Thursday, January 3, 2013 0 comments

ಈ ಹೊತ್ತಿಗೆ, ಈ ಹೊತ್ತಿಗೆ. ಭಾಗ -೩.

ನನ್ನ ತಮ್ಮ ಶಂಕರ ಪುಸ್ತಕದ ಹೂರಣವನ್ನು ಬಿಚ್ಚಿಡುವ ಪ್ರಯತ್ನದ ಎರಡನೇ ಭಾಗ ಇದು. ಮೊದಲನೇ ಭಾಗದ ಅರು ಅಂಶಗಳನ್ನು ಓದುವ ಪ್ರಯತ್ನ ಮಾಡೋಣ.

A) ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯ.

ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದ ಕಷ್ಟ ಸುಖದ ಕಥೆ ಇಲ್ಲಿರದಿದ್ದರೂ, ಅವರ ತಂದೆ ತಾಯಿಯವರು ಕಷ್ಟ ಪಟ್ಟ ಬಗ್ಗೆ  ಅನಂತನಾಗ್  ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ಅವರ ದೋಣಿ ಯಾತ್ರೆ ಸಿಂದ್ ಬಾದ್ ಕಥೆಯನ್ನು ನೆನಪಿಸುತ್ತದೆ. ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯದ ಸಂಗತಿಗಳಲ್ಲಿ ಬಾಲ ಶಂಕರನಾಗ್ ನಾಯಕನಾಗುತ್ತಾರೆ.

B) ೧೯೫೪ರ ಸುಮಾರಿನ ಹೊನ್ನಾವರ, ಮತ್ತು ಮುಂಬಯಿಯ ಸಾಮಾಜಿಕ ಬದುಕು.
    ಮುಂಬಯಿಯ ಚಿತ್ರಣವನ್ನು ನಮಗೆ ಮನಮುಟ್ಟುವಂತೆ ಚಿತ್ರಿಸಿದವರಲ್ಲಿ, ಯಶವಂತ ಚಿತ್ತಾಲ ಮತ್ತು ಜಯಂತ ಕಾಯ್ಕಿಣಿಯವರು ಪ್ರಮುಖರು. ಅನಂತನಾಗ್ರೂ ಕೂಡ ತಾವು ಕಡಿಮೆ ಇಲ್ಲ ಎಂಬಂತೆ ಆಗಿನ ಹೊನ್ನಾವರ ಮತ್ತು ಮುಂಬಯಿಯ ಬದುಕನ್ನು ಚಿತ್ರಿಸಿದ್ದಾರೆ.

C) ೧೯೬೫ ರ ಸುಮಾರಿನ ನಾಟಕರಂಗ.
     ಅದು ಬಂಡಾಯದ ಸಮಯ. ಸಾಹಿತ್ಯದಲ್ಲೂ ಕೂಡ. ಅನಂತನಾಗ್ರ ನಾಟಕಗಳನ್ನು sidewingನಲ್ಲಿ ನೋಡುತ್ತಾ , ನಿರ್ದೇಶನ, ಮತ್ತು ನಾಟಕಗಳ ಅಂತರಂಗವನ್ನು ಅರಿತ ಶಂಕರ್ ನಾಗ್, ನಿರ್ದೇಶಕನಾಗಿ ಹೇಗೆ ಹೊರ ಹೊಮ್ಮಿದರು ಎಂಬುದನ್ನು ಮನಮುಟ್ಟುವಂತೆ ಅನಂತನಾಗ್ ಬಿಂಬಿಸಿದ್ದಾರೆ.

D) ಕ್ರಿಯಾಶೀಲತೆ ಮತ್ತು ಉತ್ತಮ ಅಭಿರುಚಿ ಉಳ್ಳ ವ್ಯಕ್ತಿಯ ನಿರಂತರ ತುಡಿತ.
    ಬಹುಶಃ , ನಮ್ಮ ಸಮಕಾಲೀನತೆಯ ಆದರ್ಶಪ್ರಾಯವಾದ ವ್ಯಕ್ತಿ ಶಂಕರ್ ಎಂದರೆ ತಪ್ಪಾಗಲಾರದು. ಹಗಲು ಸಿನಿಮಾ ಚಿತ್ರೀಕರಣ, ರಾತ್ರಿ ನಾಟಕಗಳ ತಾಲೀಮು. ಹೀಗೆ ಯಾವಾಗಲೂ ಚಟುವಟಿಕೆಯಿಂದ ಕೂಡಿದ್ದ ಶಂಕರ್ ಒಂದು ಸ್ಫೂರ್ತಿಯ ಸೆಲೆ. ಇಂದಿನ ಯುವಜನಾಂಗಕ್ಕೆ ಶಂಕರ್ ಒಬ್ಬ ಆದರ್ಶ ವ್ಯಕ್ತ.

E) ೧೯೮೯ರ ಉ.ಕ ಲೋಕಸಭೆ ಚುನಾವಣೆಯಲ್ಲಿ ಅನಂತನಾಗ್ ಸ್ಪರ್ಧಿಸಿದಾಗ , ಶಂಕರನಾಗ್ ನ ಸಂಘಟನಾಶಕ್ತಿ,
    ಹಿಂದೆ, ಶ್ರೀಮತಿ ಇಂದಿರಾಗಾಂಧಿಯವರ ಚುನಾವಣೆಯನ್ನು ಅವರ ಮಗ ಸಂಜಯ್ ಗಾಂಧಿ ಹೇಗೆ ನಿರ್ವಹಿಸಿದನೋ, ಹಾಗೆಯೇ ಶಂಕರ್ ಅವರ ಅಣ್ಣ ಅನಂತ್ ಅವರ ಚುನಾವಣೆ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಅವರ ಸಂಘಟನಾ ಚಾತುರ್ಯಕ್ಕೆ ಒಂದು ನಮನ.

F)ಸಾರ್ವಜನಿಕ ಬದುಕನ್ನು ನಿರ್ವಹಿಸುವ ರೀತಿ.
    ನಾವು ಯಾವುದೇ ರಂಗದಲ್ಲಿ ಜನಪ್ರಿಯರಾಗಲೀ, ಸಾರ್ವಜನಿಕವಾಗುತ್ತೇವೆ. ಅದರಲ್ಲೂ ಸಿನಿಮಾರಂಗ ನಮ್ಮನ್ನು ಜನಪ್ರಿಯತೆಯ ಉತ್ತುಂಗವನ್ನೇರಿಸುತ್ತದೆ. ಹೀಗೆ, ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಮರೆಯಾದ ಶಂಕರ್ ಮತ್ತು ನಂತರದ ಬದುಕನ್ನು ಅನಂತ್ ಹೇಗೆ ಎದುರಿಸಿದರು ಎಂಬುದನ್ನು ಅನಂತ್ ವಿವರಿಸಿದ್ದಾರೆ.

    ಹೀಗೆ, ಶಂಕರ್ ಹುಟ್ಟಿನಿಂದ ಶುರುವಾಗುವ ಪುಸ್ತಕ, ಶಂಕರ್ ನ ಸಾವಿನೊಂದಿಗೆ ಮುಗಿಯುತ್ತದೆ. ಈ ಪುಸ್ತಕ ಓದಿ ಮುಗಿಸುವಷ್ಟರಲ್ಲಿ, ನಿಮ್ಮಲ್ಲೊಂದು ಹೊಸ ಸ್ಪೂರ್ತಿ ಹುಟ್ಟುತ್ತದೆ, ಮತ್ತು ನಿಮ್ಮ ಕಣ್ಣು ತೇವವಾಗುತ್ತದೆ ಎಂದು ನಂಬಿದ್ದೇನೆ.
0 comments

'ಈ ಹೊತ್ತಿಗೆ, ಈ ಹೊತ್ತಿಗೆ.' ಭಾಗ-೨.

ಅನೇಕರು ನಮಗೆ ಸ್ಫೂರ್ತಿದಾಯಕರಾಗಿದ್ದಾರೆ. ಸ್ಫೂರ್ತಿಯ ಸೆಲೆಯನ್ನು ಹುಡುಕುವದು ಅಂಥ ಕಷ್ಟವೇನಲ್ಲ. ನಮ್ಮ ಸುತ್ತಮುತ್ತಲೇ ತುಂಬಾ ಜನ ಸಿಗುತ್ತಾರೆ. ಅದು ಇಂಥವರೇ ಎಂದಾಗಬೇಕಿಲ್ಲ, ನಮ್ಮ ತಂದೆ ತಾಯಿಗಳೇ ನಮಗೆ ಸ್ಫೂರ್ತಿಯಾದಾರು.
ಆದರೂ ಕೆಲವು ವ್ಯಕ್ತಿಗಳಿರುತ್ತಾರೆ. ಅವರ ಇರುವಿಕೆಯೂ ಸ್ಫೂರ್ತಿದಾಯಕ, ಮತ್ತು ಅವರ ನೆನಪುಗಳೂ.

ಒಬ್ಬನಿದ್ದ. ಧಾರ್ಮಿಕ ವಾತಾವರಣದಲ್ಲಿ ಹುಟ್ಟಿದ, ನೋಡಲು ದುಂಡುದುಂಡಾಗಿದ್ದ. ಮುದ್ದಾಗಿದ್ದ. ಅಣ್ಣ , ಅಕ್ಕರನ್ನು ತನ್ನ ಚೇಷ್ಟೆಯಿಂದ ಗೋಳಾಡಿಸಿದ. ಮುಗ್ಧತೆಯಿಂದ ಆಕರ್ಷಿಸಿದ, ಜಾಣ ವಿದ್ಯಾರ್ಥಿಯಂತೆ ಅಭ್ಯಸಿಸಿದ. ತಾನು ಹೋದಲ್ಲೆಲ್ಲಾ ತನ್ಣ ಛಾಪು ಮೂಡಿಸಿದ. ಅಣ್ಣನಿಗೆ ನಾಟಕ ರಿಹರ್ಸಲ್ ಮಾಡಿಸಿದ, ಅವನ ಅಭಿನಯದ ನಾಟಕಗಳನ್ನು Sidewingನಲ್ಲಿ ನೋಡುತ್ತಾ ನಾಟಕ ಕಲೆಯನ್ನು ಅಭ್ಯಸಿಸಿದ, ನಾಟಕ ನಿರ್ದೇಶಿಸಿದ. ಅಣ್ಣನ ಜೊತೆ ನಟನಾದ, ಅಣ್ಣನನ್ನು ಸೇರಿಸಿಕೊಂಡು ನಿರ್ಮಾಪಕನಾದ, ಅಣ್ಣನಿಗೆ ರಾಜಕೀಯ ಭೋಧಿಸಿದ. ೧೯೮೫ ರ ಆಗಸ್ಟ್ ೧೫ ರಂದು ಕನ್ನಡದ ಪ್ರಥಮ ಎಲೆಕ್ಟ್ರಾನಿಕ್ ಸ್ಟುಡಿಯೊ ಪ್ರಾರಂಭಿಸಿದ. ೧೯೯೦ರ ಹೊತ್ತಿಗೆ ಆತನ ಪ್ರಾಜೆಕ್ಟುಗಳ ಪಟ್ಟಿ ಹೀಗಿತ್ತು.

೧) ಬೆಂಗಳೂರಿನ ಹೊರಗಡೆ ಒಂದು ಕ್ಲಬ್. ಅದರಲ್ಲಿ ಬಿಲಿಯರ್ಡ್ಸ್ ಆಟದ ಟೇಬಲ್ಲು, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಕಾರ್ಡ್ಸ್ ರೂಮ್, ಬಾರು, ರೀಡಿಂಗ್ ರೂಮ್, Bowling alley ,ಮತ್ತು ಈಜುಕೊಳ ,
೨) ಕೆನಡಾದಲ್ಲಿದ್ದಂತೆ ಮಕ್ಕಳಿಗಾಗಿ ಅಮ್ಯೂಸ್ ಮೆಂಟ್ ಪಾರ್ಕ್
೩)ಜರ್ಮನಿ ಪದ್ಧತಿಯಂತಿ ಇಟ್ಟಿಗೆ ಕಾರ್ಖಾನೆ, ಈ ಇಟ್ಟಿಗೆಯನ್ನು ಕಡಿಮೆ ವಿದ್ಯುಚ್ಚಕ್ತಿ ಬಳಸಿ ಉತ್ಪಾದಿಸಲಾಗುತ್ತದೆ. ಮತ್ತು ಇದು ರಾಸಾಯನಿಕ ಇಟ್ಟಿಗೆಯಾಗಿದ್ದು ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ, ಇದರಿಂದ ಬಡವರಿಗೆ ಅನುಕೂಲಕರ.
೪)Austrian Technologyಯಿಂದ pre fabricated sheetಗಳ ಉತ್ಪಾದನೆ. ಇದರಿಂದ ಅತಿ ಕಡಿಮೆ ಬೆಲೆಯಲ್ಲಿ ಮನೆಗಳನ್ನು ಕಟ್ಟಬಹುದು.
೫)ಸಿದ್ಧ ಉಡುಪಗಳ ತಯಾರಿಗೆ ಕೇಂದ್ರ.
೬)ಬೆಂಗಳೂರಿಗೆ ಮೆಟ್ರೊ ರೈಲು(೧೯೯೦ ರಲ್ಲಿಯೇ)
ಹೇಗಿದೆ?ಇದು ಆತನ ದೂರದೃಷ್ಟಿ ಮತ್ತು ಕ್ರಿಯಾತ್ಮಕ ಆಲೋಚನೆಗಳಿಗೆ ಹಿಡಿದ ಕನ್ನಡಿಯಲ್ಲವೇ? ಇಷ್ಟಕ್ಕೂ ಈತನ ವೈಯುಕ್ತಿಕ ಸಾಧನೆಗಳೇನು? ೯ ಚಿತ್ರಗಳು, ೨ ಟಿ.ವ್ಹಿ ಧಾರಾವಾಹಿಗಳ ನಿರ್ದೇಶನ, ಸುಮಾರು ೬೨ ಚಿತ್ರಗಳ ನಟನೆ, ಸುಮಾರು ನಾಟಕಗಳ ನಿರ್ದೇಶನ ಮತ್ತು ನಟನೆ, ೩ ಚಿತ್ರಗಳಿಗೆ ಚಿತ್ರಕಥೆ, ಮತ್ತು ಸ್ವತಃ ತಬಲ ಕಲಾವಿದ. ಅಲ್ಲದೇ ಕೆಲವು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು. ಇಷ್ಟೆಲ್ಲಾ ಸಾಧಿಸಿ ಈತ ವಿಧಿವಶನಾದಾಗ ಈತನಿಗೆ ೩೬ ವರ್ಷ. ಈತನ ಹೆಸರು ಶಂಕರ.
ಇಲ್ಲಿಗೆ ಈತನ ಬಗ್ಗೆ ನಿಲ್ಲಿಸಿ, ಈತನ ಅಣ್ಣನ ಬಗ್ಗೆ ಓದೋಣ,
ಈತ ಸುಮಾರು ೮೫ ಕನ್ನಡ , ೧೦ ಹಿಂದಿ, ೧ ತಮಿಳು, ೧ ಮರಾಠಿ ಮತ್ತು ೧ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದು ಸುಮಾರು ೯ ಪ್ರಶಸ್ತಿಗಳ ವಿಜೇತ, ೧೯೯೩ರ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಸೇವೆ. ಅಪ್ರತಿಮ ಬುಧ್ಧಿಶಾಲಿ, ಈತನ ಹೆಸರು ಅನಂತ. ಈ ಅನಂತ ತನ್ನ ತಮ್ಮನ ಬದುಕಿನ ಕಥೆಯನ್ನು ಬರೆದರೆ ಹೇಗಿರುತ್ತೆ. ಶಂಕರನನ್ನು ಅತ್ಯಂತ ಹತ್ತಿರದಿದ್ದು ಕಂಡಿದ್ದು ಅನಂತ್ ಮಾತ್ರ. ಹೌದು, ಇದು ಅನಂತ ನಾಗರಕಟ್ಟೆ ತನ್ನ ತಮ್ಮ ಶಂಕರ ನಾಗರಕಟ್ಟೆ ಬಗ್ಗೆ ಬರೆದ , 'ನನ್ನ ತಮ್ಮ ಶಂಕರ ' ಪುಸ್ತಕದ ಉದ್ದೇಶ. ತನ್ನ ತಮ್ಮನ ಬಗ್ಗೆ ಬರೆದ ಅನಂತನಾಗ್ ತಮ್ಮ ಹೊರೆಯನ್ನು ಕಡಿಮೆಗೊಳಿಸಿಕೊಂಡಿದ್ದಾರೆಂದರೆ ತಪ್ಪಾಗಲಾರದು. ಇಷ್ಟಕ್ಕೂ ಈ ಪುಸ್ತಕದಲ್ಲಿರುವದೇನು? ಕೆಲವನ್ನು ಹೀಗೆ ವಿಶ್ಲೇಷಿಸಬಹುದು.ಕೆಲವು ನನ್ನ ವಿವೇಚನೆಗೆ ಒಳಪಡದೇ ಇರಬಹುದು.
A) ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನಂತನಾಗ್ ಮತ್ತು ಶಂಕರನಾಗ್ ರ ಬಾಲ್ಯ.
B) ೧೯೫೪ರ ಸುಮಾರಿನ ಹೊನ್ನಾವರ, ಮತ್ತು ಮುಂಬಯಿಯ ಸಾಮಾಜಿಕ ಬದುಕು
C) ೧೯೬೫ ರ ಸುಮಾರಿನ ನಾಟಕರಂಗ
D) ಕ್ರೀಯಾಶೀಲತೆ ಮತ್ತು ಉತ್ತಮ ಅಭಿರುಚಿ ಉಳ್ಳ ವ್ಯಕ್ತಿಯ ನಿರಂತರ ತುಡಿತ.
E) ೧೯೮೯ರ ಉ.ಕ ಲೋಕಸಭೆ ಚುನಾವಣೆಯಲ್ಲಿ ಅನಂತನಾಗ್ ಸ್ಪರ್ಧಿಸಿದಾಗ , ಶಂಕರನಾಗ್ ನ ಸಂಘಟನಾಶಕ್ತಿ,
F)ಸಾರ್ವಜನಿಕ ಬದುಕನ್ನು ನಿರ್ವಹಿಸುವ ರೀತಿ.
ಇವುಗಳನ್ನು ಒಂದೊಂದಾಗಿ ಸಂಕ್ಷಿಪ್ತವಾಗಿ ಓದುವ ಪ್ರಯತ್ನ ಮಾಡೋಣ
(ಮುಂದುವರಿಯುತ್ತದೆ)
0 comments

'ಈ ಹೊತ್ತಿಗೆ, ಈ ಹೊತ್ತಿಗೆ.' ಭಾಗ-೧.

ಈ ಲೇಖನವನ್ನು ಓದಿ ಮುಗಿಸುವ ಹೊತ್ತಿಗೆ, ಒಂದು ಚೆಂದದ ಹೊತ್ತಿಗೆ ಓದುವ ಕುತೂಹಲ ನಿಮ್ಮಲ್ಲಿ ಬೆಳೆದಲ್ಲಿ ನಾನು ಧನ್ಯ. ಇದೊಂದು ಲೇಖನಗಳ ಸರಣಿಯಾಗಿ ಬರಬೇಕೆಂಬುದು ನನ್ನ ಹಂಬಲ. ಆವಾಗಲೇ ಈ ಲೇಖನಗಳ ಸಾರ್ಥಕ್ಯ.
ಈ ಉದ್ದೇಶದಿಂದಲೇ, ಈ ಲೇಖನಗಳ ಶೀರ್ಷಿಕೆಗೆ 'ಈ ಹೊತ್ತಿಗೆ, ಈ ಹೊತ್ತಿಗೆ.' ಎಂದು ನಾಮಕರಣ ಮಾಡಿದ್ದು. ಎಲ್ಲಾ ಸರಿ ಈ ಗೋಳು ಬೇಕಾ? ಎಂದು ನಿಮ್ಮ ಮೂಡ್ ಬದಲಾಯಿಸುವ ಮುಂಚೆ ನನಗೆ ಇವತ್ತಿನ ಪುಸ್ತಕದ ಬಗ್ಗೆ ಶುರು ಮಾಡುವೆ.
ಪುಸ್ತಕದ ಹೆಸರು:- ಚೇಳು (ಕಥಾಸಂಕಲನ)
ಲೇಖಕ: ವಸುಧೇಂದ್ರ.
ಪ್ರಕಾಶನ : ಛಂದ ಪುಸ್ತಕ, ಬೆಂಗಳೂರು.
ಬೆಲೆ : ೬೫ ರೂ.
ಚೇಳು:-
ಇದು ವಸುಧೇಂದ್ರರ ಐದು ಕಥಾ ಸಂಕಲನಗಳಲ್ಲಿ ಒಂದು. ಈ ಪುಸ್ತಕ ಏಳು ಕಥೆಗಳನ್ನೊಳಗೊಂಡಿದ್ದು, ಒಂದೊಂದು ಕಥೆಯೂ ನಿಮ್ಮನ್ನು ಕೆಣಕುತ್ತವೆ. ಪ್ರತಿಯೊಂದು ಕಥೆಯ ಕಥಾವಸ್ತು ವಿಭಿನ್ನ. ಹೀಗೆ ಪ್ರತಿಯೊಂದು ಕಥೆಯನ್ನು ವಿಭಿನ್ನವಾಗಿ , ಬಿಗಿಯಾಗಿ ಹೆಣೆಯುವಲ್ಲಿ ವಸುಧೇಂದ್ರ ಯಶಸ್ಸುಗಳಿಸಿದ್ದಾರೆ. ಕಥಾಹಂದರ ಹೇಗೆಯೇ ಇರಲಿ, ಆದರೆ ಅದರ ಒಳಮರ್ಮ ಮಾತ್ರ ಓದುಗನಂತೆಯೇ ವಿಭಿನ್ನ. ಕನ್ನಡಿಯ ಪ್ರತಿಬಿಂಬ ಹೇಗೆ ವಿಭಿನ್ನವೋ ಹಾಗೆ. ಈ ಪುಸ್ತಕದ ಮೊದಲನೇ ಕಥೆ, ಚೇಳು. ಚೇಳುಗಳ ಹಾವಳಿಯ ಅವತಾರಗಳನ್ನು ವಿವರಿಸುತ್ತಾ ಶುರುವಾಗುವ ಕಥೆ, ಊರಿಗೆ ಹೊಸದಾಗಿ ಬಂದ ಹೆಣ್ಣುಮಗಳು ವೆಂಕಮ್ಮ, ಅವಳ ಬಂಜೆತನದ ಪ್ರದೂಷಣೆಗಳು, ಎಲ್ಲವನ್ನೂ ಮೀರುವ ಅವಳ ಬಯಕೆ, ಹೀಗೆ ಸಾಗುತ್ತಿದ್ದಂತೆಯೇ, ಅವಳಿಗೆ ಚೇಳಿನ ವಿಷ ತೆಗೆಯುವ ಔಷಧ ಸಿಧ್ಧಿಸಿದ ಬಗೆ ಕಥೆಯನ್ನು ಓದಿಸಿಕೊಳ್ಳುವಲ್ಲಿ ಯಶಸ್ಚಿಯಾಗುತ್ತದೆ. ಜಾಗತೀಕರಣದ ಸೋಂಕು ನಮ್ಮ ಬದುಕನ್ನು ಬದಲಾಯಿಸುತ್ತದೆ ಎಂಬುದನ್ನು ಕಥೆಯ ಅಂತ್ಯ ವಿವರಿಸುತ್ತದೆ. ಹೀಗೆ ವೆಂಕಮ್ಮಳ ಬದುಕಿನ ಕಥೆಯನ್ನು ಹೇಳುವದರ ಜೊತೆಗೆ, ನಮ್ಮ ಸುತ್ತ ನಡೆಯುವ ಕೆಲವು ವಿದ್ಯಮಾನಗಳ ಬಗ್ಗೆ ದೀವಿಗೆ ನೀಡುವಲ್ಲಿ, ವಸುಧೇಂದ್ರ ಗೆದ್ದಿದ್ದಾರೆ.
ಕ್ಷಿತಿಜ ಹಿಡಿಯ ಹೊರಟವರು:-
ಈ ಕಥೆಯು ಸ್ವಲ್ಪ ವಿಭಿನ್ನವಾದದ್ದು. ಜಾಗತೀಕರಣ ನಮ್ಮ ಸಾಮಾಜಿಕ ಜೀವನದಲ್ಲಿ ಅಸಮತೋಲನ ಉಂಟುಮಾಡುವದಲ್ಲದೇ, ನಮ್ಮ ವೈಯಕ್ತಿಕ ಜೀವನವನ್ನು ಹದಗೆಡಿಸಬಲ್ಲದು ಎಂಬುದನ್ನು ಕಥೆ ವಿವರಿಸುತ್ತದೆ. ಸಾಫ್ಟ್ ವೇರ್ ಉದ್ಯೋಗಿಯೊಬ್ಬಳ
ಯಶೋಗಾಥೆಯೊಂದಿಗೆ ಶುರುವಾಗುವ ಕಥೆ, ಅವಳ ವೈವಾಹಿಕ ಜೀವನದ ಕಡೆ ಇಣುಕು ಹಾಕುತ್ತದೆ. ಒಂದು ರಾತ್ರಿ ಸರಿಯಾಗಿ ಆರು ಗಂಟೆಗಳ ಕಾಲ ನಿದ್ರಿಸಲು ಅವಳು ಪಡುವ ಕಷ್ಟ, ವ್ಯಂಗವಾದರೂ ಸತ್ಯವೆನಿಸುತ್ತದೆ. ಕಥೆಯ ಆದಿಯನ್ನು ಕುತೂಹಲವಾಗಿಸುವ ಕತೆಗಾರ ಅಂತ್ಯವನ್ನು ಮಾತ್ರ ಓದುಗನಿಗೆ ಬಿಟ್ಟಿದ್ದಾನೆ. ಮಹಿಳಾ ಐ.ಟಿ ಉದ್ಯೋಗಿಗಳ ಮನಹೊಕ್ಕು ಕತೆಯಾಗಿ ಹೊರಬರುವಲ್ಲಿ ಕಥಾಹಂದರ ಕೊನೆಗೊಳ್ಳುತ್ತದೆ.
ಅನಘ:-
ವಸುಧೇಂದ್ರರ ಕಥಾವಸ್ತು ಊಹಿಸುವದು ಅವರು ಮಾತ್ರ. ಕಥೆಯ ಮೊದಲ ಕೆಲವು ಪ್ಯಾರಾಗಳಿಂದ , ಕಥೆಯ ಜಾಡು ಊಹಿಸುವದು ಕಷ್ಟ ಸಾಧ್ಯ. ಅಂತಹ ಕಥೆಗಳ ಸಾಲಿನಲ್ಲಿ ಈ ಕಥೆ ನಿಲ್ಲುತ್ತದೆ. ಹೆಣ್ಣು ಭ್ರೂಣಹತ್ಯೆಯನ್ನು ನಿಯಂತ್ರಿಸುವಲ್ಲಿ ಎಲ್ಲರ ಗಮನ
ಇರಬೇಕಾದರೆ, ಹೆಣ್ಣು ಮತ್ತು ಗಂಡು ಜಾತಿಗೆ ಸೇರದ ನಪುಂಸಕತೆಯ ಬಗ್ಗೆ, ಈ ಕಥಾಹಂದರವನ್ನು ಹೆಣೆಯಲಾಗಿದೆ. ಸೂಳೆಯರನ್ನು ಇಟ್ಟುಕೊಳ್ಳುವದೇ ಗಂಡಸ್ತನವೆಂದು ನಂಬಿರುವ ಊರ ಪ್ರಮುಖನೊಬ್ಬನಿಗೆ, ನಪುಂಸಕನಾದ ಮಗನೊಬ್ಬನಿರುತ್ತಾನೆ. ಸುಮಾರು ಹದಿನಾರು ವರ್ಷದ ಅವನಿಗೆ ಇರುವ ಲೈಂಗಿಕ ಕುತೂಹಲ, ಅದನ್ನು ತಣಿಸಿಕೊಳ್ಳುವ ಅವನ ಪ್ರಯತ್ನ ಮತ್ತು ಅದರ ಪರಿಣಾಮವನ್ನು ವಿವರಿಸುವಲ್ಲಿ ಕಥೆ ಅಂತ್ಯಗೊಳ್ಳುತ್ತದೆ. ಆ ಬಾಲಕನ ಮನೋಸ್ಥಿತಿಯನ್ನು ವಿವರಿಸುವಲ್ಲಿ ಕಥೆ ಎಡವಿದರೂ, ಅವನ ತಂದೆಯ ಭಾವನೆಗಳನ್ನು ವಿಷದಿಸುತ್ತದೆ.
ಹಲೋ ಭಾರತಿ: -
ಜಾಗತೀಕರಣದ ಇನ್ನೊಂದು ಮಗ್ಗುಲನ್ನು ಈ ಕಥೆ ಬಣ್ಣಿಸುತ್ತದೆ. ಅನಿವಾಸಿ ಭಾರತಿಯರ ಮನೋಸ್ಥಿತಿ ಮತ್ತು ಅವರ ವ್ಯವಹಾರಿಕ ಕುಶಲತೆ ಬಣ್ಣಿಸುವದರೊಂದಿಗೆ, ಶುರುವಾಗುವ ಕಥೆ, ಕಥಾನಾಯಕನಲ್ಲಿ ದ್ವಂದ್ವವನ್ನು ಸೃಷ್ಟಿಸುತ್ತದೆ. ಅವನು ವಿದೇಶಕ್ಕೆ ಬಂದಿರುವದೇ ಹೊಸ ಪ್ರಾಜೆಕ್ಟ್ ಗೋಸ್ಕರ. ಪಾಶ್ಚಾತ್ಯರ ಮನಸ್ಥಿತಿ, ಅವರ ಇರುವಿಕೆ, ಲೈಂಗಿಕತೆಯ ಬಗ್ಗೆ ಇರುವ ಅವರ ಉದಾರೀಕರಣ!ದ ಬಗ್ಗೆ ವಿವರಿಸುವಲ್ಲಿ ಕಥೆ ಸಾಗುತ್ತದೆ. ಲೈಂಗಿಕತೆಯ ಬಗ್ಗೆ ಜನರಲ್ಲಿರುವ ಕುತೂಹಲವನ್ನು ಲಾಭಕರವಾಗಿ ಬಳಸಿಕೊಳ್ಳಲು ಬಯಸುವ ಯುರೋಪಿನ ಕಂಪನಿ , ತನ್ನ ಪ್ರಾಜೆಕ್ಟ್ ನ್ನು ಭಾರತೀಯ ಕಂಪನಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆದರೆ, ಅದು ತಮ್ಮನ್ನು ನಿರುದ್ಯೋಗಿಗಳನ್ನಾಗಿಸುತ್ತದೆ ಎಂಬ ಭಯ ಅಲ್ಲಿನ ಉದ್ಯೋಗಿಗಳದ್ದು. ಇವೆಲ್ಲವನ್ನೂ ಮೀರಿದ್ದು ವ್ಯವಹಾರಿಕತನ. ಇಲ್ಲಿಗೆ ಕಥೆ ಮುಗಿಯುತ್ತದೆ ಮತ್ತು ನಮ್ಮ ನೈತಿಕತೆಯನ್ನು ಪ್ರಶ್ನಿಸುತ್ತದೆ.
ಹೊಟ್ಟೆಯೊಳಗಿನ ಗುಟ್ಟು:-
ಈ ತರಹದ ಕಥೆಗಳನ್ನು ನಾವು ತುಂಬಾ ಓದಿದ್ದುಂಟು, ನೋಡಿದ್ದುಂಟು. ಆದರೆ ಕಥೆಯನ್ನು ಹೆಣೆಯುವಲ್ಲಿ ಕಥೆಗಾರ ವಿಭಿನ್ನ ದಾರಿಯನ್ನು ಅನುಸರಿಸುತ್ತಾನೆ. ಒಬ್ಬ ಹೆಣ್ಣುಮಗಳ ಅಂತ್ಯಕ್ರಿಯೆ ಮತ್ತು ಪಿಂಡಪ್ರದಾನದೊಂದಿಗೆ ಕಥೆ ಬಿಚ್ಚಿಕೊಳ್ಳುತ್ತದೆ. ಪಿಂಡಪ್ರದಾನದ ಪ್ರಾಮುಖ್ಯತೆಯನ್ನು ವಿವರಿಸುವದರೆಲ್ಲಿಯೇ ಅವಳ ಮಕ್ಕಳ ಮತ್ತು ಸಂಭಂಧಿಕರ ಮನೋಸ್ಥಿತಿಯನ್ನು ಹೇಳಲಾಗಿದೆ. ಕೊನೆಗೆ ಅವರ ಮನೆಯ ಕೆಲಸದಾಳು ನೆರವಾಗುವ ಹೊತ್ತಿಗೆ ಕಾಗೆಪಿಂಡ ಪ್ರಹಸನ ಕೊನೆಗೊಳ್ಳುತ್ತದೆ. ನಂತರ ಕೆಲಸದಾಳು ಮತ್ತು ಮೃತವ್ಯಕ್ತಿಯ ಸಂಭಂಧದ ಬಗ್ಗೆ ವಿವರಿಸುವ ಹೊತ್ತಿಗೆ ,ಅಂತಃಕರಣ, ಪ್ರೀತಿ ವಿಶ್ವಾಸಗಳು ಬರೀ ರಕ್ತಸಂಬಂಧದಿಂದಲೇ ಬರುತ್ತವೆ ಎಂಬುದನ್ನು ಸುಳುಮಾಡುವಲ್ಲಿ ಕಥೆ ಅಂತ್ಯಗೊಳ್ಳುತ್ತದೆ.
ಗುಳ್ಳೆ:-
ಕೆಲವೊಂದು ಸಾರಿ ಹೀಗಾಗುತ್ತೆ. ನಾವು ನಮಗೆ ತಿಳಿದಂತೆ ಮಾಡುತ್ತೇವೆ. ಅದು ಸರಿಯೇ ಇರಬಹುದು. ಆದರೆ ಅದು ಇನ್ನೊಬ್ಬರಿಗೆ ತೊಂದರೆ ಕೊಟ್ಟಿರಲೂಬಹುದು. ತೊಂದರೆ ಕೊಟ್ಟಿದ್ದು ನಿಜವಾದಲ್ಲಿ, ಅದು ನಮ್ಮನ್ನು ಹಿಂಸಿಸುತ್ತದೆ. ನಮ್ಮ ಅನಿಸಿಕೆ, ಅಭಿಪ್ರಾಯ ಸರಿ ಇದ್ದಾಗಲೂ ಹೀಗಾಗುವದುಂಟು. ಇದನ್ನೇ ಕಥಾವಸ್ತುವನ್ನಾಗಿ ಬಳಸಿಕೊಳ್ಳಲಾಗಿದೆ. ಕಥಾನಾಯಕ ಐ.ಟಿ ಕಂಪನಿಯೊಂದರ ಜವಾಬ್ದಾರಿ ಸ್ಥಾನದಲ್ಲಿರುವಾತ. ಅವನ ಕೆಳಗೆ ಕೆಲಸ ಮಾಡುವಾತ, ನಕಲಿ ಪ್ರಮಾಣಪತ್ರ ಮತ್ತು ದಾಖಲೆಗಳಿಂದ ನೌಕರಿ ಗಳಿಸಿಕೊಂಡಿರುವಾತ. ಇದೆಲ್ಲ ಕಥಾನಾಯಕನಿಗೆ ತಿಳಿದು, ಅವನನ್ನು ಕಂಪನಿಯಿಂದ ಹೊರದೂಡುತ್ತಾನೆ. ಅವನ ಗೋಳು ಮತ್ತು ಅಂಗಲಾಚುವಿಕೆ ಕಥಾನಾಯಕನಲ್ಲಿ ಕರುಣೆಮೂಡಿಸುವದಿಲ್ಲ. ಕೆಲವು ದಿನಗಳ ನಂತರ ಅಕಸ್ಮಾತ್ತಾಗಿ ಸಿಕ್ಕ ಅವನನ್ನು ಕಥಾನಾಯಕ ಎದುರಿಸುವಲ್ಲಿ ಕಥೆ ಅಂತ್ಯಗೊಳ್ಳುತ್ತದೆ.
ಶ್ರೀದೇವಿ ಮಹಾತ್ಮೆ: -
ಸಾಫ್ಟ್ ವೇರ್ ಉದ್ಯೋಗಿಯೊಬ್ಬಾತ ತನ್ನ ಮನೆ ಕೆಲಸದ ಹುಡುಗಿಯ ಮನಸ್ಥಿತಿ ಮತ್ತು ಅವಳಿಗೆ ಸಹಾಯ ಮಾಡಲಿಕ್ಕಾಗದ ಅವನ ಅಸಹಾಯಕತೆ, ನಮ್ಮ ಸುತ್ತಮುತ್ತಲಿನ ಬಗ್ಗೆ ನಮ್ಮ ಉದಾಸೀನತೆಯ ಬಗ್ಗೆ ಕೆಣಕುವ ಕಥೆ ಇದಾಗಿದ್ದು, ಅಂತರ್ ಜಾತೀಯ ವಿವಾಹ ಅದರಿಂದಾಗುವ ಜಾತಿ ಪರಿವರ್ತನೆಯ ಬಗೆ, ಮತ್ತು ಕೆಳವರ್ಗದ ಬದುಕಿನೆಡೆಗಿನ ಮನಸ್ಥಿತಿಯನ್ನು ಕಥೆ ಬಿಚ್ಚಿಡುತ್ತದೆ. ಕಥಾನಾಯಕ ತನ್ನ ಅಪಾರ್ಟ್‌ಮೆಂಟಿನಿಂದ ಎರಡು ಕೊಡ ನೀರು ಕೊಡಲಾಗದ ಪರಿಸ್ಥಿತಿ ನಮ್ಮನ್ನು ಪ್ರತಿಬಿಂಬಿಸುತ್ತದೆ. ಅಂತೆಯೇ ಅವನ ಕೆಲಸದಾಳು ಶ್ರೀದೇವಿಯ ಮುಗ್ಧತೆ ಮತ್ತು ಬಾಲಿಶತನ ನಮ್ಮನ್ನು ಆವರಿಸುತ್ತದೆ. ಅವಳು ಅಂತರ್ ಜಾತಿಯ ಹುಡುಗನನ್ನು ಮದುವೆಯಾಗುವದರೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ.
 
Wednesday, January 2, 2013 0 comments

ಬಿಳಿಟೋಪಿ


'ನಾನು ಆಟೋ ಡ್ರೈವರ್ ಆಗಿದ್ದು ನನಗೆ ಅಸಹಜವೇನೂ ಅನ್ನಿಸಲಿಲ್ಲ. ಆದರೆ ಆಕಸ್ಮಿಕವಾಗಿತ್ತು. ಹಳೆಯ ಪ್ರೇಯಸಿಯ ಹಠಾತ್ ಭೇಟಿಯ ಥರ. ನಮ್ಮ ತಂದೆ ಕೂಡಾ ಆಟೋ ಡ್ರೈವರ್. ಆಟೋ ಓಡಿಸುತ್ತಲೇ ನಮ್ಮನ್ನೆಲ್ಲ ಓದಿಸಿದ್ದರು. ನಾನೂ ಕೊನೆಯ ವರ್ಷದ ಬಿ.ಬಿ.ಎ ಮಾಡುತ್ತಿದ್ದೆ. ಅಷ್ಟರಲ್ಲಿ ಅಪ್ಪನಿಗೆ ಹೃದಯರೋಗ ಶುರುವಾಯಿತು. ಡಾಕ್ಟರಂತೂ ಆಟೋ ಓಡಿಸುವದು ಬೇಡವೆಂದಿದ್ದರು. ಮನೆಯ ಖರ್ಚು, ಅಪ್ಪನ ಔಷಧಿ ಖರ್ಚು, ಮತ್ತು ತಂಗಿಯ ಮದುವೆಯ ಖರ್ಚಿಗಾಗಿ ನಾನು ಆಟೋ ಓಡಿಸಲು ಶುರು ಮಾಡಿದೆ. ಮೊದಮೊದಲು ಬೇಜಾರಾಗುತ್ತಿತ್ತು. ನಂತರ ರೂಢಿಯಾಯಿತು. ಈಗ ಆರಾಮವಾಗಿದ್ದೇನೆ ಸಾರ್ ' ಎಂದೆ. ಗಿರಾಕಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ್ದೆ. ಅವನ ಪ್ರಶ್ನೆ ಹೀಗಿತ್ತು. ನೀನು ಇಷ್ಟ ಪಟ್ಟು ಗಾಡಿ ಓಡಿಸ್ತೀಯ? ಅಥವಾ ಅನಿವಾರ್ಯತೆಯಾ?

ಕೆಲವೊಂದು ಗಿರಾಕಿಗಳು ಈ ಥರ ವಿಚಿತ್ರ ಪ್ರಶ್ನೆ ಕೇಳುತ್ತಾರೆ. ಅವನೇಕೋ ನನ್ನ ಉತ್ತರದಿಂದ ಸಮಾಧಾನವಾಗಿದ್ದ ಎಂದೆನಿಸಲಿಲ್ಲ. ಮರು ಪ್ರಶ್ನೆ ಎಸೆದೆ. ' ಸಾರ್, ನೀವು ಏನ್ ಕೆಲಸ ಮಾಡ್ತೀರ?' . ' ನಾನೊಬ್ಬ ಪತ್ರಕರ್ತ, ಆಗೊಮ್ಮೆ ಈಗೊಮ್ಮೆ ಕಥೆ ಬರೀತೀನಿ' ಎಂದ. ಕೈಯಲ್ಲಿದ್ದ ಸಿಗರೇಟಿನ ನೆನಪಾದಂತೆ ಜೋರಾಗಿ ಹೊಗೆ ಎಳೆದ. ' ಈ ಆಟೋ ಡ್ರೈವರ್ ಗಳು ಯಾಕೆ ಈ ಥರ ಇರ್ತಾರೆ ' ಎಂದ.' ಈ ಥರ ಅಂದ್ರೆ? ' ಅವನ ಪ್ರಶ್ನೆಗೆ ನನ್ನ ಮರು ಪ್ರಶ್ನೆ. ' ಯಾವಾಗಲೂ ಜನರಿಗೆ ಮೋಸ ಮಾಡೋಕೆ ನೋಡೋದು, ಕರೆದ ಕಡೆ ಬರೋಲ್ಲ ಅನ್ನೋದು, ಹೆಚ್ಚಿಗೆ ಹಣ ಪೀಕೋದು. ಯಾಕೆ ಹೀಗೆ.? ಅವರು ಪ್ರಾಮಾಣಿಕವಾಗಿ ಇರಲಿ ಅಂತ ನಾವು ಬಯಸೋದು ತಪ್ಪಾ?' . 'ಸರ್, ಕಾರಣಗಳು ನೂರಾರು ಇರುತ್ವೆ. ರಾತ್ರಿ ನಾವು ಗಿರಾಕಿ ಕರೆದ ಕಡೆ ಹೋಗೋಕೆ ಹಿಂದೇಟು ಹಾಕ್ತೇವೆ, ಯಾಕಂದ್ರೆ, ನಾವು ನಮ್ಮ ಮನೆ ಕಡೆ ಹೋಗೋ ಸಮಯ ಆಗಿರುತ್ತೆ, ಅದಕ್ಕೆ ಅದೇ ಕಡೆ ಹೋಗೋ ಗಿರಾಕಿಗಾಗಿ ಹುಡುಕ್ತೇವೆ. ಇಲ್ಲ, ಗಿರಾಕಿ ಹೇಳಿದ ಏರಿಯಾ ಸರಿ ಇರಲ್ಲ. ನಮಗೂ ಮನೆ ಮಠ ಅಂತ ಇದೆ ಅಲ್ವ ಸರ್., ಹೆಚ್ಚಿಗೆ ಹಣ ಯಾಕೆ ಕೇಳ್ತೀವಿ ಅಂದ್ರೆ, ವಾಪಸ್ ಬರೋಕೆ ಗಿರಾಕಿ ಸಿಗಲ್ಲ ಅಥವಾ ನಮಗೂ ಹಣದ ಅಡಚಣೆ ಇರುತ್ತೆ, ಇವ್ಯಾವುದೂ ಇಲ್ಲದೇನೂ ಸ್ವಲ್ಪ ಜನ ಜಾಸ್ತಿ ಹಣ ಕೇಳ್ತಾರೆ, ರಾವಣ ಇದ್ದರೆ ಅಲ್ಲವೇ ರಾಮಾಯಣ. ಅಲ್ಲದೆ ಕೆಲವೊಂದು ಅನುಭವಗಳಿಂದ ಅವರು ಬದಲಾಗಿರ್ತಾರೆ'. ಕೊನೆಯ ವಾಕ್ಯ ಮಾತ್ರ ಅವನ್ ಗಮನ ಸೆಳೆಯಿತು, 'ಅನುಭವ ಅಂದ್ರೆ?', ಎಂದ. 'ನೋಡಿ ಸಾರ್, ನಾನು ಆಟೋ ಓಡ್ಸೋಕೆ ಶುರು ಮಾಡ್ದಾಗಿನಿಂದ ತುಂಬ ಪ್ರಾಮಾಣಿಕ. ಒಂದು ಸಾರಿ, ಊರ ಹೊರಗಡೆ ಏರಿಯಾದಿಂದ ಮರಳುತ್ತಿದ್ದೆ. ಸ್ವಲ್ಪ ಮುಂದೆ ಬಂದಿದ್ದೆ, ಇಬ್ಬರು ಮಧ್ಯವಯಸ್ಕರು ರಸ್ತೆ ಪಕ್ಕದಲ್ಲಿ ನಿಂತು ಆಟೋ ನಿಲ್ಲಿಸುವಂತೆ ಕೈ ಮಾಡಿದರು, ಇಬ್ಬರೂ ಚೆನ್ನಾಗಿ ಕುಡಿದಿದ್ದರು. ಒಬ್ಬ, ಇನ್ನೊಬ್ಬನ ವಿಳಾಸವನ್ನು ಒಂದು ಚೀಟಿಯಲ್ಲಿ ಬರೆದು, ಐವತ್ತು ರೂಪಾಯಿ ನೋಟಿನೊಂದಿಗೆ ನನ್ನ ಕಿಶೆಯಲ್ಲಿಟ್ಟ. ಅವ್ರನ್ನು ಅವರ ಮನೆಗೆ ತಲುಪಿಸು ಎಂದು ಕತ್ತಲಲ್ಲಿ ಮರೆಯಾದ. ನಾನು ಅವರ ವಿಳಾಸವನ್ನು ನೋಡಿಕೊಂಡು ಅವರ ಮನೆಯತ್ತ ಆಟೋ ಓಡಿಸಿದೆ. ಅವರ ಮನೆ ಮೊದಲನೇ ಮಹಡಿಯಲ್ಲಿತ್ತು. ಅವರ ಒಂದು ಕೈಯನ್ನು ನನ್ನ ಭುಜದ ಮೇಲೆ ಹಾಕಿಕೊಂಡು ಅವರನ್ನು ಕರೆದೊಯ್ದೆ ಕಾಲಿಂಗ್ ಬೆಲ್ ಪ್ರೆಸ್ ಮಾಡಿದೆ. ಧಡೂತಿ ಹೆಂಗಸೊಬ್ಬಳು ಬಾಗಿಲು ತೆರೆದು ನನ್ನನ್ನೊಮ್ಮೆ, ತನ್ನ ಗಂಡನನ್ನೊಮ್ಮೆ ದುರುಗುಟ್ಟಿ ನೋಡಿದಳು. ನನಗ್ಯಾಕೋ ಹಿಡಿಂಬೆಯ ನೆನಪಾಯಿತು, 'ನೀನ್ಯಾಕೆ ಮೇಲೆ ತನಕ ಕರ್ಕೋಂಡು ಬಂದೆ, ಕೆಳಗೆ ಬಿಟ್ಟು ಹೋಗ್ಬಹುದಿತ್ತಲ್ವಾ? ಈಗ ನೋಡು , ಅಕ್ಕ ಪಕ್ಕದ ಮನೆಯವ್ರಿಗೆಲ್ಲ ಗೊತ್ತಾಗುತ್ತೆ, ಇವರು ಕುಡ್ಕೊಂಡು ಮನೆಗೆ ಬಂದ್ರು ಅಂತ, ಎಂದು ನನ್ನ ಬಯ್ಯೋಕೆ ಶುರು ಮಾಡಿದಳು.ಸಣ್ಣಗೆ ನಾನು ಅಲ್ಲಿಂದ ಕಾಲ್ಕಿತ್ತೆ. ಸ್ವಲ್ಪ ದೂರ ಹೋಗಿದ್ದೆ, ಹಿಂದಿನ ಸೀಟಿನಿಂದ ಮೊಬೈಲ್ ರಿಂಗ್ ಆಗೋಕೆ ಶುರು ಮಾಡಿತು, ಪಾಪ ಎಣ್ಣೆ ಗಿರಾಕಿ ಮೊಬೈಲ್ ಆಟೋದಲ್ಲಿ ಬಿದ್ದಿತ್ತು. ಮತ್ತೆ ಹೋಗಿ ವಾಪಸ್ ಕೊಟ್ಟು ಬರೋದೆ ಸರಿ ಎಂದುಕೊಂಡವನೇ ಅವರ ಮನೆಗೆ ಹೋದೆ. ಬಾಗಿಲು ತೆಗೆದೇ ಇತ್ತು, ಒಳಗಡೆಯಿಂದ ಹಿಡಿಂಬೆಯ ಬೈಯ್ಗುಳಗಳು ಕೇಳಿಸುತ್ತಿದ್ದವು. ನಾನು ಮೆಲ್ಲಗೆ ಕೂಗಿದೆ, ಹಿಡಿಂಬೆಗೆ ನನ್ನ ಕೂಗು ಕೇಳಿಸಲಿಲ್ಲ. ನಾನೇ ಧೈರ್ಯವಾಗಿ ಒಂದು ಹೆಜ್ಜೆ ಒಳಗಿಟ್ಟೆ, ಧುತ್ತನೇ ಬಂದಳು ಹಿಡಿಂಬೆ, ಬಂದವಳೇ ಏನು ಎಂದಳು, ಮೊಬೈಲ್ ಕೈಗಿತ್ತೆ, ಹೊರನಡೆದೆ, ಧಡ್ ಎಂದು ಬಾಗಿಲು ಹಾಕಿಕೊಂಡಳು. ಮನಸ್ಸು ಕಹಿಯಾಗಿತ್ತು ಸರ್' ಎಂದೆ. ಪತ್ರಕರ್ತ ಗಿರಾಕಿ ಸಿಗರೇಟಿನಲ್ಲಿ ಮೈಮರೆತಿತ್ತು. ' ಇನ್ನೊಂದ್ಸಲ ಹೀಗಾಯ್ತು ಸರ್, ಒಂದು ಮದುವೆ ಛತ್ರಕ್ಕೆ ಡ್ರಾಪ್ ಇತ್ತು. ಮೂರು ಜನ ಹೆಂಗಸ್ಸ್ರು. ಅದು ಇದು ಅಂತ ಮಾತಾಡ್ತಾ ಒಂದು ಸೀರೆಯನ್ನು ಆಟೋದಲ್ಲೆ ಬೀಳಿಸ್ಕೊಂಡು ಹೋಗಿದ್ದ್ರು, ಅಪರನ್ನು ಹುಡುಕಿ ವಾಪಸ್ ಕೊಡೋಕೆ ಹೋದ್ರೆ, ಆಯಮ್ಮ, ಇನ್ನೊಬ್ಬಳಿಗೆ ಕೇಳಿದ್ಲು, ನೋಡೆ, ಸೀರೆ ಬದಲಾಯಿಸಿದಾನಾ ಏನು ಅಂತ ನೋಡ್ಕೋ ಇವಾಗಲ್ಲೇ ಅಂದ್ಲು, ಮತ್ತೆ ಬೇಜಾರಾಯ್ತು ಸಾರ್ , ಅದಕ್ಕೆ ಪ್ರಾಮಾಣಿಕತೆಗೆ ಬೆಲೆ ಇಲ್ವ ಅಂತ ಅನ್ನಿಸುತ್ತೆ ' ಎಂದೆ. ಅದಕ್ಕೆ ಪತ್ರಕರ್ತ ಗಿರಾಕಿ,' ಪ್ರಾಮಾಣಿಕತೆಗೆ ಪರೀಕ್ಷೆಗಳು ಜಾಸ್ತಿ, ಚಿನ್ನ ಎಷ್ತು ಸುಡುತ್ತೋ ಅಷ್ತು ಶುಧವಾಗುತ್ತೆ. ನೀನು ಮಾತ್ರ ನಿನ್ನ ಪ್ರಾಮಾಣಿಕತೆಯನ್ನು ಬಿಡಬೇಡ, ಎಂದ. ಅವ ಮನೆಯೂ ಹತ್ತಿರವಾಗಿತ್ತು. ಮೀಟರ್ ನೋಡಿದೆ, ೧೪೭.೦೦ ಎಂದು ತೋರಿಸುತ್ತಿತ್ತು. ೧೫೦ ರೂಪಾಯಿ ಕೊಟ್ಟವನೇ, 'Keep the change ' ಎಂದವನೇ ಕೆಳಗಿಳಿದು ಹೊರಟ.

ಹೀಗೆಯೆ ಕೆಲವು ದಿನಗಳಾದವು. ಸಿಹಿ ಕಹಿ ಅನುಭವಗಳಿದ್ದರೂ ನಾನು ನನ್ನ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದೆ. ಅವತ್ತೊಂದು ದಿನ, ದಿನಪತ್ರಿಕೆ ಓದುತ್ತಿದ್ದೆ. ಬಹುಮಾನಿತ ಕಥೆಯೊಂದು ಪ್ರಕಟವಾಗಿತ್ತು. ಓದುತ್ತಾ ಹೋದೆ, ಅದು ನನ್ನದೇ ಕಥೆಯಾಗಿತ್ತು. ಆ ಪತ್ರಕರ್ತ ಗಿರಾಕಿ, ನನ್ನ ಕಥೆಯನ್ನು ಸುಂದರವಾಗಿ ಹೆಣೆದಿದ್ದ. ಪ್ರಾಮಾಣಿಕತೆಗೆ ಬೆಲೆ ಇದೆ ಎಂಬುದನ್ನು ಚೆನ್ನಾಗಿ ಚಿತ್ರಿಸಿದ್ದ. ನನಗೂ ಖುಷಿಯಾಯಿತು. ಅವನನ್ನು ಅಭಿನಂದಿಸೋಣ ಎಂದು ಅವನ ಮನೆಗೆ ಹೋದೆ, ಕಾಲಿಂಗ್ ಬೆಲ್ ಪ್ರೆಸ್ ಮಾಡಿದೆ. ಪತ್ರಕರ್ತ ಹೊರಗೆ ಬಂದ, 'ಕಂಗ್ರಾಚ್ಯುಲೇಶನ್ ಸರ್, ನನ್ನ ಕಥೆಯನ್ನು ಚೆನ್ನಾಗಿ ಬರೆದಿದ್ದೀರಾ, ಪ್ರಾಮಾಣಿಕತೆಗೆ ಬೆಲೆ ಇದೆ ಅಂತ ತೋರಿಸಿದ್ದೀರಿ. ತುಂಬಾ ಖುಷಿಯಾಯ್ತು ಸರ್' ಎಂದೆ. ' ಅರೆ, ಯಾರು ನೀನು, ಇಲ್ಲಿಗ್ಯಾಕೆ ಬಂದೆ, ಒಬ್ಬ ಆಟೋ ಡ್ರೈವರ್ ಕಥೆ ಬರೆದ್ರೆ ಅದು ನಿಂದೇ ಹೇಗಾಗುತ್ತೆ, ಅದು ನನ್ನ ಕಲ್ಪನೆಯಲ್ಲಿ ಮೂಡಿದ ಕಥೆ. ನಡೆ ಇಲ್ಲಿಂದ ' ಎಂದವನೇ ಧಡಾರನೇ ಬಾಗಿಲು ಹಾಕಿಕೊಂಡ. ನಾನು ನನ್ನ ಆಟೋ ಕಡೆಗೆ ಭಾರವಾದ ಹೆಜ್ಜೆ ಹಾಕಿದೆ. ಹತ್ತಿರದ ಶಾಲೆಯೊಂದರಿಂದ ರಘುಪತಿ ರಾಘವ ರಾಜಾರಾಮ್ ಕೇಳಿಸುತ್ತಿತ್ತು. ಅಂದು ಗಾಂಧಿ ಜಯಂತಿಯಾಗಿತ್ತು.
Wednesday, June 1, 2011 2 comments

ದ್ವಂದ್ವ ?


ರವಿವಾರ .ಮೇ 28 2011 .ಸಮಯ ಬೆಳಿಗ್ಗೆ 06 . 
ಯಾಕೋ ಎಚ್ಚರವಾಯ್ತು. ಯಾವತ್ತೂ 6 .30 ಕ್ಕಿಂತ ಮುಂಚೆ ಎಚ್ಚರವಾಗಿದ್ದಿಲ್ಲ. ಕಿಬ್ಬೊಟ್ಟೆಯ ಆಳದಲ್ಲೆಲ್ಲೋ ನೋವಿರುವಂತೆನಿಸಿತು. ಬೆಳಿಗ್ಗೆ ಒಂದು ರೌಂಡ್  ವಾಕ್ ಹೋದರೆ ಸ್ವಲ್ಪ ನೆಮ್ಮದಿಯೇನ್ನಿಸಬಹುದೇನೋ ಎಂತೆನಿಸಿತು. ಹಳೆಯ  ದೊಗಲೆ ಟಿ- ಶರ್ಟ್ ಮತ್ತು  ಪೈಜಾಮ ಧರಿಸಿದವನೇ, ದೊಡ್ಡ ಬಿಲ್ಡಿಂಗಿನ ಬೇಸ್ ಮೆಂಟಿನಲ್ಲಿರುವ ನನ್ನ ಚಿಕ್ಕ ರೂಂನಿಂದ ಹೊರಬಿದ್ದೆ. 

ಗುರುವಾರ . ಎಪ್ರಿಲ್  5 2007 . ಸಮಯ ಬೆಳಿಗ್ಗೆ 11 .30 .
ದರಿದ್ರನಾರಾಯಣನ ಹಾಗೆ ಮಂಚದ ಮೇಲೆ ಬಿದ್ದವನ ಕೈಯಲ್ಲಿ ಹಳೆಯ ದಿನಪತ್ರಿಕೆಯ ಪುರವಣಿಯೊಂದಿತ್ತು. ಕಿವಿಯಲ್ಲಿ ಅಮ್ಮನ ಸುಪ್ರಭಾತದ ನಿನಾದವಿತ್ತು. ನಾನು ಡಿಗ್ರಿ ಮುಗಿದ ಮೇಲೆಯೂ ಕೆಲಸ ಸಿಗದಿದ್ದಕ್ಕೆ ಅಮ್ಮನಿಗೊಂದು ನೋವಿತ್ತು. ಈಗಾದರೂ ಬಡತನದ ಕುಟುಂಬಕ್ಕೆ ನಾನು ಸಹಾಯವಗುತ್ತೆನೆಂದು ಎನಿಸಿದ್ದ ಅಮ್ಮನಿಗೆ , ನನ್ನ ಪ್ರಾಮಾಣಿಕತೆ ಅಸಮಾಧ್ಹಾನ ತಂದಿತ್ತು. ಪೋಸ್ಟ್ ಮ್ಯಾನ್ ರಂಗಪ್ಪ ಎಸೆದ ಪತ್ರವನ್ನು ಅಮ್ಮ ಕೆಮ್ಮುತ್ತಲೇ ನನ್ನ ಕೈಯಲ್ಲಿ ತಂದು ತುರುಕಿದಳು. ಕಾಗದ ತುಮಕೂರಿನ ಖಾಸಗಿ ಕಾಲೇಜಿನಿಂದ ಬಂದಿದ್ದರಿಂದ ಸ್ವಲ್ಪ ಕುತುಉಹಲದಿಂದ ಹರಿದು ಓದಿದೆ. ಕಾಗದ ಓದಿ ಮುಗಿಸುವ ಹೊತ್ತಿಗೆ ನನ್ನ ಮುಖದಲ್ಲಿ ಮುಗುಳ್ನಗೆಯೊಂದು ಮೂಡಿತ್ತು . ಅಮ್ಮನ ಹುಬ್ಬುಗಳು ಕುತೂಹಲದಿಂದ ಗಂಟಾಗಿದ್ದವು. ಕೊನೆಗೂ ನಾನು ಕನ್ನಡದ ಅಧ್ಯಾಪಕನಾಗಿದ್ದೆ. ಅಮ್ಮನಿಗೆ ಇದರಿಂದ ಖುಷಿಯಾಗಿದ್ದರೂ , ಸಂಬಳ ಮತ್ತು ಸ್ವಲ್ಪ ದುಉರದ ಸ್ಥಳವಾದ್ದರಿಂದ ಬೇಸರವಾಗಿತ್ತು

ಶುಕ್ರವಾರ . ಅಕ್ಟೋಬರ್ 2 2009  ಸಮಯ ಬೆಳಿಗ್ಗೆ 9 
ಗಾಂಧಿ ಜಯಂತಿಯ ಪ್ರಯುಕ್ತ ಕಾಲೇಜಿನಲ್ಲೊಂದು ಪುಟ್ಟ ಕಾರ್ಯಕ್ರಮ. ಡಿಗ್ರಿ ಮೊದಲ್ನೇ ವರ್ಷದ ಹುಡುಗನೊಬ್ಬ ತನ್ನ ಭಾಷಣದಲ್ಲಿ ನನ್ನನ್ನು ಗಾಂಧಿಗೆ ಹೋಲಿಸಲು ಪ್ರಯತ್ನಿಸಿದ್ದ. ಕಾಲೇಜಿನಲ್ಲಿ ನಾನೊಬ್ಬ ಸಭ್ಯ, ಸಜ್ಜನ, ಮತ್ತು ಪ್ರಾಮಾಣಿಕ ಅಧ್ಯಾಪಕನಾಗಿದ್ದೆ.ನಾನು ಮತ್ತೊಬ್ಬ ಗಂಧಿಯೇನೋ ಅಂದೆನಿಸಿ ಉಬ್ಬಿಹೊಗಿದ್ದೆ.

ಮಂಗಳವಾರ . ಮೇ 1, 2001. ಮಧ್ಯಾಹ್ನ 12.45 
ಕಾರ್ಮಿಕ ದಿನಾಚರಣೆಯ ಅಂಗವಾಗಿ ಊರಿನ ಕ್ರೀಡಾಂಗಣದಲ್ಲಿ ಕಾರ್ಯಕ್ರಮವೊಂದು ಏರ್ಪಟ್ಟಿತ್ತು. ಕಾರ್ಮಿಕ ಸಚಿವ ವೀರೇಶ್ ಗುರಾಣಿ ಯವರು ಕಾರ್ಯಕ್ರಮದ ಅತಿಥಿಯಾಗಿದ್ದರು. ಕಾರ್ಯಕ್ರಮದ ನೂಕುನುಗ್ಗಲಿನ ನಡುವೆ ಅಪ್ಪನಿಗೆ ಹೃದಯಾಘಾತವಾಗಿತ್ತು. ಅಪ್ಪ ಕಾರ್ಮಿಕರ ದಿನದಂದು ಶವವಾಗಿದ್ದ. ಅಪ್ಪನ ಅಕಾಲ ಮರಣದಿಂದ ನಾನು ಸೈನ್ಸ್ ಬಿಟ್ಟು ಆರ್ಟ್ಸ್ ಓದುವಂತಾಯಿತು. 

ರವಿವಾರ .ಮೇ 28 2011 .ಸಮಯ ಬೆಳಿಗ್ಗೆ 06.30.
ನಾನು ಈ ಎಲ್ಲ ಗುಂಗಿನಿಂದ ಹೊರಬಂದು ನೋಡಿದಾಗ ನನ್ನ ರೂಮಿದ್ದ ಬಿಲ್ಡಿಂಗಿನ ಮುಂದಿದ್ದೆ. ಸೀದ ಬೇಸ್ ಮೆಂಟಿನಲ್ಲಿರುವ ನನ್ನ ರೂಮಿಗೆ ತೆರಳುವದನ್ನು ಬಿಟ್ಟು ನೆಲ ಅಂತಸ್ತಿನಲ್ಲಿರುವ ಚಿಕ್ಕ ಕೋ-ಅಪರೇಟಿವ್ ಬ್ಯಾಂಕ್ನತ್ತ ದೃಷ್ಟಿ ಹರಿಸಿದೆ. ಅಸಹಜವಾದ ಸಂಗತಿಯೊಂದನ್ನು ಗಮನಿಸಿದೆ. ಬ್ಯಾಂಕಿನ ಕೀಲಿ ಕೈ ಬಾಗಿಲಿನಲ್ಲೇ ನೇತಾಡುತ್ತಿತ್ತು. ಮೈ ಕೈ ಎಲ್ಲ ಬೆವರತೊಡಗಿದವು.ಅರ್ಧ ಗಂಟೆಯ ಹಿಂದೆ ನೆನಪಾದ ಹಳೆಯ ನೆನಪುಗಳು ಮತ್ತೆ ನೆನಪಾದವು. ಎಲ್ಲವು ಕಲಸು ಮೇಲೋಗರ. ಆದರ್ಶಗಳೆಲ್ಲ ಉಪ್ಪು ಸಾಗರ. ತಕ್ಷಣವೇ ಕಟ್ಟಡದ ಒಳ ನಡೆದೆ. ಹೃದಯ ಬಾಯಿಗೆ ಬಂದಂತಾಗಿತ್ತು. ಕಟ್ಟಡವೆಲ್ಲಾ ಖಾಲಿ. ಒಂದು ಖುರ್ಚಿಯೂ ಇಲ್ಲ. ನನ್ನ ಎದೆ ಬಡಿತ ನನಗೆಯೇ ಕೇಳಿಸುತ್ತಿತ್ತು. ಅಂಜಿಕೆಯಿಂದ ಕಟ್ಟಡ ಕಂಪೌಂಡಿನಿಂದ ಹೊರ ಓಡಿಬಂದೆ. ಕಾಲುಗಳು ಸಣ್ಣಗೆ ನಡುಗುತ್ತಿದ್ದವು.ಯಾರಾದರೂ ನನ್ನನ್ನು ಗಮನಿಸಿದರೆ ಎಂದು ಸುತ್ತಲು ಕಣ್ಣು ಹಾಯಿಸಿದೆ, ಮೊದಲನೇ ಮಹಡಿಯ ಕಿಟಕಿಯ ಪಕ್ಕದಲ್ಲಿದ್ದ ಬೋರ್ಡ್ ಒಂದು ಗಮನ ಸೆಳೆಯಿತು . ಅದರಲ್ಲಿದ್ದುದು  ಇದು - TO LET, Office/ Commercial Space Contact : 98x0198x01. ನನ್ನ ಆದರ್ಶದ ಮುಖವಾಡ ಕಳಚಿ ಬಿದ್ದಿತ್ತು. ನನ್ನಲ್ಲೊಬ್ಬ ಸತ್ತಿದ್ದ.   




Tuesday, May 31, 2011 0 comments

ಸೀರೆ

"ಛೆ ! ಈ  ದೀಪಾವಳಿಯೂ ಹೀಗೆ ಕಾಡಬೇಕಾ? ಇನ್ನೂ ನಾಲ್ಕು ದಿನ ತಡವಾಗಿ ಬಂದಿದ್ದರೆ ಏನಾಗ್ತಿತ್ತು? ಅಕ್ಟೋಬರ್ 27    ರಂದು ದೀಪಾವಳಿ.ಇವತ್ತಿಗೆ ಆರು ದಿನ ಇದೆ. ಸಂಬಳ ಬರೋದಕ್ಕೆ ಹತ್ತು ದಿನ ಬಾಕಿ. ಕೈಯಲ್ಲಿರೋದು 3500 ರೂ. ದಿನಕ್ಕೆ ನೂರು ರೂಪಾಯಿಯಂತೆ ಖರ್ಚಿಗಿಟ್ಟುಕೊಂಡರೂ 2500 ರೂ ಗಳವರೆಗೆ ಸೀರೆ ತಗೋಬಹುದು. ಆದರೆ ಆ ನಿರ್ಮಲ ದಸರೆಗೆ ಉಟ್ಟಂತಹ ಸೀರೆ ತಗೋಬಹುದಾ. ಇಷ್ಟಕ್ಕೂ ಅವಳ ಸೀರೆ ಬೆಲೆ ನಾನು ಕೇಳಲೇ ಇಲ್ಲ. ಇರಲಿ , ಧೈರ್ಯ ಮಾಡಿ ತಗೊಂಡೆ ಬಿಡೋಣ" ಅಂದುಕೊಂಡೆ. ನನಗೆ ನಿರ್ಮಲಳ ಸೀರೆಗಿಂತ ಅವಳ ಮೊನಚು ನೋಟ ನನ್ನನ್ನು ಕುಕ್ಕಿತ್ತು. ಕೈಯಲ್ಲಿರೋ ಗಡಿಯಾರ ಸಮಯ 5 :40   ನ್ನು ತೋರಿಸುತ್ತಿತ್ತು, ನಮ್ಮ ಬಾಸ್ ನ  ಹುಬ್ಬುಗಳ ಥರ . ನಾನು ಹೊಸ ಹುಮ್ಮಸ್ಸಿನೊಂದಿಗೆ ಚಿಕ್ಕಪೇಟೆ ಒಳ ಹೂಕ್ಕಿದ್ದೆ. ಎಲ್ಲ ಅಂಗಡಿಗಳೂ ಗೌಜು ಗದ್ದಲಗಳಿಂದ ತುಂಬಿದ್ದವು.ಎಲ್ಲೆಲ್ಲೂ ಖರೀದಿಯ ಸಂಭ್ರಮ. ನನಗೆ ಗೊತ್ತಿರುವಂತೆ , ಇದೇ ಮೊದಲ ಸಲ ನಾನು ಒಬ್ಬಳೇ ಸೀರೆ ತರಲು ಹೊರಟಿದ್ದು. ಕೊನೆಗೂ ನಿರ್ಮಲಳ ಸೀರೆಯಂತಹ ತರಹದ ಸೀರೆಯನ್ನುಟ್ಟ ಬೊಂಬೆಯೊಂದು  ನನ್ನ ಕಣ್ಣು ಕುಕ್ಕುವಲ್ಲಿ  ಯಶಸ್ವಿಯಾಗಿತ್ತು .ಚಕ್ಕನೆ ಅಂಗಡಿಯ ಒಳ ಹೊಕ್ಕೆ. ನಿರ್ಮಲದು ತಿಳು ನೀಲಿ ಸೀರೆ. ನಾನೂಅದೇ ಬಣ್ಣದ್ದು ತಗೊಂಡ್ರೆ ಚೆನ್ನಾಗಿರೊಲ್ಲ ಎನ್ನಿಸಿತು. ಅದಕ್ಕೆ, ಕೊನೆಗೂ ಕನಕಾಂಬರ ಬಣ್ಣದ ಸೀರೆ ಇಷ್ಟವಾಯ್ತು. ಸೀರೆಯ ಅಂಚಿನಲ್ಲಿರುವ ಹಂಸಗಳನ್ನು ನನಗಾಗಿಯೇ ಬಿಡಿಸಿದಂತಿತ್ತು, ಆಹ್! ಸೀರೆಯ ತುದಿಯಲ್ಲಿದ್ದ ಪ್ರೈಸ್ ಟ್ಯಾಗ್ ನನ್ನ ಉತ್ಸಾಹಕ್ಕೆ ತಣ್ಣೀರೆರಚಿತ್ತು. ಬೆಲೆ 3000 ರೂ.ಚೌಕಾಶಿ ಮಾಡಲು ಪ್ರಯತ್ನಿಸಿದೆ. ಅಂಗಡಿಯವನು ಹೇಳಿದ್ದು ,'' ಸೀರೆ ಫಿಕ್ಸ್ ರೇಟ್. ಸೀರೆ ಜೊತೆಗೆ ಲಕ್ಕಿ ಕೂಪನ್ ಬರುತ್ತೆ. ದೀಪಾವಳಿ ದಿನ ಲಕ್ಕಿ ಡಿಪ್ ಇರುತ್ತೆ. ಅದರಲ್ಲಿ ನಿಮ್ಮ ನಂಬರ್ ಬಂದ್ರೆ ಸೀರೆಯ ಅರ್ಧ ಬೆಲೆ ವಾಪಸ್. ಆ ಥರ 100 ಜನರಿಗೆ ಬಹುಮಾನ ಗ್ಯಾರಂಟಿ.ಲಕ್ಕಿ ಡಿಪ್ ವಿಜೇತರನ್ನ ಮಾರನೇ ದಿನದ ಪ್ರಮುಖ ಪತ್ರಿಕೆಗಳಲ್ಲಿ ಘೋಷಿಸಲಾಗುತ್ತೆ".ಕೊನೇಗೂ ಧೈರ್ಯ ಮಾಡಿ ಪ್ಯಾಕ್ ಮಾಡಲು ಆದೇಶಿಸಿದೆ . ಇತ್ತ ಅಂಗಡಿಯ ಮಾಲೀಕನಿಗೆ ಹಣ ತೆತ್ತು ರಸೀದಿ ಮತ್ತು ಲಕ್ಕಿ ಕೂಪನ್ ಇಸಿದುಕೊಂಡೆ. ಕುತೂಹಲ ತಡೆಯಲಾರದೆ ಲಕ್ಕಿ ಕೂಪನ್ ನಂಬರ್ ನೋಡಿದೆ. R58325 .ಅರೆ , ಈ ನಂಬರ್ ಎಲ್ಲೂ ನೋಡಿದ ಹಾಗಿದೆಯಲ್ಲ ಅಂತನ್ನಿಸಿತು, ಚಕ್ಕನೆ ನೆನಪಾದದ್ದು ನನ್ನ ಡಿಗ್ರಿ ಪರೀಕ್ಷೆಯ ನಂಬರ್. ಅದು CO58352 . ನನ್ನ ಪರೀಕ್ಷೆಯ ಫಲಿತಾಂಶ ಗಳೆಲ್ಲ ಕಣ್ಣ ಮುಂದೆ ಹಾದುಹೋದಂತಾಯಿತು. ಯಾಕೋ ಸೀರೆ ಮತ್ತು ಲಕ್ಕಿ ಕೂಪನ್ ಎರಡೂ ಬೇಡವೆನಿಸತೊಡಗಿದವು.ಹಾಗೂ ಹೀಗೂ ಮನಸ್ಸ್ಸನ್ನು ಸಿದ್ಧಗೊಳಿಸತೊಡಗಿದೆ. ಸೀರೆ ಇಲ್ಲದೆ ದೀಪಾವಳಿ ಆಚರಿಸೋಕೆ ಆಗಲ್ವ ಎಂದೆನಿಸಿತು.ನಿರ್ಮಲಳ ಮೇಲಿನ  ಅಸೂಯೆಗೆ ನಾನ್ಯಾಕೆ ಸೀರೆ ತಗೋಬೇಕು ಎಂದೆನ್ನಿಸಿತು  ತಕ್ಷಣವೇ ಸೀರೆ ಖರೀದಿ ಕ್ಯಾನ್ಸಲ್ ಮಾಡಿಸಿದೆ. ಅಂಗಡಿ ಮಾಲೀಕ ನನ್ನ ಸಹಸ್ರನಾಮ ಶುರು ಮಾಡಿದ. ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ , ನಿರುಮ್ಮಳವಾಗಿ ಮನೆಯ ದಾರಿ ಹಿಡಿದೆ. 3000 ರೂ ನನ್ನ ಪರ್ಸ್ ನಲ್ಲಿ ಭದ್ರವಾಗಿತ್ತು. ಮನಸ್ಸಿನಲ್ಲೊಂದು ಸಮಾಧಾನ ಮೂಡಿತ್ತು. ಸೀರೆ ಮರೆತುಹೋಗಿತ್ತು. 
ಅಕ್ಟೋಬರ್ ೨೯ ರ ಪ್ರಜಾವಾಣಿಯಲ್ಲಿ ದೀಪಾವಳಿಯ ವಿಶೇಷ ಕಥೆಗಳ ಕೆಳಗೆ ಬಾಲಾಜಿ ಸೀರೆ ಅಂಗಡಿಯ ಲಕ್ಕಿ ಡ್ರಾ ನಂಬರ್  ಗಳ 10 ಸಾಲುಗಳಿದ್ದವು. ಅದರ 6 ನೇ ಸಾಲಿನ 8 ನೇ ನಂಬರ್  R58325 ಆಗಿತ್ತು.
Monday, June 7, 2010 2 comments

ನ್ಯಾನೋ ಕತೆಗಳು

-4-
ಘೋರ ಬರಗಾಲ.ಊರೆಲ್ಲಾ ಪಾಳು ಗುಡಿಯಂತಾಗಿದೆ .ಹಸಿವು ತನ್ನ ಕೆನ್ನಾಲಿಗೆ ಚಾಚಿತ್ತು. ಮನುಷ್ಯ ಮೃಗವಾಗಿದ್ದ. ಕೈಗೆ ಸಿಕ್ಕ ಪ್ರಾಣಿಯನ್ನು  ಹಸಿಹಸಿಯಾಗಿ ತಿನ್ನುವಷ್ಟರ ಮಟ್ಟಿಗೆ ಹೊಟ್ಟೆ, ಬುದ್ಧಿಯನ್ನು ಆಕ್ರಮಿಸಿತ್ತು. ಹೀಗಿರುವಂತಲ್ಲೊಬ್ಬ ಹೊಂಚು ಹಾಕಿ ಕುಳಿತಿದ್ದ. ಕತ್ತಲೆಯಾಗುತ್ತಿದೆ. ಯಾರದೂ ಸುಳಿವಿಲ್ಲ. ಅಸಹನೆ ಹಸಿವಿನಂತೆ ಹೆಚ್ಚುತ್ತಿದೆ. ಅಷ್ಟರಲ್ಲೇ ಯಾರೋ ಬರುತ್ತಿರುವ ಸದ್ದು. ಹಾವು ಕಪ್ಪೆಗಾಗಿ ತೋರಿಸುವ ನಿಶ್ಯಬ್ದ. ಆಕೃತಿ ಹತ್ತಿರವಾಗುತ್ತಿದೆ. ಮುನಿದ ಚಂದ್ರನ ಬೆಳಕು ಆಕೃತಿಯ ಚಹರೆಯನು ತೋರಿಸಲು ಅದು ಅವರಪ್ಪನದಾಗಿತ್ತು.
-3-
" ನೆನ್ನೆಯ ರಾತ್ರಿ! ಭಯಂಕರ! ಕನಸೇ ಅದು? ನನ್ನ ಕೆಪ್ಯಾಸಿಟಿಗೆ ಚಾಲೆಂಜ್. ಬರಿ ನಾಲ್ಕು ಪೆಗ್ಗಿಗೆ ನಾನು ಔಟಾಗುವದೇ ? ?ನನ್ನ ಕಾರು ಕೃಷ್ಣನ ಸುದರ್ಶನ ಚಕ್ರದಂತೆ, ನನ್ನ ಮಾತು ಮೀರುವದಿಲ್ಲ . ನಾನು ಅಪಘಾತದಲ್ಲಿ ಸಾಯುವನಲ್ಲ. ಅದೂ ಕನಸಿನಲ್ಲಿ ನಡೆದ ಥರ. ಸಾಧ್ಯವಿಲ್ಲ. ಕನಸಿನಲ್ಲಿ ನಡೆದಿದ್ದಾದರೂ  ಏನು  ?ಫೋನ್ ನಲ್ಲಿ ಮಾತಾಡುವಾಗ ಎದುರಿಗೆ ಬಂದ ಲಾರಿಯ ಹೆಡ್ ಲೈಟ್ ನ ಬೆಳಕು ನನ್ನ ಸ್ಟಿಯರಿಂಗ್ ನ ಹಿಡಿತ ತಪ್ಪಿಸುವದೇ? ಸಾಧವಿಲ್ಲ". ಅಷ್ಟರಲ್ಲೇ ನೆನಪಾಗುತ್ತೆ ಫೋನ್ ಬಾರಲ್ಲೇ ಮರೆತಿರುವೆನೆಂದು. ಗಕ್ಕನೆ ಬ್ರೇಕ್ ತುಳಿದ. 
ಮರುದಿನ ದಿನಪತ್ರಿಕೆಯಲ್ಲೊಂದು ಸುದ್ದಿ. " ಬ್ರೇಕ್ ಫೇಲ್ : ಸಾಫ್ಟವೇರ್ ಉದ್ಯೋಗಿ ಸಾವು"

-2-
ಸಮಯ ಹನ್ನೊಂದು ಗಂಟೆ. ಅಲ್ಲಲ್ಲಿ  ತೂರಾಡುವ  ಜನ ಮತ್ತು ತೂರಾಡದಿದ್ದರೂ ಕುಡುಕ-ಕೆಡುಕ ಜನಗಳ ಗುಂಪು. ಔಪಚಾರಿಕತೆಯ  ಪೋಲಿಸ್ ಬೂಟುಗಳ ಸದ್ದು. ಕುಡುಕರ ವಾದ ವಾಗ್ವಾದಗಳು ಅಸೆಂಬ್ಲಿ ಹಾಲ್ ನಂತೆಯೇ ತಾರಕಕ್ಕೇರಿತ್ತು. ಅದರಲ್ಲೊಬ್ಬ ಜಾಣ,ಸಭ್ಯ(?) ಕುಡುಕನೊಬ್ಬ ಹೀಗೆ ಹೇಳಿಕೊಳ್ಳುತ್ತಿದ್ದ. "ಎಡಗೈಲಿ ಗ್ಲಾಸ್ ಎತ್ತಿದರೆ ಬಲಗೈಗೆ ಗೊತ್ತಾಗಬಾರದು.ಕುಡಿದರೂ ಕುಡಿಯದಂತಿರಬೇಕು ಕುಡಿದಾಗ ಸಹನೆ ಇರಬೇಕು. ನಾಲಿಗೆ ಉದ್ದ ಆಗಬಾರದು. ಇವರಿಗೆಲ್ಲ ಬುಧ್ಧಿ ಇಲ್ಲ. ಕುಡಿದು, ಒದರಾಡಿ  ನಿಶೆ ಇಳಿಸಿಕೊಳ್ಳುತ್ವೆ. ಬುಧ್ಧಿಗೇಡಿಗಳು".  ಅಷ್ಟರಲ್ಲೇ ಫುಟಪಾತ್ ಮೇಲೆ ಮಲಗಿದವನಿಗೆ ಕಾಲು ತಗಲಿತ್ತು. ಅವನಂದ , " ಬೋ.. ಮಗನೆ, ಕಣ್ಣು ಕಾಣಲ್ವಾ? ". ಇವನಂಗಿಯ ತೋಳುಗಳು ಮೇಲೇರಿದ್ದವು.
-1-
ಕಂಪ್ಯೂಟರ್ ಅವನಿಗೆ ಸವಾಲು ಹಾಕುತ್ತಿತ್ತು. ಇವನು ಉತ್ತರಿಸಿ ಬೀಗುತ್ತಿದ್ದ.ಇವನು ಅದಕ್ಕೆ ಪಾಟೀಸವಾಲು ಹಾಕುತ್ತಿದ್ದ . ಅದೂ ಉತ್ತರಿಸುತ್ತಿತ್ತು. ಹೀಗೆ ಬರೀ ಉತ್ತರ - ಪ್ರಶ್ನೆಗಳಲ್ಲಿ ದಿನ-ರಾತ್ರಿ ಕಳೆಯುತ್ತಿದ್ದವು. ಬ್ಯಾಂಕ್ ಬ್ಯಾಲೆನ್ಸ್ ಏರುತ್ತಿತ್ತು. ಕಾರುಗಳು ಮನೆಯ ತುಂಬಿದವು. ಮಕ್ಕಳೂ ಕಂಪ್ಯೂಟರ್ ನ ಪ್ರಶ್ನೆಗಳಿಗೆ ಉತ್ತರಿಸಲಾರಂಭಿಸಿದವು  ಕೊನೆಗೊಂದು ದಿನ ಅವನು ಸತ್ತ. ಅವನ ಕಂಪ್ಯೂಟರ್ ಬೇರೆಯವರ ಜೊತೆ  ಪ್ರಶ್ನೋತ್ತರದಲ್ಲಿ ತೊಡಗಿತು, ಎಂದಿನಂತೆಯೇ.


Saturday, April 3, 2010 1 comments

ತುಮುಲ

ನನ್ನ ಮನಸಿನ ಕುದಿಯ ಕೇಳುವವರಾರು
ತುಂಬಿಹುದು ಜಗದಲ್ಲಿ ಆಧುನಿಕತೆಯ  ಕಾರು-ಬಾರು
ಒಲೆ ಮೇಲೆ ಇಟ್ಟಿರುವೆ ದುಬಾರಿ ಬೇಳೆಯ ಸಾರು
ಉಕ್ಕುವದರೊಳಗೆ ತೋರಿಸಲೆತ್ನಿಸುವೆ ನನ್ನ ಹೃದಯದ ಚೂರು.

ಅಂಗಿಯು ತುಂಬಿಹುದು ಹೊಗೆಯ ಕಮರು ಘಾಟು(ಗಂಡ)
ಕೇಳಿದರೆ ಕಣ್ಣಲ್ಲೇ ಚಾಟಿಯ ಏಟು.
ತಲೆಯ ಒಳಗೆಲ್ಲ ಬರೀ ಶೇರುಗಳ ರೇಟು
ರೂಮಿನಲಿ ಬಂದೊಡನೆ ಆರಿಸುತ ಲೈಟು.

ಮದಿರೆ ಮಾನಿನಿಯರ ಹಿಂದೆ ಓಡಿ ಓಡಿ(ಮಗ)
ವೇಗ ಸಾಕಾಗದೆಂದು ಕೊಂಡಿಹನು ಗಾಡಿ
ಹಿಂದೆ ಬರೆಸಿಹನು "ಸಾಧ್ಯವಾದರೆ ನನ್ನ ಹಿಡಿದು ನೋಡಿ"
ಮುಗುಳ್ನಕ್ಕು ಯಮನೆಂದ "ಹುಚ್ಚು ಖೋಡಿ".

ಪ್ರತಿಯೊಂದು ಮೆಸೇಜಿಗೂ ಕಣ್ಣಲ್ಲಿ ದೀವಳಿಗೆ(ಮಗಳು)
ರಾತ್ರಿಯಲಿ ಹೊರಟಿಹುದು ಪಿಸುಮಾತ ಮೆರವಣಿಗೆ
ಮುಖವು ಆಗಿಹುದು ಸುಣ್ಣ ಬಣ್ಣದ ಮಳಿಗೆ
ಬೆಂಬಲಕ್ಕೆ ನಿಂತಿಹುದು ಐಪಿಲ್ಲು ಗುಳಿಗೆ.

ಮುಪ್ಪಲ್ಲ, ಯೌವನವಲ್ಲ, ನಡುವಿನ ಭೀತಿ
ಮತಿಯಲ್ಲಿ ಎದ್ದಿಹುದು ಆಲೋಚನೆಗಳ ಕ್ರಾಂತಿ
ವೈದ್ಯರೆನ್ನುವರು ಇದಕೆ ಮನಸಿನ ಭ್ರಾಂತಿ
ಗಗನ ಕುಸುಮವು ಇಂದು ನೆಮ್ಮದಿ, ಶಾಂತಿ

ಸ್ಫೂರ್ತಿ: ವಿಶ್ವೇಶ್ವರ ಭಟ್ಟರವರ "ನೂರೆಂಟು ಮಾತು" ಅಂಕಣ (ವಿಜಯ ಕರ್ನಾಟಕ ೦೧-೦೪-೨೦೧೦)  
Wednesday, March 31, 2010 0 comments

ಕಳ್ಳೆಕಾಯಿ, ಕಳ್ಳೆಕಾಯಿ

"ಕಳ್ಳೆಕಾಯಿ, ಕಳ್ಳೆಕಾಯಿ, ಬುಧ್ಧಿಜೀವಿ ಕಳ್ಳೆಕಾಯಿ, ಎಲ್ಲಾ ಬುಧ್ಧಿಜೀವಿಗಳು ಇದೇ ಕಳ್ಳೆಕಾಯಿ ತಿನ್ನೋದು.ಯಾರಿಗ ಬೇಕು? " 
"ಜಬ್ ಮಿಯಾ ಬೀವಿ ಹೋ ರಾಜಿ , ತೋ ಕ್ಯಾ ಕರೇಗಾ ಖಾಜಿ !"
ಈ ಶೀರ್ಷಿಕೆಗೆ ೨೦೧೦ ರ ಉತ್ತಮ ಶೀರ್ಷಿಕೆ ಬಂದರೆ ಅದಕ್ಕೆ ಅಚ್ಚರಿ ಪಡಬೇಡಿ. ಇದು ನಮ್ಮ ನೆಚ್ಚಿನ ಸಿಂಹರ ಲೇಖನ( ೨೭/೦೩/೨೦೧೦)ದ ಶೀರ್ಷಿಕೆ.
ಸಿಂಹಕ್ಕೆ ಮತ್ತೊಂದು ಗರಿ(!). ಆದರೆ ಅವರ ಲೇಖನವನ್ನು ಜೀರ್ಣಿಸಿಕೊಳ್ಳೋದು  ಸ್ವಲ್ಪ ಕಷ್ಟ.ಜೀರ್ಣಿಸಿಕೊಂಡರೆ ಹೊಟ್ಟೆ ಕೆಡುತ್ತೆ!. 
                ಜಗತ್ತಿಗೆ ಸಂಸ್ಕೃತಿ ಮತ್ತು ಸಂಭಂಧದ ಪರಿಕಲ್ಪನೆ ಕೊಟ್ಟಿದ್ದೇ ನಾವು.ಅಸಂಭದ್ದ  ಮತ್ತು  ಅಶ್ಲೀಲತೆಯನ್ನು ಮೈಗೂಡಿಸಿಕೊಂಡ ಎಷ್ಟೋ ನಾಗರಿಕತೆಗಳು ಮಣ್ಣಾಗಿದ್ದನ್ನು  ನಾವು ನೋಡಬಹುದು. ಇಷ್ಟಕ್ಕೂ ನಮ್ಮ ಸಿಂಹ ಏನು ಹೇಳ್ತಾರೆ? " ಹುಡುಗ ಹುಡುಗಿಯರು ತಮ್ಮ ಗುರಿ ಸಾಧನೆಗೆ ಬೇಗ ಮದುವೆಯಾಗೋಲ್ಲ. ಕೆಲವು ಜನ ಪಟ್ಟಣಕ್ಕೆ  ಅಥವಾ ದೂರದ ಊರಿಗೆ ಓದಲು ಹೋಗುತ್ತಾರೆ. ಹಾಸ್ಟೆಲ್ಲುಗಳಲ್ಲಿ ಉಳಿಯುತ್ತಾರೆ. ಹುಡುಗ ಹುಡುಗಿಯರ ಮಧ್ಯೆ ಸ್ನೇಹ ಬೆಳೆಯುತ್ತದೆ.ದೈಹಿಕ ಕಾಮನೆಗಳು ಅವರ ಸ್ನೇಹಡ ತಳಹದಿ ಮೇಲೆ ಮೊಳಕೆಯೊಡೆಯುತ್ತವೆ. ಮಾಗಿದ ವಯಸ್ಸು ಅದಕ್ಕೆ ಕಾರಣ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಮತ್ತು ಅದನ್ನು ಒಪ್ಪಿಕೊಳ್ಳುವ  ಅನಿವಾರ್ಯತೆ ಇಂದು ನಮ್ಮ ಮುಂದಿದೆ". 
ಡಾರ್ವಿನ್ ಥಿಯರಿಯಷ್ಟು ಕರಾರುವಾಕ್. ಅಲ್ಲ ಸಿಂಹ ಅವರೇ, ಹೀಗಂತ ಇಡೀ ಯುವಸಮೂಹವನ್ನು ತಪ್ಪು ದಾರಿಗೆಳೆಯುವದೆ? ಯಾವುದೇ ಅಡ್ಡಿಗಳಿಲ್ಲದೆ ಯುವ ಸಮೂಹ ಹಗ್ಗ ಬಿಚ್ಚಿದ ಎಮ್ಮೆ ಕೋಣಗಳಾದಾವು.ಭಾವನೆಗಳನ್ನು,ನೋವು ನಲಿವುಗಳನ್ನು ಹಂಚಿಕೊಂದಲ್ಲಿ ಅದನ್ನು ಸ್ನೇಹವೆಂದು ಹೇಳಬಹುದು. ಒಂದು ಹೆಜ್ಜೆ ಮುಂದೆ ಹೋದಲ್ಲಿ ಅದನ್ನು ಪ್ರೀತಿ ಎನ್ನಬಹುದು. ಇನ್ನೂ ಒಂದು ಹೆಜ್ಜೆ ಇಟ್ಟಲ್ಲಿ ಅದನ್ನು ಮದುವೆ ಎನ್ನಬಹುದು. ಈ ಎರಡನೇ ಮತ್ತು ಮೂರನೆ ಹೆಜ್ಜೆಗಳ ನಡುವೆ ದಾರಿ ತಪ್ಪಿದರೆ ಅದನ್ನು ಎಡವಟ್ಟು ಎನ್ನಬಹುದು,ಅಥವಾ ವಿವಾಹಪೂರ್ವ ಸಂಭಂಧ ಎನ್ನಬಹುದು. ಅದನ್ನೇ ನಮ್ಮ ಸರಕಾರ ಈಗ ಸಮ್ಮತಿಸಿದೆ. ಈ ಸಂಭಂಧಕ್ಕೆ ನಮ್ಮ ಶಬ್ದಕೋಶದಲ್ಲಿ ಉತ್ತಮ ಶಬ್ದಗಳೇ ಇಲ್ಲ. 
ಅಲ್ಲಾ ಸ್ವಾಮಿ, ಈಗಲೇ ನಾವು ಈ ವಿಭಕ್ತ ಕುಟುಂಬಗಳಿಂದ ಅನುಭವಿಸುತ್ತಿರೋದೆ ಸಾಕು. ತಂದೆ, ತಾಯಿ, ಅಜ್ಜ, ಅಜ್ಜಿ, ಅತ್ತೆ, ಮಾವ ಮುಂತಾದ ಸಂಭಂಧಗಳೇ ಕಡಿಮೆಯಾಗುತ್ತಿರುವ ದಿನಗಳಲ್ಲಿ ಈ ಅವ್ಯಕ್ತ ಕುಟುಂಬಗಳಿಂದ ಆಗುವ ಸಂಸ್ಕೃತಿ ನಾಶಕ್ಕೆ ಹೊಣೆ ಯಾರು? ಎಲ್ಲಾರು ಮೂಳೆ  ಕಡೀತಾರಾ? ಇನ್ಮೇಲೆ ಕಡಿದವರೆಲ್ಲ ಮೂಳೆ ಹಾರ  ಮಾಡ್ಕೊಂಡು ಸಂಭ್ರಮಿಸಬೇಕು. ಜಗತ್ತಿನ ಜನ ನಮ್ಮ ಸಂಸ್ಕೃತಿಯ ಅವನತಿಯನ್ನು ನೋಡಿ ನಗಬೇಕು. ಇದೇ ಅಲ್ವೇ ಅಭಿವೃದ್ಧಿಯ ಸಂಕೇತ. ಅವ್ರು ಮಾಡ್ತಾರೆ, ನಾವೂ ಮಾಡೋಣ. ಏನು ಹುಚ್ಚು ಸ್ವಾಮಿ. ಶಿಕ್ಷಣದಲ್ಲಿ ನೈತಿಕತೆ, ಮಾನವೀಯತೆ, ಸಂಸ್ಕೃತಿ,ಮತ್ತು ಅವಿಭಕ್ತ ಕುಟುಂಬಗಳಿಂದ ಆಗುತ್ತಿದ್ದ  ಉಪಯೋಗಗಳನ್ನು ಅಳವಡಿಸಿ ಮತ್ತೆ ಸಂಸ್ಕೃತಿ ಸೌಧವನ್ನು ಕಟ್ಟಬೇಕೆ ಹೊರತು ಇಂತಹ ಹೊಲಸು ಕಾನೂನುಗಳನ್ನಲ್ಲ .www.divorcerate.org ರವರ ಸರ್ವೇ ಪ್ರಕಾರ ಅಮೇರಿಕದಲ್ಲಿ ಶೇ ೫೦% ವಿವಾಹಗಳು ಮುರಿಯುತ್ತವೆ. ಆದರೆ ನಮ್ಮಲ್ಲಿ ಕೇವಲ ಶೇ.೧%. ಇದೂ ಕೂಡ ಇತ್ತೀಚಿನ ದಿನಗಳಲ್ಲಿ ಬೆಳವಣಿಗೆಯಾಗಿದ್ದು. ನಮ್ಮ ಮನೆ ನಮ್ಮ ಮೊದಲ ಪಾಠಶಾಲೆ. ಅಲ್ಲಿಂದ ನಾವು ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಬೆಳೆಸುವ ಪ್ರಯತ್ನ ಮಾಡೋಣ. 
ಒಬ್ಬ ಪತ್ರಕರ್ತ ಬರೀ ಅಂಕಿ ಅಂಶ, ಉತ್ತಮ ಶಬ್ದಜೋಡಣೆಯಿಂದ ಲೇಖನ ಬರೆದಲ್ಲಿ ಆಗುವ ಅನಾಹುತಗಳಿವು. ಬರೀ ರೋಚಕತೆಗೆ ಆಯುಷ್ಯ ಅಲ್ಪ ಮತ್ತು ಅಪಾಯಕಾರಿ. ಪ್ರತಿಯೊಂದು ಲೇಖನ, ಕವಿತೆ, ಕತೆ, ಕಾದಂಬರಿ ಹಿಂದೆ ಸಂವೇದನೆ ಮುಖ್ಯ. ಒಬ್ಬ ಲೇಖಕ ಓದುಗನ ಅಭಿರುಚಿಯನ್ನು  ಉತ್ತಮವಾಗಿಸಬೇಕು. ಇಲ್ಲವಾದಲ್ಲಿ ಅವನಿಗೂ ಕಸಬ್ ಗೂ ಯಾವುದೇ ವ್ಯತ್ಯಾಸವಿಲ್ಲ. ಕಸಬ್ ಕೇವಲ ಬೆರಳೆಣಿಕೆಯಷ್ಟು ಜನರನ್ನು ದೈಹಿಕವಾಗಿ  ಕೊಂದ. ಇವರೋ ಇಡೀ ಒಂದು ಸಮಾಜವನ್ನು ಹೊಲಸು ಮಾಡುತ್ತಾರೆ. ವಿಚಾರವಾದಿಗಳೇ, ಲೇಖಕರೇ, ಪತ್ರಕರ್ತರೇ, ಬುಧ್ಧಿಜೀವಿಗಳೇ ಕಡ್ಲೇಕಾಯಿ ತಿಂದಿದ್ದು ಸಾಕು. ನೀವೆನಂತೀರಿ? 

Saturday, March 27, 2010 0 comments

ಸ್ಪೂರ್ತಿ

ಮೂಳೆ ತೊಗಲಿನ ತಡಿಕೆ, ಮೇಲೆ ಅಂಗಿಯ ಹೊದಿಕೆ,
ಸಿಂಹಿಣಿಯು ನಾಚಿತು ನಿನ್ನ ಕಟಿಯ ಕಂಡು.

ಗಾಂಡೀವ ಮರೆಯಾಗಿ ನಿನ್ನ ಹುಬ್ಬುಗಳಾಗಿ,
ಓಲಂಪಿಕ್    ರಿಂಗುಗಳು ಕಿವಿಗೆ ಲೋಲಾಕುಗಳಾಗಿ ,
ತಲೆ  ಬಾಗಿ ನಿಂತಿಹಳು ಶಿಲೆಯ  ಬಾಲೆ.

ನಾಗರದ ಮೊಟ್ಟೆಯಲಿ ವೃಶ್ಚಿಕದ  ಮರಿಯಿಂದು.
ಚೂಡಿ ,ಜೀನ್ಸು, ನೈಟಿಗಳೆಲ್ಲ ಒಣಮೈಯ ತಬ್ಬಿರಲು,
ಶ್ರೀ ಕೃಷ್ಣನೂ ಅಸಹಾಯ ಇಂದಿನ ದ್ರೌಪದಿಗೆ.

ಕೊನೆಯ ಮಾತೊಂದ ಹೇಳುವದ  ಮರೆತೆ,
ಕಡಿಮೆಯಾಗಿರಲು ಇಂದು  ಸ್ಪೂರ್ತಿಯ ಒರತೆ,
ಎಲ್ಲಿ ಹುಟ್ಟೀತು ರಸಮಯ ಕವಿತೆ?
 
;