೈ ಹಚ್ಚುವಲ್ಲಿಯೇ ತಟ್ಟೆಯಲ್ಲೇ ಕಾರಿಕೊಂಡಿದ್ದ. ಅಪ್ಪನ ಕೆಂಗಣ್ಣು ಕೆಕ್ಕರಿಸಿತ್ತು. ಹೆದರಿಕೆ ಅವನ ವಾಂತಿಯ ಬಳಲಿಕೆಯನ್ನೂ ಹೆದರಿಸಿತ್ತು. ಕೈ ಝಾಡಿಸಿಕೊಂಡವನೇ ಮನೆಯಿಂದ ಓಡಹತ್ತಿದ. ಸರಿ ಸುಮಾರು ಹದಿನೈದು ನಿಮಿಷಗಳಲ್ಲಿ, ಕೆಂಪಮ್ಮನ ದೇವಸ್ಥಾನದ ಜಗುಲಿಗೆ ಬಂದು ನಿಂತಿದ್ದ. ಅಪ್ಪ ಹಿಂಬಾಲಿಸಿದಂತೇನೂ ಇಲ್ಲ ಎಂಬ ಭಾವನೆ ಅವನನ್ನು ಸಮಾಧಾನಗೊಳಿಸಿತ್ತು. ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತ , ನಡುರಾತ್ರಿಗೆ ಅವನನ್ನು ನಿದ್ರೆ ಆವರಿಸಿತ್ತು.
ಸೂರ್ಯನ ಹೊಂಗಿರಣಗಳು, ದೇವಸ್ಥಾನದ ಗಂಟೆಯ ಸದ್ದು, ಹಕ್ಕಿಗಳ ಕಲರವ ಅವನನ್ನು ಎಚ್ಚರಿಸಿದವು. ಅಪ್ಪನನ್ನು ಎದುರಿಸುವದು ಹೇಗೆ ಎಂದು ಯೋಚಿಸುತ್ತಾ ಮನೆಯ ಹಾದಿ ಹಿಡಿದ. ಮನೆಯ ಅಂಗಳದಲ್ಲಿ ಸಣ್ಣದೊಂದು ಜನರ ಗುಂಪು ಸೇರಿತ್ತು. ನುಸುಳಿಕೊಳ್ಳುತ್ತಾ ಮನೆ ಒಳಗಡೆ ದೃಷ್ಟಿ ಹಾಕಿದ, ಅಪ್ಪ ಅಮ್ಮ ಹೆಣವಾಗಿ ಬಿದ್ದಿದ್ದರು. "ಬ್ಯಾಂಕ್ ನವ್ರು ಹೊಲ ಮನೆ ಜಪ್ತಿ ಮಾಡೋಕೆ ಬರ್ತಾರಂತೆ, ಈ ಬಸಣ್ಣ ಯಾಕೆ ಇಷ್ಟೊಂದು ಸಾಲ ಮಾಡ್ಕೊಂಡ್ನೊ?" ಎಂಬ ಮಾತುಗಳು ಕೇಳಿಸುತ್ತಿದ್ದವು. ಹಿಂದಿನ ರಾತ್ರಿ ಕುದುರೆಯನ್ನು ಮೂಲೆಯಲ್ಲಿ ಇಡುವಾಗ ಅದರ ಪಕ್ಕದಲ್ಲೇ ಇದ್ದ ಖಾಲಿ ಕ್ಯಾನ್ ಇವನನ್ನು ಅಣಕಿಸುತ್ತಿತ್ತು. ಅದು ಹತ್ತಿ ಹೊಲಕ್ಕೆ ಹೊಡೆಯುವ ಔಷಧಿಯಾಗಿತ್ತು.
ಅಷ್ಟರಲ್ಲಿ ಗೌಡ್ರು ಬಂದ್ರು,ಗೌಡ್ರು ಬಂದ್ರು, ಅಂತ ಗುಸುಗುಸುಮಾತುಗಳ ನಡುವೆ ಗೌಡ್ರು ಬಂದು ಹೊಸ್ತಿಲಲ್ಲಿಯೇ ನಿಂತ ಇವನ ಹೆಗಲ ಮೇಲೆ ಕೈ ಇಟ್ಟಿದ್ದರು. ಅವರಿಗೆ ಪರಿಸ್ಥಿತಿಯ ಅರಿವಾಗಿತ್ತು. 'ರಾಮಪ್ಪ ಹೆಣ ಎತ್ತೋಕೆ ತಯಾರು ಮಾಡ್ಕೊ, ಸೋಮ ನನ್ನ ಜೊತೆ ಬಾ, ಖರ್ಚಿಗೆ ಸ್ವಲ್ಪ ಕಾಸು ಕೊಡ್ತೇನೆ. ಪಂಪ ಇನ್ಮೇಲೆ ನಮ್ಮ ಜಗುಲಿ ಮೇಲೆ ಬೇಳಿತಾನೆ. ಸಂಜೀಗೆ ಪಂಚಾಯ್ತಿ ಕಟ್ಟೆ ಹತ್ರ ಎಲ್ಲಾರು ಬಂದ್ಬುಡಿ. ಎಂದವರೇ ಅಲ್ಲಿಂದ ನಡೆದರು ಸೋಮನೊಂದಿಗೆ.
ಬಸಪ್ಪ, ಹೆಂಡತಿಯೊಂದಿಗೆ ಮಣ್ಣು ಸೇರಿದ ಮೇಲೆ ಪಂಚಾಯ್ತಿ ಕಟ್ಟೆ ಊರ ಜನರಿಂದ ತುಂಬಿ ಗಿಜಿಗಿಜಿ ಎನ್ನುತ್ತಿತ್ತು. ಎಲ್ಲರಿಗೂ ಒಂದೇ ಕುತೂಹಲ. ಗೌಡ್ರು ಪಂಚಾಯ್ತಿ ಕರೆದಿದ್ದದ್ದು ಯಾಕೆ ಅಂತ. ಶಾನುಭೋಗ್ರು, ಪೂಜಾರಪ್ಪ, ಗೌಡ್ರ ಸಲುವಾಗಿ ಕಾಯ್ತಾ ಪಂಚಾಯ್ತಿ ಕಟ್ಟೆ ಮೇಲೆ ಕುಳಿತಿದ್ದರೂ ಅವರ ದೃಷ್ಟಿ ಮಾತ್ರ ಗೌಡ್ರ ಬರುವಿಕೆಯನ್ನು ನಿರೀಕ್ಷಿಸುತ್ತಿತ್ತು. ಅಷ್ಟರಲ್ಲೇ ಗೌಡ್ರು ತಮ್ಮ ಎಂದಿನ ಠೀವಿಯಲ್ಲಿ ಬಂದವರೇ ಪಂಚಾಯ್ತಿ ಕಟ್ಟೆಗೆ ನಮಸ್ಕರಿಸಿ ಶಾನುಭೋಗ್ರು ಮತ್ತು ಪೂಜಾರಪ್ಪನ ಮಧ್ಯೆ ಕುಳಿತುಕೊಂಡ್ರು.
ಎಲ್ಲರೂ ಕುತೂಹಲದಿಂದ ಗೌಡ್ರನ್ನ ನೋಡುತ್ತಿದ್ದಂತೆಯೇ, ಗೌಡ್ರೇ ಮೌನ ಮುರಿದರು. 'ಇನ್ನೂ ಯಾರ್ದಾದ್ರೂ ಸಾಲ ಇದ್ರೆ ಹೇಳಿ, ಬ್ಯಾಂಕಿನವರ ಹತ್ರ ಮಾತಾಡಿ ಒಂದು ವರ್ಷದ ಗಡುವು ತಗೋತೀನಿ. ಎಲ್ಲರೂ ಮುಂದಿನ ವರ್ಷದೊಳಗೆ ಸಾಲ ತೀರಿಸಿ. ನಾಳೆ ಬೆಳಿಗ್ಗೆ ಎಲ್ಲರೂ ಬ್ಯಾಂಕಿನ ಹತ್ರ ಬನ್ನಿ , ಪಂಪನ ಜವಾಬ್ದಾರಿ ನಾನೇ ತಗೋತೀನಿ 'ಎಂದರು. ನೆರೆದಿದ್ದ ಎಲ್ಲರ ಮುಖದಲ್ಲೂ ಧನ್ಯತಾ ಭಾವ.ಯಾರೂ ಏನೂ ಮಾತಾಡುವ ಪರಿಸ್ಥಿತಿಯಲ್ಲಿರಲಿಲ್ಲ.ಶಾನುಭೋಗ್ರು, ಪಂಚಾಯ್ತಿ ಸಮಾಪ್ತಿ ಎಂದು ಎಲ್ಲರಿಗೂ ಕೇಳುವಂತೆ ಹೇಳಿದರು ಎಲ್ರೂ ತಮ್ಮ ತಮ್ಮ ಮನೆ ಕಡೆಗೆ ಮರಳಲಾರಂಭಿಸಿದರು. ಸಾಹುಕಾರ ಶಂಕ್ರಪ್ಪನ ಹೊಟ್ಟೇಲಿ ಹಾವು ಹರಿದಾಡಿದಂತಾಗಿತ್ತು.

(ಮುಂದುವರಿಯುವದು....)
Thursday, June 13, 2013 1 comments

ನನ್ನ ಗ್ರಹಿಕೆಗಳು - ೧

ಪುಸ್ತಕ ಓದುವ ಗೀಳು ಅಂಟಿಸಿಕೊಳ್ಳಬಾರದು. ಏಕೆ?
೧. ಚಲನಚಿತ್ರಗಳು ಬೋರೆನಿಸುತ್ತವೆ.
೨.ಗಾಸಿಪ್ಪುಗಳು ಇಷ್ಟವಾಗೋಲ್ಲ.
೩.ಕ್ರೀಡಾಪಟುಗಳ ಹೋರಾಟವನ್ನು ಓದಿ ಅನುಭವಿಸಿದ ಮೇಲೆ ಕ್ರೀಡೆಯ ಹುಚ್ಚು ಸಂಭ್ರಮವನ್ನು ಆನಂದಿಸಲಿಕ್ಕಾಗುವದಿಲ್ಲ.
೪.ತನ್ನಂತೆಯೇ ಚಿತ್ರಿತವಾದ ಯಾವುದೋ ಕಥೆಯ,ಕಾದಂಬರಿಯ ಪಾತ್ರ ನಿದ್ರಿಸಲು ಬಿಡುವದಿಲ್ಲ,
೫.ಎಂ.ಜಿ.ರಸ್ತೆಯಲ್ಲಿ, ಮೆಜೆಸ್ಟಿಕ್ ನ ಸಂದುಗೊಂದುಗಳಲ್ಲಿ ಕಾಣುವ ವೇಶ್ಯೆಯರ ಮುಖದಲ್ಲಿ ಭೀಕರ ಹಸಿವು ಕಾಣುತ್ತದೆ.
೬.ಕೆಲವೊಮ್ಮೆ ಅತಿಭಾವುಕತೆಯೂ,... ಕೆಲವೊಮ್ಮೆ ಸಿನಿಕತೆಯೂ ಬೆಳೆಯುತ್ತದೆ.
೭.ಅಕ್ಕಪಕ್ಕದ ವ್ಯಕ್ತಿಗಳು ಯಾವುದೋ ಕಥೆಯ ಪಾತ್ರಧಾರಿಗಳಂತೆ ಕಾಣುತ್ತಾರೆ.
೮.ಕಥೆಯನ್ನೇ ಹೇಳದ ಟಿ.ವಿ.ಧಾರಾವಾಹಿಗಳು ವರ್ಜ್ಯವೆನಿಸುತ್ತವೆ.
೯.ದುಂದುವೆಚ್ಚದ ಎಲ್ಲಾ ಮಾರ್ಗಗಳು ಮುಚ್ಚಿ, ಪುಸ್ತಕದ ಅಂಗಡಿಯ ಮಾರ್ಗಗಳು ತೆರೆದುಕೊಳ್ಳುತ್ತವೆ.
೧೦.ಗುಂಪಿನಲ್ಲಿಯೂ ಏಕಾಂಗಿಯಾಗುತ್ತೀರಿ.
೧೧. ಜೀವನವೆಂಬ ದೊಂಬರಾಟದ ವೈವಿಧ್ಯತೆಗಳು ಕಣ್ಣಿಗೆ ಕಾಣುತ್ತವೆ.
೧೨.ಸಮಸ್ಯೆಗಳನ್ನು ಎದುರಿಸುವಲ್ಲಿ ಯಾವುದೋ ಒಂದು ಪಾತ್ರ ನೆರವಾಗಬಹುದು ಅಥವಾ ದ್ವಂದ್ವಕ್ಕೆ ಸಿಲುಕಿಸಬಹುದು.
೧೩.ದೈಹಿಕ ಅಲಂಕಾರದೆಡೆಗೆ ಒಂದು ಸಣ್ಣ ಉದಾಸೀನತೆ ಬೆಳೆಯಬಹುದು.
೧೪.ಒಂದು ಸುಧೀರ್ಘ ಯಾತ್ರೆಯ ಹಣ,ಸಮಯ,ಮತ್ತು ಬಳಲಿಕೆಯನ್ನು ಪುಸ್ತಕಗಳು ತಪ್ಪಿಸುತ್ತವೆ.
೧೫.ವಿದೇಶಗಳ ಪಿಜ್ಜಾ ಬರ್ಗರ್ ಆಚೆಗಿನ ಕೊಳಕು ಕಾಣುತ್ತದೆ.
೧೬.ಸರ್ಕಾರಿ ಯೋಜನೆಗಳ ಹಿಂದೆ ನಡೆಯುವ ಪಿತೂರಿಯ ಅರಿವಾಗುತ್ತದೆ.
೧೭.ಪೂಜಾರಿಯ ಮಂತ್ರಗಳಲ್ಲಿ ಸಾಹಿತ್ಯವನ್ನೂ, ಅರ್ಥವನ್ನೂ ಹುಡುಕಲೆತ್ನಿಸುತ್ತೀರಿ.
೧೮.ಜ್ಯೋತಿಷ್ಯ ಒಮ್ಮೊಮ್ಮೆ ವಿಙ್ಞಾನದಂತೆಯೂ, ಕೆಲವೊಮ್ಮೆ ದುಡ್ಡು ಮಾಡುವ ವಿಧಾನದಂತೆಯೂ ಕಾಣುತ್ತದೆ.
೧೯.ರಾಮ, ಶ್ರೀಕೃಷ್ಣ ಮುಂತಾದ ದೇವರುಗಳೆಲ್ಲ ಮನುಷ್ಯರಂತೆ ಕಾಣುತ್ತಾರೆ.
೨೦.ಹಣದೆಡೆಗಿನ ಹುಚ್ಚು ವ್ಯಾಮೋಹ ಕಡಿಮೆಯಾಗುತ್ತದೆ.
೨೧. ಸ್ವಲ್ಪ ಸೊಕ್ಕೂ ಬರಬಹುದು.
ಇನ್ನೂ ಕೆಲವು ಅಂಶಗಳನ್ನು ಅವು ನನಗೆ ತೋಚಿದಾಗ ಗೀಚುತ್ತೇನೆ.
Sunday, May 26, 2013 2 comments

ನೀವು ಕರೆ ಮಾಡಿದ ಗ್ರಾಹಕರು ಸ್ವಿಚ್ ಆಫ್ ಮಾಡಿದ್ದಾರೆ, ದಯವಿಟ್ಠು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ - The Girl in Pink T-Shirt

ಅವಳು ಸುಂದರಿ ಎಂದು ಯಾರಾದರೂ ಅವಳನ್ನು ನೋಡಿದ ತಕ್ಷಣ ಹೇಳಬಹುದಿತ್ತು. ಅವಳ ಸುಂದರತೆ ಅವಳ ಕಣ್ಣುಗಳ ಚಂಚಲತೆಯಿಂದ ಇಮ್ಮಡಿಯಾಗಿತ್ತು. ದಾರಿಹೋಕರ ಗಮನ ಸೆಳೆಯುವಲ್ಲಿ ಅವು ಯಶಸ್ವಿಯಾಗಿದ್ದವು. ಅವಳು ಪದೇ ಪದೇ ತನ್ನ ಕೈಗಡಿಯಾರವನ್ನು ನೋಡಿಕೊಳ್ಳುತ್ತಿದ್ದರೂ, ಗಡಿಯಾರದ ಮುಳ್ಳುಗಳು ಅವಸರಿಸಿದಂತೇನೂ ಸಾಗುತ್ತಿಲ್ಲ. ಅವಳು ಅಲ್ಲಿಗೆ ಬಂದು ನಿಂತ ೧೦ ರಿಂದ ೧೫ ನಿಮಿಷವಾಗಿತ್ತಾದರೂ ಅವಳ ಅಸಹನೆಗೆ ಅವಳು ಕುದಿಯುತ್ತಿದ್ದಳು. ಗಂಟೆ ೭ ಆಗ್ತಾ ಬಂತು. ಇವಳ್ಯಾಕೆ ಬರ್ತಾ ಇಲ್ಲ. ಮೊಬೈಲ್ ಬೇರೆ ಸ್ವಿಚ್ ಆಫ್ ಮಾಡಿದ್ದಾಳೆ. ಇಷ್ಟೊತ್ತಿಗೆ ಅವಳು ಬರಬೇಕಾಗಿತ್ತು. ಇನ್ನೂ ಬಂದಿಲ್ಲ ಎಂದುಕೊಂಡವಳಿಗೆ ಪಕ್ಕದ ದರ್ಶಿನಿಯ ಇಡ್ಲಿ ಸಾಂಬಾರ್ ವಾಸನೆ ಹೊಟ್ಟೆಯಲ್ಲಿ ಇಲಿಗಳನ್ನು ಓಡಾಡಿಸುತ್ತಿತ್ತು. ತಿಂಡಿ ತಿಂದುಕೊಂಡು ಬರೋಣವೆಂದುಕೊಂಡವಳೇ ದರ್ಶಿನಿಗೆ ಕಾಲಿಟ್ಟಳು. ಕೈ ತೊಳೆದುಕೊಳ್ಳೋಣವೆಂದು ವಾಷ್ ಬೇಸಿನ್ನಿನ ನಳಕ್ಕೆ ಕೈ ಒಡ್ಡಿದಾಗ ,ಕನ್ನಡಿಯಲ್ಲಿ ಅವಳ ಮಾಸಿದ ಕೂದಲು, ಬೆವರಿ ಒಣಗಿದ ಮುಖ , ಕೊಳಕಾದ ಬಟ್ಟೆ ಕಂಡು ಅವಳ ಬಗ್ಗೆ ಅವಳಿಗೇ ಅಸಹ್ಯವೆನಿಸಿತು. ಕ್ಯಾಷ್ ಕೌಂಟರಿಗೆ ಕೂತಿದ್ದ ಅಯ್ಯಂಗಾರಿ ಮುದುಕನಿಗೆ ಇವಳ ಬಗ್ಗೆ ಮರುಕವೆಂತಿನಿಸಿತೋ ಏನೋ, ಅಡಿಗೆ ವಿಭಾಗಕ್ಕೆ ಹತ್ತಿಕೊಂಡಿದ್ದಂತಿದ್ದ ಬಚ್ಚಲು ಕೋಣೆಯ ಕಡೆಗೆ ಬೆರಳು ತೋರಿಸಿದ. ಅಕ್ಕಿ ತೊಳೆದ ನೀರು, ಪಾತ್ರೆ ತೊಳೆದ ನೀರು ಮತ್ತು ಮುಂತಾದವುಗಳಿಂದ ಬಚ್ಚಲು ಕೋಣೆ ವಾಕರಿಕೆ ಬರುವಂತಿತ್ತು. ಒಳಗೆ ಹೋದವಳೇ ಬ್ಯಾಗಿನಿಂದ ತನ್ನ ಬಟ್ಟೆಗಳನ್ನು ಹೊರತೆಗೆದವಳಿಗೆ ಅರಿವಾಗಿತ್ತು, ತಾನು ತಂದಿದ್ದು ಒಂದು ಜೀನ್ಸ್ ಮತ್ತು ಗುಲಾಬಿ ಬಣ್ಣದ ಟೀ ಶರ್ಟ ಮಾತ್ರ ಎಂದು. ಅದು ತನ್ನ ಬರ್ಥ್ ಡೇಗೆ ಅಂತ ಅಣ್ಣ ಕೊಡಿಸಿದ್ದು. ವಿಧಿಯಿಲ್ಲದೆ ಅದನ್ನೇ ಧರಿಸಿ ಹೊರಬಂದವಳಿಗೆ ಸಾಕುಸಾಕಾಗಿತ್ತು. ಕನ್ನಡಿ ಮುಂದೆ ನಿಂತವಳೇ ತನ್ನ ಮುಂಗುರುಳುಸ್ ಸರಿಪಡಿಸಿಕೊಂಡವಳೇ ಮುಖಕ್ಕೆ ತಣ್ಣನೆಯ ನೀರನ್ನು ಎರಚಿಕೊಂಡಳು. ಸ್ವಲ್ಪ ಹಾಯೆನಿಸಿತ್ತು. ಅಯ್ಯಂಗಾರಿ ಮುದುಕ ಕೊಟ್ಟ ಟಿಶ್ಶೂವಿನಿಂದ ಮುಖ ಒರೆಸಿಕೊಂಡು ಇಡ್ಲಿ, ಕಾಫಿಗೆ ಆರ್ಡರ್ ಮಾಡಿದಳು. ತಿಂಡಿ ಬರೋದರೊಳಗೆ ಇನ್ನೊಂದು ಸಾರಿ ನಿಮ್ಮಿಗೆ ಫೋನ್ ಮಾಡೋಣ ಎಂದು ತನ್ನ ಮೊಬೈಲ್ ಸ್ಕ್ರೀನ್ ಮೇಲೆ ಬೆರಳಾಡಿಸಿದವಳೇ ಕಿವಿಗೊತ್ತಿಕೊಂಡಳು. ಮತ್ತದೇ ಸುಂದರ ಧ್ವನಿ ಕರ್ಕಶವಾಗಿ ಇವಳ ಕಿವಿಗಪ್ಪಳಿಸಿತು. "ನೀವು ಕರೆ ಮಾಡಿದ ಗ್ರಾಹಕರು ಸ್ವಿಚ್ ಆಫ್ ಮಾಡಿದ್ದಾರೆ, ದಯವಿಟ್ಠು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ"
ಇಡ್ಲಿ ಸಾಂಬಾರ್ ಅವಳ ಮುಖಕ್ಕೆ ಗೆಲುವು ಕೊಟ್ಟಂತಾಗಿತ್ತು. ಇಲ್ಲೇ ಕೂತ್ಕೊಂಡು ಕಾಯೋಣ ಅಂದುಕೊಂಡವಳಿಗೆ ಹೋಟೆಲ್ ಗಿರಾಕಿಗಳು ಒಮ್ಮೆಲೆ ಜಾಸ್ತಿಯಾದಂತೆನಿಸಿತು. ಇವಳು ಎದ್ದರೆ ಸಾಕು , ತಾವೂ ಕೂತ್ಕೊಬಹುದು ಅನ್ನೋ ಗಿರಾಕಿಗಳು ಇದ್ದರೂ, ಇವಳನ್ನೇ ನೋಡುತ್ತಾ ಕಾಫಿ ಹೀರುವದರಲ್ಲಿ ಮಗ್ನರಾದ ರಸಿಕ ಶಿಖಾಮಣಿಗಳೂ ಅಲ್ಲಿದ್ದರು. ಅಯ್ಯಂಗಾರಿ ಮುದುಕನಿಗೆ ಇವಳು ಬಿಸಿತುಪ್ಪದಂತಾದಳು. ಅವನ ಹೊಯ್ದಾಟಗಳು ಅರ್ಥವಾದಂತೆನಿಸಿ ಬಿಲ್ ಹಣವನ್ನು ಟೇಬಲ್ ಮೇಲೆ ಇಟ್ಟು ಹೊರಬಂದಳು. ಅಯ್ಯಂಗಾರಿ ಮುದುಕನಿಗೆ ನಿರುಮ್ಮಳ ಭಾವ.
ಮತ್ತೆ ಗಡಿಯಾರ ನೋಡಿಕೊಂಡವಳಿಗೆ ಅನಿಸಿದ್ದು ತಾನು ನಿಮ್ಮಿಗಾಗಿ ಕಾಯುತ್ತಿರುವದು ಕೇವಲ ನಲವತ್ತೈದು ನಿಮಿಷಗಳಿಂದ ಮಾತ್ರ. ತಾನು ಮೊದಲು ನಿಂತಿದ್ದ ಜಾಗಕ್ಕೆ ಬಂದು ನಿಂತಳು. ರಸಿಕ ಶಿಖಾಮಣಿಗಳು ಗುಂಪು ಹೋಟೆಲ್ ನಿಂದ ಮೂಲೆ ಅಂಗಡಿಯ ಸಿಗರೇಟು ಅಂಗಡಿಯ ಹತ್ತಿರವೂ, ಜಾಗಿಂಗ್ ಮುಗಿಸಿದವರ ದಾಹ ತಣಿಸಲೆಂದೇ ಇರುವ ಎಳನೀರು ಅಂಗಡಿಯ ಹತ್ತಿರವೂ ಪ್ರತಿಷ್ಠಾಪಿತವಾಗಿತ್ತು. ಎಲ್ಲರ ಕಣ್ಣಿಗೆ ಆಹಾರವಾಗುವಂತೆ ಮಾಡಿದ ನಿಮ್ಮಿಯ ಮೇಲೆ ಕೋಪ ಹೆಚ್ಚಾಗಿತ್ತು. ಆಗಲೇ ನೆನಪಾಗಿದ್ದು "ಒಂದಿನ ನಾನು ಯಾರೂಂತ ತೋರಿಸ್ತೀನಿ ಕಣೆ ನಿಂಗೆ. " ಎಂಬ ಶಬ್ದಗಳು. ಹೌದಲ್ಲ, ನಿಮ್ಮಿ ಆವತ್ತು ಸಿಟ್ಟಿನಿಂದ ಹಾಗೇ ಹೇಳಿದ್ದಳು. ಆದಿನ ಅವಳಿಗೆ ಚೆನ್ನಾಗಿ ನೆನೆಪಿದೆ ಅವತ್ತು ತಾನು ಅವಳಿಗೆ ಮಾಡಿದ ಚಿಕ್ಕ ಜೋಕಿಗೆ ಅವಳು ಸಿಟ್ಟಾಗಿದ್ದಳು. ಅದು ಆ ಸೆಮಿಸ್ಟಿರಿನ ಕೊನೆಯ ದಿನ. ಇಬ್ಬರೂ ತಮ್ಮ ತಮ್ಮ ಊರಿಗೆ ಹೊರಟಿದ್ದರು. ಇವತ್ತು ಇಬ್ಬರೂ ಮರಳಿ ಬರುವ ಪ್ಲಾನ್ ಕೂಡ ಇತ್ತು. ಇನ್ನೂ ಯಾಕೆ ಬಂದಿಲ್ಲ.ಫೋನ್ ಯಾಕೆ ಸ್ವಿಚ್ ಆಫ್ ಮಾಡಿದ್ದಾಳೋ ಗೊತ್ತಿಲ್ಲ. ಅವತ್ತಿನ ಸಿಟ್ಟನ್ನು ಇವತ್ತು ತೀರಿಸಿಕೊಳ್ಳುತ್ತಿದ್ದಾಳೇನೋ ಎಂದೆನಿಸಿತು. ರಸಿಕ ಶಿಖಾಮಣಿಗಳು ಒಬ್ಬೊಬ್ಬರಾಗಿ ಇವಳ ಹಿಂದು ಮುಂದು ತಿರುಗಾಡಲಾರಂಭಿಸಿದರು. ನಿಮ್ಮಿಯ ಮೇಲೆಯ ಸಿಟ್ಟು ಕೂಡ ಕರಗಲಾರಂಭಿಸಿತು. ದುಃಖ ಉಮ್ಮಳಿಸಿ ಬಂದಂತಾಯಿತು. ಕಣ್ಣು ತುಂಬಿಕೊಂಡವು. ಅಷ್ಟರಲ್ಲಿ ಯಾರೋ ಬಂದು ತನ್ನ ಕೈ ಹಿಡಿದು ಕೊಂಡಂತಾಯಿತು. ತಿರುಗಿ ನೋಡಿದರೆ, ನಿಮ್ಮಿ ನಗುತ್ತಾ ನಿಂತಿದ್ದಳು. ಇವಳಿಗೆ ದುಃಖ ತಡೆಯಲಾಗಲಿಲ್ಲ , ನಿಮ್ಮಿಯನ್ನು ತಬ್ಬಿಕೊಂಡು ಅಳಲಾರಂಭಿಸಿದಳು. ನಿಮ್ಮಿಗೆ ಏನೂ ಅರ್ಥವಾಗಲಿಲ. ಅವಳನ್ನು ದರದರನೇ ಎಳೆದುಕೊಂಡು ರೂಮಿನತ್ತ ಹೊರಟಳು. ದಾರಿಯಲ್ಲೆಲ್ಲೂ ಅವಳ ದುಃಖ ಕಡಿಮೆಯಾಗಲೇ ಇಲ್ಲ. ರೂಮಿಗೆ ಹೋದೊಡನೆ ನಿಮ್ಮಿಯ ಕೈ ಹಿಡಿದುಕೊಂಡು 'ಸ್ಸಾರಿ' ಎಂದು ಮತ್ತೆ ಅಳಲಾರಂಭಿಸಿದಳು. ನಿಮ್ಮಿ ಪರಿಸ್ಥಿತಿಯನ್ನು ಅರಿಯಲಾರದೇ "ನೀನ್ಯಾಕೆ ಅಲ್ಲಿ ನಿಂತಿದ್ದೆ?, ಮೊದ್ಲೆ ಗೊತ್ತಿಲ್ವ ಒಬ್ಬ ಹುಡುಗಿ ಒಂಟಿಯಾಗಿ ರಸ್ತೆ ಪಕ್ಕ ನಿಂತುಕೊಂಡ್ರೆ ಜನ ಹೇಗೆ ನೋಡ್ತಾರೆ ಅಂತ. ರೂಮಲ್ಲಿ ಬಂದು ಕೂರೋಕೆ ಆಗ್ತಿರಲಿಲ್ವ?" ಎಂದು ಅವಳನ್ನು ಸಂತೈಸಲೆತ್ನಿಸಿದಳು. ಅಷ್ಟೊತ್ತಿಗೆ ಅವಳ ಮೊಬೈಲ್ ರಿಂಗಿಣಿಸಲಾರಂಭಿಸಿತು. ಇವಳ ಪರಿಸ್ಥಿತಿಯಲ್ಲಿ ಅವಳು ಮಾತಾಡಲಾರಳೆಂದು ನಿಮ್ಮಿಯೇ ಉತ್ತರಿಸಿದಳು. ಅತ್ತಲಿಂದ ಬಂದ ಧ್ವನಿ ಅವಳ ಅಮ್ಮನದಾಗಿತ್ತು ." ಹಲೋ, ಯಾರು ನಿಮ್ಮಿನಾ?, ಅವಳು ಸೇಫಾಗಿ ಬಂದ್ಲಾ? ರೂಮ್ ಕೀ ಇಲ್ಲೇ ಬಿಟ್ಟು ಹೋಗಿದ್ದಾಳೆ. ಅವಳಿದ್ದಾಳಾ ಕೊಡು " . "ಅವಳು ಬಾತ್ ರೂಮಿಗೆ ಹೋಗಿದ್ದಾಳೆ ಆಂಟಿ, ಬಂದ ತಕ್ಷಣ ಹೇಳ್ತೇನೆ " ಎಂದು ಉತ್ತರಿಸುವದರೊಳಗೆ ಅವಳ ಪರಿಸ್ಥಿಯ ಅರಿವಾಗಿತ್ತು. ನಿಮ್ಮಿಯ ಬ್ಯಾಟರಿ ಖಾಲಿಯಾದ ಮೊಬೈಲ್ ಅಣಕಿಸುತ್ತಿತ್ತು. 
Sunday, January 20, 2013 0 comments

ಏನೆಂದು ಹೆಸರಿಡಲಿ?

ಅದೊಂದು ತೀರ್ಥಕ್ಷೇತ್ರ. ನದಿದಂಡೆಯ ಮೇಲೆಯೇ ದೊಡ್ಡದಾದ ದೇವಸ್ಥಾನ. ದೇವಸ್ಠಾನದ ಮೇಲುಸ್ತುವಾರಿಗೆಂದು ಒಂದು ಟ್ರಸ್ಟ್ ಒಂದನ್ನು ಮುಜರಾಯಿ ಇಲಾಖೆಯು ನೇಮಿಸಿತ್ತು. ದೇವಸ್ಥಾನದ ಪೌಳಿಗೆ ಅಂಟಿಗೊಂಡಿರುವ ಅಗ್ರಹಾರದ ಎಂಟು ಮನೆಗಳಲ್ಲಿ , ಮೂರನೇ ಮನೆ ನಮ್ಮದಾಗಿತ್ತು. ಅಪ್ಪ ನರಸಿಂಹಶಾಸ್ತ್ರಿ ದೇವಸ್ಥಾನದ ಪ್ರಮುಖ ಅರ್ಚಕರಲ್ಲೊಬ್ಬರಾಗಿದ್ದರೊ. ನಮ್ಮ ತಾತ ದೇವಶರ್ಮಶಾಸ್ತ್ರಿಗಳು ಪ್ರಕಾಂಡ ಪಂಡಿತರು ಮತ್ತು ವಾಗ್ಮಿಗಳು. ನಮ್ಮ ತಾತ ಅನಾರೋಗ್ಯದಿಂದ ಬಳಲುತ್ತಿದ್ದಾಗ ನಮ್ಮ ತಂದೆ ನರಸಿಂಹಶಾಸ್ತ್ರಿಯವರನ್ನು ಶಾಲೆ ಬಿಡಿಸಿ ಅರ್ಚಕರನಾಗಿಸಿದ್ದರು. ಆಗ ನಮ್ಮ ತಂದೆಗೆ ೧೪ ವರ್ಷ. ಹೈಸ್ಕೂಲು ಕಟ್ಟೆ ಏರಿದ ನಮ್ಮ ತಂದೆಗೆ ಮುಂದೆ ಓದಲು ಆಸೆಯಿತ್ತು. ಭೂಗೋಳದಲ್ಲಿ ಪಠ್ಯವಾಗಿ ಓದಿದ ಪಾಶ್ಚಾತ್ಯ ರಾಷ್ಟ್ರಗಳ ಬಗ್ಗೆ ಅಲ್ಪ ಸ್ವಲ್ಪತಿಳುವಳಿಕೆಯಿತ್ತು. ತಂದೆಯ ಪಾಂಡಿತ್ಯವೂ ತಕ್ಕ ಮಟ್ಟಿಗೆ ಒಲಿದು ಬಂದಿತ್ತು. ಪಾಶ್ಚಾತ್ಯ ಜೀವನಶೈಲಿಯ ಬಗ್ಗೆ ಅತಿಯಾದ ಮೋಹವಿರದಿದ್ದರೂ ಸ್ವಲ್ಪ ಆಕರ್ಷಿತಗೊಂಡಿದ್ದರು. ಆದರೆ ಮನೆಯ ಜವಾಬ್ದಾರಿಯನ್ನು ಹೊರುವ ಭರದಲ್ಲಿ ಅರ್ಚಕರಾಗಿದ್ದರು. ವಯಸ್ಸು ಇಪ್ಪತ್ತು ತುಂಬುವ ಹೊತ್ತಿಗೆ, ಪಕ್ಕದ ಊರಿನ ನಾರಾಯಣಶಾಸ್ತ್ರಿಯವರ ಕೊನೆಯ ಮಗಳು ಪದ್ಮಳನ್ನು ಮದುವೆಯಾಗಿದ್ದರು. ೧೬ ವರ್ಷದ ಪದ್ಮ , ಪದ್ಮಾವತಿಯಾಗಿದ್ದರು. ನಮ್ಮ ತಾಯಿಗೆ ೧೮ ತುಂಬುವಷ್ಟರಲ್ಲಿ ನಾನು ಜನಿಸಿದ್ದೆ. ಪ್ರಭು ಶ್ರೀರಾಮನ ಭಕ್ತರಾದ ನಮ್ಮ ತಂದೆ ನನಗೆ ಸೀತಾರಾಮ ಶಾಸ್ತ್ರಿಯೆಂದು ನಾಮಕರಣ ಮಾಡಿದ್ದರು. ಅದು ಅವರ ತಾತನ ಹೆಸರಾಗಿತ್ತು. ನನಗೆ ಮೂರು ವರ್ಷವಿದ್ದಾಗ ನನ್ನ ತಂಗಿ ಕಲ್ಯಾಣಿಯ ಜನನವಾಯಿತು. ಆದರೆ ಅವಳಿಗೆ ಎರಡು ವರ್ಷ ತುಂಬುವದರೊಳಗೆ ಅವಳಿಗೆ ಯಾವುದೋ ಕಾಯಿಲೆ ಬಂದು ಅವಳು ತೀರಿಕೋಂಡಳು.ಎಲ್ಲರ ಅಳು ಮತ್ತು ದುಃಖಗಳನ್ನು ನೋಡಿದ ನನ್ನ ಕಣ್ಣುಗಳು ತುಂಬಿದ್ದವು. ಅಮ್ಮ ಅಳುವದನ್ನು ನೋಡಿ ನಾನೂ ಅಳುತ್ತಿದ್ದೆ. ಅಮ್ಮ ಎಷ್ಟೋ ತಿಂಗಳುಗಳ ನಂತರ ಆ ನೋವಿನಿಂದ ಹೊರಬಂದಿದ್ದರು.ಅಪ್ಪನ ಮನಸನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ. ಆದರೆ ಅವರ ಮುಖ ಮೊದಲಿನಂತಿರಲಿಲ್ಲ. ನಿಸ್ತೇಜವಾಗಿತ್ತು. ಇದಾದ ಕೆಲವು ದಿನಗಳ ನಂತರ ಅಪ್ಪ ಅಮ್ಮನ ಮುದ್ದಿನ ಗನಾಗಿ ಬೆಳೆದೆ. ಮರುವರ್ಷವೇ ಉಪನಯನವಾಯಿತು. ನನ್ನನ್ನು ಶಾಲೆಗೆ ಸೇರಿಸಲಾಯಿತು. ದೇವಸ್ಠಾನವು ಮುಜರಾಯಿ ಇಲಾಖೆಗೆ ಒಳಪಟ್ಟಿರುವದರಿಂದ, ಮೋದಲಿನಂತೆ ಆದಾಯವಿರಲಿಲ್ಲ. ಆದರೆ ನಮ್ಮ ತಂದೆ , ಉಪನಯನ, ಮದುವೆ , ಶ್ರಾಧ್ಧ ಕರ್ಮಾದಿಗಳನ್ನು ಮಾಡಿಸುತ್ತಿದ್ದುದರಿಂದ ನಮ್ಮ ತಂದೆ ಸಂಸಾರವನ್ನು ನಿಭಾಯಿಸುತ್ತಿದ್ದರು. ಬೆಳಿಗ್ಗೆ ೫.೩೦ಕ್ಕೆ ನದಿಸ್ನಾನ, ಸಂಧ್ಯಾವಂದನೆ, ಸಂಸ್ಕೃತ ಅಭ್ಯಾಸ ಮುಗಿಸುವಷ್ಟರ ಹೊತ್ತಿಗೆ ಗಂಟೆ ಎಂಟಾಗಿರುತ್ತಿತ್ತು. ತಿಂಡಿ ತಿಂದವನೇ ಶಾಲೆಗೆ ಓಡುತ್ತಿದ್ದೆ. ಸಂಜೆ ಮತ್ತೆ ಸಂಧ್ಯಾವಂದನೆ, ಶಾಲಾ ಓದು, ಊಟ ಮುಗಿಸುವಷ್ಟರ ಹೊತ್ತಿಗೆ ಗಂಟೆ ಒಂಬತ್ತಾಗಿರುತ್ತಿತ್ತು. ಆಟೋಟವೆಂಬುದನ್ನು ನೋಡಿದ್ದೆನೇ ಹೊರತು ಯಾವತ್ತೂ ಆಟ ಆಡುವದಕ್ಕೆ ಹೋಗಿರಲಿಲ್ಲ.ಶಾಲೆಯಲ್ಲಿ ಆಟ ಆಡುವದಕ್ಕೆ ಹೋದರೂ ಯಾರೂ ನನ್ನನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ,ಶಾಲೆಯಲ್ಲಿ ಆಡುತ್ತಿದ್ದುದು ಕಬಡ್ಡಿ ಮತ್ತು ಖೋಖೋ. ಎರಡಕ್ಕೂ ನನ್ನ ಜುಟ್ಟು ಅಡ್ಡ ಬರುತ್ತಿತ್ತು. ಆದರೆ ನಾನು ಓದಿನಲ್ಲಿ ಬುಧ್ಧಿವಂತನಾಗಿದ್ದೆ. ಒಳ್ಳೆಯ ವಿದ್ಯಾರ್ಥಿ ಎನ್ನಿಸಿಕೊಂಡಿದ್ದೆ. ಇತ್ತ ಮನೆಯಲ್ಲಿ ಸಂಸ್ಕೃತ ವನ್ನೂ ಚೆನ್ನಾಗಿ ಅಭ್ಯಸಿಸಿದ್ದೆ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸುವ ಹೊತ್ತಿಗೆ ನನಗೆ ಸಂಸ್ಕೃತ ಸುಲಲಿತವಾಗಿ ಒಲಿದಿತ್ತು. ಮುಂದೆ ನನ್ನ ತಂದೆ ನನ್ನನ್ನು ಪಕ್ಕ್ದ ತಾಲ್ಲೂಕಿನ ಶಾಲೆಗೆ ಹೈಸ್ಕೂಲು ವಿದ್ಯಾಭ್ಯಾಸಕ್ಕೆಂದು ಸೇರಿಸಿದರು. ಬ್ರಾಹ್ಮಣ ವಿದ್ಯಾರ್ಥಿಭವನದಲ್ಲಿ ನನ್ನ ವಾಸ್ತವ್ಯವನ್ನು ನಿಗದಿಗೊಳಿಸಲಾಗಿತ್ತು. ಅzಲ್ಲಿಯೇ ನಾನು ಹೈಸ್ಕೂಲು ವಿದ್ಯಾಭ್ಯಾಸವನ್ನು ಒಳ್ಳೆಯ ಅಂಕಗಳೊಂದಿಗೆ ಮುಗಿಸಿದ್ದೆ. ಸಅಂಸ್ಕೃತದ ಮೇಲೆ ಒಲವು ಕಡಿಮೆಯಾಗಿರಲಿಲ್ಲ. ನನ್ನ ತಂದೆಯವರ ಇಚ್ಛೆಯಂತೆ ಅಲ್ಲೇ ಕಾಲೇಜು ಅಧ್ಯಯನ ಶುರುಮಾಡಿದೆ. ಪಿ.ಯು.ಸಿ ಯಲ್ಲಿ ಸಂಸ್ಕೃತ ಐಚ್ಛಿಕ ವಿಷಯವಾಗಿತ್ತು. ಕಾಲೇಜು ವಾತಾವರಣ ನನಗೆ ಅಷ್ಟೊಂದು ಹಿಡಿಸಿರಲಿಲ್ಲ. ಎಲ್ಲರೂ ನನ್ನ ಜುಟ್ಟಿನೊಂದಿಗೆ ಅಪಹಾಸ್ಯ ಮಾಡುತ್ತಿದ್ದರು. ಅಲ್ಲದೆ ನನ್ನ ಪೃಷ್ಠ ಭಾಗ ದೊಡ್ಡದಿದ್ದುದರಿಂದ ಎಲ್ಲರೂ ನನ್ನನ್ನು seat ram ನೆಂದು ಗೇಲಿ ಮಾಡುತ್ತಿದ್ದರು. ಅದನ್ನು ಪರಿಹರಿಸಿಕೊಳ್ಳಲು ವ್ಯಾಯಾಮ ಕಸರತ್ತು ಶುರು ಹಚ್ಚಿಕೊಂಡೆ. ಕ್ರಾಪುಗಳ ಮಧ್ಯೆ ಜುಟ್ಟನ್ನು ಮರೆಮಾಚಿಕೊಂಡೆ. ತಂದೆಯವರಿಗೆ ಇದೆಲ್ಲವೂ ಅರ್ಥವಾಗುತ್ತಿತ್ತು. ರಜೆಗೆಂದು ಊರಿಗೆ ಬಂದಾಗ ಅಗ್ರಹಾರದ ಜನ ಮೂದಲಿಸುವದನ್ನು ಗಂಭೀರವಾಗಿ ಪರಿಗಣಿಸಬೇಡವೆಂದು ಬುಧ್ಧಿ ಹೇಳಿದ್ದರು. ಇವೆಲ್ಲವುಗಳ ನಡುವೆ ನಾನು ಪಿ.ಯು.ಸಿ ಮುಗಿಸಿದ್ದೆ. ತಾಯಿಯ ಕಡೆ ಬಂದ ಸ್ವಲ್ಪ ಜಮೀನನ್ನೂ ಮಾರಿ ನನ್ನ ತಂದೆ ಎಂಜಿನಿಯರಿಂಗ್ ಓದಿಸಲು ಅನುವಾದರು. ಮತ್ತೊಂದು ಯುಧ್ಧಕ್ಕೆ ನಾನು ಸನ್ನಧ್ಧ್ನಾಗುತ್ತಿದ್ದೆ. ದೂರದ ಬೆಂಗಳೂರಿಗೆ ನಾನು ಬಂದು ಬಿದ್ದದ್ದು ನನಗೆ ಬೇಜಾರು ಮೂಡಿಸಿದ್ದರೂ , ನನ್ನನ್ನು ಯಾರೂ ಅಪಹಾಸ್ಯ ಮಾಡುತ್ತಿರಲಿಲ್ಲ. ಇಲ್ಲೂ ಬ್ರಾಹ್ಮಣ ವಿದ್ಯಾರ್ಥಿ ಭವನವೇ ನನಗೆ ಆಶ್ರಯ ನೀಡಿತ್ತು, ನಾನು ಎರಡನೇ ವರ್ಷ ಎಂಜಿನಿಯರಿಂಗ್ ನಲ್ಲಿದ್ದಾಗ ನಮ್ಮ ಊರಿಗೆ ಪ್ರವಾಹದ ಆತಂಕವಿತ್ತು. ನದಿ ಉಕ್ಕಿ ಹರಿಯುತ್ತಿತ್ತು. ನೀರು ತರಲು ಹೋದ ನನ್ನ ತಾಯಿ ಕಾಲು ಜಾರಿ ನೀರುಪಾಲಾಗಿದ್ದಳು. ನಾನು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ತಂದೆಯವರ ಯೋಗಕ್ಷೇಮವನ್ನು ನೋಡಿಕೊಳ್ಳ್ಅಬೇಕೆಂದು ತೀರ್ಮಾನಿಸಿದೆ. ಆದರೆ ತಂದೆ ಹಠ ಹಿಡಿದರು. ಇನ್ನು ಉಳಿದಿರುವದು ಎರಡು ವರ್ಷದ ಓದು ಮಾತ್ರ. ನಂತರ ತಾವೂ ನನ್ನಲ್ಲಿಗೆ ಬಂದು ನೆಲೆಸುವದಾಗಿ ಅಭಯವನ್ನಿತ್ತರು. ನಾನು ಬರಿಗೈಲಿ ವಾಪಸಾದೆ. ಮುಂದಿನ ಎರಡು ವರ್ಷಗಳನ್ನು ಏಕಲವ್ಯನಂತೆ ಅಭ್ಯಾಸದಲ್ಲೇ ದೂಡಿದೆ. ಎಂಜಿನಿಯರಿಂಗ್ ಪಾಸಾಗುತ್ತಿದ್ದಂತೆ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸವೂ ಸಿಕ್ಕಿತು. ಬ್ರಾಹ್ಮಣ ವಿದ್ಯಾರ್ಥಿ ಭವನದಿಂದ ಬಾಡಿಗೆ ಮನೆಯೊಂದಕ್ಕೆ ವಾಸ್ತವ್ಯ ಬದಲಾಯಿಸಿದೆ. ತಂದೆಯವರನ್ನು ಕರೆದುಕೋಡು ಬೇಒಂಗಳುರಿಗೆ ಬರಲೆಂದು ಊರಿಗೆ ನಡೆದೆ. ಅಗ್ರಹಾರದ ಜನ ನನ್ನ ಯಶಸ್ಸಿನ ಬಗ್ಗೆ ಗುಣಗಾನ ಮಾಡಿದರು. ದೇವಸ್ಥಾನದ ವತಿಯಿಂದ ನನ್ನನ್ನು ಸನ್ಮಾನಿಸಲಾಯಿತು. ಅಮ್ಮನ ಅಗಲಿಕೆ ಅಪ್ಪನ ದೇಹವನ್ನು ಕೃಶಗೊಳಿಸಿದ್ದರೂ ಅವರ ಕಣ್ಣುಗಳಲ್ಲಿ ಸಾರ್ಥಕತೆಯಿತ್ತು. ನನ್ನಡೆಗೆ ಮೆಚ್ಚುಗೆಯ ನಗೆ ಸೂಸಿದರು. ಊರಿನಿಂದ ಬೆಂಗಳೂರಿಗೆ ಬಂದ ಸ್ವಲ್ಪ ದಿನಗಳ ಕಾಲ ಅವರು ಸ್ವಲ್ಪ ಮಂಕಾಗಿದ್ದರು. ಬಹುಶಃ ದೇವಸ್ಥಾನ, ಅಗ್ರಹಾರ, ಊರು ಎಲ್ಲವನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದರು. ನಾನು ನನ್ನ ನೌಕರಿಯಲ್ಲಿ ಯಶಸ್ಸು ಗಳಿಸುತ್ತಿದ್ದೆ. ಪ್ರತಿ ಸಂಜೆಯೂ ಭಾಗವತ ಪಾರಾಯಣವನ್ನು ತಂದೆಯವರೊಂದಿಗೆ ಮಾಡುತ್ತಿದ್ದೆ. ಎರಡು ಹೊತ್ತಿನ ಸಂಧ್ಯಾವಂದನೆಯನ್ನು ಬಿಟ್ಟಿರಲಿಲ್ಲ. ನನ್ನ ತಂದೆಯ ವಯಸ್ಸು ಐವತ್ತು ದಾಟಿರದಿದ್ದರೂ , ಅರವತ್ತು ವಯಸ್ಸಿನವರಂತೆ ಕೃಸವಾಗಿದ್ದರು. ಮುಖದಲ್ಲಿ ಮುಪ್ಪಿನ ಸುಕ್ಕುಗಳು ಕಾಣಿಸಲಾರಂಭಿಸಿದವು. ನನ್ನ ಯಶಸ್ಸಿಗೆ ತಮ್ಮಂತೆ ನನ್ನ ತಾಯಿಯೂ ಸಹಭಾಗಿಯಾಗಿದ್ದು, ಅವರು ನನ್ನ ಯಶಸ್ಸನ್ನು ನೋಡಲಾಗಲಿಲ್ಲವೆಂದು ಅವರು ಪರಿತಪಿಸುತ್ತಿದ್ದರು. ಗೋಕುಲಾಷ್ಟಮಿಯ ದಿನ ಭಾಗವತ ಓದುತ್ತಿದ್ದಂತೆ ಭಗವಂತನಿ ಶರಣಾದರು. ಅವರಿಗೆ ಹೃದಯಾಘಾತವಾಗಿತ್ತು. ನಾನು ಅನಾಥನಾಗಿದ್ದೆ. ಹಾಗೆಯೆ ಕೆಲವು ವರ್ಷಗಳನ್ನು ದೂಡಿದ್ದೆನೇನೋ, ಕಂಪನಿಯ ವತಿಯಿಂದ ವಿದೇಶಪ್ರಯಾಣಕ್ಕೆ ಹೋಗಲು ಆದೇಶ ಬಂದಿತ್ತು. ನಾನು ಅಮೆರಿಕಕ್ಕೆ ಪ್ರಯಾಣ ಬೆಳೆಸಿದೆ. ನನ್ನದೆನ್ನುವದು ಇಲ್ಲಿ ಏನೂ ಇರಲಿಲ್ಲ. ಏರ್ ಪೋರ್ಟಿನಲ್ಲಿ ನನ್ನ ಪಾಸ್ ಪೋರ್ಟ ಪರಿಶೀಲಿಸುವದರಲ್ಲಿ ನಾನು ಮತ್ತೆ seet ram ಎಂದು ಕರೆಯಿಸಿಕೊಂಡಿದ್ದೆ. ಹಳೆಕಹಿ ನೆನಪುಗಳಿಂದ ಮನಸ್ಸು ಘಾಸಿಯಾಗಿತ್ತು. ಅಮೆರಿಕಕ್ಕೆ ಹೋದ ಕೆಲವು ತಿಂಗಳುಗಳ ನಂತರ, ಅಲ್ಲಿಯೇ ಬೆರೆ ಕಂಪನಿಯೊಂದರಲ್ಲಿ ಕೆಲಸವನ್ನು ಹುಡುಕಿಕೊಂಡೆ. ನನ್ನ ಅನಾಥಪ್ರಜ್ಞ್ನೆಯನ್ನು ಪ್ರಯತ್ನವನ್ನು ಮೀರುವ ಮೊದಲ ಯತ್ನ ನನ್ನದಾಗಿತ್ತು. ಜುಟ್ಟು ಮಾಯವಾಗಿತ್ತು. ಅಲ್ಲಿಯೇ ನೆಲೆ ಕಂಡುಕೊಂಡೆ. ನನ್ನಂತೆಯೆ ಬಂದು ಅಮೆರಿಕದಲ್ಲಿ ನೆಲೆಸಿದ ಭಾರತೀಯರ ಸಮ್ಮೇಳನವೊಂದರಲ್ಲಿ ಭೇಟಿಯಾದ , ವಿಶ್ವನಾಥ ಭಟ್ಟರು ತಮ್ಮ ಮಗಳು ಹೇಮಾಳನ್ನು ನನಗೆ ಕೊಟ್ಟು ಮದುವೆ ಮಾಡಿಕೊಡುವ ಪ್ರಸ್ತಾವನೆಯನ್ನು ಸಲ್ಲಿಸಿದರು ಹೇಮಾಳು ಕೂಡ ನನ್ನಂತೆಯೆ ನೌಕರಸ್ಥೆ. ಅಲ್ಲಿ ಅವಳು Hem (ಹೆಮ್)ಆಗಿದ್ದಳು, ನಾನು seet(ಸೀತ್) ಆಗಿದ್ದೆ. ನನ್ನದೊಂದು ಸಂಸಾರ ಶುರುವಾಗಿತ್ತು. ಮದುವೆಯಾಗಿ ಎರಡು ವರ್ಷಗಳಾಗಿದ್ದವು, ಒಂದು ರಾತ್ರಿ ನಾನು ವರಾಂಡದಲ್ಲಿ ಕುಳಿತು ಆಕಾಶವನ್ನು ನಿರುಕಿಸುತ್ತಿದ್ದೆ. ವಾಷ್ ಬೇಸಿನ್ನಿನಲ್ಲಿ ಹೇಮಾ ವಾಂತಿ ಮಾಡಿಕೊಳ್ಳುವದು ಕೇಳಿಸಿತು. ಅವಳಲ್ಲಿಗೆ ನಡೆದೆ, Are you alright? ಎಂದೆ.
ಅವಳು ತುಂಟನಗೆಯೊಂದನ್ನು ಬೀರಿದ್ದಳು. ನಾನು ಖುಷಿಯಿಂದ ಅವಳನ್ನು ಅಪ್ಪಿಕೊಂಡೆ. ಅವಳೂ ನನ್ನ ಅಪ್ಪುಗೆಯಲ್ಲಿ ಕರಗಿಹೋದಳು. ಆರು ತಿಂಗಳುಗಳ ನಂತರ ಹೆರಿಗೆಯಾಯಿತು. ಆಪರೇಷನ್ ಥಿಯೇಟರಿನಿಂದ ಹೊರಬಂದ ಡಾಕ್ಟರ್ ಇಂಗ್ಲಿಷನಲ್ಲೇ ತಾಯಿ ಮತ್ತು ಮಗು ಆರೋಗ್ಯಕರವಾಗಿದ್ದಾರೆಂದು ವಿವರಿಸಿ ಹಸ್ತಲಾಘವದೊಂದಿಗೆ ಶುಭಾಶಯ ತಿಳಿಸಿದರು. ಕೆಲವು ಘಂಟೆಗಳ ನಂತರ ಹೇಮಾಳನ್ನು ಮತ್ತು ಮಗುವನ್ನು ವಾರ್ಡ್ ಗೆ ಸ್ಥಳಾಂತರಿಸಲಾಯಿತು. ನಾನು ಪುಳಕಿತಗೊಂಡಿದ್ದೆ. ನಾನು ವಾರ್ಡ್ ನ ಒಳಗೆ ಪ್ರವೇಶಿಸಿದೆ, ಹೇಮಾ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನು ಸಂ=ತೋಷದಿಂದ ತನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದಳು. ನಾನು ಹೋಗಿ ಮಗುವನ್ನು ದಿಟ್ಟಿಸಿದೆ. ಗಂಡೋ , ಹೆಣ್ಣೋ ತಿಳಿಯಲಿಲ್ಲ. ಹೊದಿಸಿದ್ದ ಆಸ್ಪತ್ರೆಯ ವಸ್ತ್ರವನ್ನು ಬದಿಗೆ ಸರಿಸಿದೆ. ಗಂದುಮಗುವಾಗಿತ್ತು. ಹೇಮಾ ಸಂತೃಪ್ತಿಯ ನಗೆಯೊಂದನ್ನು ನನ್ನೆಡೆಗೆ ಬೀರಿದ್ದಳು. ಅಷ್ಟರಲ್ಲೇ ಆಸ್ಪತ್ರೆಯ ನರ್ಸ್ ಬಂದು ನನ್ನ ಹೊರಹೋಗುವಂತೆ ಸೂಚಿಸಿದಳು. ನಾನು ಹೇಮಾಳ ಯೋಗಕ್ಷೇಮ ವಿಚಾರಿಸಿಕೊಂಡು ಹೊರಬಂದೆ. ಮನಸ್ಸು ಆನಂದದಲ್ಲಿ ತೇಲುತ್ತಿದ್ದೆ. ತಕ್ಷಣವೇ ನೆನಪಾಯಿತು. ಮಗುವಿಗೆ ಏನೆಂದು ಹೆಸರಿಡಬೇಕೆಂದು. ನನ್ನ ತಂದೆ ತಮ್ಮ ತಾತನ ಹೆಸರನ್ನು ನನಗೆ ಇಟ್ಟಿದ್ದನ್ನು ನೆನಪಿಸಿಕೊಂಡೆ. ನಾನೂ ಹಾಗೆಯೇ ದೇವಶರ್ಮಶಾಸ್ತ್ರಿಯೆಂದು ನಾಮಕರಣ ಮಾಡಬೇಕೆಂದು ನಿರ್ಧರಿಸಿದೆ. ಆದರೆ ನನ್ನ ಹೆಸರಿನಿಂದ ನಡೆದ ಕಹಿ ಘಟನೆಗಳು ಕಣ್ಮುಂದೆ ಸರಿದು ಹೋದವು. ದೇವಶರ್ಮಶಾಸ್ತ್ರಿ ಅಮೆರಿಕದಲ್ಲಿ Dev ಆಗುತ್ತಾನೆ. ಅದನ್ನು ಇಲ್ಲಿ ಅಪಭ್ರಂಶಗೊಳಿಸಿ ಕುಚೋದ್ಯದ ವಸ್ತುವನ್ನಾಗಿಸಿದರೆ ಅದು ತಮ್ಮ ತಾತನವರಿಗೆ ಮಾಡುವ ಅವಮಾನವೆಂದೆನಿಸಿತು. ಮರುಕ್ಷಣವೇ ಮೊಬೈಲಿನಲ್ಲಿ ಗೂಗಲ್ ನನ್ನ ಕೆಲಸ ಮಾಡುತ್ತಿತ್ತು.
Thursday, January 10, 2013 0 comments

ಈ ಹೊತ್ತಿಗೆ , ಈ ಹೊತ್ತಿಗೆ, ಭಾಗ-೪

ಈ ಸರಣಿ ಅಂಕಣದ ಯಶಸ್ಸಿನ ಹಿನ್ನೆಲೆಯಲ್ಲಿ ಈ ಭಾಗವನ್ನು ಬರೆಯುತ್ತಿದ್ದೇನೆ. ಈ ಬಾರಿಯ ಅಂಕಣದ ಪುಸ್ತಕ ನಾನು ಬಹುದಿನಗಳ ಕಾಲ ಹುಡುಕಿದ ಮೇಲೆ ಸಿಕ್ಕಿದ್ದು, ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಆದರೆ ಮತ್ತೆ ಏನೋ ಕುತೂಹಲ. ಮತ್ತೆ ಮತ್ತೆ ಓದಬೇಕೆಂಬ ತವಕ. ಈ ಪುಸ್ತಕವನ್ನು ಎಷ್ಟು ಬಾರಿ ಓದಿದರೂ ಕಡಿಮೆಯೇ. ಈ ಪುಸ್ತಕದ ಲೇಖಕರ ಬಗ್ಗೆ ನನ್ನಲ್ಲಿ ಹೆಚ್ಚು ಮಾಹಿತಿ ಇಲ್ಲ. ಆದರೆ ಅವರ ಕೆಲವು ಪುಸ್ತಕಗಳನ್ನು ಓದಿದ್ದು ಮತ್ತು ಅವುಗಳ ಸ್ವಾದವನ್ನು ಚಪ್ಪರಿಸಿದ್ದು ನನ್ನ ಭಾಗ್ಯವೇ ಸರಿ. ವಿಷಯಕ್ಕೆ ಬರೋಣ.
ಪುಸ್ತಕದ ಹೆಸರು : ಅಪೂರ್ವರೊಡನೆ.
ಲೇಖಕರು: ಬಿ.ಎಸ್. ಕೇಶವರಾವ್.
ಪ್ರಕಾಶಕರು: ಐ.ಬಿ.ಎಚ್ ಪ್ರಕಾಶನ, ನಂ೭೭, ೨ನೇ ಮುಖ್ಯರಸ್ತೆ, ಬಿ.ಎಸ್.ಕೆ ೩ನೇ ಹಂತ, ಬೆಂಗಳೂರು-೮೫
ಬೆಲೆ: ೧೪೦ ರೂ.
ಈ ಪುಸ್ತಕ ಎಲ್ಲಾ ಪುಸ್ತಕಗಳಿಂದ ವಿಭಿನ್ನ. ಈ ಪುಸ್ತಕದ ಉದ್ದೇಶವಂತೂ ಶ್ಲಾಘನೀಯ. ಈ ಪುಸ್ತಕವು ೨೬ ಅಪೂರ್ವ ವ್ಯಕ್ತಿಗಳನ್ನು ನಿಮಗೆ ಪರಿಚಯಿಸುತ್ತದೆ. ಆ ಅಪೂರ್ವ ವ್ಯಕ್ತಿಗಳಾದರೂ ಯಾರು? ಅ.ನ.ಕೃ, ವೈ,ಎನ್,ಕೆ, ಚದುರಂಗ, ದ.ರಾ.ಬೇಂದ್ರೆ, ಡಿ.ವಿ.ಗುಂಡಪ್ಪ, ನಟ ಬಾಲಕೃಷ್ಣ, ಮೈಸೂರು ಅನಂತಸ್ವಾಮಿಯಂತಹ ಪರಿಚಿತರ ಜೊತೆಗೆ, ಗುಂತ್ಕಲ್ ಗುಂಡಪ್ಪ, ಡಾ||ಕೌಲಗುಡ್ಡ, ಸಂಶೋಧಕ, ಕೈಗಾರಿಕೋದ್ಯಮಿ ಜಿ.ಡಿ.ನಾಯ್ಡು, ನೃತ್ಯಪಟು ಗೋಪಿಕೃಷ್ಣ, ದೇವುಡು ನರಸಿಂಹಶಾಸ್ತ್ರಿಯಂತಹ ಅಪೂರ್ವ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಕೊಡುವಲ್ಲಿ ಪುಸ್ತಕ ಯಶಸ್ವಿಯಾಗಿದೆ. ಇದು ಒಂದು ಅಪೂರ್ವ ಲೇಖನಗಳ ಸಂಗ್ರಹ. ಈ ಲೇಖನಗಳು ಬಿಡಿ ಬಿಡಿಯಾಗಿ ಕನ್ನಡಪ್ರಭ, ಪ್ರಜಾವಾಣಿ, ಸ್ಟಾರ್, ಮೈಸೂರು ಮಿತ್ರ, ಮತ್ತು ಇತರೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದುಂಟು.
ಈ ಬಿಡಿ ಲೇಖನಗಳ ಸಂಗ್ರಹವೇ ಈ ಪುಸ್ತಕ, "ಅಪೂರ್ವರೊಡನೆ". ಈ ಪುಸ್ತಕದಲ್ಲಿ ಚಿತ್ರಿಸಲೆತ್ನಿಸಿರುವ ಎಲ್ಲಾ ವ್ಯಕ್ತಿಗಳು ನಿಜಕ್ಕೂ ಅಪೂರ್ವರು ಮತ್ತು ಅಸಾಮಾನ್ಯರು.
ಈ ಪುಸ್ತಕದ ಪರಿಚಯ ಸ್ವಲ್ಪ ರೋಚಕವಾಗಲು ಕೆಲವು ಮುಖ್ಯ ಸಂಗತಿಗಳನ್ನು ಮೊದಲೇ ಹೇಳಲಿಚ್ಛಿಸುತ್ತೇನೆ.
೧) ಅವರು ಜಯಚಾಮರಾಜ ಒಡೆಯರ ಒಡನಾಡಿ, ಸಹಪಾಠಿ. ಅರಮನೆಯ ಅರಸು ಜನರಿಗೆಂದೇ ಮೀಸಲಾದಂತಿದ್ದ ರಾಯಲ್ ಸ್ಕೂಲಿನಲ್ಲಿ, ಅರಸರ ಜೊತೆಗೇ ಓದಿದವರು. ಅರಸರ ಜೊತೆ ಒಂದೇ ತಟ್ಟೆಯನ್ನು ಹಂಚಿಕೊಂಡವರು. ಆದರೆ ಈ ಹಟವಾದಿ, ಸೌಜನ್ಯದ ಸಾಕಾರಮೂರ್ತಿ, ಅರಸರ ದಯಾದೃಷ್ಟಿಯನ್ನು ಧಿಕ್ಕರಿಸಿ, ಸಾಧಾರಣ ಜೀವನವನ್ನು ತಮ್ಮ ಸಾಧಾರಣ ಮನೆಯಲ್ಲೇ ನಡೆಸಿದವರು. ಅಮೆರಿಕದ ಎಂ.ಜಿ.ಎಂ ಸಂಸ್ಥೆಯ ಚಿತ್ರವೊಂದಕ್ಕೆ ಸಹನಿರ್ದೇಶಕರಾಗಿ ಕೆಲಸ ಮಾಡಿದವರು. ೧೯೪೮ರಲ್ಲೇ ತಮ್ಮದೇ ಕಾದಂಬರಿ 'ಸರ್ವಮಂಗಳ' ವನ್ನು ಚಿತ್ರಿಸಿ, ರಾಜ್ಯ ಪ್ರಶಸ್ತಿಯಲ್ಲದೇ, ಮೂರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವರು. ಅವರು ಮೊದಲ ತಮ್ಮ ಕಥಾಸಂಕಲನಕ್ಕೆ ಮುನ್ನುಡಿ ಬರೆಯಲು ಕಥೆಗಾರರೊಬ್ಬರು ತಿರಸ್ಕಿರಿಸಿದಾಗ, ಬರವಣಿಗೆಯನ್ನೇ ನಿಲ್ಲಿಸಲು ಹೊರಟಿದ್ದವರು. ಆದರೆ ಅ.ನ.ಕೃ ಅವರ ಸಹೃದಯತೆಯ ಮುನ್ನುಡಿಯೊಂದಿಗೆ ಅವರು ಸಾಹಿತ್ಯ ಜಗತ್ತಿಗೆ ಪರಿಚಿತರಾದರು. ಅವರ ಹೆಸರು ಸುಬ್ರಹ್ಮಣ್ಯಂ ರಾಜೇ ಅರಸ್ ಅಥವಾ 'ಚದುರಂಗ'.
೨) ಅವರು ಪತ್ರಿಕಾ ಸಂಪಾದಕರು, ಅದಲ್ಲದೆ, ೧೧೨ ಸಾಮಾಜಿಕ ಕಾದಂಬರಿಗಳು, ಹದಿನಾಲ್ಕು ಐತಿಹಾಸಿಕ ಕಾದಂಬರಿಗಳು, ಎಂಟು ಕಥಾ ಸಂಕಲನಗಳು, ಹನ್ನೊಂದು ಸಾಮಾಜಿಕ ನಾಟಕಗಳು, ನಾಲ್ಕು ಪೌರಾಣಿಕ ನಾಟಕಗಳು, ಏಳು ಐತಿಹಾಸಿಕ ನಾಟಕಗಳು, ಪ್ರಭಂಧ ಮತ್ತು ವಿಮರ್ಶೆಗೆ ಸಂಭಂದಿಸಿದಂತೆ ಇಪ್ಪತ್ತೊಂದು ಕೃತಿಗಳು, ಹನ್ನೆರಡು ಜೀವನ್ ಚರಿತ್ರೆಗಳು, ಹನ್ನೊಂದು ಸಂಪಾದಿತ ಕೃತಿಗಳು, , ನಾಲ್ಕು ಅನುವಾದಗಳು , , ಅಲ್ಲದೆ ಪತ್ರಿಕಾ ಸಂಪಾದಕರಾಗಿ ನೂರಾರು ಲೇಖನಗಳು, ಹಲವಾರು ಚಿತ್ರಗಳಿಗೆ ಚಿತ್ರಸಾಹಿತ್ಯ, ಶಿಶುಸಾಹಿತ್ಯ. ಒಟ್ಟಾರೆ ಮುದ್ರಿತ ಪುಟಗಳ ಸಂಖ್ಯೆ, ೮೦,೦೦೦ಕ್ಕೂ ಹೆಚ್ಹು. ಅಲ್ಲದೆ ಹಲವು ಸಂಘಸಂಸ್ಥೆಗಳ ಒಡನಾಡ, ಸಮಾರಂಭ, ಚಳುವಳಿಗಳಲ್ಲಿ ಭಾಗಿ, ಅವರ ಹೆಸರು ಅ.ನ.ಕೃ. ಅದಕ್ಕೇ ಅವರು ಕನ್ನಡದ ಕಟ್ಟಾಳು.
೩) ಅವರು ಕಾಲೇಜಿನಲ್ಲಿ ಹೆಚ್ಚೇನೂ ಕಲಿತವರಲ್ಲ. ಆದರೆ ಓದುತ್ತಿದ್ದುದು ಬರೀ ಆಂಗ್ಲ ಸಾಹಿತ್ಯವನ್ನು. ಹೆಂಡತಿಯ ಒತ್ತಾಯದ ಮೇರೆಗೆ, ಆಂಗ್ಲ ಪತ್ರಿಕೆಯಯಲ್ಲಿ ಮುಚ್ಹಿಟ್ಟುಕೊಂಡು ಒಂದು ಪುಸ್ತಕವನ್ನು ಓದಿದರು. ಆ ಪುಸ್ತಕದ ಕತೃ ಅ.ನ.ಕೃ ರವರನ್ನೇ ಗುರುವಾಗಿ ಸ್ವೀಕರಿಸಿದವರು. ೬೩ ಕನ್ನಡ ಕೃತಿಗಳನ್ನು ರಚಿಸಿ ಬೆಂಗಳೂರಿನ ಶಾಂತಿನಗರದ ನಂಜಪ್ಪ ರಸ್ತೆಯಲ್ಲಿ 'ತಿಂಮನ ಮನೆ'ಯಲ್ಲಿ ಬೇರೂರಿದವರು. ಆದರೂ ಅವರು ಗುರುತಿಸಲ್ಪಡುವದು ಬಳ್ಳಾರಿ ಭೀಮಸೇನರಾವ್ ಎಂದೇ. ಆಂಗ್ಲ ಭಾಷಾ ಪ್ರೇಮದಲ್ಲಿಯೂ ಕನ್ನಡ ಕೃಷಿ ಮಾಡಿದ ಅವರ ಹೆಸರು ಬೀchi.
೪)ಅವರು ಖ್ಯಾತ ಚಿತ್ರನಟ, ಹಾಸ್ಯನಟನಾಗಿಯೂ, ಖಳನಾಯಕನಾಗಿಯೂ ಮತ್ತೂ ಪೋಷಕನಟನಾಗಿಯೂ ನಮಗೆ ಪರಿಚಿತ. ಅವರು ೧೯೪೮-೪೯ ರ ಸುಮಾರಿಗೆ ಮೈಸೂರಿನ ರತ್ನಾವಳಿ ನಾಟಕ ಕಂಪನಿಯಲ್ಲಿ ನಾಟಕವಾಡುತ್ತಿದ್ದರು. ಅಲ್ಲಿನ ವರಮಾನ ಸಾಕಾಗದೆ, ಶಿವರಾಮ ಪೇಟೆಯಲ್ಲಿ ಎರಡು ರೂಪಾಯಿಗೆ ಮಳಿಗೆಯೊಂದನ್ನು ಬಾಡಿಗೆಗೆ ಪಡೆದು, ಅಲ್ಲಿ ಜಲಚಿತ್ರಗಳನ್ನು ಬಿಡಿಸುತ್ತಿದ್ದರು. ಬಿಡಿಸಿದ ಚಿತ್ರಗಳನ್ನು ದೇವರಾಜ್ ಮಾರ್ಕೆಟ್( ಈಗಿನ ಗುರು ಸ್ವೀಟ್ ಮಾರ್ಟ)ನ ಮುಂಭಾಗದಲ್ಲಿ, ಯಾರಿಗೂ ತಮ್ಮ ಗುರುತು ಸಿಗಬಾರದೆಂದು ತಲೆಗೆ ಮುಂಡಾಸು ಧರಿಸಿ ಮಾರುತ್ತಿದ್ದರು. ಅವರೇ ನಮ್ಮ ಪ್ರೀತಿಯ ಬಾಲಣ್ಣ ಅಂದರೆ, ಟಿ.ಎನ್.ಬಾಲಕೃಷ್ಣ.
ಈ ಕೆಲವು ಸಂಗತಿಗಳು ನಿಮ್ಮನ್ನು ಕುತೂಹಲವಾಗಿಸುತ್ತವೆಂದು ನಂಬಿದ್ದೇನೆ. ಈ ೨೬ ಅಪೂರ್ವ , ಅಸಾಮಾನ್ಯ ವ್ಯಕ್ತಿಗಳ ಪರಿಚಯ ನಮ್ಮಲ್ಲೊಂದು ವಿಶಿಷ್ಟ ಅನುಭವವನ್ನು ಮೂಡಿಸುತ್ತದೆ. ಆ ಅನುಭವವನ್ನು ನೀಡಿದ ಬಿ.ಎಸ್.ಕೇಶವರಾವ್ ಅವರಿಗೆ ನಾನು ಋಣಿ. ಪುಸ್ತಕವನ್ನು ಓದಿ, ಆನಂದಿಸಿ. ಇದು ನಿಮ್ಮ ಸಂಗ್ರಹದಲ್ಲಿ ಇರಲೇಬೇಕಾದ ಪುಸ್ತಕಗಳಲ್ಲೊಂದು.
Friday, January 4, 2013 0 comments

ಮೂಕಸಾಕ್ಷಿ

           ಅದೊಂದು ನೀರವ ರಾತ್ರಿ ಎಂದೆನಿಸಿತು ಗಣೇಶನಿಗೆ.ತನ್ನ ರೂಮಿನಲ್ಲಿ ಶತಪಥ ತಿರುಗುತ್ತಿದ್ದ. ಕಿಟಕಿಯಿಂದ ಬೃಹದಾಕಾರದ ಆಲದಮರದ ಬಿಳಲುಗಳು ವಿಚಿತ್ರವಾಗಿ ಕಾಣುತ್ತಿದ್ದವು. ಹಕ್ಕಿಗಳ ಕಲರವ ಇಂಪೆನಿಸಲಿಲ್ಲ. ಸಂಜೆ ಡಾಕ್ಟರ್ ಹೇಳಿದ ಮಾತುಗಳು ಕಿವಿಯಲ್ಲಿ ಆಡುತ್ತಿದ್ದವು. ತಲೆಯಲ್ಲಿ ವಿಚಾರಗಳ ದೊಂಬರಾಟ ನಡೆಯುತ್ತಿತ್ತು. ಮೃತ್ಯು ಹೊಸ್ತಿಲ ಬಳಿಯಲ್ಲೇ ಹೊಂಚು ಹಾಕಿ ಕಾದಂತಿತ್ತು. ತನಗೆ ರಕ್ತದ ಕ್ಯಾನರ್ ಇದೆ ಎಂದರೆ ತನಗೆ ನಂಬಲಾಗಲಿಲ್ಲ. ಹೆಚ್ಚೆಂದರೆ ಮೂರು ತಿಂಗಳು ಬದುಕಬಹುದು ಎಂದು ಡಾಕ್ಟರ್ ಹೇಳಿದ್ದರು. ಮತ್ತು ಕೆಲವು ಮಾತ್ರೆಗಳನ್ನು ಕೂಡ ಬರೆದು ಕೊಟ್ಟಿದ್ದರು. ಮೂರು ತಿಂಗಳ ಬದುಕಿಗೆ ಮಾತ್ರೆ ಅವಶ್ಯ ಎಂದೆನಿಸಲಿಲ್ಲವೆಂದು ಔಷಧಿ ಅಂಗಡಿವರೆಗೆ ಹೋಗಿ ಬರಿಗೈಲಿ ವಾಪಸ್ ಬಂದಿದ್ದ. ತನಗೆ ಆಗಿರುವ ವಯಸ್ಸೆಷ್ಟು ಎಂಬುದನ್ನು ಲೆಕ್ಕ ಹಾಕತೊಡಗಿದ. ಬರುವ ಗಣಪತಿ ಹಬ್ಬಕ್ಕೆ, ಮೂವತ್ತೈದು ಮುಗಿಯುತ್ತದೆ. ಮೂವತ್ತಾರನೇ ವಯಸ್ಸಿಗೆ ತಾನು ಸಾಯುತ್ತೇನೆ ಎಂದರೆ ಅವನಿಗೇ ನಂಬಲಾಗಲಿಲ್ಲ.
           'ಕಾಲು ತೊಳ್ಕೊಂಡು ಅವಲಕ್ಕಿ ತಿನ್ನೊ, ಅದೇನು ಯಾವಾಗಲೂ ರೂಮಲ್ಲೇ ಬಿದ್ದಿರ್ತೀಯಾ, ಅದೇನು ಒದ್ತೀಯೋ' ಅಮ್ಮನ ಗದರುವಿಕೆ ಸಾಯಂಕಾಲದ ನಿದ್ರೆಯನ್ನು ಹಾಳುಮಾಡಿತ್ತು. ಪಿ.ಯು.ಸಿ ಮೊದಲನೇ ವರ್ಷದಲ್ಲಿ ಓದುತ್ತಿದ್ದ ಗಣೇಶ, ಕಾಲೇಜಿಗೆ ಹೋಗಿ ಬಂದ ನಂತರ ತನ್ನ ರೂಮ್ ಬಿಟ್ಟು ಕದಲುತ್ತಿರಲಿಲ್ಲ. ಅಣ್ಣ ರಮೇಶ ಮತ್ತು ತಮ್ಮ ಸತೀಶನೊಂದಿಗೆ ಕೂಡ ಮಾತು ಕಡಿಮೆ. ಅತ್ತಿಗೆ ಶಾಂಭವಿ ಕೂಡ ಅಷ್ಟಕ್ಕಷ್ಟೆ. ಅಪ್ಪನ ಸಾವಿನ ನಂತರ ಮನೆಯ ಜವಾಬ್ದಾರಿಯನ್ನೆಲ್ಲ ಅಣ್ಣ ರಮೇಶನೇ ಹೊತ್ತಿದ್ದ. ತಮ್ಮ ಸತೀಶನಂತೂ ಇವನ ಇರುವಿಕೆಯನ್ನು ಉಪೇಕ್ಷಿಸಿದ್ದ. ಅಮ್ಮನಿಗೆ ಭಾರತ, ಭಾಗವತಗಳೇ ಸಂಗಾತಿಯಾಗಿದ್ದವು. ಅಮ್ಮ ಮನೆಯ ಎದುರುಗಡೆಯ ಆಲದಮರದ ನೆರಳಿನಲ್ಲಿ ಕುಳಿತು ಭಾಗವತ ಓದುತ್ತಿದ್ದಳು. ಅವಳ ಜೊತೆ ಆಗಾಗ ಮೂಲೆಮನೆಯ ವೆಂಕಮ್ಮನೂ ಜೊತೆಯಾಗುತ್ತಿದ್ದಳು. ವೆಂಕಮ್ಮ ಬಂದಳೆಂದರೆ ಅಮ್ಮನಿಗೇಕೋ ಸಮಾಧಾನ. ಅವಳು ತನ್ನ ತವರೂರು ರಾಯಚೂರಿನವಳೆಂದು ಅವಳ ಮೇಲೆ ಅಭಿಮಾನ. ಅಲ್ಲದೇ ಅವಳು ತನ್ನ ತವರೂರಿನ ವಿಷಯವನ್ನೆಲ್ಲ ಅಮ್ಮನಿಗೆ ಅರುಹುತ್ತಿದ್ದಳು. ಹೀಗೆ ವೆಂಕಮ್ಮ ಬಂದಾಗೆಲ್ಲ ಅಮ್ಮನ ಭಾಗವತ ವಾಚನ ನಿಲ್ಲುತ್ತಿತ್ತು.
       ಗಣೇಶ ತನ್ನ ಪದವಿ ಮುಗಿಸುವಷ್ಟರಲ್ಲಿ, ಅವನಿಗೆ ಮೌನವೇ ಸಂಗಾತಿಯಾಗಿತ್ತು. ಮನೆಯಲ್ಲಿ ಯಾರೊಂದಿಗೂ ಅವನು ಬೆರೆಯುತ್ತಿರಲಿಲ್ಲ. ಅವನಿಗೆ ಅದೇ ಊರಿನ ಗ್ರಂಥಾಲಯದ ಗ್ರಂಥಪಾಲಕನಾಗಿ ಕೆಲಸವೂ ಸಿಕ್ಕಿತ್ತು. ಇನ್ನೇನು , ಪುಸ್ತಕಗಳೇ ಅವನ ಸಂಗಾತಿಗಳಾಗಿದ್ದವು. ವಿದ್ಯಾರ್ಥಿಯಾಗಿದ್ದಾಗ ಕಾಲೇಜಿನ ಲೈಬ್ರರಿಯಲ್ಲಿದ್ದ ಕನ್ನಡದ ಹಲವಾರು ಪುಸ್ತಕಗಳನ್ನು ಅವನು ಓದಿದ್ದ. ಬೇಂದ್ರೆ, ಕುವೆಂಪುರವರಿಂದ ರಹಮತ್ ತರೀಕೆರೆ ವರೆಗೆ ಓದಿದ್ದ. ಈಗ ಗ್ರಂಥಪಾಲಕನಾದ ಮೇಲಂತೂ ಹಳಕನ್ನಡವನ್ನು ಓದಲು ಶುರು ಮಾಡಿದ. ಆದರೂ ಅವನ ಮೌನ ಮತ್ತು ಓದು ಎಲ್ಲರನ್ನು ಕುತೂಹಲಗೊಳಿಸಿತ್ತು. ಕೆಲವೊಮ್ಮೆ ಅವನೂ ಏನೂ ಓದುತ್ತಿರಲಿಲ್ಲ. ಸುಮ್ಮನೆ ಗೋಡೆ ದಿಟ್ಟಿಸಿಕೊಂಡು ಕುಳಿತಿರುತ್ತಿದ್ದ. ಆಗಾಗ ಪಕ್ಕದೂರಿಗೆ ಹೋಗಿ ಬರುತ್ತಿದ್ದ. ಒಮ್ಮೆ ಹೋದನೆಂದರೆ ಎರಡು ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಮನೆಯವರ ಪ್ರಶ್ನೆಗಳಿಗೆ ಅವನ ಮೌನವೇ ಉತ್ತರವಾಗಿತ್ತು. ಕೆಲವು ದಿನಗಳಲ್ಲೇ ರಮೇಶನ ಗೆಳೆಯ ಅರವಿಂದ ಸುದ್ದಿಯೊಂದನ್ನು ಹೊತ್ತು ತಂದಿದ್ದ. ಪಕ್ಕದ ಊರಿನ ಸಿನಿಮಾ ಥೇಯಿಟರಿನೊದರಲ್ಲಿ ತಾನು ಗಣೇಶನನ್ನು ನೋಡಿದ್ದಾಗಿಯೂ ,ಅವನ ಜೊತೆ ಯುವತಿಯೊಬ್ಬಳಿದ್ದಳೆಂದು ಮನೆಯಲ್ಲಿ ಸುದ್ದಿಯನ್ನು ಬಿತ್ತಿದ್ದ. ಮನೆಯೆಲ್ಲಾ ಕೆಂಡ ತುಂಬಿದಂತಾಗಿತ್ತು. ಅಮ್ಮ, ಅಣ್ಣ, ಅತ್ತಿಗೆ ಮತ್ತು ಸತೀಶ ತನ್ನ ಮೇಲೆ ಎಸೆದ ಪ್ರಶ್ನೆಗಳಿಗೆ ಗಣೇಶ ಉತ್ತರವಿತ್ತಿದ್ದ. 'ಹೌದು. ನಾನು ಯುವತಿಯೊಬ್ಬಳೊಂದಿಗೆ ಸಿನಿಮಾಗೆ ಹೋಗಿದ್ದು ನಿಜ. ಅವಳ ಹೆಸರು ಕಮಲ, ಆಗಾಗ ಅವಳ ಮನೆಯಲ್ಲಿ ಇರುತ್ತಿದ್ದುದೂ ನಿಜ, ಹಾಗೆಂದು ನನಗೂ ಅವಳಿಗೂ ಯಾವುದೇ ದೈಹಿಕ ಸಂಭಂಧವೇನಿಲ್ಲ. ಅವಳು ನನ್ನ ಸಹಪಾಠಿಯ ಅಕ್ಕ. ವಿಧವೆ. ನನಗಿಂತ ಬಲ್ಲವಳು, ಒಬ್ಬ ಒಳ್ಳೆಯ ಸ್ನೇಹಿತೆ ಅಷ್ಟೆ' ಎಂದವನೇ ತನ್ನ ರೂಮಿನೊಳಗೆ ಹೊಕ್ಕಿದ್ದ, ಅವತ್ತಿನಿಂದಲೇ ಗಣೇಶನಿಗೆ ಹೆಣ್ಣು ನೋಡಲು ಎಲ್ಲರೂ ನಿರ್ಧರಿಸಿದರು. ಅದಕ್ಕ್ಯಾವುದಕ್ಕೂ ಗಣೇಶ ಕಿವಿಗೊಡಲಿಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಮತ್ತು ತನ್ನ ಪುಸ್ತಕಗಳು. ಇವಷ್ಟೆ ಅವನ ಲೋಕವಾಗಿದ್ದವು. ಒಮ್ಮೊಮ್ಮೆ ಕಮಲ ಅವನಿಗೆ ಕಾಫ್ಕಾನ METAMORPHOSIS ಉಲ್ಲೇಖಿಸಿ ನಗೆಯಾಡುತ್ತಿದ್ದಳು. ಗಣೇಶನಿಗೂ ಅನ್ನಿಸುತ್ತಿತ್ತು, ತಾನು ರೂಮಲ್ಲೇ ಹುಳುವಾದರೆ?. ಆವಾಗೆಲ್ಲಾ ಅಮ್ಮ, ಅಣ್ಣ, ಅತ್ತಿಗೆ, ಮತ್ತು ತಮ್ಮನ ಪಾಡನ್ನು ನೆನೆಸಿಕೊಂಡು ಅವನ ತುಟಿ ಮೇಲೆ ಸಣ್ಣ ನಗು ಹಾಯುತ್ತಿತ್ತು.
           ಗಣೇಶನ ಕೆಮ್ಮು, ಗಣೇಶನ ನಿದ್ರೆಯನ್ನಲ್ಲದೇ ಮನೆಯವರ ನಿದ್ರೆಯನ್ನು ಕೂಡ ಕೆಡಿಸಿತ್ತು. ' ಎರಡು ಎಲೆ ತುಳಸಿಯನ್ನಾದ್ರೂ ತಿನ್ನು, ಕೆಮ್ಮು ವಾಸಿಯಾಗುತ್ತೆ' ಎಂದು ಕೂಗಿದಳು ಅಮ್ಮ. ಸರಿ ಎಂದು ಮಲಗಿದ. ಮುಂಜಾನೆ ಎಲ್ಲರೂ ಉಪಾಹಾರಕ್ಕೆಂದು ಕುಳಿತಾಗ ಗಣೇಶನೂ ಅವರ ಜೊತೆಯಾದ. ಎಲ್ಲರಿಗೂ ಆಶ್ಚರ್ಯವಾಗಿತ್ತು. ಗಣೇಶನೇ ಅವರಿಗೆ ಹೇಳಿದ, ತನಗೆ ಬ್ಲಡ್ ಕ್ಯಾನ್ಸರ್ ಎಂದೂ, ಹೆಚ್ಚೆಂದರೆ ಇನ್ನು ಮೂರು ತಿಂಗಳು ಬದುಕಬಹುದೆಂದು ಡಾಕ್ಟರ್ ಹೇಳಿದ್ದಾರೆಂದ. ಎಲ್ಲರೂ ಸ್ಥಬ್ಧರಾಗಿದ್ದರು. ಯಾರಿಗೂ ಮಾತು ತೋಚುತ್ತಿಲ್ಲ. ಅಂದಿನಿಂದ ಅವನ ಜೀವನ ಶೈಲಿ ಏನೂ ಬದಲಾಗದಿದ್ದರೂ , ಮನೆಯ ಸದಸ್ಯರೆಲ್ಲರೂ ಅವನನ್ನು ವಿಚಿತ್ರ ಕನಿಕರದಿಂದ ನೋಡುತ್ತಿದ್ದರು. ಕೊನೆಗೆ ಅವನೇ ನಿರ್ಧರಿಸಿದ. ತನ್ನ, ಕೆಮ್ಮು ಮತ್ತು ಆರೈಕೆಯಿಂದಾಗಿ ಮನೆಯ ಇತರ ಸದಸ್ಯ್ರರಿಗೆ ತೊಂದರೆಯಾಗಬಾರದೆಂದು ನಿರ್ಧರಿಸಿ ಬಾಡಿಗೆ ಕೋಣೆಯೊಂದಕ್ಕೆ ತನ್ನ ವಾಸ್ತವ್ಯವನ್ನು ಬದಲಾಯಿಸಿದ. ಕೆಲಸಕ್ಕೆ ರಾಜೀನಾಮೆ ನೀಡಿದ. ಊಟ ಮತ್ತು ತಿಂಡಿಗೆ ಮಾತ್ರ ಮನೆಗೆ ಬರುತ್ತಿದ್ದ. ಹುಲುಸಾಗಿ ಗಡ್ಡ ಬೆಳೆದಿತ್ತು. ಕಣ್ಣುಗಳು ಗುಳಿ ಬಿದ್ದಿದ್ದವು. ಆಗಾಗ ತಮ್ಮ ಸತೀಶನೇ ಅವನಿಗೆ ಊಟವನ್ನು ಒಯ್ಯುತ್ತಿದ್ದ. ಎರಡು ದಿನಗಳಿಂದ ಊಟಕ್ಕೆ ಬಂದಿಲ್ಲವೆಂದು, ಮತ್ತು ತಮ್ಮ ಸತೀಶ ಕಾಲೇಜಿನಿಂದ ಟೂರ್ ಗೆ ಹೋಗಿದ್ದೆಂದು, ಅಣ್ಣ ರಮೇಶನೇ ಅವನಿಗೆ ಊಟ ತಂದಿದ್ದ. ಎಷ್ಟು ಬಡಿದರೂ ಬಾಗಿಲು ತೆರೆಯದೇ ಇದ್ದಾಗ, ರಮೇಶ ತಣ್ಣಗೆ ನಡುಗಿದ. ಬಾಗಿಲು ಮುರಿದು ಒಳಹೊಕ್ಕಾಗ ಗಣೇಶ ಚಿರನಿದ್ರೆಯಲ್ಲಿದ್ದ.
             ಗಣೇಶನ ಅಂತ್ಯಕ್ರಿಯೆಗೆ ಅವಳೂ ಬಂದಿದ್ದಳು. ಅವಳ ಕಣ್ಣಂಚಿನಲ್ಲಿದ್ದ ಹನಿ ಯಾರಿಗೂ ಕಾಣಲಿಲ್ಲ. ಎಲ್ಲರ ಕಣ್ಣಲ್ಲೂ ಅವಳ ಬಗ್ಗೆ ತಾತ್ಸಾರವಿತ್ತು. ಯಾರೂ ಅಳುತ್ತಿರಲಿಲ್ಲ. ಕೆಲವು ದಿನಗಳಲ್ಲೇ ಅವನು ಅವಳ ಮನೆಯಲ್ಲಿದ್ದಾಗಲೆಲ್ಲ ಅವನು ಬರೆದ ಒಂದು ಪುಟ್ಟ ಕೃತಿಯನ್ನು ಪ್ರಕಟಿಸಲಾಯಿತು. 'ಮೀನಿನ ಹೆಜ್ಜೆ' ಎಂಬ ಆ ಸಣ್ಣ ಕಾದಂಬರಿ ಜನಪ್ರಿಯವಾಯಿತು. ಮನೆಯ ಸದಸ್ಯರೆಲ್ಲರೂ ಪುಸ್ತಕದಿಂದ ಬಂದ ರಾಯಧನದಿಂದ ಖುಶಿಯಾಗಿದ್ದರೂ, ಯಾರೂ ಆ ಪುಸ್ತಕವನ್ನು ಓದಿರಲಿಲ್ಲ. ಕೆಲವು ತಿಂಗಳುಗಳಾಯ್ತು. ಗಣೇಶನ ಪುಸ್ತಕವನ್ನು ಓದಬೇಕೆಂಬ ಕುತೂಹಲದಿಂದ ಅಮ್ಮ ಆಲದ ಮರದ ಕೆಳಗಡೆ ಕುಳಿತುಕೊಂಡಳು. ಕೆಲವು ಪುಟಗಳನ್ನು ಓದಿದ್ದಳೇನೋ , ಅವಳು ಹತ್ತಿಯ ಬತ್ತಿಗಳಿಗೆ ಕುಂಕುಮ ಹಚ್ಚುತ್ತಿದ್ದ ಕೈಗಳು ನಡುಗಹತ್ತಿದ್ದವು. ಕೈಯ ಕೆಂಪು ಅವಳು ಓದುತ್ತಿದ್ದ ಪುಟಕ್ಕೆ ಬಲವಾಗಿ ಅಂಟಿಕೊಂಡಿತು. ಕಣ್ಣುಗಳಲ್ಲಿ ಭಯದ ಛಾಯೆ ಮೂಡಿತು. ಪಟ್ಟನೇ ಕೂತಲ್ಲೇ ನೆಲಕ್ಕುರುಳಿದಳು , ಅವಳ ಪ್ರಾಣಪಕ್ಷಿ ಆಲದಮರದ ಬಿಳಲುಗಳನ್ನು ದಾಟಿ ಹಾರಿಹೋಗಿತ್ತು.
            ಹಲವು ವರ್ಷಗಳು ಉರುಳಿದವು, ರಮೇಶನ ಮಗಳು ಗೀತಾ ಕಾಲೇಜಿನಲ್ಲಿ ಓದುತ್ತಿದ್ದಳು. ಅವಳಿಗೂ ಅವಳ ಚಿಕ್ಕಪ್ಪನಂತೆ ಓದುವ ಹುಚ್ಚಿತ್ತು, ಅಪ್ಪನ ಮಾತುಗಳಿಂದ ಚಿಕ್ಕಪ್ಪನ ಮೌನ ಅವಳಿಗೆ ನಿಗೂಢವಾಗಿತ್ತು. ಯಾವುದೋ ಹಳೆಯ ಸಾಮಾನುಗಳನ್ನು ಹುಡುಕುತ್ತಿದ್ದಾಗ ಗಣೇಶನ ಪುಸ್ತಕ ಅವಳನ್ನು ಆಕರ್ಷಿಸಿತ್ತು. ಓದುತ್ತಾ ಕುಳಿತಳು. ಪುಟಗಳಿಗೆ ಹತ್ತಿದ್ದ ಕೆಂಪು ಅಕ್ಷ್ರರಗಳನ್ನು ಮರೆಮಾಚಿತ್ತು. ಕುತೂಹಲ ತಡೆಯಲಾರದೆ ಲೈಬ್ರರಿಯಲ್ಲಿದ್ದ ಇನ್ನೊದು ಪ್ರತಿಯನ್ನು ತಂದು ಅದೇ ಪುಟದ ಕೆಲವು ಪ್ಯಾರಾಗಳು ಚಿಕ್ಕಪ್ಪನ ಮೌನದ ಕಾರಣವನ್ನಿತ್ತಿದ್ದವು. ಅದರಲ್ಲಿದ್ದ ಕೆಲವು ಸಾಲುಗಳು ಹೀಗಿದ್ದವು.
         ' ಅಂದು ನಾನು ಶಾಲೆಯಿಂದ ಮಧ್ಯಾಹ್ನವೇ ಮನೆಗೆ ಬಂದೆ, ಅಪ್ಪ, ಅಮ್ಮ ಮತ್ತು ನಮ್ಮ ಚಿಕ್ಕಪ್ಪ ಜೋರಾಗಿ ಕೂಗಾಡುತ್ತಿದ್ದರು. ಅಮ್ಮ ಎಂದಿನಂತೆ ದೇವರ ಸಾಮಾನುಗಳನ್ನು ತೊಳೆದು, ಒರೆಸಿ ಇಡುತ್ತಿದ್ದರು. ಅಪ್ಪ ಚಿಕ್ಕಪ್ಪನಿಗೆ ಹೇಳುತ್ತಿದ್ದರು.. 'ಮಕ್ಕಳು ದೊಡ್ಡೋರಾಗಿದ್ದಾರೆ, ಇವಾಗ್ಲಾದ್ರೂ ಬರೋದು ನಿಲ್ಲಿಸು ' . ಅಮ್ಮನ ಉತ್ತರ ಹೀಗಿತ್ತು, 'ನೀನು ಗಂಡಸಾಗಿದ್ರೆ ಅವನ್ಯಾಕೆ ಬರ್ತಿದ್ದ'. ಆದರೆ ಚಿಕ್ಕಪ್ಪ ಅಪ್ಪನಿಗೆ ಹೇಳಿದ್ದರು, 'ಆಯ್ತು, ನಾನು ಇನ್ಮೇಲೆ ಬರೋಲ್ಲ' ಎಂದು ಹೊರನಡೆದರು. ಅಮ್ಮ ನೀಲಾಂಜನವನ್ನು ಜೋರಾಗಿ ಎಸೆದು ಅಡುಗೆ ಮನೆಯತ್ತ ಹೊರಟಳು. ನಾನು ಬಂದು ನಿಂತಿದ್ದನ್ನು ಯಾರೂ ಗಮನಿಸಿರಲಿಲ್ಲ. ನಾನು ಮತ್ತೆ ಶಾಲೆಗೆ ಹೊರಟೆ, ಅಂದಿನಿಂದ ನಾನು ಯಾವತ್ತೂ ಶಾಲೆಯಿಂದ ಅರ್ಧಕ್ಕೇ ಮನೆಗೆ ಬಂದವನಲ್ಲ, ಶಾಲೆಯನ್ನು ತಪ್ಪಿಸಿದವನೂ ಅಲ್ಲ'.
Thursday, January 3, 2013 0 comments

ಈ ಹೊತ್ತಿಗೆ, ಈ ಹೊತ್ತಿಗೆ. ಭಾಗ -೩.

ನನ್ನ ತಮ್ಮ ಶಂಕರ ಪುಸ್ತಕದ ಹೂರಣವನ್ನು ಬಿಚ್ಚಿಡುವ ಪ್ರಯತ್ನದ ಎರಡನೇ ಭಾಗ ಇದು. ಮೊದಲನೇ ಭಾಗದ ಅರು ಅಂಶಗಳನ್ನು ಓದುವ ಪ್ರಯತ್ನ ಮಾಡೋಣ.

A) ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯ.

ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದ ಕಷ್ಟ ಸುಖದ ಕಥೆ ಇಲ್ಲಿರದಿದ್ದರೂ, ಅವರ ತಂದೆ ತಾಯಿಯವರು ಕಷ್ಟ ಪಟ್ಟ ಬಗ್ಗೆ  ಅನಂತನಾಗ್  ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ಅವರ ದೋಣಿ ಯಾತ್ರೆ ಸಿಂದ್ ಬಾದ್ ಕಥೆಯನ್ನು ನೆನಪಿಸುತ್ತದೆ. ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯದ ಸಂಗತಿಗಳಲ್ಲಿ ಬಾಲ ಶಂಕರನಾಗ್ ನಾಯಕನಾಗುತ್ತಾರೆ.

B) ೧೯೫೪ರ ಸುಮಾರಿನ ಹೊನ್ನಾವರ, ಮತ್ತು ಮುಂಬಯಿಯ ಸಾಮಾಜಿಕ ಬದುಕು.
    ಮುಂಬಯಿಯ ಚಿತ್ರಣವನ್ನು ನಮಗೆ ಮನಮುಟ್ಟುವಂತೆ ಚಿತ್ರಿಸಿದವರಲ್ಲಿ, ಯಶವಂತ ಚಿತ್ತಾಲ ಮತ್ತು ಜಯಂತ ಕಾಯ್ಕಿಣಿಯವರು ಪ್ರಮುಖರು. ಅನಂತನಾಗ್ರೂ ಕೂಡ ತಾವು ಕಡಿಮೆ ಇಲ್ಲ ಎಂಬಂತೆ ಆಗಿನ ಹೊನ್ನಾವರ ಮತ್ತು ಮುಂಬಯಿಯ ಬದುಕನ್ನು ಚಿತ್ರಿಸಿದ್ದಾರೆ.

C) ೧೯೬೫ ರ ಸುಮಾರಿನ ನಾಟಕರಂಗ.
     ಅದು ಬಂಡಾಯದ ಸಮಯ. ಸಾಹಿತ್ಯದಲ್ಲೂ ಕೂಡ. ಅನಂತನಾಗ್ರ ನಾಟಕಗಳನ್ನು sidewingನಲ್ಲಿ ನೋಡುತ್ತಾ , ನಿರ್ದೇಶನ, ಮತ್ತು ನಾಟಕಗಳ ಅಂತರಂಗವನ್ನು ಅರಿತ ಶಂಕರ್ ನಾಗ್, ನಿರ್ದೇಶಕನಾಗಿ ಹೇಗೆ ಹೊರ ಹೊಮ್ಮಿದರು ಎಂಬುದನ್ನು ಮನಮುಟ್ಟುವಂತೆ ಅನಂತನಾಗ್ ಬಿಂಬಿಸಿದ್ದಾರೆ.

D) ಕ್ರಿಯಾಶೀಲತೆ ಮತ್ತು ಉತ್ತಮ ಅಭಿರುಚಿ ಉಳ್ಳ ವ್ಯಕ್ತಿಯ ನಿರಂತರ ತುಡಿತ.
    ಬಹುಶಃ , ನಮ್ಮ ಸಮಕಾಲೀನತೆಯ ಆದರ್ಶಪ್ರಾಯವಾದ ವ್ಯಕ್ತಿ ಶಂಕರ್ ಎಂದರೆ ತಪ್ಪಾಗಲಾರದು. ಹಗಲು ಸಿನಿಮಾ ಚಿತ್ರೀಕರಣ, ರಾತ್ರಿ ನಾಟಕಗಳ ತಾಲೀಮು. ಹೀಗೆ ಯಾವಾಗಲೂ ಚಟುವಟಿಕೆಯಿಂದ ಕೂಡಿದ್ದ ಶಂಕರ್ ಒಂದು ಸ್ಫೂರ್ತಿಯ ಸೆಲೆ. ಇಂದಿನ ಯುವಜನಾಂಗಕ್ಕೆ ಶಂಕರ್ ಒಬ್ಬ ಆದರ್ಶ ವ್ಯಕ್ತ.

E) ೧೯೮೯ರ ಉ.ಕ ಲೋಕಸಭೆ ಚುನಾವಣೆಯಲ್ಲಿ ಅನಂತನಾಗ್ ಸ್ಪರ್ಧಿಸಿದಾಗ , ಶಂಕರನಾಗ್ ನ ಸಂಘಟನಾಶಕ್ತಿ,
    ಹಿಂದೆ, ಶ್ರೀಮತಿ ಇಂದಿರಾಗಾಂಧಿಯವರ ಚುನಾವಣೆಯನ್ನು ಅವರ ಮಗ ಸಂಜಯ್ ಗಾಂಧಿ ಹೇಗೆ ನಿರ್ವಹಿಸಿದನೋ, ಹಾಗೆಯೇ ಶಂಕರ್ ಅವರ ಅಣ್ಣ ಅನಂತ್ ಅವರ ಚುನಾವಣೆ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಅವರ ಸಂಘಟನಾ ಚಾತುರ್ಯಕ್ಕೆ ಒಂದು ನಮನ.

F)ಸಾರ್ವಜನಿಕ ಬದುಕನ್ನು ನಿರ್ವಹಿಸುವ ರೀತಿ.
    ನಾವು ಯಾವುದೇ ರಂಗದಲ್ಲಿ ಜನಪ್ರಿಯರಾಗಲೀ, ಸಾರ್ವಜನಿಕವಾಗುತ್ತೇವೆ. ಅದರಲ್ಲೂ ಸಿನಿಮಾರಂಗ ನಮ್ಮನ್ನು ಜನಪ್ರಿಯತೆಯ ಉತ್ತುಂಗವನ್ನೇರಿಸುತ್ತದೆ. ಹೀಗೆ, ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಮರೆಯಾದ ಶಂಕರ್ ಮತ್ತು ನಂತರದ ಬದುಕನ್ನು ಅನಂತ್ ಹೇಗೆ ಎದುರಿಸಿದರು ಎಂಬುದನ್ನು ಅನಂತ್ ವಿವರಿಸಿದ್ದಾರೆ.

    ಹೀಗೆ, ಶಂಕರ್ ಹುಟ್ಟಿನಿಂದ ಶುರುವಾಗುವ ಪುಸ್ತಕ, ಶಂಕರ್ ನ ಸಾವಿನೊಂದಿಗೆ ಮುಗಿಯುತ್ತದೆ. ಈ ಪುಸ್ತಕ ಓದಿ ಮುಗಿಸುವಷ್ಟರಲ್ಲಿ, ನಿಮ್ಮಲ್ಲೊಂದು ಹೊಸ ಸ್ಪೂರ್ತಿ ಹುಟ್ಟುತ್ತದೆ, ಮತ್ತು ನಿಮ್ಮ ಕಣ್ಣು ತೇವವಾಗುತ್ತದೆ ಎಂದು ನಂಬಿದ್ದೇನೆ.
0 comments

'ಈ ಹೊತ್ತಿಗೆ, ಈ ಹೊತ್ತಿಗೆ.' ಭಾಗ-೨.

ಅನೇಕರು ನಮಗೆ ಸ್ಫೂರ್ತಿದಾಯಕರಾಗಿದ್ದಾರೆ. ಸ್ಫೂರ್ತಿಯ ಸೆಲೆಯನ್ನು ಹುಡುಕುವದು ಅಂಥ ಕಷ್ಟವೇನಲ್ಲ. ನಮ್ಮ ಸುತ್ತಮುತ್ತಲೇ ತುಂಬಾ ಜನ ಸಿಗುತ್ತಾರೆ. ಅದು ಇಂಥವರೇ ಎಂದಾಗಬೇಕಿಲ್ಲ, ನಮ್ಮ ತಂದೆ ತಾಯಿಗಳೇ ನಮಗೆ ಸ್ಫೂರ್ತಿಯಾದಾರು.
ಆದರೂ ಕೆಲವು ವ್ಯಕ್ತಿಗಳಿರುತ್ತಾರೆ. ಅವರ ಇರುವಿಕೆಯೂ ಸ್ಫೂರ್ತಿದಾಯಕ, ಮತ್ತು ಅವರ ನೆನಪುಗಳೂ.

ಒಬ್ಬನಿದ್ದ. ಧಾರ್ಮಿಕ ವಾತಾವರಣದಲ್ಲಿ ಹುಟ್ಟಿದ, ನೋಡಲು ದುಂಡುದುಂಡಾಗಿದ್ದ. ಮುದ್ದಾಗಿದ್ದ. ಅಣ್ಣ , ಅಕ್ಕರನ್ನು ತನ್ನ ಚೇಷ್ಟೆಯಿಂದ ಗೋಳಾಡಿಸಿದ. ಮುಗ್ಧತೆಯಿಂದ ಆಕರ್ಷಿಸಿದ, ಜಾಣ ವಿದ್ಯಾರ್ಥಿಯಂತೆ ಅಭ್ಯಸಿಸಿದ. ತಾನು ಹೋದಲ್ಲೆಲ್ಲಾ ತನ್ಣ ಛಾಪು ಮೂಡಿಸಿದ. ಅಣ್ಣನಿಗೆ ನಾಟಕ ರಿಹರ್ಸಲ್ ಮಾಡಿಸಿದ, ಅವನ ಅಭಿನಯದ ನಾಟಕಗಳನ್ನು Sidewingನಲ್ಲಿ ನೋಡುತ್ತಾ ನಾಟಕ ಕಲೆಯನ್ನು ಅಭ್ಯಸಿಸಿದ, ನಾಟಕ ನಿರ್ದೇಶಿಸಿದ. ಅಣ್ಣನ ಜೊತೆ ನಟನಾದ, ಅಣ್ಣನನ್ನು ಸೇರಿಸಿಕೊಂಡು ನಿರ್ಮಾಪಕನಾದ, ಅಣ್ಣನಿಗೆ ರಾಜಕೀಯ ಭೋಧಿಸಿದ. ೧೯೮೫ ರ ಆಗಸ್ಟ್ ೧೫ ರಂದು ಕನ್ನಡದ ಪ್ರಥಮ ಎಲೆಕ್ಟ್ರಾನಿಕ್ ಸ್ಟುಡಿಯೊ ಪ್ರಾರಂಭಿಸಿದ. ೧೯೯೦ರ ಹೊತ್ತಿಗೆ ಆತನ ಪ್ರಾಜೆಕ್ಟುಗಳ ಪಟ್ಟಿ ಹೀಗಿತ್ತು.

೧) ಬೆಂಗಳೂರಿನ ಹೊರಗಡೆ ಒಂದು ಕ್ಲಬ್. ಅದರಲ್ಲಿ ಬಿಲಿಯರ್ಡ್ಸ್ ಆಟದ ಟೇಬಲ್ಲು, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಕಾರ್ಡ್ಸ್ ರೂಮ್, ಬಾರು, ರೀಡಿಂಗ್ ರೂಮ್, Bowling alley ,ಮತ್ತು ಈಜುಕೊಳ ,
೨) ಕೆನಡಾದಲ್ಲಿದ್ದಂತೆ ಮಕ್ಕಳಿಗಾಗಿ ಅಮ್ಯೂಸ್ ಮೆಂಟ್ ಪಾರ್ಕ್
೩)ಜರ್ಮನಿ ಪದ್ಧತಿಯಂತಿ ಇಟ್ಟಿಗೆ ಕಾರ್ಖಾನೆ, ಈ ಇಟ್ಟಿಗೆಯನ್ನು ಕಡಿಮೆ ವಿದ್ಯುಚ್ಚಕ್ತಿ ಬಳಸಿ ಉತ್ಪಾದಿಸಲಾಗುತ್ತದೆ. ಮತ್ತು ಇದು ರಾಸಾಯನಿಕ ಇಟ್ಟಿಗೆಯಾಗಿದ್ದು ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ, ಇದರಿಂದ ಬಡವರಿಗೆ ಅನುಕೂಲಕರ.
೪)Austrian Technologyಯಿಂದ pre fabricated sheetಗಳ ಉತ್ಪಾದನೆ. ಇದರಿಂದ ಅತಿ ಕಡಿಮೆ ಬೆಲೆಯಲ್ಲಿ ಮನೆಗಳನ್ನು ಕಟ್ಟಬಹುದು.
೫)ಸಿದ್ಧ ಉಡುಪಗಳ ತಯಾರಿಗೆ ಕೇಂದ್ರ.
೬)ಬೆಂಗಳೂರಿಗೆ ಮೆಟ್ರೊ ರೈಲು(೧೯೯೦ ರಲ್ಲಿಯೇ)
ಹೇಗಿದೆ?ಇದು ಆತನ ದೂರದೃಷ್ಟಿ ಮತ್ತು ಕ್ರಿಯಾತ್ಮಕ ಆಲೋಚನೆಗಳಿಗೆ ಹಿಡಿದ ಕನ್ನಡಿಯಲ್ಲವೇ? ಇಷ್ಟಕ್ಕೂ ಈತನ ವೈಯುಕ್ತಿಕ ಸಾಧನೆಗಳೇನು? ೯ ಚಿತ್ರಗಳು, ೨ ಟಿ.ವ್ಹಿ ಧಾರಾವಾಹಿಗಳ ನಿರ್ದೇಶನ, ಸುಮಾರು ೬೨ ಚಿತ್ರಗಳ ನಟನೆ, ಸುಮಾರು ನಾಟಕಗಳ ನಿರ್ದೇಶನ ಮತ್ತು ನಟನೆ, ೩ ಚಿತ್ರಗಳಿಗೆ ಚಿತ್ರಕಥೆ, ಮತ್ತು ಸ್ವತಃ ತಬಲ ಕಲಾವಿದ. ಅಲ್ಲದೇ ಕೆಲವು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು. ಇಷ್ಟೆಲ್ಲಾ ಸಾಧಿಸಿ ಈತ ವಿಧಿವಶನಾದಾಗ ಈತನಿಗೆ ೩೬ ವರ್ಷ. ಈತನ ಹೆಸರು ಶಂಕರ.
ಇಲ್ಲಿಗೆ ಈತನ ಬಗ್ಗೆ ನಿಲ್ಲಿಸಿ, ಈತನ ಅಣ್ಣನ ಬಗ್ಗೆ ಓದೋಣ,
ಈತ ಸುಮಾರು ೮೫ ಕನ್ನಡ , ೧೦ ಹಿಂದಿ, ೧ ತಮಿಳು, ೧ ಮರಾಠಿ ಮತ್ತು ೧ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದು ಸುಮಾರು ೯ ಪ್ರಶಸ್ತಿಗಳ ವಿಜೇತ, ೧೯೯೩ರ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಸೇವೆ. ಅಪ್ರತಿಮ ಬುಧ್ಧಿಶಾಲಿ, ಈತನ ಹೆಸರು ಅನಂತ. ಈ ಅನಂತ ತನ್ನ ತಮ್ಮನ ಬದುಕಿನ ಕಥೆಯನ್ನು ಬರೆದರೆ ಹೇಗಿರುತ್ತೆ. ಶಂಕರನನ್ನು ಅತ್ಯಂತ ಹತ್ತಿರದಿದ್ದು ಕಂಡಿದ್ದು ಅನಂತ್ ಮಾತ್ರ. ಹೌದು, ಇದು ಅನಂತ ನಾಗರಕಟ್ಟೆ ತನ್ನ ತಮ್ಮ ಶಂಕರ ನಾಗರಕಟ್ಟೆ ಬಗ್ಗೆ ಬರೆದ , 'ನನ್ನ ತಮ್ಮ ಶಂಕರ ' ಪುಸ್ತಕದ ಉದ್ದೇಶ. ತನ್ನ ತಮ್ಮನ ಬಗ್ಗೆ ಬರೆದ ಅನಂತನಾಗ್ ತಮ್ಮ ಹೊರೆಯನ್ನು ಕಡಿಮೆಗೊಳಿಸಿಕೊಂಡಿದ್ದಾರೆಂದರೆ ತಪ್ಪಾಗಲಾರದು. ಇಷ್ಟಕ್ಕೂ ಈ ಪುಸ್ತಕದಲ್ಲಿರುವದೇನು? ಕೆಲವನ್ನು ಹೀಗೆ ವಿಶ್ಲೇಷಿಸಬಹುದು.ಕೆಲವು ನನ್ನ ವಿವೇಚನೆಗೆ ಒಳಪಡದೇ ಇರಬಹುದು.
A) ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯ.
B) ೧೯೫೪ರ ಸುಮಾರಿನ ಹೊನ್ನಾವರ, ಮತ್ತು ಮುಂಬಯಿಯ ಸಾಮಾಜಿಕ ಬದುಕು
C) ೧೯೬೫ ರ ಸುಮಾರಿನ ನಾಟಕರಂಗ
D) ಕ್ರೀಯಾಶೀಲತೆ ಮತ್ತು ಉತ್ತಮ ಅಭಿರುಚಿ ಉಳ್ಳ ವ್ಯಕ್ತಿಯ ನಿರಂತರ ತುಡಿತ.
E) ೧೯೮೯ರ ಉ.ಕ ಲೋಕಸಭೆ ಚುನಾವಣೆಯಲ್ಲಿ ಅನಂತನಾಗ್ ಸ್ಪರ್ಧಿಸಿದಾಗ , ಶಂಕರನಾಗ್ ನ ಸಂಘಟನಾಶಕ್ತಿ,
F)ಸಾರ್ವಜನಿಕ ಬದುಕನ್ನು ನಿರ್ವಹಿಸುವ ರೀತಿ.
ಇವುಗಳನ್ನು ಒಂದೊಂದಾಗಿ ಸಂಕ್ಷಿಪ್ತವಾಗಿ ಓದುವ ಪ್ರಯತ್ನ ಮಾಡೋಣ
(ಮುಂದುವರಿಯುತ್ತದೆ)
 
;