ಭಾರತದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಮಹಾಭಾರತಕ್ಕೆ ಇರುವ ಸ್ಥಾನ ಮಹತ್ವವಾದದ್ದು. ಇದೊಂದು ಬಹುದೊಡ್ಡ ಗ್ರಂಥ. ಎಷ್ಟು ದೊಡ್ಡದೆಂದರೆ, ಇದು ಸುಮಾರು ಒಂದು ಲಕ್ಷ ಶ್ಲೋಕಗಳನ್ನು ಒಳಗೊಂಡಿದೆ. ವಿಶ್ವದ ಅತಿ ದೊಡ್ಡ ಇತಿಹಾಸ, ಸಂಸ್ಕೃತಿ, ಮತ್ತು ಪರ್ವತಗಳು ಮತ್ತು ಗ್ರಂಥವು ನಮ್ಮದು ಎಂದು ಹೇಳಿಕೊಳ್ಳಲು ಗರ್ವವೆನಿಸುತ್ತದೆ. ನಾಗರೀಕತೆಗಳ ಇತಿಹಾಸವನ್ನು ಅವಲೋಕಿಸಿದಲ್ಲಿ, ನಮ್ಮದು ಅತೀ ಪುರಾತನವೂ ಹೌದು. ಎಷ್ಟೋ ನಾಗರಿಕತೆಗಳು ನಮ್ಮ ನಾಗರಿಕತೆಯ ಮುಂದೆಯೇ ಹುಟ್ಟಿ, ಕಾಲಗರ್ಭವನ್ನು ಸೇರಿದ್ದನ್ನು ಓದಿದ್ದೇವೆ,ಕೇಳಿದ್ದೇವೆ. ನಮ್ಮ ನಾಗರಿಕತೆಯ ಸಂಸ್ಕೃತಿ ಮತ್ತು ಇತಿಹಾಸವನ್ನು ಎತ್ತಿ ಹಿಡಿಯುವಲ್ಲಿ ಮಹಾಭಾರತದದ್ದು ಸಿಂಹಪಾಲು.
ಮಹಾಭಾರತವನ್ನು ಹಲವಾರು ಪಂಡಿತರು, ಕವಿಗಳು, ವಿದ್ವಾಂಸರು, ನಾಟಕಕಾರರು,ಇತಿಹಾಸತಜ್ನರು, ಹಲವಾರು ಭಾಷೆಗಳಲ್ಲಿ ಬರೆದಿದ್ದಾರೆ. ಅವಕ್ಕೆಲ್ಲ ವ್ಯಾಸ ಭಾರತವೇ ಆಕರ. ಅಂಥ ಬೃಹತ್ತಾದ, ಅರ್ಥವತ್ತಾದ , ಮೌಲಿಕ, ಸಾಹಿತ್ಯಿಕ, ಮತ್ತು ಸಾರ್ವಕಾಲಿಕ ಗ್ರಂಥವನ್ನು ಬರೆದ ವೇದವ್ಯಾಸನಿಗೆ ನಮೋನಮಃ.. ಈತ ವಸಿಷ್ಠನ ಮರಿಮಗ, ಶಕ್ತಿ ಮಹರ್ಷಿಯ ಮೊಮ್ಮಗ, ಪರಾಶರ ಮುನಿಯ ಮಗನಾದದ್ದರಿಂದಲೇ ಇಂಥದ್ದೊಂದು ಬೃಹತ್ ಗ್ರಂಥವನ್ನು ಬರೆಯಲು ಈತನಿಗೆ ಸಾಧ್ಯವಾಯಿತೇನೋ! ಪರಾಶರ ಮುನಿಗಳಿಂದ, ಮತ್ಸ್ಯಗಂಧಿ ಎಂಬ ಬೆಸ್ತರವಳ ಮಗನಾಗಿ ಹುಟ್ಟಿ, ತಾಯಿಯ ಪ್ರೀತಿ, ವಾತ್ಸಲ್ಯಗಳನ್ನೇ ಅನುಭವಿಸದೆ, ಸಕಲವಿದ್ಯಾಪಾರಂಗತನಾಗಿ, ಮಹಾಭಾರತದ ಕಥೆಗಾರನೂ, ಕಾರಣನೂ, ಪಾತ್ರಧಾರಿಯಾಗಿಯೂ ಆಗಿ ಮಹಾಭಾರತದುದ್ದಕ್ಕೂ ಮಿಂಚುತ್ತಾನೆ.
ಯಮುನೆಯ ನಡುಗಡ್ಡೆಯಲ್ಲಿ ಜನಿಸಿದ್ದರಿಂದ 'ದ್ವೈಪಾಯನ'ನೆಂದೂ, ಬಣ್ಣದಲ್ಲಿ ಕಪ್ಪಗಿದ್ದುದರಿಂದ 'ಕೃಷ್ಣಮುನಿ'ಯೆಂದೂ, ಬದರಿಕಾಶ್ರಮದಲ್ಲಿ ತಾಪಸಿಯಾಗಿ 'ಬಾದರಾಯಣ' ನೆಂದೂ ವೇದಮಂತ್ರಗಳನ್ನು, ಕ್ರಮಬದ್ಧವಾಗಿ ಸಂಘಟಿಸಿ, ನಾಲ್ಕು ಭಾಗಗಳಾಗಿ ವಿಂಗಡಿಸಿ 'ವೇದವ್ಯಾಸ'ನೆಂದೂ ಹೆಸರು ಪಡೆದಿದ್ದ ವ್ಯಾಸ ನಮ್ಮನ್ನೆಲ್ಲಾ ಇಂದಿಗೂ ಆವರಿಸಿಕೊಳ್ಳುವ ಸಾರ್ವಕಾಲಿಕ ಕವಿ,`ಮಹಾಭಾರತದಷ್ಟು ನಮ್ಮ ದೇಶದ ಜನರನ್ನು ಗಾಢವಾಗಿ ಕಾಡಿದ ಕಾವ್ಯ ಇನ್ನೊಂದು ಇಲ್ಲ. ವಿಶ್ವದಲ್ಲೇ ಇಂತಹ ಕೃತಿ ಮತ್ತೊಂದು ಇಲ್ಲ.' ಎಂದು ಕಂಬಾರರು ಹೇಳಿದ್ದು ಅತಿಶಯೋಕ್ತಿ ಏನಲ್ಲ. ಯಾವುದೇ ಸಾಹಿತ್ಯದ ವಿದ್ಯಾರ್ಥಿ ಮಹಾಭಾರತವನ್ನು ಓದದಿದ್ದಲ್ಲಿ, ಅವನು ಸಾಹಿತ್ಯದ ಅರ್ಧಭಾಗವನ್ನು ಮಾತ್ರ ಓದಿದಂತಾಗುತ್ತದೆ ಎಂಬುದು ನನ್ನಂಥವರ ಆಂಬೋಣ. ಯಾಕೆಂದರೆ ಈತ ಬರೆಯದ ವಿಷಯಗಳೇ ಇಲ್ಲವೇನೋ ಎಂದೆನಿಸುತ್ತದೆ. ಹದಿನೆಂಟು ಪುರಾಣಗಳು, ಹದಿನೆಂಟು ಉಪಪುರಾಣಗಳು, ಜ್ಯೋತಿಶ್ಯಾಸ್ತ್ರದ ಗ್ರಂಥಗಳು, ಆಯುರ್ವೇದ ಗ್ರಂಥಗಳು, ನಾಡೀ ಗ್ರಂಥಗಳು, ಧರ್ಮಶಾಸ್ತ್ರ ಗ್ರಂಥಗಳು, ಹಲವಾರು ಪ್ರಾಚೀನ ಗ್ರಂಥಗಳಿಗೆ ಭಾಷ್ಯಗಳು ಮತ್ತು ಎಲ್ಲಕ್ಕೂ ಕಿರೀಟವಿಟ್ಟಂತೆ ಮಹಾಭಾರತ,
ಮಹಾಭಾರತದ ಪ್ರತಿಯೊಂದು ಪಾತ್ರವೂ, ಒಂದು ವಿಶೇಷ ಕಾರಣಕ್ಕೆಂದೇ ಚಿತ್ರಿಸಲ್ಪಟ್ಟದ್ದು, ಮತ್ತು ಕೆತ್ತಲ್ಪಟ್ಟದ್ದು. ಯಾವುದೇ ಪಾತ್ರದ ಔಚಿತ್ಯವನ್ನು ವೇದವ್ಯಾಸರು ಹಗುರಗೊಳಿಸಿಲ್ಲ. ಎಲ್ಲವೂ ವ್ಯಾಸ ನಿರ್ಧಾರಿತ, ಸಮಯೋಚಿತ ಮತ್ತು ಸಾಂಧರ್ಬಿಕ. ಭೀಷ್ಮನ ಶಪಥವಲ್ಲದೇ ಅವನ ಋಣಭ್ರಾಂತಿಯನ್ನೂ, ದ್ರೋಣನ ಬ್ರಾಹ್ಮಣ್ಯ ಮತ್ತು ಕ್ಷಾತ್ರ ಮನಸ್ಸು, ಕುಂತಿಯ ದೈವಭಕ್ತಿ ಮತ್ತು ಸಮಚಿತ್ತತೆಯನ್ನೂ, ಧೃತರಾಷ್ಟ್ರನ ಕುರುಡು ಪುತ್ರ ವ್ಯಾಮೋಹ ಮತ್ತು ಮುಂದಾಲೋಚನೆಯನ್ನೂ,ಶಕುನಿಯ ಕುಟಿಲತೆಯನ್ನೂ, ಧರ್ಮರಾಜನ ಧರ್ಮಪ್ರಜ್ನೆಯನ್ನೂ, ಭೀಮನ ಬಲವಲ್ಲದೇ ಪಾಕ ವಿದ್ಯೆಯನ್ನೂ, ಗಾಂಡೀವಿಯ ಬಿಲ್ವಿದ್ಯೆಯೊಂದಿಗೆ ನಾಟ್ಯವನ್ನೂ, ವಿದುರನಂತಹ ರಾಜಕೀಯ ಮುತ್ಸದ್ದಿಯನ್ನೂ, ದ್ರೌಪದಿಯ ಶೀಲ ಸಂಪನ್ನತೆ ಮತ್ತು ಜ್ನಾನವನ್ನೂ, ಕರ್ಣನ ಮದವನ್ನೂ,ಮತ್ತು ಮತ್ತೆಲ್ಲವನ್ನೂ ನಾವು ಮಹಾಭಾರತದಲ್ಲಿ ಕಾಣಬಹುದು.

ಯಾವ ಕಾಲಚಕ್ರದಲ್ಲಿಯೂ, ಯಾವ ಕೋನದಲ್ಲಿಯೂ ನೋಡಿದಲ್ಲಿ, ನಮಗೆ ತತ್ವ, ಆದರ್ಶ ಮತ್ತು ಸಿಧ್ಧಾಂತಗಳನ್ನು ಕಥಾರೂಪದಲ್ಲಿ ಚಿತ್ರಿಸಿದ, ನಮ್ಮ ದೇಶದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮೌಲ್ಯಗಳನ್ನು ಎತ್ತಿಹಿಡಿದ,ನಮ್ಮನ್ನೆಲ್ಲಾ ರಂಜಿಸಿದ, ಆವರಿಸಿದ ಮತ್ತು ಇಂದಿಗೂ ಓದಿಸಿಕೊಳ್ಳುವ ವೇದವ್ಯಾಸನಿಗೆ ಹುಟ್ಟುಹಬ್ಬದ ಶುಭಾಶಯಗಳು.